ಕಗ್ಗ ದರ್ಶನ – 32 (2)

ಕಗ್ಗ ದರ್ಶನ – 32 (2)

ಗುರಿಯೇನು ಜೀವನಕೆ ಗುರಿಯರಿತು ಜೀವಿಪುದು
ಧರೆಯಿಂದ ಶಿಖರಕೇರುವುದು ಪುರುಷತನ
ಕಿರಿದರಿಂ ಹಿರಿದಾಗುವುದು ದಿನದಿನದೊಳಿನಿತನಿತು
ಪರಮಾರ್ಥ ಸಾಧನೆಯೊ – ಮರುಳ ಮುನಿಯ
ಜೀವನದ ಗುರಿಯೇನು? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಮತ್ತೆ ಎತ್ತಿದ್ದಾರೆ ಮಾನ್ಯ ಡಿ.ವಿ.ಜಿ.ಯವರು. ಆ ಪ್ರಶ್ನೆಗೆ “ಗುರಿಯರಿತು ಜೀವಿಪುದು” ಎಂಬ ಉತ್ತರವನ್ನೂ ನೀಡಿದ್ದಾರೆ. ಪ್ರತಿಯೊಬ್ಬರೂ ತನ್ನ ಬದುಕಿಗೆ ಏನಾದರೂ ಉದ್ದೇಶಗಳಿವೆಯೇ? ಎಂದು ಚಿಂತನೆ ಮಾಡುವುದು ಅಗತ್ಯ. ಆಳವಾಗಿ ಮತ್ತು ಗಾಢವಾಗಿ ಚಿಂತಿಸಿ, ಆ ಉದ್ದೇಶಗಳನ್ನು ಗುರುತಿಸಿಕೊಳ್ಳುವುದೂ ಮುಖ್ಯ. ಹಾಗೆ ಗುರುತಿಸಿಕೊಂಡ ಬಳಿಕ, ಈಗಿನ ಬದುಕಿನಿಂದ (ಧರೆಯಿಂದ) ಆ ಮಹೋನ್ನತ ಬದುಕಿಗೆ (ಶಿಖರಕೆ) ಏರುವುದೇ ಸಾಧನೆ (ಪುರುಷತನ). ಇದಕ್ಕಾಗಿ ದಿನದಿನವೂ ಸಣ್ಣಪುಟ್ಟ ಸಾಧನೆಗಳ ಮೂಲಕ ಮಹತ್ತಾದ ಶ್ರೇಷ್ಠವಾದ ಗುರಿಯತ್ತ ಸಾಗುವುದೇ ಅಂತಿಮ ಗುರಿಸಾಧನೆಗೆ (ಮೋಕ್ಷಪ್ರಾಪ್ತಿಗೆ) ದಾರಿ ಎಂದು ಅವರು ವಿವರಿಸುತ್ತಾರೆ.
ಈ ವಿವರಣೆಯನ್ನು ಆಗಸ್ಟ್ ೨೦೧೬ರ ರಿಯೋ ಒಲಿಂಪಿಕ್ಸಿನಲ್ಲಿ ಭಾರತದ ಕ್ರೀಡಾಪಟುಗಳ ಸಾಧನೆಗೆ ಅನ್ವಯಿಸೋಣ. ರಿಯೋ ಡಿ ಜೆನೈರೋ ಒಲಿಂಪಿಕ್ಸಿಗೆ ಭಾರತ ಕಳಿಸಿದ್ದು ೧೧೮ ಸ್ಪರ್ಧಾಳುಗಳ ತಂಡವನ್ನು. ಅವರಲ್ಲಿ ಹತ್ತು ಸ್ಪರ್ಧಿಗಳಾದರೂ ಪದಕ ಗೆಲ್ಲುವ ನಿರೀಕ್ಷೆಯಿತ್ತು. ಆದರೆ ಭಾರತದ ಸ್ಪರ್ಧಿಗಳು ಗಳಿಸಿದ್ದು ಎರಡು ಪದಕಗಳನ್ನು ಮಾತ್ರ. ಬ್ಯಾಡ್ಮಿಂಟನಿನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆದ್ದರೆ, ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚಿನ ಪದಕ ಗೆದ್ದಳು. ಇವರಿಬ್ಬರ ಬಗ್ಗೆ ಯಾರಿಗೂ ದೊಡ್ಡ ನಿರೀಕ್ಷೆ ಇರಲಿಲ್ಲ. ಆದರೆ ಅವರಿಬ್ಬರಿಗೂ ಅಗಾಧ ಆತ್ಮವಿಶ್ವಾಸವಿತ್ತು ಮತ್ತು ಪದಕ ಗೆದ್ದೇ ಗೆಲ್ಲಬೇಕೆಂಬ ಛಲವಿತ್ತು. ಪಿ.ವಿ. ಸಿಂಧುವಿನದು ಜಾಗತಿಕ ಮಟ್ಟದ ಸ್ಪರ್ಧೆಯಲ್ಲಿ ಎಂತಹ ದಿಟ್ಟತನದ ಆಟ! ಒಂದೊಂದು ಪಾಯಿಂಟ್ ಗೆದ್ದಾಗಲೂ ಅವಳು ಹೊಮ್ಮಿಸುತ್ತಿದ್ದ ಘರ್ಜನೆಯೇ ಅವಳ ಅಖಂಡ ಆತ್ಮವಿಶ್ವಾಸದ ಪುರಾವೆ; ಸ್ವಪ್ರೇರಣೆಯ ದ್ಯೋತಕ.
ಹರಿಯಾಣ ರಾಜ್ಯದ ರೋಹ್ಟಕ್ ಜಿಲ್ಲೆಯ ಮೋಖ್ರಾ ಗ್ರಾಮದ ಸಾಕ್ಷಿ ಮಲಿಕ್ ಆರು ನಿಮಿಷಗಳ ಕುಸ್ತಿ ಪಂದ್ಯದಲ್ಲಿ ಕಿರ್ಗಿಸ್ತಾನದ ಸ್ಪರ್ಧಿಯ ಎದುರು ಹಿನ್ನಡೆಯಲ್ಲೇ ಇದ್ದಳು. ಕೊನೆಯ ಹತ್ತು ಸೆಕೆಂಡ್ ಉಳಿದಿತ್ತು – ಆಗ ಮಿಂಚಿನ ವೇಗದಲ್ಲಿ ತನ್ನ ನೆಚ್ಚಿನ ಪಟ್ಟು ಹಾಕಿ, ಎದುರಾಳಿಯನ್ನು ಕೆಡವಿ ಬಿಟ್ಟಳು. ಭಾರತಕ್ಕೆ ರಿಯೋ ಒಲಿಂಪಿಕ್ಸಿನ ಮೊದಲ ಪದಕ ಗೆದ್ದು ಕೊಟ್ಟಳು. ಇವರಿಬ್ಬರೂ ಕಠಿಣ ಸ್ಪರ್ಧೆಯಲ್ಲಿ ವಿಜೇತರಾಗಿ ಮಹಾನ್ ಗುರಿಸಾಧನೆ ಮಾಡಿದರು. ಜಾಗತಿಕ ಮಟ್ಟದಲ್ಲಿ ಮಾತೃಭೂಮಿಯನ್ನು ಪ್ರತಿನಿಧಿಸಿ, ತಮ್ಮ ಶಕ್ತಿಮೀರಿ ಸ್ಪರ್ಧಿಸಿ, ದೇಶಕ್ಕೆ ಗೌರವ ತರುವುದು ಮಹಾನ್ ಗುರಿಯತ್ತ ಸಾಗುವುದಕ್ಕೆ ಅಮೋಘ ಉದಾಹರಣೆ, ಅಲ್ಲವೇ?