ಕಗ್ಗ ದರ್ಶನ – 2 (2)

ಕಗ್ಗ ದರ್ಶನ – 2 (2)

ಅಳುವಿಂದೆ ನಗುವಿಂದೆ ಕಳವಳದ ಸುಯ್ಲಿಂದೆ
ಚಲುವಿಕೆಯ ಜೊಂಪಿಂದೆ ನಲುಮೆಯಿಂದೆ
ಕೆಳೆಯ ಕಂಬನಿಯಿಂದೆ ಹಬೆಯ ಬಿಸಿ ಬೆವರಿಂದೆ
ಜಳಕವೋ ಜೀವಕ್ಕೆ – ಮರುಳಮುನಿಯ

ಜೀವನದಲ್ಲಿ ಎಲ್ಲ ಭಾವಗಳೂ ಬೇಕು – ನಾವು ಮಾಗಲಿಕ್ಕಾಗಿ, ಎಂಬ ಚಿಂತನೆಯನ್ನು “ಮರುಳಮುನಿಯನ ಕಗ್ಗ”ದ ಈ ಮುಕ್ತಕದಲ್ಲಿಯೂ ನಮ್ಮ ಮುಂದಿಡುತ್ತಾರೆ, ಮಾನ್ಯ ಡಿವಿಜಿಯವರು.

ಅಳು, ನಗು, ಕಳವಳ, ಚೆಲುವು, ನಲುಮೆ, ಗೆಳೆತನ, ಉದ್ವೇಗ – ಇವನ್ನು ನಾವೆಲ್ಲರೂ ಬೇರೆಬೇರೆ ಸಂದರ್ಭಗಳಲ್ಲಿ ಅನುಭವಿಸಿರುತ್ತೇವೆ. ನಮ್ಮ ಆಪ್ತರನ್ನು ಅಥವಾ ಬೆಲೆ ಬಾಳುವುದನ್ನು ಕಳೆದುಕೊಂಡಾಗ, ಮೈಗೆ ಅಥವಾ ಮನಸ್ಸಿಗೆ ನೋವಾದಾಗ ಅಳು ನುಗ್ಗಿ ಬರುತ್ತದೆ. ಆತ್ಮೀಯರ ಜೊತೆಗಿದ್ದಾಗ, ದೊಡ್ಡ ಸಾಧನೆ ಮಾಡಿದಾಗ, ಸಂತೋಷವಾದಾಗ ಮೆಲುನಗು ಮೂಡಿ ಬರುತ್ತದೆ. ಶಾಲಾಕಾಲೇಜುಗಳ ಪರೀಕ್ಷಾ ಫಲಿತಾಂಶ ಬರುವ ಮುನ್ನ ವಿದ್ಯಾರ್ಥಿಗಳಿಗೆ ಕಳವಳ ಸಹಜ. ಸೌಂದರ್ಯವನ್ನು ಆಸ್ವಾದಿಸುತ್ತಾ ಮಂಪರಿಗೆ ಜಾರುವುದೂ ಸಹಜ. ಸ್ನೇಹದಿಂದ ಜೊತೆಗಿದ್ದಾಗ ಖುಷಿ, ಆದರೆ ಅಗಲಿದಾಗ ಕಣ್ಣಲ್ಲಿ ನೀರು. ಹಾಗೆಯೇ ಯಾರೋ ಅವಮಾನ ಮಾಡಿದಾಗ ಸ್ವಾಭಿಮಾನ ಕೆರಳಿ, ಉದ್ವೇಗ ಉಕ್ಕುತ್ತದೆ. ೧೬ ನವಂಬರ್ ೨೦೧೩ರಂದು, ಮುಂಬೈಯ ವಾಂಖೆಡೆ ಅಂಗಣದಿಂದ ೨೪ ವರುಷಗಳ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿ ಹೊರ ನಡೆಯುವಾಗ, “ಭಾರತರತ್ನ” ಪ್ರಶಸ್ತಿ ಪಡೆದಿದ್ದರೂ, ಸಚಿನ್ ತೆಂಡುಲ್ಕರನ ಕಣ್ಣಲ್ಲಿ ಕಣ್ಣೀರು ತೊಟ್ಟಿಕ್ಕಿದ್ದು ಸತ್ಯ.
ಮತ್ತೆಮತ್ತೆ ನಮಗೆ ಎದುರಾಗುವ ಪ್ರಶ್ನೆ: ಜೀವನದಲ್ಲಿ ಈ ಭಿನ್ನಭಿನ್ನ ಭಾವಗಳು ಯಾಕೆ? ಇದಕ್ಕೆ ಡಿ.ವಿ. ಗುಂಡಪ್ಪನವರು ಕೊಡುವ ಸರಳ ಉತ್ತರ: ಇವೆಲ್ಲವುಗಳಿಂದ “ಜಳಕವೋ ಜೀವಕ್ಕೆ.” ಸ್ನಾನ ಮಾಡಿದೊಡನೆ ಏನು ಅನಿಸುತ್ತದೆ? ಉಲ್ಲಾಸ ಅನಿಸುತ್ತದೆ. ಹಳತನ್ನು, ಬೆವರ ವಾಸನೆಯನ್ನು ತೊಳೆದುಕೊಂಡು, ಬದುಕಿನಲ್ಲಿ ಇನ್ನೊಂದು ಹೊಸ ದಿನಕ್ಕೆ ತೆರೆದುಕೊಳ್ಳಲು ಸಾಧ್ಯವಾಗುತ್ತದೆ. ಈ ಭಿನ್ನಭಿನ್ನ ಭಾವಗಳೂ ನಮ್ಮನ್ನು ಮತ್ತೆಮತ್ತೆ ತೊಳೆದು, ಉಲ್ಲಾಸ ಮೂಡಿಸುತ್ತವೆ, ಅನುಭವಗಳಿಂದ ನಮ್ಮನ್ನು ಮಾಗಿಸುತ್ತವೆ. ಹಾಗಾಗಿ ಅವನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸೋಣ.