ಕಗ್ಗ ದರ್ಶನ – 8 (2)

ಕಗ್ಗ ದರ್ಶನ – 8 (2)

ಒಳಿತೊಂದೆ ಶಾಶ್ವತವೊ ಉಳಿದೆಲ್ಲವಳಿಯುವುದೊ
ಅಳುವ ನೀನೊರಸಿದುದು ನಗುವ ನಗಿಸಿದುದು
ಒಲಿದು ನೀಂ ನೀಡಿದುದು ನಲವ ನೀನೆಸಗಿದುದು
ನೆಲಸುವುವು ಬೊಮ್ಮನಲಿ – ಮರುಳ ಮುನಿಯ
ಕುದಿಯುವ ಮನಸ್ಸನ್ನು ತಣಿಸುವ ದಾರಿ ಯಾವುದು? ಎಂಬ ಪ್ರಶ್ನೆಗೆ ಮನಮುಟ್ಟುವ ಉತ್ತರ ನೀಡಿದ್ದಾರೆ ಮಾನ್ಯ ಡಿವಿಜಿಯವರು, ಈ ಮುಕ್ತಕದಲ್ಲಿ: “ಒಳ್ಳೆಯದನ್ನು ಮಾಡು”. ಯಾಕೆಂದರೆ ನಾವು ಮಾಡಿದ ಒಳ್ಳೆಯ ಕೆಲಸಗಳು ಮಾತ್ರ ಶಾಶ್ವತ; ಉಳಿದ ಎಲ್ಲವೂ ನಾಶವಾಗಿ ಹೋಗುತ್ತದೆ.
ಮಾನ್ಯ ಗುಂಡಪ್ಪನವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ರವೀಂದ್ರನಾಥ ಠಾಗೋರ್ ಕಟ್ಟಿ ಬೆಳೆಸಿದ ಶಾಂತಿ ನಿಕೇತನ – ಇಂತಹ ಸಂಸ್ಥೆಗಳು ನೂರ್ಕಾಲ ಬಾಳಿ, ನಿರಂತರ ಮನುಕುಲದ ಸೇವೆ ಮಾಡುತ್ತವೆ.
ಇಂದು ಮಹಾತ್ಮಾ ಗಾಂಧಿಯವರನ್ನು, ವಿವೇಕಾನಂದರನ್ನು, ಮದರ್ ಥೆರೆಸಾರನ್ನು ನಾವು ಮತ್ತೆಮತ್ತೆ ನೆನಪು ಮಾಡಿಕೊಳ್ಳುತ್ತೇವೆ. ಯಾಕೆಂದರೆ ಅವರು ಮಾಡಿದ್ದೆಲ್ಲವೂ ಒಳ್ಳೆಯ ಕೆಲಸಗಳೇ ಆಗಿವೆ. ಇತರರ ಕಣ್ಣೀರನ್ನು ಒರಸುವುದು, ಸಂಕಟವನ್ನು ಕಡಿಮೆ ಮಾಡುವುದು ದೇವರು ಮೆಚ್ಚುವ ಕೆಲಸ. ಕುಷ್ಟ ರೋಗಿಗಳ ಸೇವೆಯ ಮೂಲಕ ಮದರ್ ಥೆರೇಸಾ ಮಾಡಿದ್ದು ಇಂತಹ ಕೆಲಸ. ಅವರು ಸ್ಥಾಪಿಸಿದ ಸಂಸ್ಥೆ ಇದನ್ನು ಮುಂದುವರಿಸಿದೆ.
ಮಂಗಳೂರಿನ ಚಿಲಿಂಬಿಯಲ್ಲಿ ಕುರುಡ ಮಕ್ಕಳ ಶಾಲೆಯಿದೆ. ಅತ್ತಾವರದಲ್ಲಿ ಕುರುಡರ ತರಬೇತಿಗೆ ಮೀಸಲಾದ ಕೇಂದ್ರವಿದೆ. ಅವರ ಕಷ್ಟ, ಅವರ ಕಣ್ಣೀರು ಒರಸುವ ಅಗತ್ಯ ತಿಳಿಯಲಿಕ್ಕಾಗಿ, ಅಲ್ಲಿಗೆ ಭೇಟಿ ನೀಡಬೇಕು ನಾವು.
ಇತರರಿಗೆ ಸಂತೋಷ ನೀಡುವುದು ಸುಲಭದ ಕೆಲಸವಲ್ಲ. ಆದರೆ ಪರರನ್ನು ನಗಿಸಲು, ಹುರಿದುಂಬಿಸಲು ನೂರಾರು ದಾರಿಗಳಿವೆ. ಇದಕ್ಕಾಗಿ ನಾವು ಹಣ ಖರ್ಚು ಮಾಡಬೇಕಾಗಿಲ್ಲ. ವಾರ್ಷಿಕ ಪರೀಕ್ಷೆಗೆ ಹೋಗುತ್ತಿರುವ ಮಕ್ಕಳಿಗೆ “ಇವತ್ತು ಪರೀಕ್ಷೆ ಸುಲಭವಿರುತ್ತದೆ” ಎಂದು ಹೇಳಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಕ್ಕದ ಮನೆಯವರಿಗೆ “ನೀವು ಬೇಗ ಹುಷಾರಾಗುತ್ತೀರಿ” ಎಂದರೆ ಸಾಕು. ಅವರ ಮುಖದಲ್ಲಿ ಮೆಲುನಗು ಅರಳುತ್ತದೆ.
ವಾರಕ್ಕೊಂದು ಗಂಟೆ ಅನಾಥಾಲಯದ ಮಕ್ಕಳಿಗೆ ಪಾಠ ಮಾಡಲು ಅಥವಾ ವೃದ್ಧಾಶ್ರಮದ ಹಿರಿಯರ ಜೊತೆ  ಮಾತಾಡಲು ಯಾವುದೇ ಖರ್ಚಿಲ್ಲ. ಇವು ಪ್ರೀತಿಯಿಂದ ಮಾಡುವ ಕೆಲಸಗಳು. ದೀಪದಿಂದ ದೀಪ ಹಚ್ಚುವ ಕೆಲಸಗಳು.