ಕಗ್ಗ ದರ್ಶನ – 27 (1)
ಬರದಿಹುದರೆಣಿಕೆಯಲಿ ಬಂದಿಹುದ ಮರೆಯದಿರು
ಗುರುತಿಸೊಳಿತಿರುವುದನು ಕೇಡುಗಳ ನಡುವೆ
ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು
ಹರುಷಕದೆ ದಾರಿಯೆಲೊ – ಮಂಕುತಿಮ್ಮ
ಕೆಲವರದು ಬದುಕಿನಲ್ಲಿ ಭಾರೀ ಲೆಕ್ಕಾಚಾರ – ತಮ್ಮ ಕೈಗೆ ಬಾರದಿರುವುದರ ಬಗ್ಗೆ. ಈ ಲೆಕ್ಕಾಚಾರದಲ್ಲಿ ನಿನ್ನ ಕೈಗೆ ಬಂದಿರುವುದನ್ನು ಮರೆಯಬೇಡ ಎಂದು ಎಚ್ಚರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಒಂದು ಸಂಸ್ಥೆಯಲ್ಲಿ ಗುಮಾಸ್ತನಾದವನಿಗೆ ಅಧಿಕಾರಿಯಾಗಲಿಲ್ಲವೆಂಬ ಚಿಂತೆ. ಅಧಿಕಾರಿಯಾದವನಿಗೆ ಭಡ್ತಿ ಸಿಗಲಿಲ್ಲ; ಮೇಲಧಿಕಾರಿ ಆಗಲಿಲ್ಲ ಎಂಬ ವ್ಯಸನ. ಮೇಲಧಿಕಾರಿಯಾದವನಿಗೆ ಚೇರ್ಮನ್ ಆಗಲಿಲ್ಲ ಎಂಬ ಚಿಂತೆ! ಇವರೆಲ್ಲರೂ ತಮಗೊಂದು ಉದ್ಯೋಗವಿದೆ; ಪ್ರತಿ ತಿಂಗಳೂ ಸಂಬಳ ಸಿಗುತ್ತದೆ ಎಂಬುದನ್ನು ಮರೆತೇ ಬಿಡುತ್ತಾರೆ. ಮಂಗಳೂರಿನಲ್ಲಿ ಇತ್ತೀಚೆಗೆ ಒಂದು ಪೆಟ್ರೋಲ್ ಬಂಕನ್ನು ಮುಚ್ಚಲಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಒಬ್ಬರನ್ನು ಕೇಳಿದೆ, “ಮುಂದೇನು?” ಅವರ ಉತ್ತರ, “ಬೇರೆ ಕಡೆ ಕೆಲಸ ಹುಡುಕಬೇಕು.” ಮುಂಬೈಯ ಹತ್ತಾರು ಬಟ್ಟೆ ಗಿರಣಿಗಳು ಮುಚ್ಚಿದಾಗ, ಅಲ್ಲಿನ ಸಾವಿರಾರು ಕೆಲಸಗಾರರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದರು. ಇವರ ಪಾಡೇನು?
ಹಾಗೆಯೇ, ಸಣ್ಣ ಕಾರಿನ ಮಾಲೀಕರಿಗೆ ದೊಡ್ಡ ಕಾರು ಖರೀದಿಸಲಾಗುತ್ತಿಲ್ಲ ಎಂಬ ಚಿಂತೆ! ಸಣ್ಣ ಕಾರನ್ನೂ ತಗೊಳ್ಳಲಾಗಲಿಲ್ಲ ಎಂಬ ವೇದನೆ ದ್ವಿಚಕ್ರ ವಾಹನಗಳ ಮಾಲೀಕರಿಗೆ. ಇವರೆಲ್ಲರೂ ತಮಗೊಂದು ವಾಹನ ಇದೆಯೆಂಬುದನ್ನೇ ಗಮನಿಸುವುದಿಲ್ಲ. ಅಂತೆಯೇ, ಸಣ್ಣ ಮನೆಯ ಮಾಲೀಕರಿಗೆ ದೊಡ್ಡ ಮನೆಯ ಒಡೆಯರಾಗದ ಚಿಂತೆ! ಈ ಜಗತ್ತಿನಲ್ಲಿ ಲಕ್ಷಲಕ್ಷ ಜನರಿಗೆ ಸ್ವಂತ ಮನೆಯೇ ಎಲ್ಲ ಎಂಬ ಸತ್ಯ ಅವರಿಗೆ ಕಾಣಿಸುವುದೇ ಇಲ್ಲ. ಒಂದು ಚಿನ್ನದ ಚೈನು, ಎರಡು ಚಿನ್ನದ ಬಳೆ ಇರುವವರಿಗೆ, ಮೈತುಂಬ ಬಂಗಾರದೊಡವೆ ಧರಿಸಲಾಗಲಿಲ್ಲವೆಂಬ ಚಿಂತೆ!
ನಮಗೆ ಎದುರಾಗುವ ಕೇಡುಗಳ ಬಗ್ಗೆಯೂ ಇಂತಹದೇ ಮನಸ್ಥಿತಿ. “ಬೇರೆಯವರೆಲ್ಲ ಸುಖಸಂತೋಷದಲ್ಲಿದ್ದಾರೆ; ನನಗೆ ಮಾತ್ರ ಬೆನ್ನುಬೆನ್ನಿಗೆ ಸಂಕಟ” ಎಂಬ ಚಿಂತೆ! ನಮಗೆ ಬಂದಿರುವ ಹತ್ತು ಕೆಡುಕುಗಳ ನಡುವೆ ಒಂದಾದರೂ ಒಳಿತಿಗೆ ಕಾರಣವಾಗಿದೆಯೇ? ಎಂದು ಪರಿಶೀಲಿಸಲು ತಯಾರಿಲ್ಲ. ಹಲವು ವಿಕಲಚೇತನರ ಹೆತ್ತವರು ಆ ಮಕ್ಕಳಿಂದಾಗಿ ತಾವು ತಾಳ್ಮೆ ಕಲಿತದ್ದನ್ನು ನೆನೆಯುತ್ತಾರೆ. ಇದುವೇ ಕೇಡುಗಳ ನಡುವಿನ ಒಳಿತು, ಅಲ್ಲವೇ? ಆದ್ದರಿಂದ, ಇರುವ ಭಾಗ್ಯವ ನೆನೆದು ಬಾರೆನೆಂಬುದನ್ನು ಬಿಡಬೇಕು. ನಮ್ಮ ಬದುಕಿನಲ್ಲಿ ಹರುಷಕ್ಕೆ ಇದೇ ದಾರಿ.