ಕಗ್ಗ ದರ್ಶನ – 31 (2)

5

ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ
ಸವೆಯಿಪುದು ಜಲವ ರವಿ ಎಲ್ಲವೆಲ್ಲರನು
ಸವೆಯಿಪುದು ತನುವ ಮನಸಿನ ಕೊರಗು ಕೆಣಕುಗಳು
ಜವನು ಜಗದುಜ್ಜಿಕೆಯೊ – ಮರುಳ ಮುನಿಯ
ಈ ಭೂಮಿಯಲ್ಲಿ ಯಾವುದನ್ನು ಯಾವುದು ಸವೆಯಿಸುತ್ತಿದೆ ಎಂಬುದನ್ನು ಇದರಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ಶಿಲೆಗಳನ್ನು ಗಾಳಿ ಉಜ್ಜಿ ಸವೆಸಿದರೆ, ನೆಲವನ್ನು ಜಲವೇ ಸವೆಯಿಸುತ್ತದೆ. ಆ ಜಲವನ್ನು ಸವೆಯಿಸುವ (ಆವಿಯಾಗಿಸುವ) ಸೂರ್ಯನು ತನ್ನ ಶಾಖದಿಂದ ಎಲ್ಲವನ್ನೂ ಎಲ್ಲರನ್ನೂ ದಣಿಸಿ ಸವೆಯಿಸುತ್ತಾನೆ. ಇದೇ ರೀತಿಯಲ್ಲಿ ಮನುಷ್ಯನ ದೇಹವನ್ನು ಸವೆಯಿಸುವುದು ಅವನ ಮನಸ್ಸಿನ ಕೊರಗು ಮತ್ತು ಕೆಣಕುಗಳು (ಪೀಡನೆಗಳು). ಅಂತೂ ಜವರಾಯನು ಈ ಭೂಮಿಯ ಜೀವಸಂಕುಲವನ್ನು ವಿಧವಿಧವಾಗಿ ಉಜ್ಜಿ ಹಾಕುವ ಉಜ್ಜುಗಲ್ಲು ಆಗಿದ್ದಾನೆ. ಅವನೀಯುವ ಬವಣೆಗಳಿಂದ (ಉಜ್ಜುವಿಕೆಯಿಂದ) ಯಾರಿಗೂ ವಿನಾಯ್ತಿಯಿಲ್ಲ.
ಈ ಹಿನ್ನೆಲೆಯಲ್ಲಿ ನಮ್ಮ ಕರ್ನಾಟಕದ ಇಬ್ಬರು ಮಹಿಳಾ ಅಧಿಕಾರಿಗಳ೨೦೧೬ರಲ್ಲಿ ಆತ್ಮಹತ್ಯಾ ಪ್ರಯತ್ನದ ಪ್ರಕರಣಗಳನ್ನು ಗಮನಿಸಿ. ಒಬ್ಬರು ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರೂಪಾ ತಂಬದ (೨೯). ಅವರಿಂದ ೧೯ ಜುಲಾಯಿ ೨೦೧೬ರಂದು ಮಧ್ಯಾಹ್ನ ಠಾಣೆಯಲ್ಲೇ ೨೩ ನಿದ್ರಾ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನ. ೨೦೦೯ರಲ್ಲಿ ಪೊಲೀಸ್ ಇಲಾಖೆ ಸೇರಿದ್ದ ರೂಪಾ ತಂಬದ ದಾವಣಗೆರೆ ಜಿಲ್ಲೆಯ ಗೋಪನಾಳ ಗ್ರಾಮದವರು. ಆ ದಿನ ಬೆಳಗ್ಗೆ, ಠಾಣೆಯ ಇನ್-ಸ್ಪೆಕ್ಟರ್ ಎರಡು ಪ್ರಕರಣಗಳ ತನಿಖೆಯನ್ನು ಸರಿಯಾಗಿ ನಡೆಸಿಲ್ಲವೆಂದು ನಿಂದಿಸಿದ್ದಕ್ಕೆ ಇದು ರೂಪಾ ಅವರ ಪ್ರತಿಕ್ರಿಯೆ. ಇನ್ನೊಬ್ಬರು ಹಾಸನದ ಹಿಮ್ಸ್ ಆಡಳಿತಾಧಿಕಾರಿ ಇ. ವಿಜಯಾ. ಇವರು ೨೧ ಜುಲಾಯಿ ೨೦೧೬ರಂದು ತಮ್ಮ ನಿವಾಸದಲ್ಲಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ತಮ್ಮ ಹುದ್ದೆಯಲ್ಲಿನ ಕಿರುಕುಳಕ್ಕೆ ಇದು ಅವರ ಪ್ರತಿಕ್ರಿಯೆ. ಯಾಕೆ ಹೀಗಾಗುತ್ತಿದೆ?
ಜವನು ಜಗದುಜ್ಜಿಕೆ ಅಂದರೆ ಜೀವನವೇ ಸಂಕಟಗಳ ಸರಣಿ. ಹುಟ್ಟಿನಿಂದ ಸಾವಿನ ತನಕ ಯಾವುದೇ ತೊಂದರೆ, ಸಮಸ್ಯೆ, ಸಂಕಟ, ಯಾತನೆ ಅನುಭವಿಸದವರು ಯಾರಿದ್ದಾರೆ? ಅವೆಲ್ಲವೂ ಅಗ್ನಿಪರೀಕ್ಷೆಗಳು. ಪ್ರತಿಯೊಂದಕ್ಕೂ ಎದೆಗೊಟ್ಟು, ಯಾತನೆಯ ಬೆಂಕಿಯಲ್ಲಿ ಬೆಂದಾಗಲೇ ಬಂಗಾರದಂತೆ ಪುಟವಾಗಲು ಸಾಧ್ಯ. ಗೆಲುವುಗಳ ಕುದುರೆ ಸವಾರಿ ಮಾಡಲು ಯಾವುದೇ ಮಾನಸಿಕ ಸಿದ್ಧತೆ ಬೇಕಾಗಿಲ್ಲ. ಆದರೆ ಸೋಲುಗಳ ಸೋಪಾನ ಏರಲು ಆಳವಾದ ಮಾನಸಿಕ ತಯಾರಿ ಬೇಕು. ಹಾಗೆ ನಾವು ಸಜ್ಜಾದರೆ, ಯಾವುದೇ ಜವನುಜ್ಜಿಕೆಗೆ ಎದೆಗೊಡಲು ಸಾಧ್ಯ, ಅಲ್ಲವೇ?
 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.