ಕಗ್ಗ ದರ್ಶನ – 4 (1)

ಕಗ್ಗ ದರ್ಶನ – 4 (1)

ಗಿಡದಿ ನಗುತಿರುವ ಹೂ ಪ್ರಕೃತಿಸಖನಿಗೆ ಚೆಂದ
ಮಡದಿ ಮುಡಿದಿರುವ ಹೂ ಯುವಕಂಗೆ ಚೆಂದ
ಗುಡಿಯೊಳಗೆ ಕೊಡುವ ಹೂ ದೈವಭಕ್ತಗೆ ಚೆಂದ
ಬಿಡಿಗಾಸು ಹೂವಳಗೆ – ಮಂಕುತಿಮ್ಮ
ಹಸುರುಹಸುರಿನ ಎಲೆದುಂಬಿದ ಗಿಡ. ಅದರಲ್ಲಿ ಬಣ್ಣಬಣ್ಣದ ಹೂ. ಅರಳಿದ ಹೂವಿನಲ್ಲಿ ಮುಗುಳುನಗು –ಪ್ರಕೃತಿಯನ್ನು ಪ್ರೀತಿಸುವವನಿಗೆ ಇದೆಲ್ಲವೂ ಚೆಂದವೊ ಚೆಂದ. ಅವನಿಗೆ ಇದಕ್ಕಿಂತ ಸುಂದರವಾದದ್ದು ಈ ಭೂಮಿಯಲ್ಲಿ ಬೇರೆ ಯಾವುದೂ ಇರಲಿಕ್ಕಿಲ್ಲ.
ಆದರೆ ಯೌವನ ತುಂಬಿ ತುಳುಕುತ್ತಿರುವ ಯುವಕನಿಗೆ ಯಾವುದು ಚಂದ? ಅವನ ಮನವೆಲ್ಲ ಮಡದಿಯತ್ತ ತುಡಿಯುತ್ತಿದೆ. ಮಡದಿಯ ರೂಪಸಿರಿಯಲ್ಲಿ ಮುಳುಗಿರುವ ಯುವಕನಿಗೆ ಅವಳು ತುರುಬಿನಲ್ಲಿ ಮುಡಿದಿರುವ ಹೂವೇ ಎಲ್ಲಕ್ಕಿಂತ ಚಂದ.
ದೈವಭಕ್ತನ ಭಾವನೆ ಬೇರೊಂದು. ಅವನು ದೇವರನ್ನೆ ನಂಬಿದ್ದಾನೆ. ದೇವರ ಆರಾಧನೆಯಲ್ಲಿ ತಲ್ಲೀನನಾಗಿದ್ದಾನೆ. ದೇವರ ಪ್ರಸಾದಕ್ಕಾಗಿ ಕಾದಿದ್ದಾನೆ. ಗುಡಿಯ ಅರ್ಚಕರು ದೇವರ ಪ್ರಸಾದವೆಂದು ಕೊಡುವ ಹೂವೇ ಅವನಿಗೆ ಎಲ್ಲದಕ್ಕಿಂತ ಚೆಂದ. ಅವನ ಮಟ್ಟಿಗೆ ಆ ಹೂವು ವಿಶ್ವದಲ್ಲಿ ಅತ್ಯಂತ ಮನಮೋಹಕ.
ಒಂದು ವಸ್ತುವಿನಲ್ಲಿ ಸೌಂದರ್ಯವನ್ನು ನೀವು ಹೇಗೆ ಕಾಣುತ್ತೀರಿ ಎಂಬುದು ನಿಮ್ಮ ಮನಃಸ್ಥಿತಿಯನ್ನು ಅವಲಂಬಿಸಿದೆ. ಗಿಡದಲ್ಲಿರುವ ಹೂ ದೈವಭಕ್ತನಿಗೆ ಚಂದ ಕಾಣಲಿಕ್ಕಿಲ್ಲ. ಅದೇ ಹೂ ದೇವರ ಪ್ರಸಾದವಾಗಿ ಕೈಸೇರಿದಾಗ ಮಾತ್ರ ಅವನಿಗೆ ಚಂದವಾಗಿ ಕಾಣಿಸುತ್ತದೆ. ಹಾಗೆಯೇ, ಗಿಡದ ಹೂ ಮಡದಿಯ ಮುಡಿ ಸೇರಿದಾಗ ಮಾತ್ರ ಯುವಕನಿಗೆ ಅದು ಸುಂದರವಾಗಿ ಗೋಚರಿಸುತ್ತದೆ. ವಸ್ತು ಒಂದೇ ಆಗಿದ್ದರೂ, ಅದನ್ನು ಕಾಣುವ ದೃಷ್ಠಿ ಬೇರೆಬೇರೆ ಎಂಬುದನ್ನು ಹೀಗೆ ಸರಳವಾಗಿ ಈ ಮುಕ್ತಕದಲ್ಲಿ ವಿವರಿಸುತ್ತಾರೆ, ಮಾನ್ಯ ಡಿ.ವಿ. ಗುಂಡಪ್ಪನವರು.
ಅದೇ ವಸ್ತುವಿಗೆ ನಾಲ್ಕನೆಯ ಆಯಾಮವೂ ಇರಬಹುದು. ಗಿಡದಿಂದ ಕಿತ್ತು ತಂದ ಹೂವನ್ನು ಮಾರುವ ಹೂವಾಡಗಿತ್ತಿಗೆ (ಹೂವಳಗೆ) ಅದರಲ್ಲಿ ಯಾವುದೇ ಚಂದ ಕಾಣಿಸಲಿಕ್ಕಿಲ್ಲ. ಯಾಕೆಂದರೆ, ಅದು ಅವಳಿಗೆ ಜೀವನಾಧಾರ. ಅದನ್ನು ಮಾರಿದರೆ ಅವಳಿಗೆ ಸಿಗೋದು ಬಿಡಿಗಾಸು. ಅದರಿಂದಲೇ ಅವಳ ಜೀವನ ಸಾಗಬೇಕು. ಹಾಗಿರುವಾಗ ಅದರ ಚಂದ ನೋಡುತ್ತ ಕೂರಲು ಅವಳಿಗೆ ಪುರುಸೊತ್ತಿಲ್ಲ. ತನ್ನ ಬಳಿಯಿರುವ ಹೂಗಳನ್ನು ಖರೀದಿಸುವವರು ಬಂದಾರೇ ಎಂದು ಕಾಯುವುದರಲ್ಲೇ ಅವಳ ದಿನ ಮುಗಿಯುತ್ತದೆ.