ಕಗ್ಗ ದರ್ಶನ – 28 (1)

ಕಗ್ಗ ದರ್ಶನ – 28 (1)

ತಲೆಯೊಳಗೆ ನೆರೆದಿಹುವು ನೂರಾರು ಹಕ್ಕಿಗಳು
ಗಿಳಿ ಗೂಗೆ ಕಾಗೆ ಕೋಗಿಲೆ ಹದ್ದು ನವಿಲು
ಕಿಲಕಿಲನೆ ಗೊರಗೊರನೆ ಕಿರಿಚಿ ಕೂಗುತ್ತಿಹುವು
ನೆಲೆಯೆಲ್ಲಿ ನಿದ್ದೆಗೆಲೊ - ಮಂಕುತಿಮ್ಮ
ನಮ್ಮ ತಲೆಯೊಳಗೆ ತುಂಬಿರುವ ಯೋಚನೆಗಳನ್ನು ಹಕ್ಕಿಗಳಿಗೆ ಹೋಲಿಸುತ್ತಾ, ಮುಖ್ಯವಾದ ಪ್ರಶ್ನೆಯೊಂದನ್ನು ಈ ಮುಕ್ತಕದಲ್ಲಿ ಎತ್ತುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಗಿಳಿ, ಗೂಗೆ, ಕಾಗೆ, ಕೋಗಿಲೆ, ಹದ್ದು, ನವಿಲು ಇತ್ಯಾದಿ ಪಕ್ಷಿಗಳಿರುವಂತೆ, ನಮ್ಮ ತಲೆಯೊಳಗೆ ವಿಧವಿಧ ಯೋಚನೆಗಳು ತುಂಬಿ ತುಳುಕಾಡುತ್ತಿವೆ. ಕೆಲವು ಹಕ್ಕಿಗಳ ಸ್ವರ ಕಿಲಕಿಲವೆಂದು ಇಂಪಾಗಿದ್ದರೆ, ಇನ್ನು ಕೆಲವು ಹಕ್ಕಿಗಳ ಸ್ವರ ಗೊರಗೊರನೆ ಕರ್ಕಶ. ಹಾಗೆಯೇ ಕೆಲವು ಯೋಚನೆಗಳು ಹಿತಕರವಾಗಿದ್ದರೆ, ಇನ್ನು ಕೆಲವು ಯೋಚನೆಗಳು ಸಂಕಟದಾಯಕ.
ಹೀಗಿರುವಾಗ, ಮಲಗಿದರೆ ನಿದ್ದೆ ಬಂದೀತೇ (ನಿದ್ದೆಗೆ ನೆಲೆಯೆಲ್ಲಿ)? ಎಂಬುದೇ ಮುಖ್ಯವಾದ ಪ್ರಶ್ನೆ. ಮನದೊಳಗೆ ನಿರಂತರವಾಗಿ ಯೋಚನೆಗಳು ಹುಟ್ಟುತ್ತಿರಬೇಕಾದರೆ, ಅವುಗಳ ತಾಕಲಾಟದಿಂದಾಗಿ ನೆಮ್ಮದಿಯೇ ಇಲ್ಲವಾಗುತ್ತದೆ.
ನಮ್ಮ ಮನಸ್ಸಿನೊಳಗೆ ಏನಾಗುತ್ತಿದೆ ಎಂದು ತಿಳಿಯಬೇಕಾದರೆ ಕಣ್ಣು ಮುಚ್ಚಿಕೊಂಡು ಆರಾಮವಾಗಿ ಕುಳಿತುಕೊಳ್ಳ ಬೇಕು. ಬಹುಪಾಲು ಜನರು ಹೀಗೆ ಕೂರಲು ತಯಾರಿಲ್ಲ. ಯಾಕೆಂದರೆ, ಕಣ್ಣು ಮುಚ್ಚಿದೊಡನೆ ನಮ್ಮ ಮನಸ್ಸಿಗೆ ಕನ್ನಡಿ ಹಿಡಿದಂತಾಗುತ್ತದೆ. ಕೆಟ್ಟ ಯೋಚನೆಗಳ ಸಹಿತ ನಮ್ಮ ಎಲ್ಲ ಯೋಚನೆಗಳು ಧುತ್ತೆಂದು ನಮಗೆ ಎದುರಾಗುತ್ತವೆ. ಇವನ್ನೆಲ್ಲ ಎದುರಿಸುವುದು ಸುಲಭವಲ್ಲ. ಒಂದು ಕ್ಷಣ ಯೋಚಿಸಿ – ನಿಮ್ಮೆದುರು ನಿಂತ ವ್ಯಕ್ತಿಯ ಬಗ್ಗೆ ನಿಮ್ಮಲ್ಲಿ ಹುಟ್ಟುವ ಎಲ್ಲ ಯೋಚನೆಗಳನ್ನು ಅವರಿಗೆ ಬಾಯಿಬಿಟ್ಟು ಹೇಳಲಿಕ್ಕಾಗುತ್ತದೆಯೇ?
ನಮ್ಮ ಯೋಚನೆಗಳ ವೇಗ ಮತ್ತು ವಿವಿಧತೆ ನಮ್ಮನ್ನು ದಿಕ್ಕುಗೆಡಿಸುತ್ತದೆ, ಅಲ್ಲವೇ? ನಾವು ಕಣ್ಣುಮುಚ್ಚಿ ಕುಳಿತಾಗ, ಅಲ್ಲಿಂದಲೇ ಮುಂಬೈಗೆ, ಲಂಡನಿಗೆ, ಚಂದ್ರಲೋಕಕ್ಕೆ ಮತ್ತೆ ಮಂಗಳಗ್ರಹಕ್ಕೆ ಮನೋವೇಗದಲ್ಲಿ ಪಯಣಿಸಿ, ಕ್ಷಣದೊಳಗೆ ವಾಪಾಸು ಬರಬಹುದು. ಈ ವೇಗ ಯಾತಕ್ಕೆ? ಇದರಿಂದಾಗಿ ಮನಸ್ಸಿನ ಉದ್ವೇಗ ಹೆಚ್ಚುತ್ತದೆ. ಹಾಗೆಯೇ, ಕಣ್ಣುಮುಚ್ಚಿ ಕೂತಾಗ ಚಿಮ್ಮಿ ಬರುವ ಯೋಚನೆಗಳ ವೈವಿಧ್ಯ ಗಮನಿಸಿ: ಬಾಲ್ಯದ, ಶಾಲೆಯ, ಹೈಸ್ಕೂಲಿನ, ಕಾಲೇಜಿನ ನೆನಪುಗಳು, ಹೆತ್ತವರ ಮಮಕಾರ, ಮುಂದಿನ ಬದುಕಿನ ಚಿಂತೆಗಳು, ಭಯಗಳು ನಮ್ಮನ್ನು ಅಲುಗಾಡಿಸುತ್ತವೆ. ಇದರಿಂದ ಪಾರಾಗಬೇಕಾದರೆ, ಮನಸ್ಸನ್ನು ಶಾಂತವಾಗಿಸಬೇಕು. ಆಗ ಮಲಗಿದೊಡನೆ ನಿದ್ದೆ. ಬದುಕು ಬಂಗಾರ.