ಕಗ್ಗ ದರ್ಶನ – 3 (1)
ಹೊಳಪು ಹೊಳಪಿನ ನಡುವೆ ಬಿಡುವಿನಿತು ರತ್ನದಲಿ
ಬೆಳಕು ಬೆಳಕಿನ ನಡುವೆ ಅನಿತಿನಿತು ನೆರಳು
ಬೆಳಸು ಬೆಳಸಿನ ಸಾಲು ನಡುವೆ ಬದಿ ಗದ್ದೆಯಲಿ
ಉಳಿವಿಗಳಿವಿನ ನೆಲೆಯೊ – ಮಂಕುತಿಮ್ಮ
ರತ್ನವನ್ನು ಗಮನಿಸಿದ್ದೀರಾ? ಅದರ ಮೈಯಲ್ಲಿ ಹೊಳಪೇ ಹೊಳಪು. ಸರಿಯಾಗಿ ಗಮನಿಸಿದರೆ ನಮಗೆ ತಿಳಿಯುತ್ತದೆ, ಆ ಹೊಳಪನ್ನು ಎತ್ತಿ ಕೊಡುವುದು ಆ ಹೊಳಪು ಹೊಳಪಿನ ನಡುವಿನ ಹೊಳಪಿಲ್ಲದ ಅಂಶ ಎಂಬುದು. ಇಂತಹ ರತ್ನದ ಉಪಮೆಯ ಮೂಲಕ ಬದುಕಿನ ದೊಡ್ಡ ಸತ್ಯವನ್ನು ತೋರಿದ್ದಾರೆ ಮಾನ್ಯ ಡಿ. ವಿ. ಗುಂಡಪ್ಪನವರು, ಈ ಮುಕ್ತಕದಲ್ಲಿ.
ಬೆಳಕು ಕಣ್ಣಿಗೆ ರಾಚುತ್ತದೆ. ಯಾಕೆಂದರೆ ಬೆಳಕಿನ ಕೋಲುಕೋಲುಗಳ ನಡುವೆ ನೆರಳಿದೆ. ಆ ನೆರಳಿನ ಕತ್ತಲು ಇಲ್ಲವಾದರೆ ನಮಗೆ ಬೆಳಕು ಕಂಡೀತೇ? ಅದಿಲ್ಲದೆ ಬೆಳಕಿನ ಅನುಭವ ನಮಗಾದೀತೇ?
ಬದುಕಿನಲ್ಲಿ ಸೋಲೂ ಇದೆ, ಗೆಲುವೂ ಇದೆ. ಹಾಗಿರುವಾಗ, ಗೆಲುವು ಮಾತ್ರ ನನಗಿರಲಿ, ಸೋಲು ಬೇಡವೇ ಬೇಡ ಎನ್ನಲಾದೀತೇ? ತರಗತಿಯಲ್ಲಿ ಯಾವತ್ತೂ ನಾನೇ ಮೊದಲಿಗನಾಗಬೇಕು. ಓಟದ ಸ್ಪರ್ಧೆಯಲ್ಲಿ ಯಾವಾಗಲೂ ನಾನೇ ಮೊದಲ ಸ್ಥಾನ ಪಡೆಯಬೇಕು. ಸಂಸ್ಥೆಯಲ್ಲಿ ಪ್ರತೀ ಬಾರಿ ನನಗೇ ಭಡ್ತಿ ಸಿಗಬೇಕು. ಹೀಗೆಲ್ಲ ಹಪಹಪಿಸುತ್ತಿದ್ದರೆ, ಒಂದೊಮ್ಮೆ ಸೋಲು ನುಗ್ಗಿ ಬರುತ್ತದೆ. ಆಗ ಹತಾಶರಾಗಿ ಪ್ರಪಾತಕ್ಕೆ ಬೀಳಬಾರದು. ಸೋಲೇ ಗೆಲುವಿನ ಸೋಪಾನವೆಂದು ಮುನ್ನಡೆಯಬೇಕು. ಮುಂದಿನ ಸುತ್ತಿನಲ್ಲಿ ಗೆಲುವು ನನ್ನದಾಗಲಿದೆ ಎಂಬ ಆತ್ವವಿಶ್ವಾಸ ಬೆಳೆಸಿಕೊಳ್ಳಬೇಕು. ಹಸುರು ಗದ್ದೆಯಲ್ಲಿ ನಡೆಯುತ್ತ ನೆಲವನ್ನು ಗಮನಿಸಿ. ಬೆಳೆದು ನಿಂತ ಪೈರಿನ ಸಾಲುಸಾಲು. ನಡುವೆ ಇದೆ ಬದು. ಮತ್ತೆ ಪೈರಿನ ಸಾಲುಸಾಲು.
ಬದುಕಿನಲ್ಲಿಯೂ ಹಾಗೆಯೇ. ಉಳಿವು ಮತ್ತು ಅಳಿವು ಅಕ್ಕಪಕ್ಕದಲ್ಲೇ ಇವೆ. ಹುಟ್ಟಿನ ಜೊತೆಗೇ ಸಾವು ಬೆನ್ನಟ್ಟಿ ಬಂದಿರುತ್ತದೆ. ಆದರೆ ಈ ಸತ್ಯ ನಮಗೆ ಕಾಣುವುದಿಲ್ಲ ಅಥವಾ ಈ ಸತ್ಯ ಒಪ್ಪಿಕೊಳ್ಳಲು ನಾವು ತಯಾರಿಲ್ಲ. ಬದುಕಿನ ನಶ್ವರತೆ ಒಪ್ಪಿಕೊಳ್ಳುವುದೇ ನೆಮ್ಮದಿಯ ನೆಲೆ.
ಅದರ ಬದಲಾಗಿ, ನಾನು ಶಾಶ್ವತ ಎಂಬಂತೆ ಬದುಕಿದರೆ ಅಂತ್ಯ ದಾರುಣವಾದೀತು. ಹಿಟ್ಲರ್, ಸದ್ದಾಂ ಹುಸೇನ್, ಗಡಾಫಿ – ಇಂಥವರು ತಮ್ಮ ಬದುಕಿನುದ್ದಕ್ಕೂ ಮಾಡಿದ್ದು ಹಿಂಸೆ. ತಮಗೆ ಸಾವೇ ಇಲ್ಲ ಎಂಬಂತೆ, ಸಾವಿರಾರು ಜನರನ್ನು ಕ್ರೌರ್ಯದಿಂದ ಸಾಯಿಸುತ್ತ ಜೀವಿಸಿದ ಇವರೂ ಕೊನೆಗೊಂದು ದಿನ ಸತ್ತರು – ಅವರು ಇತ್ತ ಹಿಂಸೆಯೇ ಅವರನ್ನು ಮುತ್ತಿಕೊಂಡು ಕೊಂದಿತು.
ಇನ್ನಾದರೂ ನಮ್ಮ ಬೆನ್ನಿಗಿರುವ ಸಾವನ್ನು ಒಪ್ಪಿಕೊಳ್ಳೋಣ. ಇದೇ ನಮ್ಮ ಕೊನೆಯ ದಿನವೆಂಬಂತೆ ಒಳ್ಳೆಯತನದಲ್ಲಿ ಪ್ರತಿದಿನವೂ ಬದುಕೋಣ.
Comments
ಉ: ಕಗ್ಗ ದರ್ಶನ – 3 (1)
ಓದಿದಷ್ಟು ಮತ್ತೊಮ್ಮೆ ಓದಬೇಕನಿಸುತ್ತದೆ ಈ ಮಂಕುತಿಮ್ಮನ ಕಗ್ಗದ ಸಾಲುಗಳು ಅಡ್ಡೂರರೆ.
ಕಗ್ಗವನ್ನ ಅರ್ಥೈಸುವ ತಮ್ಮ ಪ್ರಯತ್ನಕ್ಕೆ ಧನ್ಯವಾದಗಳು.
ರಮೇಶ ಕಾಮತ್.
In reply to ಉ: ಕಗ್ಗ ದರ್ಶನ – 3 (1) by swara kamath
ಉ: ಕಗ್ಗ ದರ್ಶನ – 3 (1)
ನಮಸ್ತೆ. ಒಳ್ಳೆಯ ಬದುಕಿಗೆ ಬೇಕಾದ್ದು ಎಲ್ಲವೂ ಮಂಕುತಿಮ್ಮನ ಕಗ್ಗ ಮತ್ತು ಮರುಳ ಮುನಿಯನ ಕಗ್ಗದ ಮುಕ್ತಕಗಳಲ್ಲಿ ಇವೆ. ಆ ನೀತಿಗಳನ್ನು ಅನುಸರಿಸುವ ಶಿಸ್ತು ಕಲಿತರೆ, ನೆಮ್ಮದಿ ನಮ್ಮದಾದೀತು.