ಕಗ್ಗ ದರ್ಶನ – 19 (2)

ಕಗ್ಗ ದರ್ಶನ – 19 (2)

ಸಹಿಸುವುದು ಸವಿಯುವುದು ಕಹಿಯೂಟ ಸಹಿಸುವುದು
ಬಹುವಾಯಿತೆಂದೆನದೆ ಕಹಿಯ ಸಹಿಸುವುದು
ಕಹೆ-ಸಿಹಿಗಳೆರಡಲ್ಲಮೊಂದೆಯೆನಿಪನ್ನೆಗಂ
ಸಹಿಸುವುದು ಬಂದುದನು – ಮರುಳ ಮುನಿಯ
ನಮ್ಮ ಬದುಕಿನಲ್ಲಿ ಸಹಿಸುವುದು ಮಾತ್ರವಲ್ಲ ಸವಿಯುವುದು ಅತ್ಯಗತ್ಯ. ಯಾವುದನ್ನು? ಕಹಿಯೂಟವನ್ನು! ಅಂದರೆ ಬದುಕು ನಮಗೆ ನೀಡುವ ನೋವು, ಸೋಲು, ಸಂಕಟ,ಕಷ್ಟನಷ್ಟ – ಎಲ್ಲವನ್ನೂ ಸಹಿಸುವುದು ಅಗತ್ಯ. ಇವೆಲ್ಲ ನಮಗೆ ಸುಖ ಅಥವಾ ನಲಿವು ನೀಡುವುದಿಲ್ಲ. ಬದಲಾಗಿ ದುಃಖದುಮ್ಮಾನಕ್ಕೆ ನಮ್ಮನ್ನು ತಳ್ಳುತ್ತವೆ. ಆದರೂ ಅವನ್ನು ಸಹಿಸಿಕೊಂಡು, ನಿಧಾನವಾಗಿ ಸವಿಯಲು ಕಲಿಯುವುದು ಅತ್ಯವಶ್ಯ ಎಂಬ ಸಂದೇಶ ನೀಡುತ್ತಾರೆ ಮಾನ್ಯ ಡಿ.ವಿ.ಜಿ.
ಒಂದು ಕುಟುಂಬಕ್ಕೆ ಬಡಿಯಬಹುದಾದ ಸಂಕಟಗಳನ್ನು ಗಮನಿಸಿ. ಗಂಡ, ಹೆಂಡತಿ, ಮಗ ಮತ್ತು ಮಗಳ ಸುಖಸಂಸಾರ. ತಟಕ್ಕನೆ ತಂದೆ ಅಪಘಾತದಲ್ಲಿ ಮೃತನಾದರೆ, ಮಗ ಪರೀಕ್ಷೆಯಲ್ಲಿ ಫೇಲಾಗುತ್ತಾನೆ. ಅನಂತರ ಮಗ ಮಾದಕದ್ರವ್ಯ ವ್ಯಸನಿಯೂ ಆಗುತ್ತಾನೆ. ಅತ್ತ ಮಗಳು ಪ್ರೇಮಪಾಶಕ್ಕೆ ಸಿಲುಕಿ ಪ್ರಿಯಕರನೊಂದಿಗೆ ಓಡಿಹೋಗುತ್ತಾಳೆ. ಮಗ ಅಪಘಾತದಲ್ಲಿ ಕಾಲು ಮುರಿದುಕೊಂಡರೆ, ಪ್ರಿಯಕರ ಮಾಡಿದ ಮೋಸದಿಂದ ಆಘಾತಕ್ಕೊಳಗಾದ ಮಗಳು, ಮನೆಗೆ ಮರಳಿ ಮಂಕಾಗಿ ಕೂರುತ್ತಾಳೆ. ಇವರು ಬಾಡಿಗೆಗಿದ್ದ ಮನೆಯ ಮಾಲೀಕ ತಕ್ಷಣವೇ ಮನೆ ಖಾಲಿ ಮಾಡಬೇಕೆಂದು ತಾಕೀತು ಮಾಡುತ್ತಾನೆ (ಬಾಡಿಗೆ ಕೊಡಲಿಲ್ಲವೆಂಬ ಕಾರಣಕ್ಕೆ) ಇವೆಲ್ಲ ಆಘಾತಗಳನ್ನು ಸಹಿಸಿಕೊಂಡು ಆ ತಾಯಿ ತನ್ನ ಬದುಕು ಸಾಗಿಸುವುದು ಹೇಗೆ?
ಐದು ವರುಷಗಳು ಇವೆಲ್ಲ ನೋವು ನುಂಗಿಕೊಂಡು ಹೈರಾಣಾಗಿ ದಿನ ತಳ್ಳಿದ ಆ ತಾಯಿಗೆ ವಾಹನ ಅಪಘಾತ ಟ್ರಿಬ್ಯುನಲಿನ ತೀರ್ಪಿನಂತೆ, ಗಂಡನ ಸಾವಿಗಾಗಿ ರೂ.೩೦ ಲಕ್ಷ ಪರಿಹಾರ ಸಿಕ್ಕಿದಾಗ, ಹೋದ ಜೀವ ಬಂದಂತಾಗುತ್ತದೆ. ಆ ತೀರ್ಪಿನ ಅನುಸಾರ, ರೂ.೨೫ ಲಕ್ಷ ಬ್ಯಾಂಕಿನಲ್ಲಿ ಹತ್ತು ವರುಷದ ಠೇವಣಿಯಿಟ್ಟು, ಆಕೆ ಹೊಸ ಬದುಕು ಕಟ್ಟಿಕೊಳ್ಳುತ್ತಾಳೆ.
ಜೀವನದಲ್ಲಿ ಕಹಿ-ಸಿಹಿಗಳು ಬೇರೆಯಲ್ಲ; ಅವೆರಡೂ ಒಂದೇ ಎನಿಸುವ ವರೆಗೆ ಬಂದುದನ್ನೆಲ್ಲ ಸಹಿಸುವುದು ಎಂದರೆ ಇದೇ ಆಲ್ಲವೇ? ಬದುಕಿನ ಕಠಿಣ ಕಷ್ಟಗಳನ್ನೆಲ್ಲ ಎದೆಯೊಡ್ಡಿ ಎದುರಿಸಿ, ನೋವುನಲಿವುಗಳ ಬಗ್ಗೆ ಸಮಭಾವ ಬೆಳೆಸಿಕೊಂಡ ಹಲವರು ಇದ್ದಾರೆ. ಅವರಿಂದ ಕಲಿಯೋಣ; ಕಲಿತು ಬೆಳೆಯೋಣ.