ಕಗ್ಗ ದರ್ಶನ – 30 (2)

ಕಗ್ಗ ದರ್ಶನ – 30 (2)

ಅಂದಿನಂದಂದಿಗದು ಮುಂದೆ ಸಾಗುವ ಲೀಲೆ
ಸಂಧಾನಗಳನೆಲ್ಲ ಮೀರ್ದುದಾ ಲೀಲೆ
ಅಂದಂದಿಗಂದಂದು ಬಂದಿಹುದು ಕರ್ತವ್ಯ
ಸಂದುದನು ನಿರ್ವಹಿಸು – ಮರುಳ ಮುನಿಯ
ಈ ಜಗತ್ತಿನ ಆಟವಿದೆಯಲ್ಲ, ಅದು ಅಂದಿನದು ಅಂದಿಗೆ ಮುಗಿದು, ಮುಂದೆ ಸಾಗುತ್ತಿರುವ ಲೀಲೆ. ಇದು ಎಲ್ಲ ಹೊಂದಾಣಿಕೆಗಳನ್ನೂ ಮೀರಿದ ಲೀಲೆ ಎಂದು ಜಗತ್ತಿನ ವಿದ್ಯಮಾನಗಳನ್ನು ಇದರಲ್ಲಿ ವಿವರಿಸಿದ್ದಾರೆ ಮಾನ್ಯ ಡಿ.ವಿ.ಜಿ.
ಮನುಷ್ಯ ಈ ಜಗತ್ತಿನ ಎಲ್ಲವೂ ನನ್ನ ಕೈಯಲ್ಲಿದೆ ಅಂದುಕೊಳ್ಳುತ್ತಾನೆ. ಅಷ್ಟರಲ್ಲಿ ಅವನ ಬೇರುಗಳನ್ನೇ ಅಲುಗಾಡಿಸುವ ಘಟನೆ ನಡೆಯುತ್ತದೆ. ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಸಾಧನೆ ಗಮನಿಸಿ: ಒಂದೇ ವಾಹಕದ ಮೂಲಕ ೨೦೦೮ರಲ್ಲಿ ೧೦ ಉಪಗ್ರಹಗಳನ್ನು, ೨೨ ಜೂನ್ ೨೦೧೬ರಂದು ೨೦ ಉಪಗ್ರಹಗಳನ್ನು, ೧೫ ಫೆಬ್ರವರಿ ೨೦೧೭ರಂದು ಶ್ರೀಹರಿಕೋಟಾ ಉಡಾವಣಾ ನೆಲೆಯಿಂದ ೧೦೪ ಉಪಗ್ರಹಗಳನ್ನು ಒಟ್ಟಾಗಿ ಬಾಹ್ಯಾಕಾಶಕ್ಕೆ ಉಡಾಯಿಸಿದೆ. ಇದು ಮಹಾಸಾಧನೆ. ಆದರೆ, ಈ ವರುಷದ ಮಳೆ ಎಷ್ಟು? ಮುಂದಿನ ಭೂಕಂಪ, ಸುನಾಮಿ ಅಥವಾ ಬಿರುಗಾಳಿ ಯಾವಾಗ? ಎಲ್ಲಿ? ಇವನ್ನೆಲ್ಲ ತಿಳಿಯಲಾಗದ ಅಸಹಾಯಕ ಸ್ಥಿತಿ ನಮ್ಮದು.
ಇಂತಹ ಪರಿಸ್ಥಿತಿಯಲ್ಲಿ ಮನುಷ್ಯ ಏನು ಮಾಡಬೇಕು? ಎಂಬ ಪ್ರಶ್ನೆ ಎತ್ತಿ, ಅದಕ್ಕೆ ಸರಳ ಉತ್ತರವನ್ನೂ ಈ ಮುಕ್ತಕದಲ್ಲಿ ನೀಡಿದ್ದಾರೆ ಡಿ.ವಿ.ಜಿ.ಯವರು. ಅಂದಂದಿಗೆ ನೀನು ಮಾಡಲೇ ಬೇಕಾದ ಕೆಲಸಗಳು ಎದುರಾಗುತ್ತವೆ. ನಿನ್ನ ಪಾಲಿಗೆ ಬಂದ ಆ ಕೆಲಸಗಳ ನಿರ್ವಹಣೆಯೇ ನಿನ್ನ ಕರ್ತವ್ಯ. ಇದನ್ನು (ಸಂದುದನು) ನಿರ್ವಹಿಸು ಎಂಬುದವರ ಸಂದೇಶ.
ಭಾರತೀಯ ರಿಸರ್ವ್ ಬ್ಯಾಂಕ್ ಈ ಮಹಾನ್ ದೇಶದ ಆರ್ಥಿಕತೆಯನ್ನು ಸುಸ್ಥಿತಿಯಲ್ಲಿ ಇಡಬೇಕಾದ ಸಂಸ್ಥೆ. ಇದರ ಈಗಿನ ಗವರ್ನರ್ ರಘುರಾಮ ರಾಜನ್. ಜಗತ್ತಿನ ಹಲವು ದೇಶಗಳ ಆರ್ಥಿಕತೆ ಮುಗ್ಗರಿಸಿದ ಕಳೆದ ಮೂರು ವರುಷಗಳಲ್ಲಿ ಭಾರತದ ಆರ್ಥಿಕತೆಯನ್ನು ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಅವರದು. ಆದರೂ, ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸುವ ಬಗ್ಗೆ ಅಪಸ್ವರಗಳು ಎದ್ದವು. ಅವರು ಬಡ್ಡಿದರಗಳನ್ನು ಇಳಿಸಬೇಕೆಂದು ಒತ್ತಾಯಿಸುವವರು ಅದರ ದೂರಗಾಮಿ ಪರಿಣಾಮಗಳನ್ನು ಪರಿಗಣಿಸಿದ್ದಾರೆಯೇ? ಆದರೆ, ರಘುರಾಮ ರಾಜನ್ ಹುದ್ದೆಗೆ ಅಂಟಿಕೊಳ್ಳುವ ವ್ಯಕ್ತಿಯಲ್ಲ. ತನ್ನ ಅವಧಿ ಮುಗಿದಾಗ (ಸಪ್ಟಂಬರ್ ೨೦೧೬ರಲ್ಲಿ) ತಾನು ನಿರ್ಗಮಿಸುತ್ತೇನೆ, ತನ್ನ ಮೆಚ್ಚಿನ ಶಿಕ್ಷಣರಂಗಕ್ಕೆ ಮರಳುತ್ತೇನೆ ಎಂದು ವಿದಾಯಪತ್ರ ಬರೆದು, ನುಡಿದಂತೆ ನಡೆದ ಧೀಮಂತ. ಡಿ.ವಿ.ಜಿ.ಯವರ ಸಂದೇಶದಂತೆ, ತನ್ನ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸಿದ ಧನ್ಯತೆ ಅವರಿಗಿದೆ, ಅಲ್ಲವೇ?