ಕಗ್ಗ ದರ್ಶನ – 47 (1)

ಕಗ್ಗ ದರ್ಶನ – 47 (1)

ಅಗೆದು ಗೊಬ್ಬರವಿಕ್ಕಿ ನೀರೆರೆದು ತೋಟಿಗನು
ಜಗಿವ ಮುಳ್ಳಿರಿತಗಳ ಸೈರಿಸೆ ಗುಲಾಬಿ
ನಗುವುದೊಂದರೆನಿಮಿಷ; ನಗಲು ಬಾಳ್ಮುಗಿಯುವುದು
ಮುಗುಳು ದುಡಿತಕೆ ತಣಿಸು - ಮಂಕುತಿಮ್ಮ
ತೋಟಗಾರನು ಮಣ್ಣನ್ನು ಅಗೆದು, ಗೊಬ್ಬರ ಹಾಕಿ, ನೀರೆರೆದು ಗುಲಾಬಿ ಗಿಡವನ್ನು ಬೆಳೆಸುತ್ತಾನೆ. ಅದರ ಆರೈಕೆ ಮಾಡುವಾಗೆಲ್ಲ, ಆ ಗಿಡದ ಮೊನಚಾದ ಮುಳ್ಳುಗಳ ಇರಿತಗಳನ್ನೂ ಚುಚ್ಚುವಿಕೆ (ಜಗಿವ)ಯನ್ನೂ ಸಹಿಸಿಕೊಳ್ಳುತ್ತಾನೆ. ಇಷ್ಟೆಲ್ಲ ಆರೈಕೆ ಮಾಡಿ ಬೆಳೆಸಿದ ಗಿಡದಲ್ಲಿ ಮೂಡುವ ಮೊಗ್ಗು, ಗುಲಾಬಿ ಹೂವಾಗಿ ಅರಳಿ ನಗುವುದು ಸ್ವಲ್ಪ ಸಮಯ (ಅರೆ ನಿಮಿಷ) ಮಾತ್ರ. ಹಾಗೆ ಅರಳುತ್ತಲೇ ಆ ಗುಲಾಬಿ ಹೂವಿನ ಬಾಳು ಮುಗಿಯುತ್ತದೆ; ಅದು ಬಾಡಿ ಹೋಗುತ್ತದೆ. ಗುಲಾಬಿಯ ಮೊಗ್ಗು (ಮುಗುಳು) ಮತ್ತು ಸ್ವಲ್ಪ ಸಮಯ ಅರಳಿದಾಗಿನ ಚೆಲುವೇ ತೋಟಗಾರನ ದುಡಿತಕ್ಕೆ ಸಿಗುವ ಪ್ರತಿಫಲ ಹಾಗೂ ತೃಪ್ತಿ ಎಂದು ಈ ಮುಕ್ತಕದಲ್ಲಿ ಮನಮುಟ್ಟುವ ಸಂದೇಶ ನೀಡುತ್ತಾರೆ ಮಾನ್ಯ ಡಿ.ವಿ.ಗುಂಡಪ್ಪನವರು.
ಇದಕ್ಕೆ ಉಜ್ವಲ ಉದಾಹರಣೆ ದಿವಂಗತ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬದುಕು. ತೀರಾ ಬಡತನದಲ್ಲಿ ಬೆಳೆದ ಅವರು, ಸ್ವಾತಂತ್ರ್ಯ ಹೋರಾಟದಲ್ಲಿ ಉತ್ಸಾಹದಿಂದ ಭಾಗವಸಿದರು. ನಮ್ಮ ದೇಶ ೧೫ ಆಗಸ್ಟ್ ೧೯೪೭ರಂದು ಸ್ವಾತಂತ್ರ್ಯ ಗಳಿಸಿದ ನಂತರವೂ, ತಮ್ಮ ಬದುಕನ್ನು ದೇಶಸೇವೆಗೆ ಮುಡಿಪಾಗಿಟ್ಟರು. ಶಾಸ್ತ್ರಿಯವರ ಪ್ರಾಮಾಣಿಕತೆ, ಶಿಸ್ತು, ದೇಶಪ್ರೇಮ, ಸೇವಾತತ್ಪರತೆ ಹಾಗೂ ಕಾರ್ಯದಕ್ಷತೆಯನ್ನು ಹತ್ತಿರದಿಂದ ಕಂಡಿದ್ದ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ, ಶಾಸ್ತ್ರಿಯವರನ್ನು ಕೇಂದ್ರ ಸರಕಾರದ ಸಚಿವ ಸ್ಥಾನಕ್ಕೆ ಸೇರಿಸಿಕೊಂಡರು. ಕೇಂದ್ರ ರೈಲ್ವೇ ಸಚಿವರಾಗಿದ್ದಾಗ, ರೈಲು ಅಪಘಾತಗಳಲ್ಲಿ ನೂರಾರು ಜನರು ಸತ್ತಾಗ, ಅದರ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು ಶಾಸ್ತ್ರಿ. ಅನಂತರ, ಪುನಃ ಕೇಂದ್ರ ಸರಕಾರದ ಸಚಿವಸ್ಥಾನ ಅವರನ್ನು ಅರಸಿಕೊಂಡು ಬಂತು. ತಮ್ಮ ಜವಾಬ್ದಾರಿಗಳ ನಿರ್ವಹಣೆಗಾಗಿ ಹಗಲಿರುಳೆನ್ನದೆ ದುಡಿಯುತ್ತಿದ್ದ ಶಾಸ್ತ್ರಿಯವರಿಗೆ ಎರಡು ಬಾರಿ ಹೃದಯಾಘಾತ. ತದನಂತರ, ಜವಾಹರಲಾಲ್ ನೆಹರೂ ತೀರಿಕೊಂಡಾಗ, ದೇಶವಾಸಿಗಳಿಗೆಲ್ಲ “ಮುಂದೇನು?” ಎಂಬ ಆತಂಕ. ಆ ಸಂಧಿಕಾಲದಲ್ಲಿ ಭಾರತದ ಪ್ರಧಾನಮಂತ್ರಿಯಾದವರು ಲಾಲ್ ಬಹಾದ್ದೂರ್ ಶಾಸ್ತ್ರಿ. ಕೆಲವೇ ತಿಂಗಳುಗಳಲ್ಲಿ, ಕಾಲುಕೆರೆದು ಯುದ್ಧಕ್ಕೆ ಬಂದ ಪಾಕಿಸ್ಥಾನ ಸೈನ್ಯವನ್ನು ತಮ್ಮ ದಿಟ್ಟ ನಿರ್ಧಾರಗಳಿಂದ ಮಣಿಸಿದರು ಶಾಸ್ತ್ರಿ. ಅನಂತರ, ರಷ್ಯಾದ ಅಧ್ಯಕ್ಷರ ಒತ್ತಾಯದ ಮೇರೆಗೆ ಟಾಷ್ಕೆಂಟಿಗೆ ಹೋಗಿ, ಸಂಧಾನ ನಡೆಸಿ, ಪಾಕಿಸ್ಥಾನದೊಂದಿಗೆ ಚಾರಿತ್ರಿಕ “ಶಾಂತಿ ಒಪ್ಪಂದಕ್ಕೆ“ ಸಹಿ ಹಾಕಿದರು; ಅದೇ ದಿನ ನಡುರಾತ್ರಿ ದಾಟಿದ ನಂತರ ಅಲ್ಲೇ ವಿಧಿವಶರಾದರು. ದೇಶಕ್ಕಾಗಿ ಬದುಕನ್ನೇ ಸವೆಯಿಸಿದ ಲಾಲ್ ಬಹದ್ದೂರ್ ಶಾಸ್ತ್ರಿಯವರು ಇಹಲೋಕ ತ್ಯಜಿಸಿದಾಗ ಅವರಿಗೊಂದು ಸ್ವಂತ ಮನೆಯೂ ಇರಲಿಲ್ಲ. ಹಾಗಾದರೆ, ಅವರ ದುಡಿತಕ್ಕೆ ಸಿಕ್ಕ ಪ್ರತಿಫಲ ಏನು? ಅದು, ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಅಪಾರ ಗೌರವ, ಅಲ್ಲವೇ?