ಕಗ್ಗ ದರ್ಶನ - 37(2)
ಧಾನ್ಯವುಂಡಿಹ ಹೊಟ್ಟೆ ತುಂಬಿ ತೇಗುವುದೊಡನೆ
ನಾಣ್ಯ ಸಂಚಿಕೆಗಂತು ತಣಿವಪ್ಪುದುಂಟೆ
ಪಣ್ಯವಾಗಿಸಿತೆಲ್ಲ ಮನುಜ ಬಂಧುತೆಯ ಹಣ
ಸನ್ನೆಯದು ಕಲಿದೊರೆಗೆ - ಮರುಳ ಮುನಿಯ
ಆಹಾರ ತಿಂದು ಹೊಟ್ಟೆ ತುಂಬಿದೊಡನೆ ತೃಪ್ತಿಯಿಂದ ತೇಗು ಬರುತ್ತದೆ. ಆದರೆ ಕೋಟಿಗಟ್ಟಲೆ ರೂಪಾಯಿ ಹಣ - ಸಂಪತ್ತು ಸಂಗ್ರಹಿಸಿ(ನಾಣ್ಯ ಸಂಚಿಕೆ)ದರೂ ಮನುಷ್ಯನಿಗೆ ತೃಪ್ತಿ (ತಣಿವು) ಸಿಗುತ್ತದೆಯೇ? ಈ ಹಣ (ಸಂಪತ್ತು) ಎಂಬುದು ಮನುಷ್ಯ-ಮನುಷ್ಯರ ಸಂಬಂಧಗಳನ್ನೇ ವ್ಯಾಪಾರ(ಪಣ್ಯ)ವನ್ನಾಗಿ ಮಾಡಿದೆ. ಇದು ಕಲಿಯುಗದ ಕಲಿದೊರೆಯ ಪ್ರವೇಶಕ್ಕೆ ದಾರಿಯೊದಗಿಸಿದೆ ಎಂದು ಸಂಪತ್ತು ಸಂಗ್ರಹದ ಅನಾಹುತವನ್ನು ಈ ಮುಕ್ತಕದಲ್ಲಿ ವಿವರಿಸಿದ್ದಾರೆ ಮಾನ್ಯ ಡಿವಿಜಿಯವರು.
ಇಂದು ಮಾನವ ಸಂಬಂಧಗಳಲ್ಲಿ ಆತ್ಮೀಯತೆ ಕಡಿಮೆಯಾಗುತ್ತಿದೆ ಅಥವಾ ಮಾಯವಾಗುತ್ತಿದೆ. ಬಹುಪಾಲು ಸಂಬಂಧಗಳನ್ನು ವ್ಯವಹಾರದ ರೀತಿಯಲ್ಲಿ ಮುಂದುವರಿಸಲಾಗುತ್ತಿದೆ. ಇವನಿಂದ ಅಥವಾ ಇವಳಿಂದ ನನಗೇನು ಲಾಭ? ಎಂಬ ಲೆಕ್ಕಾಚಾರವೇ ಮುಖ್ಯವಾಗುತ್ತಿದೆ. ಯಾಕೆಂದರೆ ಎಲ್ಲದರಲ್ಲಿಯೂ ಲಾಭ ಮಾಡಿಕೊಂಡು ಸಂಪತ್ತು ಗುಡ್ಡೆ ಹಾಕುವ ಹುನ್ನಾರ.
ಫೆಬ್ರವರಿ ೧, ೨೦೧೭ರಂದು ಕೇಂದ್ರ ಸರಕಾರದ ವಿತ್ತ ಸಚಿವರು ಮಂಡಿಸಿದ ಕೇಂದ್ರ ಬಜೆಟಿನ ಕೆಲವು ಆರ್ಥಿಕ ನಿಯಂತ್ರಣದ ಕ್ರಮಗಳಿಂದಾಗಿ ಇಂತಹ ಪ್ರವೃತ್ತಿಗಳಿಗೆ ಕಡಿವಾಣ ಬೀಳಬಹುದು. ರೂ.೫೦ ಲಕ್ಷದಿಂದ ರೂಪಾಯಿ ಒಂದು ಕೋಟಿ ವಾರ್ಷಿಕ ಆದಾಯ ಹೊಂದಿದವರಿಗೆ ಶೇಕಡಾ ೩೦ ಆದಾಯ ತೆರಿಗೆ ಮತ್ತು ಶೇಕಡಾ ೧೦ ಹೆಚ್ಚುವರಿ ತೆರಿಗೆ (ಸರ್ಚಾರ್ಜ್) ವಿಧಿಸಲಾಗಿದೆ. ರೂಪಾಯಿ ಒಂದು ಕೋಟಿಗಿಂತ ಅಧಿಕ ಅಧಿಕ ವಾರ್ಷಿಕ ಆದಾಯ ಇರುವವರಿಗೆ ಶೇಕಡಾ ೩೦ ಆದಾಯ ತೆರಿಗೆ ಮತ್ತು ಶೇಕಡಾ ೧೫ ಹೆಚ್ಚುವರಿ ತೆರಿಗೆ ಮುಂದುವರಿಸಲಾಗಿದೆ.
ರೂಪಾಯಿ ಮೂರು ಲಕ್ಷಕ್ಕಿಂತ ಹೆಚ್ಚಿನ ಹಣವನ್ನು ನಗದು ರೂಪದಲ್ಲಿ ಪಾವತಿಸುವುದನ್ನು ನಿಷೇಧಿಸಲಾಗುವುದು. ಇದರಿಂದಾಗಿ, ಜಮೀನು ಹಾಗೂ ಸ್ಥಿರ ಆಸ್ತಿ ಖರೀದಿಗಾಗಿ ಲಕ್ಷಗಟ್ಟಲೆ ಕೋಟಿಗಟ್ಟಲೆ ರೂಪಾಯಿಗಳನ್ನು ನಗದು ರೂಪದಲ್ಲಿ ಪಾವತಿಸುವುದು ಮತ್ತು ಬೇನಾಮಿ ವ್ಯವಹಾರ ಮಾಡುವುದು ಇನ್ನು ಸುಲಭವಿಲ್ಲ. ಹಾಗೆಯೇ ಉದ್ಯಮಿ ವಿಜಯ ಮಲ್ಯ ಅವರಂತೆ (ಬ್ಯಾಂಕುಗಳುಗೆ ಸುಮಾರು ರೂ.೭,೦೦೦ ಕೋಟಿ ಸಾಲ ಬಾಕಿ ಮಾಡಿದ್ದಾರೆ.) ಹಣಕಾಸು ವಂಚನೆ ಆರೋಪಿಗಳು ದೇಶ ಬಿಟ್ಟು ಪಲಾಯನ ಮಾಡುವುದನ್ನು ತಡೆಯುವುದಕ್ಕಾಗಿ ಅಂಥವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸರಕಾರ ಕಾಯಿದೆ ರೂಪಿಸಲಿದೆ. ರಾಜಕೀಯ ಪಕ್ಷಗಳು ದೇಣಿಗೆಯಾಗಿ ಕೋಟಿಗಟ್ಟಲೆ ರೂಪಾಯಿ ಕೂಡಿ ಹಾಕುವುದಕ್ಕೂ ಈ ಬಜೆಟಿನ ಪ್ರಸ್ತಾಪದಿಂದಾಗಿ ಲಗಾಮು ಬಿದ್ದಿದೆ. ಯಾಕೆಂದರೆ, ರಾಜಕೀಯ ಪಕ್ಷಗಳು ರೂ.೨,೦೦೦ಕ್ಕಿಂತ ಹೆಚ್ಚಿನ ದೇಣಿಗೆಯನ್ನು ಚೆಕ್ ಅಥವಾ ಡಿಜಿಟಲ್ ಪಾವತಿ ಮೂಲಕ ಮಾತ್ರ ಪಡೆಯತಕ್ಕದ್ದು. ಜೊತೆಗೆ ರೂ.೨೦,೦೦೦ಕ್ಕಿಂತ ಅಧಿಕ ದೇಣಿಗೆ ನೀಡುವವರ ಮಾಹಿತಿ ಕೊಡುವುದು ಕಡ್ಡಾಯ. ಎಲ್ಲ ರಾಜಕೀಯ ಪಕ್ಷಗಳು ವಾರ್ಷಿಕ ತೆರಿಗೆ ರಿಟರ್ನ್ ಸಲ್ಲಿಸಬೇಕು. ಈ ಕ್ರಮಗಳಿಂದಾಗಿ, ಅಪಾರ ಸಂಪತ್ತು ಸಂಗ್ರಹಿಸುವ ಪ್ರವೃತ್ತಿ ಕಡಿಮೆಯಾಗಲೆಂದು ಹಾರೈಸೋಣ.