ಕಗ್ಗ ದರ್ಶನ – 38 (1)

ಕಗ್ಗ ದರ್ಶನ – 38 (1)

ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು
ಪರತತ್ವವನು; ಬೇಕು ಬೇರೆ ಕಣ್ಣದಕೆ
ಚಿರದ ಮಮತಾವೇಷ್ಟಿತದ ಪೊರೆಯ ಪರಿದಂದು
ಅರಳ್ವುದರಿವಿನಕ ಕಣ್ಣು - ಮಂಕುತಿಮ್ಮ
ಕೇವಲ ಓದು, ವಾದ, ಬುದ್ಧಿಶಕ್ತಿಯಿಂದ ಪರತತ್ವವನ್ನು (ಪರಮಾತ್ಮನ ತತ್ವವನ್ನು) ಪಡೆಯಲಾಗದು. ಅದಕ್ಕೆ ಬೇರೆಯೇ ಕಣ್ಣು ಬೇಕು ಎಂಬ ದೊಡ್ಡ ಸತ್ಯವನ್ನು ಈ ಮುಕ್ತಕದಲ್ಲಿ ಹೇಳಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ದೀರ್ಘಕಾಲದಿಂದ (ಚಿರದ) “ನಾನು, ನನ್ನದು” ಎಂಬ ಮಮಕಾರದ (ಮಮತಾವೇಷ್ಟಿತದ) ಪೊರೆ ನಮ್ಮ ದೃಷ್ಟಿಗೆ ಕವಿದಿದೆ. ಅದು ಹರಿದು ಹೋದಾಗಲೇ ಅರಿವಿನ (ತಿಳಿವಿನ) ಕಣ್ಣು ಅರಳುತ್ತದೆ ಎಂಬ ಸರಳ ಸತ್ಯವನ್ನೂ ಅವರು ತಿಳಿಸಿದ್ದಾರೆ.
ಮಹಾವೀರ ಜೈನಧರ್ಮದ ೨೪ನೆಯ ತೀರ್ಥಂಕರ. ವೈಶಾಲಿ ಸಾಮ್ರಾಜ್ಯದ ಸಾಮ್ರಾಟ ಸಿದ್ಧಾರ್ಥ ಮತ್ತು ರಾಣಿ ತ್ರಿಕಲಾ ಅವರ ಮಗ. ಅರಮನೆಯಲ್ಲಿ ಬೆಳೆಯುತ್ತಿದ್ದರೂ ಅವನಿಗೆ ಐಶ್ವರ್ಯದಲ್ಲಿ ಆಡಂಬರದಲ್ಲಿ ನಿರಾಸಕ್ತಿ. ಎಳೆಯ ಪ್ರಾಯದಿಂದಲೇ ಧ್ಯಾನ ಹಾಗೂ ಅಂತರೀಕ್ಷಣೆಯಲ್ಲಿ ಆತನಿಗೆ ಆಸಕ್ತಿ; ಜೈನಧರ್ಮದ ಮೂಲತತ್ವಗಳ ಅಧ್ಯಯನದಲ್ಲಿ ಮುಳುಗಿದ. ೩೦ನೆಯ ವಯಸ್ಸಿನಲ್ಲಿ ತನ್ನದೆಲ್ಲವನ್ನು ಮಹಾವೀರ ತೊರೆದ. ೧೨ ವರುಷಗಳು ಸನ್ಯಾಸಿಯಾಗಿ ಸಾಧನೆ ಮಾಡಿದ. ಮಹಾವೀರನ ಅರಿವಿನ ಕಣ್ಣು ತೆರೆಯಿತು. ಮುಂದಿನ ಬದುಕನ್ನೆಲ್ಲ ಜನಸಮುದಾಯಕ್ಕೆ ಅಧ್ಯಾತ್ಮದ ಶಾಶ್ವತ ತತ್ವಗಳನ್ನು ತನ್ನ ಅರಿವಿನ ಬೆಳಕಿನಲ್ಲಿ ಉಪದೇಶಿಸುತ್ತ ಕಳೆದ.
ಕಪಿಲವಸ್ತುವಿನ ರಾಜ ಶುದ್ಧೋಧನನ ಮಗನಾದ ಸಿದ್ಧಾರ್ಥನೂ ಬಾಲ್ಯದಲ್ಲಿ ಸಂಪತ್ತಿನ ಸಾಗರದಲ್ಲಿ ತೇಲಾಡಿದವನು. ಬದುಕಿನ ಗೊಂದಲ, ದುಃಖ, ನೋವುಗಳಿಂದ ಬೇಸತ್ತ ಸಿದ್ಧಾರ್ಥ ಮಡದಿ, ಮಗು, ಸಾಮ್ರಾಜ್ಯವನ್ನು ತೊರೆದು “ಸತ್ಯ”ದ ಹುಡುಕಾಟದಲ್ಲಿ ಹೊರಟ. ಹಲವು ತಪಸ್ವಿಗಳ ಸೇವೆ, ಉಪವಾಸ, ಧ್ಯಾನ ಮಾಡುತ್ತಾ ಹಲವು ವರುಷ ಕಳೆದ. ಎಲ್ಲ ಆಸೆಗಳನ್ನು ಗೆದ್ದು ಮನಸ್ಸಿನ ಮೇಲೆ ಪ್ರಭುತ್ವ ಸಾಧಿಸುವುದು ಅವನ ಉದ್ದೇಶವಾಗಿತ್ತು. ಕ್ರಿಸ್ತಪೂರ್ವ ೫೨೮ರ ಮೇ ತಿಂಗಳಿನಲ್ಲಿ ವೃಕ್ಷದ ನೆರಳಿನಲ್ಲಿ ಧ್ಯಾನ ಮಾಡುತ್ತ ಕುಳಿತಿದ್ದ ಆತನಿಗೆ ಜ್ನಾನೋದಯ. ಅಂದಿನಿಂದ ಆತ “ಬುದ್ಧ”ನಾದ. “ಆಸೆಯೇ ದುಃಖಕ್ಕೆ ಮೂಲ” ಇತ್ಯಾದಿ ಸರಳ ವಿವರಣೆಗಳ ಮೂಲಕ ಜನಸಾಮಾನ್ಯರ ಮನಗೆದ್ದ. ತಾನು ಕಂಡುಕೊಂಡ ತತ್ವಗಳನ್ನು ಜನರಿಗೆ ತಿಳಿಸುತ್ತ ಯಾತ್ರೆ ಮಾಡಿದ. ಬುದ್ಧನ ಬೌದ್ಧ ಧರ್ಮ ಏಷ್ಯಾ ಖಂಡದ ಉದ್ದಗಲದಲ್ಲಿ ವ್ಯಾಪಿಸಿತು. ನಮ್ಮ ಅರಿವಿನ ಕಣ್ಣು ತೆರೆದರೆ ಏನು ಸಾಧಿಸಬಹುದು ಎಂಬುದಕ್ಕೆ ನಿದರ್ಶನ ಇವರಿಬ್ಬರ ಬದುಕು.