ಕಗ್ಗ ದರ್ಶನ – 49 (1)
ಅಡಿ ಜಾರಿ ಬೀಳುವುದು, ತಡವಿಕೊಂಡೇಳುವುದು
ಕಡುಬ ನುಂಗುವುದು, ಕಹಿಮದ್ದ ಕುಡಿಯುವುದು
ದುಡುಕಿ ಮತಿದಪ್ಪುವುದು, ತಪ್ಪನೊಪ್ಪೆನ್ನುವುದು
ಬದುಕೆಂಬುದಿದು ತಾನೆ? - ಮಂಕುತಿಮ್ಮ
ಕಾಲು ಜಾರಿ ಬೀಳುವುದು, ಬಿದ್ದಲ್ಲಿಂದ ಮೈ ತಡವಿಕೊಂಡು ಏಳುವುದು. ರುಚಿಯಾಗಿದೆಯೆಂದು ಕಡುಬನ್ನು ನುಂಗುವುದು; ಅನಂತರ ಹೊಟ್ಟೆ ಕೆಟ್ಟಿತೆಂದು ಕಹಿಮದ್ದು ಕುಡಿಯುವುದು. ದುಡುಕಿ, ಮತಿಗೆಟ್ಟು ತಪ್ಪು ಮಾಡುವುದು; ಬಳಿಕ ಅದು ತಪ್ಪಲ್ಲ, ಅದು ಸರಿಯಾದದ್ದೇ ಎಂದು ವಾದಿಸುವುದು. ಇದುವೇ ಬದುಕು ತಾನೇ? ಎಂದು ಪ್ರಶ್ನಿಸುವ ಮೂಲಕ ಈ ಮುಕ್ತಕದಲ್ಲಿ ನಮ್ಮ ವಿವೇಕವನ್ನು ಮೀಟುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಜಾಗ್ರತೆ ಮಾಡದೆ ಹೆಜ್ಜೆಯಿಟ್ಟರೆ ಬಿದ್ದೇ ಬೀಳುತ್ತೇವೆ. ವಾಹನ ಅಪಘಾತಗಳನ್ನು ಗಮನಿಸಿ. ವಾಹನ ಚಾಲಕರೆಲ್ಲರೂ ವಾಹನ ಚಲಾವಣೆ ತರಬೇತಿ ಪಡೆದು, ಪರೀಕ್ಷೆಯಲ್ಲಿ ಪಾಸಾಗಿ, ವಾಹನ ಚಲಾವಣಾ ಪರವಾನಗಿ ಪಡೆದಿರುತ್ತಾರೆ. ಆದರೂ, ಭಾರತದಲ್ಲಿ ಅತ್ಯಧಿಕ ಸಾವುಗಳು ಆಗುತ್ತಿರುವುದು ವಾಹನ ಅಪಘಾತಗಳಿಂದ! ಮದ್ಯಪಾನ ಮಾಡಿ ವಾಹನ ಓಡಿಸುವುದು, ಅತಿ ವೇಗದಿಂದ ಅಥವಾ ಅತಿ ಭಾರ ಹೇರಿಕೊಂಡು ವಾಹನ ಚಲಾಯಿಸುವುದು – ಇವೆಲ್ಲ ಬೇಕುಬೇಕೆಂದೇ ಅಡಿ ಜಾರಿ ಬೀಳುವ ನಿದರ್ಶನಗಳು.
ಸಿಗರೇಟು/ ಬೀಡಿ ಸೇದುವುದು, ತಂಬಾಕು ಸೇವನೆ, ಮದ್ಯಪಾನ – ಇವೆಲ್ಲ ಜೀವಕ್ಕೇ ಕುತ್ತು ಎಂದು ಗೊತ್ತಿದ್ದರೂ, ಆ ಚಟಕ್ಕೆ ಬಲಿಯಾಗುವವರನ್ನು ಗಮನಿಸಿ. ಕಡುಬು ನುಂಗಿ, ಕಹಿಮದ್ದು ಕುಡಿಯುವಂತೆ, ಅನಂತರ ಈ ಚಟಗಳಿಂದ ಪಾರಾಗಲು ಜೀವಮಾನವಿಡೀ ಹೆಣಗುತ್ತಾರೆ; ಹಲವರು ಕ್ಯಾನ್ಸರಿನಿಂದ ಸಾಯುತ್ತಾರೆ. ಮಾದಕದ್ರವ್ಯಗಳ ಸೇವನೆಯ ಚಟವೂ ಭಯಾನಕ. ೨೦೧೭ರಲ್ಲಿ ವರದಿಯಾಗಿರುವ ಮಂಗಳೂರಿನ ಪ್ರದೇಶದಲ್ಲಿ ಮಾದಕ ದ್ರವ್ಯಗಳನ್ನು ಪೊಲೀಸರು ವಶಪಡಿಸಿಕೊಂಡ ಹತ್ತಾರು ಪ್ರಕರಣಗಳು, ಈ ಚಟದ ಕರಾಳ ಬಾಹುಗಳ ಪುರಾವೆಗಳು.
ಸರಕಾರವೇ ದುಡುಕಿ ಮತಿದಪ್ಪಿ, ತದನಂತರ ತಾನು ಮಾಡಿದ್ದೇ ಸರಿ ಎಂದು ಸಾಧಿಸುವುದಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಗುಹೋಗುಗಳೇ ಪುರಾವೆ. ಆ ಇಲಾಖೆಯಲ್ಲಿ ಕಳೆದ ೩ ವರುಷದಲ್ಲಿ ೧೪ ಆಯುಕ್ತರನ್ನು ಎತ್ತಂಗಡಿ ಮಾಡಲಾಗಿದೆ! ಪಡಿತರ ಧಾನ್ಯ ಕಳ್ಳತನ, ಅನ್ನಭಾಗ್ಯದ ಭ್ರಷ್ಟಾಚಾರ ಆ ಇಲಾಖೆಯ ನಿರಂತರ ಕಳಂಕ. ಈ ವರೆಗೆ ಪತ್ತೆಯಾಗಿರುವ ನಕಲಿ ರೇಷನ್ ಕಾರ್ಡುಗಳ ಸಂಖ್ಯೆ ೨೦ ಲಕ್ಷಕ್ಕಿಂತ ಅಧಿಕ! ಆ ಕಾರ್ಡುಗಳಿಗೆ ಸಹಿ ಮಾಡಿದವರು ಅದೇ ಇಲಾಖೆಯ ಅಧಿಕಾರಿಗಳು! ಇಷ್ಟೆಲ್ಲ ಆದರೂ, ತಾನು ಕೈಗೊಂಡ ಕ್ರಮಗಳೆಲ್ಲ ಸರಿ ಎಂದೇ ಸಮರ್ಥಿಸುತ್ತದೆ ನಮ್ಮ ಘನ ಸರಕಾರ! ಇದೇ ಬದುಕು, ಅಲ್ಲವೇ?