ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯ ಕೋರುತ್ತಾ... ಈ ವಾರವೂ ನವರಾತ್ರಿ ಹಬ್ಬದ ವಿಶೇಷವಾಗಿ ಶ್ರೀದೇವಿಯರ ದೇಗುಲದ ದರ್ಶನದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯ ದರ್ಶನ ಪಡೆಯೋಣವೇ...?
ಕಟೀಲು ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ, ಪುಣ್ಯಸ್ಥಳಗಳಲ್ಲಿ ಒಂದು. ನಂದಿನಿ ನದಿಯ ದಂಡೆಯ ಮೇಲಿರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲೊಂದು. ಜಿಲ್ಲೆಯ ಅನೇಕ ದೇವಾಲಯಗಳಂತೆ ಕಟೀಲು ದೇಗುಲವೂ ವಿದ್ಯಾದಾನ ಮತ್ತು ಅನ್ನದಾನಗಳ ಮೂಲಕ ಪೂಜನೀಯ ಕಾರ್ಯ ನಡೆಸುತ್ತಿದೆ.
ಪವಿತ್ರವಾದ ನಂದಿನಿ ನದಿಯ ಮಧ್ಯದಲ್ಲಿ, ಐತಿಹಾಸಿಕ ದೃಶ್ಯಾವಳಿಗಳ ಮತ್ತು ಆಕರ್ಷಣೀಯ ಹಚ್ಚ ಹಸಿರಿನ ವನಸಿರಿಯ ಮಧ್ಯೆ ಇರುವ ಪವಿತ್ರ ದೇವಾಲಯವಾಗಿದೆ. ದುರ್ಗಾಪರಮೇಶ್ವರಿ ದೇವಿಯ ಆಶೀರ್ವಾದ ಪಡೆಯಲು ಪ್ರತಿನಿತ್ಯ ಸಹಸ್ರಾರು ಭಕ್ತಾದಿಗಳು ಕಟೀಲಿಗೆ ಭೇಟಿ ನೀಡುತ್ತಾರೆ. ಈ ದೇವಾಲಯವು ನಂದಿನಿ ಎಂಬ ಒಂದು ಪುಟ್ಟ ನದಿಯ ಮಧ್ಯದಲ್ಲಿರುವ ಒಂದು ಸಣ್ಣ ದ್ವೀಪದಲ್ಲಿ ನೆಲೆಗೊಂಡಿದೆ. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ನಂದಿನಿ ನದಿಯ ಮಧ್ಯ ಭಾಗದಲ್ಲಿರುವುದು ಈ ಕ್ಷೇತ್ರದ ವಿಶೇಷತೆ. ಸಂಸ್ಕೃತದಲ್ಲಿ ಕಟಿ ಎಂದರೆ ಮಧ್ಯ ಮತ್ತು ಇಳೆ ಎಂದರೆ ಭೂಮಿ ಆದ್ದರಿಂದ ಈ ಸ್ಥಳವನ್ನು ಕಟೀಲು ಎಂದು ಕರೆಯಲಾಗುತ್ತದೆ.
ಪುರಾಣಗಳ ಪ್ರಕಾರ ಜಾಬಾಲಿ ಮಹರ್ಷಿಯ ಶಾಪದಿಂದ ಇಂದ್ರನ ಬಳಿಯಿದ್ದ ಕಾಮಧೇನುವಿನ ಮಗಳು ನಂದಿನಿ ನದಿಯಾಗಿ ಹರಿಯುತ್ತಾಳೆ. ದುರ್ಗಾದೇವಿಯನ್ನು ಪ್ರಾರ್ಥಿಸಿದರೆ ಶಾಪ ವಿಮೋಚನೆಗೆ ಮಾರ್ಗ ಸೂಚಿಸುತ್ತಾಳೆಂದು ಜಾಬಾಲಿ ಮಹರ್ಷಿ ಸೂಚಿಸುತ್ತಾರೆ. ನಂದಿನಿ ನದಿ ಶಾಪವಿಮೋಚನೆಗಾಗಿ ದುರ್ಗಾಪರಮೇಶ್ವರಿಯಲ್ಲಿ ಪ್ರಾರ್ಥಿಸಿದಾಗ ನಂದಿನಿ ನದಿಯಲ್ಲಿ ತಾನೇ ಹುಟ್ಟಿ ಶಾಪ ವಿಮೋಚನೆ ಮಾಡುತ್ತಾಳೆ. ಇದೇ ನಂದಿನಿ ನದಿಯ ಮಧ್ಯಭಾಗದಲ್ಲಿರುವ ದುರ್ಗಾಪರಮೇಶ್ವರಿ ದೇವಾಲಯದ ಪೌರಾಣಿಕ ಹಿನ್ನೆಲೆ.
ಇಲ್ಲಿ ವಾರ್ಷಿಕ ಉತ್ಸವ, ಲಕ್ಷದೀಪೋತ್ಸವ, ನವರಾತ್ರಿ ಉತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ದೇವಾಲಯವು ಶಿಕ್ಷಣ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪ್ರಥಮ ದರ್ಜೆ ಕಾಲೇಜು ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರಗಳು ಇವೆ. ಈ ದೇವಾಲಯವು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಉಚಿತ ಊಟವನ್ನು ನೀಡುತ್ತದೆ.
ಶ್ರೀ ಕಟೀಲು ಯಕ್ಷಗಾನ ಮೇಳ ಒಂದು ಪ್ರಸಿದ್ಧ ಯಕ್ಷಗಾನ ತಂಡ. ಕಟೀಲು ಮೇಳ ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಈ ಯಕ್ಷಗಾನ ತಂಡವು ಒಂದು ಪ್ರಮುಖ ‘ಹರಕೆ ಸೇವಾ’ ತಂಡವಾಗಿದೆ. ಈ ಯಕ್ಷಗಾನ ಮೇಳಕ್ಕೆ ಅದರದ್ದೆ ಆದಂತಹ ಪಾವಿತ್ರ್ಯತೆಯ ಇತಿಹಾಸ ಹೊಂದಿದೆ. ಕರಾವಳಿಯ ಗಂಡುಕಲೆ, ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನವನ್ನು ಮುಂದಿನ ಪೀಳಿಗೆಗೆ ಕರೆದೊಯ್ಯುವ ಸಲುವಾಗಿ ಶ್ರೀ ದುರ್ಗಾ ಮಕ್ಕಳ ಯಕ್ಷಗಾನ ಮೇಳವು ಅರ್ಥಪೂರ್ಣ ಕಾರ್ಯವನ್ನ ಮಾಡುತ್ತಿದೆ. ಇಲ್ಲಿ 6 ಯಕ್ಷಗಾನ ತಂಡಗಳಿದ್ದು - ಇದೊಂದು ದಾಖಲೆಯೇ ಆಗಿದೆ. ಇದರಲ್ಲಿ 400ಕ್ಕೂ ಹೆಚ್ಚು ರಂಗಕರ್ಮಿಗಳು - ಕಲಾವಿದರು ಹಾಗೂ ಇತರರು ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ಸರ್ವ ವಿಧದ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಶ್ರೀದುರ್ಗಾಪರಮೇಶ್ವರಿಯ ಆಶೀರ್ವಾದದೊಂದಿಗೆ ಮೂರ್ತರೂಪ ತಾಳಿರುವುದು ನಾವು ನೋಡಬಹುದಾಗಿದೆ. ಈ ಪುಣ್ಯಕ್ಷೇತ್ರವು ಮುಲ್ಕಿಯಿಂದ 12 ಕಿ. ಮೀ, ಮೂಡಬಿದರಿಯಿಂದ 17 ಕಿ. ಮೀ, ಉಡುಪಿಯಿಂದ 43 ಕಿ. ಮೀ ಹಾಗೂ ಮಂಗಳೂರಿನಿಂದ 20 ಕಿ. ಮೀಟರ್ ದೂರದಲ್ಲಿದ್ದು, ರಸ್ತೆಯ ಮೂಲಕ ಪ್ರಯಾಣಿಸಬಹುದು ಹಾಗೂ ರೈಲಿನ ಮೂಲಕ ಉಡುಪಿ ಮತ್ತು ಮಂಗಳೂರಿನಿಂದಲೂ ಪ್ರಯಾಣಿಸಬಹುದಾಗಿದೆ. ವಿಮಾನ ಮೂಲಕ ಪ್ರಯಾಣಿಸುವುದಾದರೆ ಬಜ್ಪೆ ವಿಮಾನ ನಿಲ್ದಾಣ ಹತ್ತಿರವಿದೆ.
ನಮಸ್ತೇ ಶರಣ್ಯ ಶಿವೇ ಸಾನುಕಂಪೇ ನಮಸ್ತೇ ಜಗದ್ವಾಪಿಕೇ ವಿಶ್ವರೂಪೇ |
ನಮಸ್ತೇ ಜಗದ್ವಂದ್ಯಪಾದಾರವಿಂದೇ ನಮಸ್ತೇ ಜಗತ್ತಾರಿಣಿ ತ್ರಾಹಿ ದುರ್ಗೇ |
"ಧಾರ್ಮಿಕತೆಯ ನೆಲೆಯಾಗಿ, ಭಕ್ತಾದಿಗಳ ಇಷ್ಟಾರ್ಥಗಳನ್ನು ಈಡೇರಿಸುವ, ಯಕ್ಷಗಾನ ಸೇವೆಗೆ ಪುನೀತಳಾಗುವ ಶ್ರೀ ಕಟೀಲು ದುರ್ಗಾಪರಮೇಶ್ವರಿಯು ಎಲ್ಲರಿಗೂ ಒಳಿತನ್ನು ಮಾಡಲಿ " ಶ್ರೀ ದುರ್ಗಾ ದೇವಿಯ ದರ್ಶನ ಪಡೆದು ಪುನೀತರಾಗೋಣ. ಬನ್ನಿ ಪ್ರವಾಸ ಹೋಗೋಣ .....
(ಚಿತ್ರಗಳು : ಅಂತರ್ಜಾಲ ಕೃಪೆ)
-ರಮೇಶ ನಾಯ್ಕ, ಉಪ್ಪುಂದ, ಬೈಂದೂರು