ಕಗ್ಗ ದರ್ಶನ – 45 (1)

ಕಗ್ಗ ದರ್ಶನ – 45 (1)

ಸತ್ಯವೆಂಬುದದೆಲ್ಲಿ? ನಿನ್ನಂತರಂಗದೊಳೊ
ಸುತ್ತ ನೀನನುಭವಿಪ ಬಾಹ್ಯ ಚಿತ್ರದೊಳೋ
ಯುಕ್ತಿಯಿಂದೊಂದನೊಂದಕೆ ತೊಡಿಸಿ ಸರಿನೋಡೆ
ತತ್ತ್ವದರ್ಶನವಹುದು - ಮಂಕುತಿಮ್ಮ
ಸತ್ಯವಿಂಬುದು ಎಲ್ಲಿದೆ? ನಿನ್ನ ಅಂತರಂಗದಲ್ಲಿದೆಯೋ? ಅಥವಾ ನಿನ್ನ ಸುತ್ತಮುತ್ತ ನೀನು ಅನುಭವಿಸುತ್ತಿರುವ ಬಾಹ್ಯ ಜಗತ್ತಿನಲ್ಲಿದೆಯೋ? ಎಂಬ ಮೂಲಭೂತ ಪ್ರಶ್ನೆಯನ್ನು ಈ ಮುಕ್ತಕದಲ್ಲಿ ಕೇಳುವ ಮಾನ್ಯ ಡಿ.ವಿ. ಗುಂಡಪ್ಪನವರು ಆ ಮೂಲಕ ನಮ್ಮನ್ನು ಗಹನವಾದ ಚಿಂತನೆಗೆ ಹಚ್ಚುತ್ತಾರೆ. ಚಿಂತನೆ ಮಾಡುತ್ತಾ ಯುಕ್ತಿಯಿಂದ ಇವೆರಡನ್ನು ಒಂದನೊಂದಕೆ ತೊಡಿಸಿ ಸರಿನೋಡಿದರೆ ಮಹಾನ್ ತತ್ವದ ದರ್ಶನವಾಗುತ್ತದೆ ಎಂಬ ಸೂಚನೆಯನ್ನೂ ನೀಡುತ್ತಾರೆ.
ನಿಕೋಲಸ್ ಕೊಪರ್ನಿಕಸ್ (೧೪೭೩ – ೧೫೪೩) ಭೂಮಿ ಸೂರ್ಯನ ಸುತ್ತ ತಿರುಗುತ್ತಿದೆ ಎಂಬ ಸತ್ಯವನ್ನು ತಿಳಿದುಕೊಂಡ. ಗಣಿತ ಲೆಕ್ಕಾಚಾರದ ಮೂಲಕ ಇದನ್ನು ಸ್ಪಷ್ಟವಾಗಿ ವಿವರಿಸಿದ. ಆದರೆ “ಸೂರ್ಯ ಭೂಮಿಯ ಸುತ್ತ ತಿರುಗುತ್ತಾನೆ” ಎಂದು ನಂಬಿದ್ದ ಜನರು ಈ ಸತ್ಯವನ್ನು ಒಪ್ಪಲು ತಯಾರಿರಲಿಲ್ಲ. ಮುಂದೆ ೧೬೧೬ನೇ ಇಸವಿಯಲ್ಲಿ ಗೆಲಿಲಿಯೋ ಗೆಲಿಲಿ (೧೫೬೪ -೧೬೪೨) ಈ ಸತ್ಯವನ್ನು ಸಾರ್ವಜನಿಕವಾಗಿ ಸಮರ್ಥಿಸಿದ. ಸೂರ್ಯನೇ ಸೌರವ್ಯೂಹದ ಕೇಂದ್ರ, ಭೂಮಿಯಲ್ಲ ಎಂದು ಪ್ರತಿಪಾದಿಸಿದ. ಇದನ್ನು ಸುತಾರಾಂ ಒಪ್ಪದ ಕ್ಯಾಥೋಲಿಕ್ ಚರ್ಚ್ ಗೆಲಿಲಿಯೋನಿಗೆ ತನ್ನ ಚಿಂತನೆ ಪ್ರಕಟಿಸದಂತೆ ನಿಷೇಧ ಹೇರಿತು. ಆದರೂ ಆತ ತನ್ನ ಚಿಂತನೆಗಳನ್ನು ೧೬೩೨ರಲ್ಲಿ ಪ್ರಕಟಿಸಿದ.
ಅಷ್ಟೇಕೆ, “ಭೂಮಿ ದುಂಡಗಿಲ್ಲ, ಚಪ್ಪಟೆ” ಎಂಬುದೇ ಸತ್ಯವೆಂದು ಹಲವು ಶತಮಾನಗಳ ಕಾಲ ವಾದಿಸುತ್ತಿದ್ದರಲ್ಲ! ಕೊನೆಗೆ ಫರ್ಡಿನಾಂಡ್ ಮೆಗೆಲ್ಲನ್ ೨೦ ಸಪ್ಟಂಬರ್ ೧೫೧೯ರಂದು ಐದು ನೌಕೆಗಳಲ್ಲಿ ಸ್ಪೇನ್ ದೇಶದಿಂದ ಸಮುದ್ರಯಾನ ಹೊರಟ. ದಕ್ಷಿಣ ಅವೇರಿಕದ ತುದಿಯನ್ನು ಸುತ್ತಿ, ೧೫೨೧ರಲ್ಲಿ ಫಿಲಿಪೈನ್ಸ್ ದ್ವೀಪಗಳನ್ನು ತಲಪಿ, ಆತ ಅಲ್ಲೇ ಕೊನೆಯುಸಿರೆಳೆದ. ಆದರೆ ಅವನ ಸಹನಾವಿಕರು ಸಾಗರಯಾನ ಮುಂದುವರಿಸಿ, ಸ್ಪೇನಿಗೆ ಹಿಂತಿರುಗಿದರು. ಭೂಮಿಯನ್ನು ಸುತ್ತಿದ ಈ ಮೊತ್ತಮೊದಲ ಸಾಗರಯಾನದಿಂದಾಗಿ ಭೂಮಿ ದುಂಡಗಿದೆ ಎಂಬುದು ಸಾಬೀತಾಯಿತು.
ಆತ್ಮ-ಪರಮಾತ್ಮ ಇವೆರಡೂ ಒಂದರೊಳಗೊಂದಿಲ್ಲವೇ? ನಾನು ವಿಶ್ವದೊಳಗೋ ಅಥವಾ ವಿಶ್ವ ನನ್ನೊಳಗೋ? ಈ ರೀತಿಯಲ್ಲಿ ಚಿಂತನೆ ಮಾಡುತ್ತಾ ಹೋದರೆ ನಮಗೆ ಸತ್ಯದರ್ಶನವಾಗುತ್ತಲೇ ಇರುತ್ತದೆ – ದಿನದಿನವೂ, ಕ್ಷಣಕ್ಷಣವೂ. ಸತ್ಯಗಳನ್ನು ಒಪ್ಪಿಕೊಳ್ಳಲಿಕ್ಕಾಗಿ ಮನಸ್ಸನ್ನು ಮುಕ್ತವಾಗಿರಲಿ.