ಕಗ್ಗ ದರ್ಶನ – 47 (2)
ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ
ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ
ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು
ಜಗದ ಸಂಗತಿಯಷ್ಟು – ಮರುಳ ಮುನಿಯ
ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲುವನ್ನು ನೋಡು, ನನ್ನ ಮೃದುತನವನ್ನು ಸ್ಪರ್ಶಿಸಿ ನೋಡು” ಎಂದು ಕರೆಯುವಂತೆ ಕಂಡಿತು. ಅದರ ಪರಿಮಳ (ಸೊಗದ ವಾಸನೆ) ಆಸ್ವಾದಿಸಬೇಕೆಂದು, ಆ ಗುಲಾಬಿ ಹೂವನ್ನು ಹಿಡಿದಾಗ ನನ್ನ ಕೈಗೆ ಸಿಕ್ಕಿದ್ದು ವಾಸನೆಯಿಲ್ಲದ ಹೂವು. ನನ್ನಾಶೆ ನಿರಾಶೆಯಾದರೂ, ನನ್ನ ಕೈಗೆ ಗುಲಾಬಿ ಗಿಡದ ಮುಳ್ಳುಗಳು ಚುಚ್ಚಲಿಲ್ಲವೆಂದು ಸಮಾಧಾನ ಮಾಡಿಕೊಂಡು ಕೈಮುಗಿದೆ. ಈ ಜಗತ್ತಿನ ಸಂಗತಿಗಳೂ ಇಷ್ಟೇ ಎಂದು ನಮ್ಮ ತಲೆಯ ಮೇಲೆ ಹೊಡೆದಂತೆ ಸತ್ಯವೊಂದನ್ನು ಬಿಚ್ಚಿಡುತ್ತಾರೆ ಡಿ.ವಿ.ಜಿ.ಯವರು.
ಇದು ಮನವರಿಕೆಯಾಗಲು ಒಂದು ಪ್ರಕರಣ ಗಮನಿಸಿ. ಒಬ್ಬರು ತನ್ನ ಹಳೆಯ ಬೈಕ್ ಮಾರಲೆತ್ನಿಸುತ್ತಿದ್ದರು. ಮಂಗಳೂರಿನಲ್ಲಿ ಒಂದು ಬ್ರ್ಯಾಂಡಿನ ಬೈಕಿನ ವರ್ಕ್-ಷಾಪಿನಲ್ಲಿ ಮೆನೇಜರ್ ಆಗಿದ್ದ ಅವರ ಮಿತ್ರ, ಒಳ್ಳೆಯ ರೇಟಿಗೆ ಮಾರಾಟ ಮಾಡಿಸುತ್ತೇನೆ ಎಂದು ಆ ಬೈಕ್ ಒಯ್ದರು. ಆದರೆ ಒಂದು ವರುಷ ಕಳೆದರೂ ಆ ಬೈಕ್ ಮಾರಾಟ ಆಗಲಿಲ್ಲ. ಬೈಕಿನ ಮಾಲೀಕ ತನಿಖೆ ಮಾಡಿದಾಗ ತಿಳಿದದ್ದು: ಆ ಮಿತ್ರ ಬೈಕನ್ನು ಒಂದು ವರುಷ ಆರಾಮವಾಗಿ ಸ್ವಂತ ಬೈಕಿನಂತೆ ಓಡಾಡಿಸುತ್ತಿದ್ದರು!
“ಅರ್ಧ ಬೆಲೆಗೆ ಫ್ರಿಜ್, ಬೈಕ್, ಕಾರು ಪಡೆಯಿರಿ” ಎಂಬ ಸ್ಕೀಮುಗಳು, “ಪ್ಲಾಂಟೇಷನ್ ಸ್ಕೀಮಿನಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿ ೨೦ ವರುಷಗಳ ನಂತರ ೨೦ ಲಕ್ಷ ರೂಪಾಯಿ ಗಳಿಸಿರಿ” ಎಂದು ರೂ.೨೫,೦೦೦ ಕೋಟಿಗಳನ್ನೇ ನುಂಗಿ ಹಾಕಿದ ಪ್ಲಾಂಟೇಷನ್ ಕಂಪೆನಿಗಳು, “ವಾರ್ಷಿಕ ಶೇಕಡಾ ೨೫ ಬಡ್ಡಿ ನೀಡುತ್ತೇವೆ” ಎಂದು ಜಾಹೀರಾತು ಪ್ರಕಟಿಸಿ, ಲಕ್ಷಗಟ್ಟಲೆ ಠೇವಣಿದಾರರ ಕೋಟಿಗಟ್ಟಲೆ ರೂಪಾಯಿ ಹಣ ದೋಚಿದ ಬ್ಲೇಡ್ ಕಂಪೆನಿಗಳು, ಇ-ಮೆಯಿಲ್ ಮತ್ತು ಎಸ್.ಎಮ್.ಎಸ್. ಮೂಲಕ “ನಿಮಗೆ ಕೋಟಿಕೋಟಿ ರೂಪಾಯಿ ಲಾಟರಿ ಬಂದಿದೆ” ಎಂದೆಲ್ಲ ಈಗ ಮತ್ತೆಮತ್ತೆ ಬಲೆಬೀಸುವವರು – ಇವೆಲ್ಲವೂ “ನಗುನಗುತ ಕರೆಯುವವೊಲಾಡುವ ಗುಲಾಬಿಗಳೇ” ಅಲ್ಲವೇ?