ಕಗ್ಗ ದರ್ಶನ – 8 (1)

ಕಗ್ಗ ದರ್ಶನ – 8 (1)

ಬೆದಕಾಟ ಬದುಕೆಲ್ಲ; ಚಣಚಣವು ಹೊಸಹಸಿವು
ಅದಕಾಗಿ ಇದಕಾಗಿ ಮತೊಂದಕಾಗಿ
ಅಧಿಕಾರ ಸಿರಿ ಸೊಗಸು ಕೀರ್ತಿಗಳ ನೆನೆದು ಮನ
ಕುದಿಯುತಿಹುದಾವಗಂ - ಮಂಕುತಿಮ್ಮ
ಜೀವಮಾನವಿಡೀ ನಮ್ಮದು ಹುಡುಕಾಟ – ಅದಕ್ಕಾಗಿ, ಇದಕ್ಕಾಗಿ, ಮತ್ತೊಂದಕ್ಕಾಗಿ. ಇದು ಎಂದಿಗೂ ಮುಗಿಯದ ಹುಡುಕಾಟ. ಯಾಕೆಂದರೆ ಕ್ಷಣಕ್ಷಣವೂ ನಮಗೆ ಹೊಸಹಸಿವು ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಅಧಿಕಾರಕ್ಕಾಗಿ ಹುಡುಕಾಟ ಹೇಗಿರುತ್ತದೆಂದು ಗಮನಿಸಿ. ಗ್ರಾಮ ಪಂಚಾಯತಿನ ಸದಸ್ಯನಾದವನಿಗೆ ಅಧ್ಯಕ್ಷನಾಗುವ ಆಸೆ. ಅನಂತರ ಜಿಲ್ಲಾ ಪಂಚಾಯತಿನ ಸದಸ್ಯ ಹಾಗೂ ಅಧ್ಯಕ್ಷ ಪೀಠವೇರುವ ತುಡಿತ. ಅದಾದ ನಂತರ ಶಾಸಕನಾಗುವ ಕನಸು. ಮತ್ತೆ ಮಂತ್ರಿಯಾಗುವ ಹಪಾಹಪಿ. ರಾಜ್ಯ ಸರಕಾರದ ಮಂತ್ರಿಯಾದ ನಂತರ ಈ ಹುಡುಕಾಟ ಮುಗಿದೀತೇ? ಇಲ್ಲ. ಅದರ ಬೆನ್ನಲ್ಲೇ ಕೇಂದ್ರ ಸರಕಾರದ ಮಂತ್ರಿಯಾಗುವ ಹಸಿವು.
ಸಂಪತ್ತಿನ ಹುಡುಕಾಟವೂ ಹೀಗೆಯೇ. ಒಂದು ಬೆರಳಿಗೆ ಚಿನ್ನದುಂಗುರ ಸಾಲದು, ಹತ್ತು ಬೆರಳುಗಳಿಗೂ ಬೇಕೆಂಬಾಶೆ. ಒಂದು ಬಂಗಾರದ ಸರ ಸಾಲದು, ಹತ್ತಾರು ಹಾಕಿಕೊಳ್ಳುವ ಚಪಲ. ಬದುಕಲಿಕ್ಕೆ ಒಂದು ಮನೆ ಸಾಕು. ಆದರೆ, ಸಂಪತ್ತು ಗುಡ್ದೆ ಹಾಕುವ ಚಪಲ ಇದ್ದವನಿಗೆ ಹತ್ತು ಮನೆಯಿದ್ದರೂ ಸಾಲದು. ಮಧ್ಯಪ್ರದೇಶದ ಐ.ಎ.ಎಸ್. ಅಧಿಕಾರಿಯೊಬ್ಬ ೨೫ ಫ್ಲಾಟುಗಳನ್ನು ಕಪ್ಪುಹಣದಿಂದ ಖರೀದಿಸಿದ್ದ. ವಾಹನ ಖರೀದಿಯ ಖಯಾಲಿಯೂ ಹೀಗೆಯೇ – ಎಷ್ಟಿದ್ದರೂ ಇಂಗದ ಹಸಿವು.
ಸುಖದ ಭ್ರಮೆಯಲ್ಲಿ ಮುಳುಗಿದವರ ಕತೆಯೂ ಇದೇ. ಮನೆಯ ನೆಲಕ್ಕೆ ಅಮೃತಶಿಲೆ ಹಾಕಿದರೆ ಸುಖ; ಗ್ರಾನೈಟ್ ಹಾಕಿದರೆ ಹೆಚ್ಚು ಸುಖ ಎಂಬ ಭ್ರಮೆ. ಚಿಕ್ಕಮಗಳೂರಿನಂತಹ ಚಳಿ ಪ್ರದೇಶದಲ್ಲಿಯೂ ಮನೆಯ ನೆಲಕ್ಕೆ ಅಮೃತಶಿಲೆ ಹಾಕಿಸಿ, ಅದರ ಥಂಡಿಯಿಂದಾಗಿ ಮೊಣಕಾಲಿನ ನೋವು ಅನುಭವಿಸುವವರಿಗೆ ಏನೆನ್ನಬೇಕು? ದೊಡ್ಡ ಟಿವಿ ಇದ್ದರೆ ಸುಖ, ದುಬಾರಿ ಮೊಬೈಲ್ ಫೋನಿದ್ದರೆ ಭಾರೀ ಸುಖ ಎಂದು ನಂಬುವವರ ಪಾಡು ನೋಡಿ. ಅದು ಹಾಳಾದಾಗ, ಅವರ ಸುಖ ಮಣ್ಣುಪಾಲಾಗುತ್ತದೆ.
ಕೀರ್ತಿಯ ಗೀಳು, ಪ್ರಚಾರದ ಹುಚ್ಚು ಹಿಡಿದವರಂತೂ ವಿಚಿತ್ರವಾಗಿ ವರ್ತಿಸುತ್ತಾರೆ. ಪತ್ರಿಕೆಗಳಲ್ಲಿ ಆಗಾಗ ತನ್ನ ಹೆಸರು, ಫೋಟೋ ಕಾಣಿಸಬೇಕು ಎಂಬಲ್ಲಿಂದ ಶುರುವಾಗುತ್ತದೆ. ಕ್ರಮೇಣ ಈ ಗೀಳು ರೇಡಿಯೋ ಮತ್ತು ಟಿವಿ ಪ್ರಸಾರ ಆಕ್ರಮಿಸುತ್ತದೆ. ಇವೆಲ್ಲದರಿಂದ ಯಾವಾಗಲೂ ಮನಸ್ಸು ಕುದಿಯುತ್ತಿದ್ದರೆ, ನೆಮ್ಮದಿ ಇದ್ದೀತೇ?