ಕಗ್ಗ ದರ್ಶನ – 18 (2)

ಕಗ್ಗ ದರ್ಶನ – 18 (2)

ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ
ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ
ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ
ಕಡಿಯೆಲ್ಲ ಪಾಶಗಳ – ಮರುಳ ಮುನಿಯ
ಬದುಕಿನಲ್ಲಿ ಎಲ್ಲದಕ್ಕೂ ಸಿದ್ಧರಾದ ನಂತರ ….. ಈ ಜಗತ್ತಿನ ಎಲ್ಲ ತೊಡಕುಗಳಿಂದ ನಮ್ಮ ಜೀವವನ್ನು ಬಿಡಿಸಿಕೊಳ್ಳಬೇಕು; ಎಲ್ಲ ಮಮತೆ ಮಾತ್ರವಲ್ಲ ಪುಣ್ಯದ ಆಶೆಯನ್ನೂ ತ್ಯಜಿಸಬೇಕು ಎನ್ನುತ್ತಾರೆ ಮಾನ್ಯ ಡಿ.ವಿ.ಜಿ.
ಅದು ಸಾಧ್ಯವೇ? ಹಸಿವಾದಾಗ ತಿನ್ನಲೇ ಬೇಕು. ಅದಕ್ಕಾಗಿ ಹಣ ಗಳಿಸಬೇಕು – ದುಡಿತ ಅಥವಾ ವ್ಯವಹಾರದಿಂದ. ಮೈಮುಚ್ಚಲು ಉಡುಪು ಬೇಕೇ ಬೇಕು. ಅದಕ್ಕೂ ಹಣ ಬೇಕು. ರಾತ್ರಿ ಮಲಗಲೇ ಬೇಕು – ಅದಕ್ಕೊಂದು ಸೂರು ಬೇಕೇ ಬೇಕು. ಹೀಗೆ, ನಮ್ಮ ಮೂಲಭೂತ ಅಗತ್ಯಗಳೇ ನಮ್ಮನ್ನು ತೊಡಕುಗಳಲ್ಲಿ ಸಿಲುಕುಸುತ್ತವೆ. ಇಂತಹ ತೊಡಕುಗಳಿಂದ ಬಿಡುಗಡೆ ಮೊದಲ ಹಂತ.
ಮುಂದಿನ ಹಂತದಲ್ಲಿ, ನಮ್ಮನ್ನು ಕ್ಷಣಕ್ಷಣವೂ ಆವರಿಸಿಕೊಳ್ಳುವ ಮಾಯೆಯಿಂದ ಹುಟ್ಟುವ ಮಮತೆಯಿಂದ ವಿಮೋಚನೆ ಸಾಧಿಸಬೇಕು. ನನಗೊಬ್ಬನಿಗೇ ಒಳಿತಾಗಬೇಕು, ಒಳ್ಳೆಯದೆಲ್ಲವೂ ನನಗೇ ಸಿಗಬೇಕು ಎಂಬ ಸ್ವಾರ್ಥ; ನಾನು ಹೇಳಿದಂತೆಯೇ ಎಲ್ಲವೂ ನಡೆಯಬೇಕು, ಇತರರೆಲ್ಲ ನನ್ನ ಅಡಿಯಾಳಾಗಿರಬೇಕು ಎಂಬ ಅಧಿಕಾರ ಲಾಲಸೆ; ನಾನೇ ಸರಿ, ನನಗೆಲ್ಲ ಗೊತ್ತಿದೆ ಎಂಬ ಅಹಂಕಾರ – ಇವೆಲ್ಲವೂ ಮಮತೆಯ ವಿವಿಧ ರೂಪಗಳು. ಇವುಗಳನ್ನೆಲ್ಲ ತೊರೆಯಬೇಕು ಮಾತ್ರವಲ್ಲ ಪುಣ್ಯ ಗಳಿಸುವ ಆಶೆಯನ್ನೂ ಬಿಟ್ಟು ಬಿಡಬೇಕು.
ಇದಕ್ಕೆ ಸುಲಭದ ದಾರಿ ಯಾವುದು? ಜಗದ ಜಂಜಡಗಳ ಕಡಿತಕ್ಕೆ ಜಡನಾಗಿ ದುಡಿಯುವುದು. ದುಡಿಮೆಯಲ್ಲೇ ಮುಳುಗುವುದು – ಕಾಯಕವೇ ಕೈಲಾಸ ಎಂದು ನಂಬಿಕೊಂಡು. ಬೇಕಿದ್ದರೆ ಪರೀಕ್ಷಿಸಿ: ನೀವು ಅಪಾರ ದುಃಖದಲ್ಲಿ ಇರುವಾಗ, ಕ್ಷಣ ಬಿಡುವಿಲ್ಲದೆ ಕೆಲಸದಲ್ಲಿ ತೊಡಗಿಸಿಕೊಳ್ಳಿ. ದುಃಖ ಪಡಲು ಪುರುಸೊತ್ತಿಲ್ಲದಂತೆ ದುಡಿದರೆ, ದುಃಖವೇ ಹತ್ತಿರ ಬರೋದಿಲ್ಲ. ಈ ಜಗತ್ತಿನ ಎಲ್ಲ ಪಾಶಗಳನ್ನು ಕಡಿದು, ನಮ್ಮ ಜೀವವನ್ನು ಮುಕ್ತಗೊಳಿಸಲು ಇದೇ ದಾರಿ.