ಕಗ್ಗ ದರ್ಶನ – 9 (1)
ಬಾಳಿನೊಳಕಿಚ್ಚು ದೆಸೆದೆಸೆಗುರಿಯ ಚಾಚುತಿರೆ
ಕಾಲನೆನ್ನುವ ಹುಚ್ಚ ಮಣ್ಣನೆರಚುತಿರೆ
ಧೂಳು ಹೊಗೆಗಳ ಹೊರತು ಜಗದಿ ಬೇರಿಲ್ಲದಿರೆ
ಮೇಲೇನು? ಬೀಳೇನು? – ಮಂಕುತಿಮ್ಮ
ನಮ್ಮ ಬದುಕನ್ನೊಮ್ಮೆ ಅವಲೋಕಿಸಿದರೆ ಏನು ಕಾಣಿಸುತ್ತದೆ? ಬಾಳಿನೊಳಗಿನ ಬೆಂಕಿ ದಿಕ್ಕುದಿಕ್ಕುಗಳಿಗೆ ತನ್ನ ಜ್ವಾಲೆ ಹಬ್ಬಿಸುವ ನೋಟ. ಬೆಳೆಸಿದ ಬೆಳೆ ಅತಿ ಮಳೆಯಿಂದ ಅಥವಾ ಕಡಿಮೆ ಮಳೆಯಿಂದ ಹಾಳಾದ ನೋವು. ವ್ಯವಹಾರದಲ್ಲಾದ ನಷ್ಟ. ನಂಬಿದವರಿಂದಾದ ಮೋಸ. ಅಕ್ಕಪಕ್ಕದ ಮನೆಯವರ ಕಿರುಕುಳ. ಬಂಧುಗಳಿಂದ ಅವಹೇಳನ. ಸಹೋದ್ಯೋಗಿಗಳಿಂದ ಅವಮಾನ. ಕಚೇರಿಯಲ್ಲಿ ವಿಪರೀತ ಕೆಲಸದ ಒತ್ತಡ. ಹೊಟ್ಟೆಬಟ್ಟೆಗೂ ಸಾಲದ ಆದಾಯ. ಕೆಲಸದಿಂದ ವಜಾ. ಗುಣವಾಗದ ರೋಗ. ಹೀಗೆ ಬದುಕೆಂಬುದು ಬೆಂಕಿಯ ಮೇಲಣ ನಡಿಗೆ. ಮತ್ತೆಮತ್ತೆ ಮೇಲೇಳುವ ಅದರ ಉರಿಯಲ್ಲಿ ಸುಟ್ಟುಕೊಳ್ಳುವುದೇ ನಮ್ಮ ಪಾಡು.
“ಒಳ್ಳೆಯ ದಿನಗಳು ಬಂದಾವು” ಎಂಬೊಂದು ಆಶೆ ಹೊತ್ತುಕೊಂಡು ದಿನದೂಡುತ್ತೇವೆ. ಆದರೆ ದಿನಗಳೆದಂತೆ ಏನಾಗುತ್ತದೆ? ಪ್ರಾಯಕ್ಕೆ ಬಂದ ಮಕ್ಕಳು ಚೆನ್ನಾಗಿ ಕಲಿಯುವುದಿಲ್ಲ. ಅವರು ದುಶ್ಚಟಗಳಿಗೆ ಬಲಿಯಾಗಿ ಹಣವೂ ಹಾಳು, ಆರೋಗ್ಯವೂ ನಾಶ. ಮಗಳು ಯಾರೊಂದಿಗೋ ಓಡಿ ಹೋದ ಚಿಂತೆ.; ಅನಂತರ ಎಲ್ಲವನ್ನೂ ಕಳಕೊಂಡು ಅವಳು ವಾಪಾಸು ಬಂದ ದುಃಖ. ಮಗ ಹೇಳದೆಕೇಳದೆ ಮನೆಬಿಟ್ಟು ಹೋದ ಸಂಕಟ. ವಯಸ್ಸಾದರೂ ಸ್ವಂತ ಮನೆ ಕಟ್ಟಲಾಗದ ಹತಾಶೆ. ಏರುತ್ತಿರುವ ಸಾಲದ ಭಾರ. ಮುದಿ ತಂದೆತಾಯಿಯರ ಅನಾರೋಗ್ಯದ ಸಮಸ್ಯೆ. ಅವರು ಏಳಲಾಗದೆ ಮಲಗಿದರಂತೂ ದಿಕ್ಕು ತೋಚದ ಸ್ಥಿತಿ. ಅಪಘಾತದಲ್ಲಿ ಸಿಲುಕಿದರಂತೂ ಹೇಳಲಾಗದ ತೊಂದರೆ. ಹೀಗೆ ಬದುಕಿನಲ್ಲಿ ಒಳ್ಳೆಯ ದಿನಗಳನ್ನು ಕಾಣುವ ನಮ್ಮ ಆಶೆ ಕಾಲನೆಂಬ ಹುಚ್ಚ ಎರಚುವ ಮಣ್ಣಿನಲ್ಲಿ ಮುಚ್ಚಿ ಹೋಗುತ್ತದೆ ಎನ್ನುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು.
ಮುಂದೆ ಹೋಗಬೇಕು ಎಂಬ ಹಂಬಲ. ಆದರೆ ಹಾದಿಯಲ್ಲಿ ಧೂಳು ಹಾಗೂ ಹೊಗೆ ತುಂಬಿದ್ದರೆ ಮುಂದೆ ಸಾಗುವುದೆಂತು? ಮುಂದೇನೂ ಕಾಣಿಸದಿದ್ದಾಗ ಮುನ್ನಡಿ ಇಡುವುದೆಂತು? ಇಂತಹ ಸ್ಥಿತಿಯಲ್ಲಿ ಮೇಲೇನು? ಬೀಳೇನು? ಕತ್ತಲಿನ ಬಾಳಿನಲ್ಲಿ ಗೆಲುವೇನು? ಸೋಲೇನು?