ಕಗ್ಗ ದರ್ಶನ – 44 (1)
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ
ಬಡವರಿಂಗುಪಕೃತಿಯೊ, ಆವುದೋ ಮನದ
ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ
ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ
ಗುಡಿಯಲ್ಲಿ ಮಾಡುವ ಪೂಜೆ, ಹರಿಕಥೆ ಅಥವಾ ಭಜನೆ, ಮನಕ್ಕೆ ಆಹ್ಲಾದ ನೀಡುವ ಸೊಗಸುನೋಟ, ಮನಮಿಡಿಯುವ ಸಂಗೀತ, ಬಡಜನರಿಗೆ ಸಹಾಯ ಮಾಡುವುದು – ಇಂತಹ ಯಾವುದೋ ಒಂದು ಚಟುವಟಿಕೆ ನಮ್ಮ ಮನಸ್ಸಿನ ಚಡಪಡಿಕೆಯನ್ನು ನಿಲ್ಲಿಸಿ, ನೆಮ್ಮದಿ ಒದಗಿಸಿದರೆ, ಅದರಿಂದ ನಮ್ಮ ಜೀವಕ್ಕೆ ಬಿಡುಗಡೆ ಎಂದು ಸರಳ ಸಂದೇಶವನ್ನು ಈ ಮುಕ್ತಕದಲ್ಲಿ ನೀಡಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಭಾರತದಲ್ಲಿರುವ ಲಕ್ಷಗಟ್ಟಲೆ ಪ್ರಾರ್ಥನಾಸ್ಥಳಗಳಿಗೆ ಆಗಾಗ ಭೇಟಿ ನೀಡುವವರು ಕೋಟಿಗಟ್ಟಲೆ ಜನರು. ದಿನಕ್ಕೊಮ್ಮೆ, ಎರಡು ದಿನಕ್ಕೊಮ್ಮೆ, ವಾರಕ್ಕೊಮ್ಮೆ ಹಾಗೂ ತಿಂಗಳಿಗೊಮ್ಮೆ ಗುಡಿಗಳಿಗೆ ಹೋಗಿ ದೇವರ ದರ್ಶನ ಮಾಡುವವರು ಹಲವರು. ಅಲ್ಲಿ ಹರಿಕಥೆ ಅಥವಾ ಭಜನೆ ನಡೆಯುತ್ತಿದ್ದರೆ ಕೂತು ಕೇಳುವವರು ಅನೇಕರು.
ಹಾಗೆಯೇ ಆಗಾಗ ಪ್ರವಾಸ ಹೋಗುವವರು ಸಾವಿರಾರು ಜನರು. ಹಾದಿಯಲ್ಲಿ ಕಾಣುವ ಸುಂದರದೃಶ್ಯಗಳನ್ನು ಕಣ್ತುಂಬಿ ಕೊಳ್ಳುವ ಹಂಬಲ ಅವರದು. ನದಿಗಳು, ಜಲಪಾತಗಳು, ಬೆಟ್ಟಗುಡ್ಡಗಳು, ಉದ್ಯಾನಗಳು, ಸೇತುವೆಗಳು, ಸಮುದ್ರತೀರಗಳು, ಹೊಲಗದ್ದೆಗಳು, ತೋಟಗಳು – ಅಲ್ಲಿನ ನೋಟಗಳು ಕಣ್ಣಿಗೂ ಹಿತ, ಮನಕ್ಕೂ ಹಿತ. ಇನ್ನು ಕೆಲವರಿಗೆ ಸಂಗೀತದ ಖಯಾಲಿ. ಶಾಸ್ತ್ರೀಯ, ಕರ್ನಾಟಕ, ಹಿಂದುಸ್ಥಾನಿ, ಭಾವಗೀತೆಗಳು, ಗೇಯಪದಗಳು, ಜಾನಪದ, ಪಾಶ್ಚಾತ್ಯ ಸಂಗೀತ – ಇಂತಹ ವಿಭಿನ್ನ ಗಾಯನಕ್ಕೆ ಮನಸೋತವರು ಹಲವರು. ಎಂ.ಎಸ್.ಸುಬ್ಬುಲಕ್ಷ್ಮಿ, ಭೀಮಸೇನ ಜೋಷಿ, ಮುತ್ತುಸ್ವಾಮಿ ದೀಕ್ಷಿತರ್, ಶೆಮ್ಮಗುಡಿ ಶ್ರೀನಿವಾಸ ಅಯ್ಯರ್, ಎಂ.ಬಾಲಮುರಲಿ ಕೃಷ್ಣ – ಇಂತಹ ಸಂಗೀತ ದಿಗ್ಗಜರ ಗಾಯನವನ್ನು ಗಂಟೆಗಟ್ಟಲೆ ಕೇಳುತ್ತಾ ಆನಂದಿಸುವವರು ಅನೇಕರು.
ಹಾಗೆಯೇ ಬಡವರಿಗೆ ತಮ್ಮಿಂದಾದ ಸಹಾಯ ಮಾಡುವವರು ಲೆಕ್ಕವಿಲ್ಲದಷ್ಟು ಜನರು – ಬಡಜನರಿಗೆ ಉಡುಪು, ವೈದ್ಯಕೀಯ ವೆಚ್ಚ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಮೂಲಕ. ಕಾಸರಗೋಡಿನ ಹತ್ತಿರ ಸಾಯಿರಾಂ ಭಟ್ ಎಂಬವರು ಬಡಕುಟುಂಬಗಳಿಗೆ ನೂರಾರು ಮನೆ ಕಟ್ಟಿ ಕೊಟ್ಟಿದ್ದಾರೆ. ಇದನ್ನೆಲ್ಲಾ ತಮ್ಮ ನೆಮ್ಮದಿಗಾಗಿ ಮಾಡುತ್ತಾರೆ, ಅಲ್ಲವೇ? ನೀವೂ ಇಂತಹ ಒಳ್ಳೆಯ ಕೆಲಸಗಳಲ್ಲಿ ತೊಡಗಿಸಿಕೊಂಡರೆ, ಜೀವಕ್ಕೆ ಬಿಡುಗಡೆಯ ಭಾವ.