ಕಗ್ಗ ದರ್ಶನ – 43 (1)

ಕಗ್ಗ ದರ್ಶನ – 43 (1)

ಎಡವದೆಯೆ, ಮೈಗಾಯವಡೆಯದೆಯೆ, ಮಗುವಾರು
ನಡೆಯ ಕಲಿತವನು? ಮತಿನೀತಿಗತಿಯಂತು
ತಡವರಿಸಿ ಮುಗ್ಗರಿಸಿ ಬಿದ್ದು ಮತ್ತೆದ್ದು ಮೈ-
ದಡವಿಕೊಳುವವರೆಲ್ಲ - ಮಂಕುತಿಮ್ಮ
ಮಗು ನಡೆಯಲು ಕಲಿಯುವುದನ್ನು ನಾವೆಲ್ಲರೂ ಕಂಡಿದ್ದೇವೆ. ಮಗು ಆಗಾಗ ಎಡವಿ ನೆಲಕ್ಕೆ ಬೀಳುತ್ತದೆ. ಕೆಲವೊಮ್ಮೆ ಗಾಯ ಮಾಡಿಕೊಳ್ಳುತ್ತದೆ. ಆದರೂ ಮತ್ತೆಮತ್ತೆ ಎದ್ದು, ತನ್ನ ಪ್ರಯತ್ನ ಮುಂದುವರಿಸುತ್ತದೆ – ನಡೆಯಲು ಕಲಿಯಲೇ ಬೇಕೆಂಬ ಛಲದಿಂದ. ಇದೇ ರೀತಿಯಲ್ಲಿ, ನಾವೆಲ್ಲರೂ ನಮ್ಮ ಬುದ್ಧಿ ಮತ್ತು ನೀತಿಮಾರ್ಗ ಪಾಲನೆಯಲ್ಲಿ ತಡವರಿಸಿ, ಮುಗ್ಗರಿಸಿ ಬಿದ್ದು, ಮತ್ತೆದ್ದು ಮೈದಡವಿಕೊಳ್ಳುತ್ತೇವೆ ಎಂದು ಮಾರ್ಮಿಕವಾಗಿ ವಿವರಿಸುತ್ತಾರೆ ಮಾನ್ಯ ಡಿ.ವಿ.ಜಿ.ಯವರು.
ಮಗುವಿಗೆ ನಡೆಯಲು ಕಲಿಯಲೇ ಬೇಕೆಂಬ ಛಲವಿರುವಂತೆ, ಪ್ರತಿಯೊಬ್ಬರಿಗೂ ತಮ್ಮ ಬುದ್ಧಿ ಬಳಕೆಯಲ್ಲಿ ಹಾಗೂ ನೀತಿಪಾಲನೆಯಲ್ಲಿ ನೇರ ಹಾದಿಯಲ್ಲೇ ಮುನ್ನಡೆಯುವ ಛಲವಿರಬೇಕು. ಅಡ್ಡಹಾದಿಯ ನಡಿಗೆ ಎಂದಿಗೂ ಸಲ್ಲದು. ಇದು ಸುಲಭ. ಯಾಕೆಂದರೆ, ಅಡ್ಡಹಾದಿಯಲ್ಲಿ ಸಾಗಿದಾಗೆಲ್ಲ ನಮ್ಮ ಅಂತರಾತ್ಮ ಎಚ್ಚರಿಸುತ್ತಲೇ ಇರುತ್ತದೆ: “ಇದು ತಪ್ಪು, ಇದು ತಪ್ಪು” ಎಂಬುದಾಗಿ. ಅದಕ್ಕೆ ಕಿವಿಗೊಟ್ಟು, ತಪ್ಪು ದಾರಿ ಬಿಟ್ಟು, ಸರಿಯಾದ ದಾರಿಗೆ ಮರಳುವ ಮನಸ್ಸು ಬೆಳೆಸಿಕೊಳ್ಳಬೇಕು. ಅದರ ಬದಲಾಗಿ, ತಪ್ಪು ದಾರಿಯಲ್ಲೇ ಮುನ್ನುಗ್ಗುತ್ತಿದ್ದರೆ, ಅಂತರಾತ್ಮದ ಎಚ್ಚರಿಕೆ ಕ್ಷೀಣವಾಗುತ್ತದೆ.
ಮಹಾಭಾರತ ಯುದ್ಧದ ಮುನ್ನ, ಭಗವಾನ್ ಶ್ರೀಕೃಷ್ಣ ಸಂಧಾನಕ್ಕಾಗಿ ದುರ್ಯೋಧನನ ಬಳಿಗೆ ಹೋಗಿ ಆಗ್ರಹಿಸುತ್ತಾನೆ, “ಯುದ್ಧ ಯಾಕೆ ಬೇಕು? ಪಾಂಡವರು ಕೇಳುತ್ತಿರುವುದು ತುಂಡು ಭೂಮಿಯನ್ನು. ಅದನ್ನು ಕೊಟ್ಟು ಬಿಡು”. “ಇಲ್ಲ, ಸಾಧ್ಯವೇ ಇಲ್ಲ. ಪಾಂಡವರಿಗೆ ಒಂದಿಂಚು ಭೂಮಿಯನ್ನೂ ಕೊಡಲಾರೆ” ಎನ್ನುತ್ತಾನೆ ದುರ್ಯೋಧನ. ಆಗ ಭಗವಾನ್ ಶ್ರೀಕೃಷ್ಣ ಹೇಳಿದ್ದು, “ದುರ್ಯೋಧನಾ, ನೀನು ತಪ್ಪು ಮಾಡುತ್ತಿದ್ದೀಯಾ”. ಅದಕ್ಕೆ ದುರ್ಯೋಧನನ ಪ್ರತಿಕ್ರಿಯೆ, “ಗೊತ್ತಿದೆ, ಅದು ನನಗೆ ಚೆನ್ನಾಗಿ ಗೊತ್ತಿದೆ. ಆದರೆ ಸರಿಯಾದ್ದನ್ನು ಮಾಡಲು ನನಗೆ ಮನಸ್ಸಾಗುತ್ತಿಲ್ಲ.”
ಅದಕ್ಕಾಗಿಯೇ, ಸರಿಯಾದ ದಾರಿಗೆ ಮರಳುವ ಮನಸ್ಸು ಬೆಳೆಸಿಕೊಳ್ಳಬೇಕು ಎನ್ನುವುದು. ಎಲ್ಲದಕ್ಕಿಂತ ಮುಖ್ಯವಾಗಿ, ನಮ್ಮ ಮನಸ್ಸು “ದೊಡ್ಡದಾಗಬೇಕು”. ಆಗ ಮಾತ್ರ “ಕೊಡುವ” ಬುದ್ಧಿ ಬರುತ್ತದೆ. ಹಲವರ ಮನಸ್ಸು ದಿನದಿಂದ ದಿನಕ್ಕೆ ಸಣ್ಣದಾಗುತ್ತದೆ, ಅಲ್ಲವೇ? ಅದರಿಂದಾಗಿ, ಅವರಿಗೆ “ಕೊಡುವ” ಬುದ್ಧಿ ಬರುವುದೇ ಇಲ್ಲ; ಕೊನೆಯ ವರೆಗೂ ಅವರಿಗೆ “ಇನ್ನಷ್ಟು ಮತ್ತಷ್ಟು ತೆಗೆದುಕೊಳ್ಳುವ” ಬುದ್ಧಿ. ಇಂಥವರು ಉದ್ಧಾರ ಆಗಲಿಕ್ಕುಂಟೇ?