ಕಗ್ಗ ದರ್ಶನ 39(2)
ಸಿಹಿಯಾಗಿ ನಾಲಗೆಗೆ ಹುಳಿಯಾಗಿ ಹಲ್ಗಳಿಗೆ
ಕಹಿಯಾಗಿ ಗಂಟಲಿಗೆ ಮೆಣಸಾತ್ಮಕಾಗಿ
ಬಹುವಿಧದ ಸವಿ ನೋಡು ಸಂಸಾರ ವೃಕ್ಷಫಲ
ಸಹಿಸದನು ವಹಿಸದನು - ಮರುಳ ಮುನಿಯ
ನಮ್ಮ ಬದುಕಿನಲ್ಲಿ ನಾಲಗೆಗೆ ಸಿಹಿ, ಹಲ್ಲುಗಳಿಗೆ ಹುಳಿ, ಗಂಟಲಿಗೆ ಕಹಿ, ಆತ್ಮಕ್ಕೆ ಮೆಣಸಿನಂತೆ ಖಾರ - ಇಂತಹ ಬಹುವಿಧದ ಸವಿ ನೀಡುತ್ತದೆ ಸಂಸಾರವೆಂಬ ವೃಕ್ಷಫಲ. ಇವನ್ನೆಲ್ಲ ಸಹಿಸಿಕೊಳ್ಳಬೇಕು, ಜೊತೆಗೆ ಸಂಸಾರ ವೃಕ್ಷದ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಮಾನ್ಯ ಡಿ.ವಿ.ಜಿ.ಯವರು ಸಂಸಾರದ ಬಗೆಗಿನ ನಮ್ಮ ಧೋರಣೆ ಹೇಗಿರಬೇಕೆಂದು ಸರಳವಾಗಿ ವಿವರಿಸುತ್ತಾರೆ.
ಮಹಾನ್ ಕಾದಂಬರಿಕಾರ ಎಸ್.ಎಲ್. ಭೈರಪ್ಪನವರ ಆತ್ಮಕತೆ “ಭಿತ್ತಿ" ಓದಿದರೆ ಈ ಮುಕ್ತಕದ ಭಾವ ನಮ್ಮನ್ನು ತಟ್ಟುತ್ತದೆ. ಅವರ ತಾಯಿ ತೀರಿಕೊಂಡ ಸಂದರ್ಭದಲ್ಲಿ ಅವರ ತಂದೆಯ ನಡವಳಿಕೆ, ಅವರ ತಾಯಿಯ ಅಂತ್ಯಕ್ರಿಯೆಯ ವಿವರ ನಮ್ಮನ್ನು ಬೆಚ್ಚಿಬೀಳಿಸುತ್ತದೆ. “ಸಹಿಸದನು ವಹಿಸದನು” ಎಂಬ ಮಾತಿನ ಆಳ-ಅಗಲ ತಿಳಿಯುತ್ತದೆ.
ಚಿಂತಕ ರಾಮದಾಸ್ ಅವರ ಆತ್ಮಕತೆ “ಎಳನಿಂಬೆ". ಇದನ್ನು ಓದಿದಾಗಲೂ ಅದೇ ಮಾತಿನ ವ್ಯಾಪ್ತಿ ಅಂದಾಜಾಗುತ್ತದೆ. ಮೈಸೂರಿನ ದಸರಾ ಸಮಯದಲ್ಲಿ ಇವರೂ ತಮ್ಮನೂ ಪೆಂಡಾಲ್ ಹೋಟೆಲಿನಲ್ಲಿ ದಿನಗೂಲಿಗಾಗಿ ದುಡಿಯುತ್ತಿದ್ದರು. ಅದೊಂದು ದಿನ, ಇವರ ತಮ್ಮ ಕುದಿಯುತ್ತಿದ್ದ ಹಾಲಿನ ಕಡಾಯಿಯೊಳಗೆ ಬಿದ್ದು, ಮೈಯೆಲ್ಲಾ ಸುಟ್ಟು ಹೋಗುತ್ತದೆ. ಆತನನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದರೂ ಅಲ್ಲಿನ ವೈದ್ಯರು ಎರಡು ದಿನ ಚಿಕಿತ್ಸೆ ನೀಡುವುದಿಲ್ಲ - ಲಂಚ ಕೊಡಲಿಲ್ಲ ಎಂಬ ಕಾರಣಕ್ಕಾಗಿ. ಆ ವೈದ್ಯರಿಗೆ ಕೊಡಲಿಕ್ಕೆ ದುಡ್ಡು ಬೇಕೆಂದು ಅಮ್ಮ ಕೇಳಿದಾಗ, ಎಸ್.ಎಸ್.ಎಲ್.ಸಿ. ಪರೀಕ್ಷೆಯ ಶುಲ್ಕಕ್ಕಾಗಿ ತೆಗೆದಿಟ್ಟಿದ್ದ ದುಡ್ಡನ್ನೇ ಕೊಟ್ಟು, ಆ ವರುಷವೂ ಪರೀಕ್ಷೆಗೆ ಹಾಜರಾಗುವ ಅವಕಾಶವನ್ನು ಕಳೆದುಕೊಳ್ಳುತ್ತಾರೆ ರಾಮದಾಸ್.
ನವಕರ್ನಾಟಕ ಪ್ರಕಾಶನದ “ವಿಶ್ವಕಥಾ ಕೋಶ”ದ ೨೫ ಸಂಪುಟಗಳಲ್ಲಿ ವಿವಿಧ ದೇಶಗಳ ಕತೆಗಳಿವೆ. ಅವನ್ನು ಓದುತ್ತ ಹೋದಂತೆ ಎಲ್ಲ ದೇಶಗಳಲ್ಲಿಯೂ ಜನಸಾಮಾನ್ಯರ ಬದುಕು ನೋವುನಲಿವುಗಳಿಂದ ತುಂಬಿದೆ ಎಂಬುದು ಸ್ಪಷ್ಟವಾಗುತ್ತದೆ. ಎಲ್ಲ ದೇಶಗಳಲ್ಲಿ ಎಲ್ಲ ಕಾಲದಲ್ಲಿಯೂ ಸಂಸಾರ ವೃಕ್ಷಫಲದ ವಿಭಿನ್ನ “ಸವಿ"ಗಳನ್ನು ಜನಸಾಮಾನ್ಯರು ಸಹಿಸಿಕೊಂಡು, ಸಂಸಾರದ ಜವಾಬ್ದಾರಿ ವಹಿಸಿಕೊಂಡ ಅಲ್ಲಿ ಜನಜೀವನವು ನಿರಂತರವಾಗಿ ನದಿಯಂತೆ ಹರಿದು ಬಂದಿದೆ ಎಂಬುದು ಅರ್ಥವಾಗುತ್ತದೆ.