ಕಗ್ಗ ದರ್ಶನ – 7 (1)

ಬೇಕು ಬೇಕದು ಬೇಕು ಬೇಕಿದೆನಗಿನ್ನೊಂದು
ಬೇಕೆನುತ ಬೊಬ್ಬಿಡುತಲಿಹ ಘಟವನಿದನು
ಏಕೆಂದು ರಚಿಸಿದನೊ ಬೊಮ್ಮನೀ ಬೇಕು ಜಪ
ಸಾಕೆನೆಪುದೆಂದಿಗೆಲೊ - ಮಂಕುತಿಮ್ಮ
“ಬೇಕು, ಬೇಕು, ಇನ್ನೂ ಬೇಕು, ಮತ್ತೂ ಬೇಕು” ಎಂದು ಬಾಯಿ ಬಿಡುವ ನಮ್ಮ ಅವಸ್ಥೆಯನ್ನು ಈ ಮುಕ್ತಕದಲ್ಲಿ ಚೆನ್ನಾಗಿ ಬಣ್ಣಿಸಿದ್ದಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ತಿನ್ನುವುದರಿಂದ ತೊಡಗಿ ರಾಶಿರಾಶಿ ಸಂಪತ್ತನ್ನು ಕೂಡಿ ಹಾಕುವುದರ ತನಕ – ಎಲ್ಲದರಲ್ಲಿಯೂ ಎದ್ದು ಕಾಣುವುದು ಮನುಷ್ಯನ ಈ ತಣಿಯದ ದುರಾಶೆ.
ಒಬ್ಬ ಮಾವಿನ ಮರದಡಿ ನಿಂತಿದ್ದಾನೆ ಎಂದಿರಲಿ. ಅವನ ಬಗಲಲ್ಲೊಂದು ಚೀಲ. ಆ ಮಾವಿನ ಮರದಲ್ಲಿ ಕೈಗೆಟಕುವಂತೆ ಗೊಂಚಲುಗೊಂಚಲು ಮಾವಿನ ಹಣ್ಣು. ಅವನ್ನು ಕೊಯ್ದುಕೊಯ್ದು ಚೀಲ ತುಂಬಿಸಿಕೊಳ್ಳುತ್ತಾನೆ ಈಗ. ದಿನಕ್ಕೆ ಐದಾರು ಮಾವು ತಿಂದರೂ, ಒಂದು ವಾರದಲ್ಲಿ ೪೦ ಹಣ್ಣು ತಿಂದಾನು. ಅವನ ಚೀಲದಲ್ಲಿ ಈಗಾಗಲೇ ೫೦ಕ್ಕಿಂತ ಜಾಸ್ತಿ ಹಣ್ಣು ತುಂಬಿವೆ. ಆದರೂ ಅವನಿಗೆ ತೀರದ ಆಸೆ – ಇನ್ನೊಂದು ಚೀಲ ತರಲಿಲ್ಲವಲ್ಲ ಎಂಬ ಪರಿತಾಪ.
ಹಣ, ಚಿನ್ನ, ಸೈಟು, ಮನೆ, ವಾಹನ – ಎಲ್ಲದರ ಬಗ್ಗೆಯೂ ಮನುಷ್ಯರ ಪ್ರವೃತ್ತಿ ಇದೇ. “ಇನ್ನೊಂದು ಬೇಕು, ಮತ್ತೊಂದು ಬೇಕು” ಎಂದು ಬೊಬ್ಬೆ ಹಾಕುವ ಈ ಮಾನವನನ್ನು ಎಂದಿಗೂ ತುಂಬದ ಮಡಕೆಯಂತೆ ಏಕೆ ಮಾಡಿದನೋ ಆ ಸೃಷ್ಟಿಕರ್ತ? ಸದಾ ಕಾಲವೂ “ಇದು ಬೇಕು, ಅದು ಬೇಕು, ಇನ್ನಷ್ಟು ಬೇಕು, ಮತ್ತಷ್ಟು ಬೇಕು” ಎಂಬ ಜಪವನ್ನು ಈ ಮನುಜನಲ್ಲಿ ಯಾಕೆ ಹುಟ್ಟಿಸಿದನೋ ಆ ಬ್ರಹ್ಮ?
ಮನುಷ್ಯನ ಅವಸ್ಥೆ ಹೀಗಿರುವಾಗ ಅವನಿಗೆ “ಸಾಕು” ಎನಿಸುವುದು ಯಾವಾಗ? ಎಂದು ಮಾರ್ಮಿಕವಾಗಿ ಕೇಳುತ್ತಾರೆ ಗುಂಡಪ್ಪನವರು. ನಮ್ಮ ಆಸೆಗಳಿಗೆ ಕೊನೆಯೇ ಇಲ್ಲ. ಸಮುದ್ರದ ಅಲೆಗಳಂತೆ ನಮ್ಮ ಆಸೆಗಳು; ಒಂದಾದ ಮೇಲೊಂದು ನುಗ್ಗಿ ಬರುತ್ತಲೇ ಇರುತ್ತವೆ. ಸಣ್ಣ ಒಡವೆ; ದೊಡ್ದ ಒಡವೆ; ಅನಂತರ ಇನ್ನೂ ದೊಡ್ಡ ಒಡವೆಯ ಆಸೆ. ಆದರೆ ಕೊನೆಗೊಂದು ದಿನ ಇವೆಲ್ಲವನ್ನೂ ಬಿಟ್ಟು ಹೋಗಬೇಕೆಂಬುದು ದೊಡ್ಡ ಸತ್ಯ. ಈ ಸತ್ಯದ ಅರಿವು ಆದಾಗಲಾದರೂ “ಸಾಕು” ಎನಿಸಿತೇ ನಮಗೆ?