ಕಗ್ಗ ದರ್ಶನ – 49 (2)

ಕಗ್ಗ ದರ್ಶನ – 49 (2)

ಬದುಕೆಂಬ ಹೆಸರಿನಲಿ ನೀಂ ಜಗವ ಜಗ ನಿನ್ನ
ಕುದಿಸುತ್ತ ಕೆದಕುತ್ತ ಕುಲುಕುತಿರುವಂದು
ಬದಲಾಗದೆಂತು ನೀಮಿರ್ಪುದೀ ನಿಮ್ಮಾಟ
ವಿಧಿಯ ನಿತ್ಯವಿಲಾಸ – ಮರುಳ ಮುನಿಯ
ಬದುಕು ಎಂಬ ಹೆಸರಿನಲ್ಲಿ ನೀನು ಜಗತ್ತನ್ನೂ, ಜಗತ್ತು ನಿನ್ನನ್ನೂ ಕುದಿಸುತ್ತ ಕೆದಕುತ್ತ ಕುಲುಕುತ್ತಿದೆ. ಹೀಗಿರುವಾಗ ನೀನು, ನಿನ್ನ ಇರುವಿಕೆ ಬದಲಾಗದಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸುವ ಮಾನ್ಯ ಡಿವಿಜಿಯವರು ಈ ನಿಮ್ಮ ಆಟ ವಿಧಿಯ ನಿತ್ಯವಿಲಾಸ ಎನ್ನುತ್ತಾರೆ. ಇದು ಸತ್ಯವೆಂಬುದಕ್ಕೆ ಚರಿತ್ರೆಯಲ್ಲಿ ನಿದರ್ಶನಗಳು ಹಲವಾರು. ಚಕ್ರವರ್ತಿ ಅಲೆಗ್ಸಾಂಡರ್ ದಂಡೆತ್ತಿ ಹೊರಟು, ಭಾರತದ ವರೆಗೂ ಬಂದದ್ದು! ಅಲ್ಲಾವುದ್ದೀನ್ ಖಿಲ್ಜಿ, ಚೆಂಗಿಸ್ ಖಾನ್ ಇಂತಹ ಹತ್ತಾರು ರಾಜರು ಭಾರತದ ಸಂಪತ್ತು ದೋಚಲಿಕ್ಕಾಗಿ ಮತ್ತೆಮತ್ತೆ ಧಾಳಿ ಮಾಡಿದ್ದು!
ಏಷ್ಯಾ ಖಂಡಕ್ಕೆ ಸಾಗರಪಥ ಪತ್ತೆ ಮಾಡುತ್ತೇನೆಂದು ೬ ಸಪ್ಟಂಬರ್ ೧೪೯೫ರಂದು ಸ್ಪೇನಿನಿಂದ ಮೂರು ನೌಕೆಗಳಲ್ಲಿ ಹೊರಟ ಕೊಲಂಬಸ್ ೧೨ ಅಕ್ಟೋಬರ್ ೧೪೯೫ರಂದು ತಲಪಿದ್ದು ವೆಸ್ಟ್-ಇಂಡೀಸ್ ದ್ವೀಪಗಳ ಸಾನ್ಸಾಲ್ವಡೋರಿಗೆ! ಹಾಗೆಯೇ, ಫರ್ಡಿನಾಂಡ್ ಮೆಗೆಲ್ಲನ್ ೨೦ ಸಪ್ಟಂಬರ್ ೧೫೧೯ರಂದು ಐದು ನೌಕೆಗಳಲ್ಲಿ ಸ್ಪೇನಿನಿಂದ ಹೊರಟು,  ಅಮೇರಿಕಾ ಖಂಡ ದಾಟಿ, ೧೫೨೧ರ ಎಪ್ರಿಲಿನಲ್ಲಿ ಫಿಲಿಫೈನ್ಸ್ ತಲಪಿ, ಅಲ್ಲೇ ಎಪ್ರಿಲ್ ೨೭ರಂದು ತೀರಿಕೊಂಡ. ಅನಂತರ, ಯುರೋಪಿನಿಂದ ಬ್ರಿಟಿಷರು, ಫ್ರೆಂಚರು, ಡಚ್ಚರು, ಸ್ಪೇನಿನವರು ಅಮೇರಿಕಾ, ಆಫ್ರಿಕಾ ಹಾಗೂ ಏಷ್ಯಾ ಖಂಡಗಳಿಗೆ ಮತ್ತೆಮತ್ತೆ ಧಾಳಿ ಮಾಡಿದರು. ಅವರಿಂದ ಅಲ್ಲಿನ ಮೂಲನಿವಾಸಿಗಳ ಮಾರಣಹೋಮ. ಅಮೇರಿಕಾದ ಮೂಲನಿವಾಸಿಗಳ ನಿರ್ನಾಮ. ಆಫ್ರಿಕಾದ ಲಕ್ಷಗಟ್ಟಲೆ ಅಸಹಾಯಕ ಮೂಲನಿವಾಸಿಗಳನ್ನು ಸೆರೆ ಹಿಡಿದು, ಅಮೇರಿಕಾಕ್ಕೆ ಸಾಗಿಸಿ, ಅಲ್ಲಿ ಗುಲಾಮರನ್ನಾಗಿ ಶತಮಾನಗಳ ಕಾಲ ದುಡಿಸಿದ ಕ್ರೌರ್ಯ.
ಒಂದನೆಯ ಮತ್ತು ಎರಡನೆಯ ಮಹಾಯುದ್ಧಗಳಂತೂ ಕೆಲವೇ ದೇಶಗಳ ನಾಯಕರು ಜಗತ್ತನ್ನು ಕುದಿಸಿ, ಕೆದಕಿ, ಕುಲುಕಿದ್ದಕ್ಕೆ ಮಹಾನಿದರ್ಶನ. ಜಪಾನಿನ ಹಿರೋಷಿಮಾ ಮತ್ತು ನಾಗಸಾಕಿ ಮೇಲೆ ಅಣುಬಾಂಬ್ ಸ್ಫೋಟಿಸಿ ಲಕ್ಷಗಟ್ಟಲೆ ಅಮಾಯಕರ ಬದುಕು ಚಿಂದಿಚಿಂದಿ. ಆದರೂ ಯುದ್ಧಗಳು ಮುಗಿದಿಲ್ಲ. ಈ ಶತಮಾನದಲ್ಲಂತೂ, ಭಯೋತ್ಪಾದನೆಯ ಹಿಂಸೆಯ ಅಟ್ಟಹಾಸದಿಂದಾಗಿ ಕೋಟಿಗಟ್ಟಲೆ ಜನರ ಬದುಕು ಅಲ್ಲೋಲಕಲ್ಲೋಲ. ಇವೆಲ್ಲವೂ ವಿಧಿಯ ನಿತ್ಯವಿಲಾಸ.