ಕಗ್ಗ ದರ್ಶನ - 42 (2)
ಬೆತ್ತಲೆಯೆ ನೀಂ ಬಂದೆ ಬೆತ್ತಲೆಯೆ ನೀಂ ಪೋಪೆ
ವಸ್ತ್ರವೇಷಗಳೆಲ್ಲ ನಡುವೆ ನಾಲ್ಕು ದಿನ
ಚಟ್ಟಕೆ ನಿನ್ನನೇರಿಪ ಮುನ್ನ ನೀನಾಗಿ
ಕಿತ್ತೆಸೆಯೊ ಕಂತೆಗಳ – ಮರುಳ ಮುನಿಯ
ಈ ಭೂಮಿಗೆ ನೀನು ಬಂದದ್ದು ಬೆತ್ತಲಾಗಿ, ಇಲ್ಲಿಂದ ಹೋಗುವುದೂ ಬೆತ್ತಲಾಗಿ ಎಂಬ ದೊಡ್ಡ ಸತ್ಯವನ್ನು ಜ್ನಾಪಿಸುತ್ತಾರೆ ಮಾನ್ಯ ಡಿವಿಜಿಯವರು. ಹುಟ್ಟು-ಸಾವುಗಳ ನಡುವಿನ ನಾಲ್ಕು ದಿನ ಮಾತ್ರ ನಿನ್ನ ವಸ್ತ್ರವೇಷಗಳ ಸಡಗರ. ಕೊನೆಗೊಂದು ದಿನ ಬಂದೇ ಬರುತ್ತದೆ – ಸಾವಿನ ಮನೆಗೆ ಕಾಲಿಟ್ಟ ನಿನ್ನನ್ನು ಚಟ್ಟಕ್ಕೆ ಏರುಸುವ ದಿನ. ಆ ಮುನ್ನ ನೀನಾಗಿಯೇ ನಿನ್ನ ಬದುಕಿನ ಕಂತೆಗಳನ್ನೆಲ್ಲ ಕಿತ್ತೆಸೆ ಎಂಬ ನೇರನುಡಿ ಡಿವಿಜಿಯವರದು.
ಅವನ ಹೆಸರು ವರ್ಷಿಲ್ ಷಾ. ಆದಾಯ ತೆರಿಗೆ ಅಧಿಕಾರಿ ಜಿಗಾರ್ ಷಾ ಮತ್ತು ಅಮಿ ಬೆನ್ ಅವರ ಮಗ. ಆತ ಕಲಿತದ್ದು ಅಹ್ಮದಾಬಾದಿನ ಶಾರದಾ ಮಂದಿರ ಶಾಲೆಯಲ್ಲಿ. ಹತ್ತನೆಯ ತರಗತಿಯ ನಂತರ ನವ್ಕಾರ್ ಪಬ್ಲಿಕ್ ಶಾಲೆ ಸೇರಿದ. ೧೨ನೆಯ ತರಗತಿ (ಅಂತಿಮ ಪಿಯುಸಿ) ಅಂತಿಮ ಪರೀಕ್ಷೆಗಳ ನಂತರ ೨೧ ಎಪ್ರಿಲ್ ೨೦೧೭ರಂದು ಸೂರತಿಗೆ ಹೋದ. ಅಲ್ಲಿನ ಉಪಾಶ್ರಮದಲ್ಲಿ (ಜೈನ ಮುನಿಗಳು ಮತ್ತು ಸನ್ಯಾಸಿನಿಯರು ವಾಸಿಸುವ ಸ್ಥಳ) ಇರತೊಡಗಿದ.
ಗುಜರಾತಿನ ಎಚ್ಎಸ್ಸಿ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಪ್ರಕಟವಾದ ದಿನ, ವರ್ಷಿಲ್ ಗುಜರಾತಿನಲ್ಲಿ ಅಗ್ರಸ್ಥಾನ ಪಡೆದಿದ್ದ; ಶೇಕಡಾ ೯೯.೯೯ ಅಂಕ ಗಳಿಸಿದ್ದ. ಅಂದೇನಾಯಿತೆಂದು ನವ್ಕಾರ್ ಪಬ್ಲಿಕ್ ಶಾಲೆಯ ಪ್ರಿನ್ಸಿಪಾಲ್ ವ್ರಜೇಶ್ ಪಾರಿಕ್ ಅವರ ಮಾತುಗಳಲ್ಲೇ ಕೇಳಿ: “ನಾವು ಪತ್ರಿಕಾ ಪ್ರಕಟಣೆ ಕೊಡಲಿಕ್ಕಾಗಿ ಎಲ್ಲವನ್ನೂ ರೆಡಿ ಮಾಡಿದ್ದೆವು: ಅವನ ಫೋಟೋಗ್ರಾಫ್, ಮಾರ್ಕ್ ಕಾರ್ಡ್. ಆದರೆ ಮಾರ್ಕ್ ಕಾರ್ಡ್ ಅಥವಾ ಶಾಲೆಯ ಸರ್ಟಿಫಿಕೇಟ್ ತಗೊಳ್ಳಲು ವರ್ಷಿಲ್ ಬರಲೇ ಇಲ್ಲ….”
ಯಾಕೆಂದರೆ, ೧೭ ವರ್ಷ ವಯಸ್ಸಿನ ವರ್ಷಿಲ್ ಎಲ್ಲವನ್ನೂ ಕಿತ್ತೆಸೆದು, ವೈರಾಗ್ಯದ ಹಾದಿಗೆ ತಿರುಗಿದ್ದ. ಜೈನ ಸನ್ಯಾಸಿಯಾಗಲು ನಿರ್ಧರಿಸಿದ್ದ. ಜೈನ ಸನ್ಯಾಸಿಯರು ಕಠೋರ ಶಿಸ್ತಿನಲ್ಲಿ ಬಾಳಬೇಕು. ಬರಿಗಾಲಿನಲ್ಲಿ ನಡೆಯಬೇಕು. ಹತ್ತಿಯ ಬಿಳಿ ಬಟ್ಟೆ ಮಾತ್ರ ತೊಡಬೇಕು. ಸ್ನಾನ ಮಾಡಬಾರದು. ದಿನಕ್ಕೊಂದೇ ಊಟ ಉಣ್ಣಬೇಕು – ಅದೂ ದಿನಕ್ಕೊಂದೇ ಮನೆಗೆ ಹೋಗಿ, ಆ ಮನೆಯವರು ಕೊಟ್ಟದ್ದನ್ನು ಗುರುಗಳಿಗರ್ಪಿಸಿ, ಅವರಿತ್ತದ್ದನ್ನು ಮಾತ್ರ.
ವರ್ಷಿಲ್ ಷಾ ಜೈನ ಸನ್ಯಾಸಿ ದೀಕ್ಷೆ ಪಡೆದದ್ದು ೮ ಜೂನ್ ೨೦೧೭ರಂದು. ದೀಕ್ಷೆಯ ಅಂಗವಾಗಿ ಆತ ತನ್ನ ತಲೆಗೂದಲನ್ನೆಲ್ಲ ತಾನೇ ಕೈಯಿಂದ ಕಿತ್ತು ಕೊಂಡಿದ್ದ. “..ಕಿತ್ತೆಸೆಯೊ ಕಂತೆಗಳ” ಎಂಬುದಕ್ಕೆ ಎಂತಹ ಉದಾಹರಣೆ!