ಕಗ್ಗ ದರ್ಶನ – 19 (1)

ಕಗ್ಗ ದರ್ಶನ – 19 (1)

ಇನ್ನೇನು ಮತ್ತೇನು ಗತಿಯೆಂದು ಬೆದರದಿರು
ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ
ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು
ತಣ್ಣಗಿರಿಸಾತ್ಮವನು - ಮಂಕುತಿಮ್ಮ
ಇನ್ನು ಮುಂದೇನು? ಮತ್ತೇನು ಗತಿ? ಎಂದೆಲ್ಲ ಯಾವತ್ತೂ ಅಂಜದಿರು. ಯಾಕೆಂದರೆ ವಿಧಿಯ ಲೆಕ್ಕಣಿಕೆ (ಪೆನ್ನು) ನಿನ್ನ ಕೈಯಲ್ಲಿಲ್ಲ ಎಂದು ಸೂಚಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು ಈ ಮುಕ್ತಕದಲ್ಲಿ. ನಾವು ಹುಟ್ಟುವಾಗಲೇ ನಮ್ಮ ಹಣೆಬರಹವನ್ನು ವಿಧಿ ಬರೆದಿರುತ್ತದೆ ಎಂಬುದೊಂದು ನಂಬಿಕೆ.
ಇತ್ತೇಚೆಗಿನ ದುರುಂತಗಳ ಸರಮಾಲೆ ಗಮನಿಸಿರಿ: ಮಲೇಷ್ಯಾದ ಎರಡು ವಿಮಾನಗಳು ಸಮುದ್ರದಲ್ಲಿ ಮುಳುಗಿ ಪ್ರಯಾಣಿಕರೆಲ್ಲರ ಸಾವು. ಚೀನಾದ ನೌಕೆಯೊಂದು ಮುಳುಗಿ ಸುಮಾರು ೫೦೦ ಜನರ ಮರಣ. ೨೫ ಎಪ್ರಿಲ್ ೨೦೧೫ರಂದು ನೇಪಾಳವನ್ನು ನಡುಗಿಸಿದ ಭೂಕಂಪಕ್ಕೆ ೮,೦೦೦ ಜನರ ಬಲಿ; ಅಲ್ಲಿನ ಗಾಯಾಳುಗಳು ೧೭,೦೩೭.
ನಮ್ಮದೇ ಕರ್ನಾಟಕದಲ್ಲಿ ೨೦೧೫ರ ಜೂನ್ ತಿಂಗಳಿನಿಂದ ತೊಡಗಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ ೧೫೦ ದಾಟಿದೆ. ಅವರೆಲ್ಲರೂ ಜಮೀನಿನ ಒಡೆಯರು. ಮಾತ್ರವಲ್ಲ, ನಮಗೆಲ್ಲ ಅನ್ನದಾತರು. ಆದರೂ ಯಾಕೆ ಪ್ರಾಣತ್ಯಾಗ ಮಾಡಿದರು? ತಾವು ಕಷ್ಟಪಟ್ಟು ಬೆಳೆಸಿದ ಕಬ್ಬಿನ ಬೆಳೆಗೆ ಬೆಂಕಿಯಿಟ್ಟು, ಅದರ ಉರಿಜ್ವಾಲೆಗೇ ಹಾರಿದರಲ್ಲ!
ಇದನ್ನು ವಿಧಿಲಿಖಿತ ಎನ್ನಬೇಡವೇ? ಅವರೆಲ್ಲರ ಕೈಯಲ್ಲಿ ಮೊಬೈಲ್ ಫೋನುಗಳಿದ್ದವು. ಸರಕಾರ ಹಾಗೂ ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ಹತ್ತಾರು “ಸಹಾಯವಾಣಿ”ಗಳಲ್ಲಿ ಯಾವುದೇ ಫೋನ್ ನಂಬರಿಗೆ ಒಂದು ಫೋನ್ ಕರೆ ಮಾಡಿದ್ದರೆ …. ಅಥವಾ, ಮಡದಿಮಕ್ಕಳೊಡನೆ ಮನಬಿಚ್ಚಿ ಮಾತಾಡಿದ್ದರೆ “ಇನ್ನೇನು ಗತಿ” ಎಂಬ ದುಗುಡ ಮರೆಯಾಗಿ ಜೀವ ಉಳಿಯುತ್ತಿತ್ತು.
ಅದಕ್ಕೇ ಅನ್ನುವುದು ಆ ದೈವದ ಸಂಚು ನಮ್ಮ ಕಣ್ಣಿಗೆ ಕಾಣಿಸದಂತೆ (ಎಟುಕದೆ) ಸಾಗುತ್ತಿದೆ ಎಂದು. ದೈವ ನಮಗಾಗಿ ಏನನ್ನು ಕಾದಿರಿಸಿದೆ ಎಂಬುದನ್ನು ನಾವೆಂದೂ ತಿಳಿಯಲಾರೆವು. ಅದಕ್ಕಾಗಿಯೇ ನಮ್ಮ ಆತ್ಮವನ್ನು ತಣ್ಣಗಿರಿಸಬೇಕು. ಅಲ್ಲಿ ಯಾವುದೇ ಅಲ್ಲೋಲಕಲ್ಲೋಲಕ್ಕೆ ಆಸ್ಪದ ಕೊಡಬಾರದು. ಬದುಕಿನಲ್ಲಿ ಎದುರಾದದ್ದನ್ನೆಲ್ಲ “ಏನೇ ಬರಲಿ, ನಾನು ತಣ್ಣಗಿರುವೆ” ಎಂದು ಸ್ವೀಕರಿಸಬೇಕು.