ಕಗ್ಗ ದರ್ಶನ – 45 (2)

ಕಗ್ಗ ದರ್ಶನ – 45 (2)

ಪರಿಪರಿಯ ಮೃಷ್ಟಾನ್ನ ಭಕ್ಷ್ಯ ಭೋಜ್ಯಗಳು ತಾ-
ವರಗಿ ರಕ್ತದಿ ಬೆರೆಯದಿರೆ ಪೀಡೆ ಪೊಡೆಗೆ
ಬರಿಯೋದು ಬರಿತರ್ಕ ಬರಿಭಕ್ತಿಗಳುಮಂತು
ಹೊರೆಯೆ ಅರಿವಾಗದೊಡೆ – ಮರುಳ ಮುನಿಯ
ವಿಧವಿಧದ ರಸಭರಿತ ಭಕ್ಷ್ಯ ಭೋಜ್ಯಗಳನ್ನು ನಾವು ಸೇವಿಸಿದ ಬಳಿಕ ಅವೆಲ್ಲ ಜೀರ್ಣವಾಗಿ ನಮ್ಮ ರಕ್ತದಲ್ಲಿ ಬೆರೆಯಬೇಕು; ಇಲ್ಲವಾದರೆ ಅವು ಹೊಟ್ಟೆಗೆ (ಪೊಡೆಗೆ) ಪೀಡೆಯಾಗುತ್ತವೆ ಎಂಬ ನಿತ್ಯಸತ್ಯವನ್ನು ಈ ಮುಕ್ತಕದಲ್ಲಿ ಎತ್ತಿ ಹೇಳುತ್ತಾರೆ ಮಾನ್ಯ ಡಿ.ವಿ.ಜಿ.ಯವರು. ಹಾಗೆಯೇ ಓದು, ತರ್ಕ ಮತ್ತು ಭಕ್ತಿಗಳೂ ನಮಗೆ ಸರಿಯಾಗಿ ಅರ್ಥವಾಗಿ, ನಮ್ಮ ಪ್ರಜ್ನೆಯ ಆಳಕ್ಕೆ ಇಳಿಯಬೇಕು. ಇಲ್ಲವಾದರೆ ಅವೆಲ್ಲ ಬರಿಯೋದು, ಬರಿತರ್ಕ, ಬರಿಭಕ್ತಿಯಾಗಿ ಉಳಿದು ನಮಗೆ ಹೊರೆಯಾಗುತ್ತವೆ ವಿನಃ ಅವುಗಳಿಂದ ನಮ್ಮ ಜ್ನಾನ ಬೆಳೆಯುವುದಿಲ್ಲ; ವರ್ತನೆ ಬದಲಾಗುವುದಿಲ್ಲ.
೨೦೧೫-೧೬ನೇ ಆರ್ಥಿಕ ವರ್ಷದಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ಕೃಷಿ ಉತ್ಪನ್ನಗಳ ಮೌಲ್ಯ ರೂಪಾಯಿ ೧.೪ ಲಕ್ಷ ಕೋಟಿ! (ಮುಖ್ಯವಾಗಿ ತಾಳೆಯೆಣ್ಣೆ, ದ್ವಿದಳಧಾನ್ಯಗಳು ಮತ್ತು ಗೋಧಿ) ಇದನ್ನು ಕೇವಲ ತಿಳಿದು ಏನು ಪ್ರಯೋಜನ? ಅಷ್ಟು ಮೌಲ್ಯದ ಅವನ್ನು ಆಮದು ಮಾಡಿಕೊಳ್ಳದಿದ್ದರೆ, ಆ ಮೌಲ್ಯದ ಬಹುಪಾಲು ಅವನ್ನು ಇಲ್ಲೇ ಬೆಳೆಸಿದ್ದ ನಮ್ಮ ರೈತರ ಕೈಸೇರುತ್ತಿತ್ತು; ಅವರ ಆರ್ಥಿಕ ಸಂಕಷ್ಟ ಕಡಿಮೆಯಾಗಿ ಸಾವಿರಾರು ರೈತರ ಆತ್ಮಹತ್ಯೆ ತಪ್ಪುತ್ತಿತ್ತು ಎಂಬ ಅರಿವು ನಮ್ಮಲ್ಲಿ ಮೂಡಬೇಕು. ಯಾಕೆಂದರೆ, ಕಳೆದ ಇಪ್ಪತ್ತೊಂದು ವರುಷಗಳಲ್ಲಿ ಹಣಕಾಸಿನ ಸಂಕಟ ತಾಳಲಾಗದೆ, ೩,೧೮,೦೦೦ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾಗೆಯೇ, ಇಂಡೋನೇಷ್ಯಾದ ಕಾಡುಗಳ ನಾಶಕ್ಕೆ ಭಾರತೀಯರ ತಾಳೆಣ್ಣೆ ಬಳಕೆ ಕಾರಣವಾಗುತ್ತಿದೆ ಎಂಬುದು ನಮಗೆ ಅರಿವಾಗಬೇಕು. ಯಾಕೆಂದರೆ, ೨೦೧೫-೧೬ರಲ್ಲಿ ನಮ್ಮ ದೇಶ ಆಮದು ಮಾಡಿಕೊಂಡ ತಾಳೆಣ್ಣೆಯ ಮೌಲ್ಯ ರೂಪಾಯಿ ೭೦,೦೦೦ ಕೋಟಿ. ಭಾರತಕ್ಕೆ ತಾಳೆಣ್ಣೆ ರಫ್ತು ಮಾಡಿದರೆ ಭಾರೀ ಲಾಭ ಸಿಗುತ್ತದೆಂದು ಇಂಡೋನೇಷ್ಯಾದವರು ಕಾಡುಗಳನ್ನು ನಾಶ ಮಾಡಿ ಅಲ್ಲಿ ಎಣ್ಣೆತಾಳೆ ಗಿಡಗಳನ್ನು ಬೆಳೆಸುತ್ತಿದ್ದಾರೆ!
ಮಂಗಳೂರಿನಲ್ಲಿ ೨೦೧೬ರ ಬೇಸಗೆಯಲ್ಲಿ ಸುಮಾರು ಒಂದು ತಿಂಗಳವಧಿ ಐದು ದಿನಗಳಿಗೊಮ್ಮೆ ನಳ್ಳಿನೀರು ಸರಬರಾಜು! ಆದರೂ ಎಷ್ಟು ಮನೆಗಳಲ್ಲಿ ಮಳೆನೀರು ಕೊಯ್ಲು ಮಾಡುತ್ತಿದ್ದಾರೆ? ದಿನಕ್ಕೆ ೧೦೦ ಲೀಟರಿನಂತೆ ಒಂದು ವರುಷದಲ್ಲಿ ಪ್ರತಿಯೊಬ್ಬರೂ ೩೫,೬೦೦ ಲೀಟರ್ ನೀರು ಬಳಸುತ್ತಿದ್ದೇವೆ. ಎಷ್ಟು ಜನರು ಪ್ರತೀ ವರುಷ ಅಷ್ಟು ನೀರನ್ನು ಭೂಮಿಯೊಳಕ್ಕೆ ಇಂಗಿಸುತ್ತಿದ್ದಾರೆ? ಹೀಗೆ ವಿಷಯ ತಿಳಿದಿದ್ದೂ ವರ್ತನೆ ಬದಲಾಗದಿದ್ದರೆ, ಆ ಮಾಹಿತಿ ಕೇವಲ ಹೊರೆ.