ಕಗ್ಗ ದರ್ಶನ – 44 (2)
ಅಳುವರೊಡನಳುತಳುತೆ ನಗುವರೆಡೆ ನಗುನಗುತೆ
ಬಲುಹದೋರುವರೊಡನೆ ಬಲುಹನುಬ್ಬಿಸುತೆ
ಹುಲುಸು ಬೆಳೆ ಬೇಕೆಂಬನಿಗೆ ಹುಲುಸುದೋರುತ್ತೆ
ಸಲಿಸವರಿಗವರಿಚ್ಛೆ – ಮರುಳ ಮುನಿಯ
ಅಳುವವರ ಅಳುವಿನಲ್ಲಿ ಭಾಗಿಯಾಗುತ್ತಾ, ಹರುಷದಿಂದ ಇರುವವರೊಂದಿಗೆ ನಗುನಗುತ್ತಾ, ತಮ್ಮ ಸಾಮರ್ಥ್ಯ (ಬಲುಹು) ಪ್ರದರ್ಶಿಸುವವರೊಂದಿಗೆ ಅವರನ್ನು ಪ್ರೋತ್ಸಾಹಿಸುತ್ತಾ, ಹುಲುಸಾದ ಬೆಳೆ ಬೇಕೆಂಬವನಿಗೆ ಸಮೃದ್ಧ ಫಸಲು ಪಡೆಯುವ ದಾರಿ ತೋರಿಸುತ್ತಾ, ಹೀಗೆ ಅವರವರಿಗೆ ಅವರವರ ಇಚ್ಛೆಗಳು ಕೈಗೂಡಲು ಕೈಜೋಡಿಸು ಎಂಬುದು ಈ ಮುಕ್ತಕದಲ್ಲಿ ಮಾನ್ಯ ಡಿವಿಜಿಯವರ ಸಂದೇಶ.
ನಮ್ಮ ಹಿರಿಯರು ಹೇಳುವ ಒಂದು ಸಂದೇಶವೂ ಇದೇ ಆಗಿದೆ: ಇತರರಿಗೆ ಸಹಾಯ ಮಾಡು; ಸಹಾಯ ಮಾಡಲಾಗದಿದ್ದರೆ ತೊಂದರೆ ಮಾಡಬೇಡ, ಸುಮ್ಮನಿರು. ದುಃಖದಲ್ಲಿ ಇರುವವರ ಬಳಿಗೆ ಹೋದಾಗ, ಅವರು ದುಃಖಿಸಲು ನಮ್ಮ ಹೆಗಲು ಕೊಡಬೇಕು ಎನ್ನುತ್ತಾರೆ ಹಿರಿಯರು. ಕೆಲವರು ಸಾವಿನ ಮನೆಗೆ ಹೋಗಿ, “ಎಲ್ಲರೂ ಒಂದು ದಿನ ಸಾಯಲೇ ಬೇಕು” ಎಂದೆಲ್ಲ ವಟವಟ ಮಾತಾಡಲು ಶುರು ಮಾಡುತ್ತಾರೆ. ಅದು ಆ ಸಂದರ್ಭಕ್ಕೆ ಉಚಿತವಲ್ಲದ ಮಾತು. ಹಾಗೆಲ್ಲ ಮಾತಾಡಿ, ಆತ್ಮೀಯರ ಸಾವಿನಿಂದ ನೊಂದವರ ದುಃಖ ಜಾಸ್ತಿ ಮಾಡುವ ಬದಲು ಸುಮ್ಮನಿರಬೇಕು.
ಸಂತೋಷದಿಂದ ನಲಿದಾಡುವವರ ನಲಿವಿನಲ್ಲಿ ನಾವು ಪಾಲ್ಗೊಳ್ಳಬೇಕು. ಆದರೆ, ಎಲ್ಲರೂ ಅಂತಹ ದೊಡ್ಡ ಮನಸ್ಸಿನವರಲ್ಲ. ಇನ್ನೊಬ್ಬರು ಹರುಷದಿಂದ ಇರುವಾಗ ಕೆಲವರಿಗೆ ಹೊಟ್ಟೆಯುರಿ ಶುರು. ಇಂಥವರು ಮತ್ಸರದಿಂದ ಕುದಿಯುತ್ತಾ ಅವರಿಗೆ ಅನ್ಯಾಯ ಮಾಡಲಿಕ್ಕೂ ಹೇಸುವುದಿಲ್ಲ., ಸಾಧಕರ ಸಾಧನೆಯನ್ನು ಹುರಿದುಂಬಿಸುವ ವಿಷಯದಲ್ಲಿಯೂ ಕೆಲವರು ಮನದುಂಬಿ ಪ್ರೋತ್ಸಾಹಿಸುತ್ತಾರೆ. ಇನ್ನು ಕೆಲವರಿರುತ್ತಾರೆ, “ನಿನ್ನ ಸಾಧನೆ ವಿಶೇಷ, ಆದರೆ…”ಎಂದು ಕೊಂಕು ಮಾತಾಡುತ್ತಾರೆ. ಇಂತಹ ಮಾತಿಗೆ ಕಾರಣ ಮತ್ಸರ. ಇದು ಒಳ್ಳೆಯ ವರ್ತನೆಯಲ್ಲ.
ಹಾಗೆಯೇ, ಯಾವುದೋ ಕೆಲಸದಲ್ಲಿ ತೊಡಗಿ ಸಮೃದ್ಧ ಪ್ರತಿಫಲದ ನಿರೀಕ್ಷೆಯಲ್ಲಿ ಇರುವವರಿಗೆ ಆ ಪ್ರತಿಫಲ ಪಡೆಯಲು ನೆರವಾಗಬೇಕು; ನಮ್ಮ ಅನುಭವದ ಪ್ರಯೋಜನ ನೀಡಬೇಕು. ಅವರು ದಕ್ಷತೆಯಿಂದ ಕೆಲಸ ಪೂರೈಸಿ, ಕೈತುಂಬ ಪ್ರತಿಫಲ ಪಡೆಯಲು ಒತ್ತಾಸೆಯಾಗಬೇಕು. ಅಂತೂ, ಅವರವರ ಭಾವಕ್ಕೆ ತಕ್ಕಂತೆ ಬದುಕಲು ನಾವು ಕಲಿಯಬೇಕು. ಹೀಗೆ ಒಬ್ಬರಿಗೊಬ್ಬರು ಸ್ಪಂದಿಸಿದಾಗ ಇಬ್ಬರ ಬದುಕೂ ಬಂಗಾರವಾಗುತ್ತದೆ. ಇದುವೇ ನಾವು ಮನುಷ್ಯರಾಗಿ ಹುಟ್ಟಿದ್ದನ್ನು ಸಾರ್ಥಕ ಪಡಿಸುವ ಬಗೆ.