ಕಗ್ಗ ದರ್ಶನ – 41 (1)
ಎಡರು ತೊಡರೆನಲೇಕೆ? ಬಿಡಿಸು ಮತಿಗಾದನಿತ
ದುಡಿ ಕೈಯಿನಾದನಿತು; ಪಡು ಬಂದ ಪಾಡು
ಬಿಡು ಮಿಕ್ಕುದನು ವಿಧಿಗೆ; ಬಿಡದಿರುಪಶಾಂತಿಯನು
ಬಿಡುಗಡೆಗೆ ದಾರಿಯದು - ಮಂಕುತಿಮ್ಮ
ಬದುಕಿನಲ್ಲಿ ಎಡರುತೊಡರುಗಳು ಬಂದೇ ಬರುತ್ತವೆ. ಅಯ್ಯೋ, ಅಡ್ಡಿಆತಂಕಗಳು ಎದುರಾದವಲ್ಲಾ ಎನ್ನುವುದೇಕೆ? ನಿಮ್ಮ ಜಾಣ್ಮೆಯಿಂದ ಅವನ್ನು ಸಾಧ್ಯವಾದಷ್ಟು ಪರಿಹರಿಸಿಕೊಳ್ಳಿ. ನಿಮ್ಮ ಕೈಲಾದಷ್ಟು ದುಡಿಯಿರಿ. ಬಂದದ್ದೆಲ್ಲಾ ಬರಲಿ ಎಂದು ಜೀವನದಲ್ಲಿ ಬಂದ ಪಾಡನ್ನು ಅನುಭವಿಸಿ. ನಿಮ್ಮ ಕೈಮೀರಿದ್ದನ್ನು ವಿಧಿಗೆ ಬಿಟ್ಟು ಬಿಡಿ. ಆದರೆ ಬದುಕಿನ ನೆಮ್ಮದಿ (ಉಪಶಾಂತಿ) ಕಳೆದುಕೊಳ್ಳಬೇಡಿ. ಇದುವೇ ನಿಮ್ಮ ಬಿಡುಗಡೆಯ ದಾರಿ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಬ್ರೈಲ್ ಲಿಪಿ, ಕಣ್ಣು ಕಾಣಿಸದವರು ಓದಲು ಮತ್ತು ಬರೆಯಲು ಬಳಸುವ ಲಿಪಿ. ಇದರ ಸಂಶೋಧಕ ಲೂಯಿಸ್ ಬ್ರೈಲಿ. ಫ್ರಾನ್ಸಿನ ರಾಜಧಾನಿ ಪ್ಯಾರಿಸ್ ಹತ್ತಿರದ ಊರಿನವನು. ಮೂರು ವರುಷದ ಮಗುವಾಗಿದ್ದಾಗ ಅವಘಡದಿಂದಾಗಿ ಕಣ್ಣಿನ ದೃಷ್ಠಿ ಕಳೆದುಕೊಂಡವನು. ಹತ್ತು ವರುಷ ವಯಸ್ಸಾದಾಗ, ಪ್ಯಾರಿಸಿನ ರಾಯಲ್ ಇನ್ಸ್ಟಿಟ್ಯೂಟ್ ಫಾರ್ ಬ್ಲೈಂಡ್ ಯೂತ್ ಎಂಬ ಸಂಸ್ಥೆಯಲ್ಲಿ ಕಲಿಯಲು ಅವನಿಗೆ ವಿದ್ಯಾರ್ಥಿವೇತನ ಸಿಕ್ಕಿತು. ಅಲ್ಲಿ, ತಾಮ್ರದ ತಂತಿಗಳನ್ನು ಒತ್ತಿ ಕಾಗದದಲ್ಲಿ ಮೂಡಿಸಿದ ಅಕ್ಷರಗಳಿಂದ ಮಕ್ಕಳಿಗೆ ಕಲಿಸುತ್ತಿದ್ದರು. ಭಾರವಾದ ಆ ಪುಸ್ತಕಗಳನ್ನು ಓದುವುದು ಬಹಳ ಕಷ್ಟ.
ಚಾರ್ಲ್ಸ್ ಬಾರ್ಬಿಯರ್ ಎಂಬ ಮಾಜಿ ಸೈನಿಕ ಆ ಶಾಲೆಗೆ ೧೮೨೧ರಲ್ಲಿ ಬರುತ್ತಾರೆ. ಹನ್ನೆರಡು ಬಿಂದುಗಳನ್ನು ಆಧರಿಸಿದ “ರಾತ್ರಿ ಬರಹ” ಎಂಬ ತಮ್ಮ ಗುಪ್ತ ಸಂದೇಶ ರವಾನೆಯ ಅನುಶೋಧನೆಯನ್ನು ಮಕ್ಕಳಿಗೆ ಕಲಿಸುತ್ತಾರೆ. (ಇದನ್ನು ಬಳಸಿ ಸೈನಿಕರು ಮಾತುಕತೆಯಿಲ್ಲದೆ ಗುಪ್ತ ಸಂದೇಶಗಳನ್ನು ರವಾನಿಸುತ್ತಿದ್ದರು.) ಅದು ಜಟಿಲವಾಗಿದ್ದರೂ ಹನ್ನೆರಡು ವರುಷ ವಯಸ್ಸಿನ ಲೂಯಿಸ್ ಅದನ್ನು ಬೇಗನೇ ಕಲಿಯುತ್ತಾನೆ. ತನ್ನ ಹದಿನೈದನೇ ವಯಸ್ಸಿನಲ್ಲಿ ಅದನ್ನು ೧೨ ಬಿಂದುಗಳ ಬದಲಾಗಿ ಆರು-ಬಿಂದುಗಳನ್ನು ಆಧರಿಸಿದ ಸಂದೇಶ ರವಾನೆ ವ್ಯವಸ್ಥೆಯಾಗಿ ಸರಳಗೊಳಿಸುತ್ತಾರೆ. ಅನಂತರ, ೧೮೨೯ರಲ್ಲಿ ಮೊತ್ತಮೊದಲ ಬ್ರೈಲ್ ಲಿಪಿಯ ಪುಸ್ತಕ ಪ್ರಕಟಿಸುತ್ತಾರೆ. ಪದವಿ ಶಿಕ್ಷಣದ ನಂತರ, ಲೂಯಿಸ್ ೧೮೨೮ರಲ್ಲಿ ಅದೇ ಸಂಸ್ಥೆಯಲ್ಲಿ ಅಧ್ಯಾಪಕರಾಗುತ್ತಾರೆ. ಕ್ರಮೇಣ ಬ್ರೈಲ್ ಲಿಪಿ ಜಗತ್ತಿನ ಉದ್ದಗಲಕ್ಕೆ ವ್ಯಾಪಿಸಿತು. ಕಣ್ಣಿನ ದೃಷ್ಟಿ ಕಳೆದುಕೊಂಡ ಲೂಯಿಸ್ ತನ್ನ ಬದುಕಿನಲ್ಲಿ ಕತ್ತಲು ತುಂಬಿತೆಂದು ದುಃಖಿಸುತ್ತ ಕೂರಲಿಲ್ಲ. ಅದನ್ನು ಎದುರಿಸಿ, ಕಣ್ಣು ಕಾಣದಿರುವ ಎಲ್ಲರಿಗೂ ಬೆಳಕಾಗುವಂತೆ ಬಾಳಿದರು. ಅವರನ್ನೆಲ್ಲ ಜ್ನಾನದಲೋಕಕ್ಕೆ ಮುನ್ನಡೆಸಿದರು.