ಕಗ್ಗ ದರ್ಶನ – 42 (1)
ನಭದ ಬಯಲೊಳನಂತ, ಮನದ ಗುಹೆಯೊಳನಂತ
ವುಭಯದಾ ನಡುವೆ ಸಾದ್ಯಂತ ಜೀವಕಥೆ
ವಿಭುವೊಬ್ಬನೀ ಗಾಳಿಬುಡ್ಡೆಗಳನೂದುವನು
ಹಬೆಗುಳ್ಳೆಯೋ ಸೃಷ್ಠಿ - ಮಂಕುತಿಮ್ಮ
ಆಕಾಶದ ಬಯಲಿನಲ್ಲಿ ಅನಂತ, ಮನಸ್ಸೆಂಬ ಗುಹೆಯ ಆಳದಲ್ಲಿಯೂ ಅನಂತ. ಕೊನೆಯಿಲ್ಲದ ಈ ಎರಡರ ನಡುವೆ ಆದಿ-ಅಂತ್ಯವಿರುವ ಜೀವಕಥೆ. ಜಗನ್ನಿಯಾಮಕನು (ವಿಭು) ಗಾಳಿಗುಳ್ಳೆಗಳನ್ನು ಸದಾ ಊದುವನು. ಆಗ ಮೂಡುವ ಸೃಷ್ಠಿ ಹಬೆಗುಳ್ಳೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಆಕಾಶದ ಬಯಲಿನಲ್ಲಿ ಎಷ್ಟು ಮುಂದಕ್ಕೆ ಬೇಕಾದರೂ ಹೋಗಬಹುದು. ಭೂಮಿಯಿಂದ ಕಳಿಸಿದ ಗಗನನೌಕೆಗಳು ಮಂಗಳ, ಗುರು, ಶನಿ ಗ್ರಹಗಳನ್ನು ದಾಟಿ ಹೋಗಿವೆ. ಆ ದೂರವನ್ನು ಗ್ರಹಿಸುವುದೇ ತ್ರಾಸದಾಯಕ. ಹಾಗಿರುವಾಗ, ಬೆಳೆಯುತ್ತಿರುವ ವಿಶ್ವದ ಅಗಾಧತೆಯನ್ನು ಗ್ರಹಿಸಲು ಸಾಧ್ಯವೇ? ವಿಶ್ವಕ್ಕೆ ಆದಿ-ಅಂತ್ಯವಿಲ್ಲ; ಅದು ಅನಂತ. ಆದರೆ ಈ ವಿಶ್ವದಲ್ಲಿರುವ ಎಲ್ಲದಕ್ಕೂ ಅಂತ್ಯವಿದೆ. ನಕ್ಷತ್ರಗಳು, ಧೂಮಕೇತುಗಳು, ಉಲ್ಕೆಗಳು ಪತನವಾಗುವುದನ್ನು ಕಂಡಿಲ್ಲವೇ?
ಅನಂತ ವಿಶ್ವದಲ್ಲಿರುವ ಎಲ್ಲವನ್ನೂ ಸೃಷ್ಠಿ ಮಾಡುತ್ತಿದ್ದಾನೆ ಭಗವಂತ – ಬಾಲಕನೊಬ್ಬ ತೂತುಕಡ್ಡಿಯಲ್ಲಿ ಸಾಬೂನಿನ ನೀರನ್ನು ಊದುತ್ತಾ ಗಾಳಿಗುಳ್ಳೆಗಳನ್ನು ಹಾರಿಸಿದಂತೆ. ತುಸು ದೂರ ಹಾಗೂ ತುಸು ಎತ್ತರಕ್ಕೆ ಹಾರಿಹೋಗುವ ಆ ಗಾಳಿಗುಳ್ಳೆಗಳು ಫಟಾರನೆ ಒಡೆಯುತ್ತವೆ. ಅದೇ ರೀತಿಯಲ್ಲಿ ಭಗವಂತನ ಎಲ್ಲ ಸೃಷ್ಠಿಯೂ ಕುದಿಯುವ ನೀರಿನಲ್ಲಿ ಮೂಡಿ ಬರುವ ಹಬೆಗುಳ್ಳೆಗಳಂತೆ ಒಡೆದು ಹೋಗುತ್ತವೆ.
ಸಣ್ಣಪುಟ್ಟ ಜೀವಿಗಳು ಹಾಗೂ ಹುಲು ಮಾನವರ ಕತೆ ಹಾಗಿರಲಿ. ಸಾಮ್ರಾಜ್ಯಗಳೇ ಪತನವಾಗಿವೆ: ರೋಮ್ ಸಾಮ್ರಾಜ್ಯ, ಮೊಘಲ್ ಸಾಮ್ರಾಜ್ಯ, ವಿಜಯನಗರ ಸಾಮ್ರಾಜ್ಯ. ಇಪ್ಪತ್ತನೆಯ ಶತಮಾನದ ಎರಡು ಮಹಾಯುದ್ಧಗಳಲ್ಲಿ ನಾಶವಾದ ಹಳ್ಳಿ, ಪಟ್ಟಣ, ನಗರಗಳ ಲೆಕ್ಕ ಇಟ್ಟವರಾರು? ಬಿರುಗಾಳಿ, ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳೂ ಸಾವಿರಾರು ಜನವಸತಿಯ ಕೇಂದ್ರಗಳನ್ನು ಅಳಿಸಿ ಹಾಕಿವೆ. ಡೈನೋಸಾರುಗಳಿಂದ ಶುರು ಮಾಡಿ ಮಡಗಾಸ್ಕರಿನ ಡೋಡೋ ಹಕ್ಕಿಯ ವರೆಗೆ ಹಲವಾರು ಜೀವಿಗಳು ಅಳಿದಿವೆ. ಭಗವಂತನ ಸೃಷ್ಠಿಗಳೆಲ್ಲವೂ ಹಬೆಗುಳ್ಳೆಗಳು. ಈ ಕ್ಷಣ ಇದ್ದದ್ದು ಮುಂದಿನ ಕ್ಷಣ ಇಲ್ಲ ಎಂಬುದೇ ಮಹಾಸತ್ಯ. ಇದನ್ನು ಒಪ್ಪಿಕೊಂಡವರ ಜೀವಕಥೆ ನೆಮ್ಮದಿಯ ಕಥೆ. ಇದನ್ನು ಒಪ್ಪಿಕೊಳ್ಳದವರ ಜೀವಕಥೆ ಬೆಂಕಿಯ ಕಥೆ, ಅಲ್ಲವೇ?