ಕಟ್ಟಡಕ್ಕೆ ವಾಸ್ತು ಅತ್ಯವಶ್ಯಕವೇ?

ಕಟ್ಟಡಕ್ಕೆ ವಾಸ್ತು ಅತ್ಯವಶ್ಯಕವೇ?

ಪ್ರಾರಂಭದಲ್ಲೇ ಸ್ಪಷ್ಟ ಪಡಿಸುತ್ತೇವೆ, ಈ ಬರಹ ವಾಸ್ತು ಶಾಸ್ತ್ರದ ವಿರುದ್ಧವಲ್ಲ. ಒಳ್ಳೆಯತನಗಳು ನಮ್ಮನ್ನು ಯಾವತ್ತೂ ಕಾಪಾಡುತ್ತವೆ ಎಂಬ ಬಗ್ಗೆ ಮಾಹಿತಿ ಅಷ್ಟೇ. ಪ್ರತಿಯೊಬ್ಬರ ನಂಬಿಕೆಯನ್ನು ನಾವು ಗೌರವಿಸುತ್ತೇವೆ. 

ಸುಂದರ ಮೂರ್ತಿ ವ್ಯವಹಾರದಲ್ಲಿ ಚನ್ನಾಗಿ ದುಡ್ಡು ಮಾಡಿದ್ದ. ಇತ್ತೀಚೆಗೆ ಅವನು ತೀರ್ಥಹಳ್ಳಿ ಹೊರವಲಯದಲ್ಲಿ ಒಂದು ಜಮೀನು ಕೊಂಡುಕೊಂಡ. ಅಡಿಕೆ ಕಾಫಿ ತೋಟ ಚನ್ನಾಗಿದೆ. ಅದರಲ್ಲಿ ನಾಲ್ಕು ಸುಂದರ ಕಾಟೇಜುಗಳನ್ನೂ ನಿರ್ಮಿಸಿದ್ದಾನೆ. ಒಂದು ದೊಡ್ಡ ಕೆರೆ ಇದೆ, ಅದರಲ್ಲಿ ಬೋಟಿಂಗ್ ಕೂಡಾ ಮಾಡಬಹುದು. ಅವನ ಉದ್ದೇಶವೇ ಅದನ್ನು ಹೊಂಮ್ ಸ್ಟೇ ಮಾಡುವುದಾಗಿದೆ. ಅದರಲ್ಲಿ ಒಂದು ದೊಡ್ಡ ಮಾವಿನ ಮರವಿದೆ. ಅದರ ಹಣ್ಣುಗಳು ಬಲು ರುಚಿ. ಅವನ ಹೆಂಡತಿಗೆ ಅದನ್ನು ಕಂಡರೆ ಪಂಚಪ್ರಾಣ. ಅದಕ್ಕಾಗಿಯೇ ಅವನು ಆ ಆಸ್ತಿ ಕೊಂಡಿದ್ದು.

ಇತ್ತೀಚೆಗೆ ಅವನು ಕೆಲವು ಬದಲಾವಣೆ ಕಾರ್ಯ ಕೈಗೆತ್ತಿಕೊಳ್ಳಲು (ನವೀಕರಣ) ಮುಂದಾಗಿದ್ದ.ಆಗ ಅವನ ಸ್ನೇಹಿತರು ಅವನಿಗೆ ಒಬ್ಬ ವಾಸ್ತು ಪಂಡಿತರ ಸಲಹೆ ಪಡೆಯಲು ಹೇಳಿದರು. ಅದರ ಬಗ್ಗೆ ಅವನಿಗೆ ಯಾವುದೇ ನಂಬಿಕೆ ಇರಲಿಲ್ಲ ಆದರೂ ಗೆಳೆಯರ ಅಭಿಮಾನ ಹಾಗೂ ಸಲಹೆಗೆ ಕಟ್ಟುಬಿದ್ದು, ಒಬ್ಬ  ಶಿವಮೊಗ್ಗದ ಪ್ರಖ್ಯಾತ ವಾಸ್ತು ಸಲಹೆಗಾರ ಶಂಕರನಾರಾಯಣರವರನ್ನು ಮೊರೆಹೋದ. ಅವರುಗಳು ತೀರ್ಥಹಳ್ಳಿ ಯಲ್ಲಿ ಊಟ ಮುಗಿಸಿ, ಜಮೀನಿನ ಕಡೆಗೆ ಪ್ರಯಾಣ ಬೆಳೆಸಿದರು. 

ಸುಂದರ ಮೂರ್ತಿಯೇ ಕಾರು ಚಲಾಯಿಸುತ್ತಿದ್ದ. ಕಾರು ಹೆದ್ದಾರಿಯಲ್ಲಿ ಹೋಗುತ್ತಿದ್ದಾಗ ಹಿಂದುಗಡೆಯ ಕಾರಿನವರು ಹಾರನ್ ಮಾಡಿದಾಗಲೆಲ್ಲಾ ಅವರುಗಳಿಗೆ ಸುಂದರ ಮೂರ್ತಿ ದಾರಿಬಿಟ್ಟುಕೊಡುತ್ತಿದ್ದ. ಆಗ ವಾಸ್ತು ಪಂಡಿತ ಶಂಕರನಾರಾಯಣ ದ.ಕ.ಕನ್ನಡದ ಉಚ್ಛಾರಣೆಯಲ್ಲಿ ನಗು ನಗುತ್ತಾ ‘ಎಂತದು ಮಾರಾಯರೇ, ನೀವು ಎಂತ ಎಲ್ಲರಿಗೂ  ಏಕೆ  ಸೈಡ್ ಕೊಡೋದಾ?’ ಎಂದು ಪ್ರಶ್ನಿಸಿದಾಗ. ಸುಂದರಮೂರ್ತಿ ‘ಅವರಿಗೆ ಏನೋ ಅವಸರ ಇರಬಹುದು ಹೋಗಲಿ ಬಿಡಿ ನಮಗೇನೂ ಗಡಿಬಿಡಿ ಇಲ್ಲವಲ್ಲಾ’ ಎಂದು ಶಾಂತವಾಗಿ ಉತ್ತರಿಸಿದ.

ಮುಂದೆ ಅವರ ಬೇರೆ ಸಂಭಾಷಣೆ ಮುಂದುವರೆಸಿ, ಕಾರು ಒಂದು ಕಿರಿದಾದ ಹಾದಿಯಲ್ಲಿ ಹೊಗುವಾಗ ಇದ್ದಕ್ಕಿದ್ದಂತೆ ಒಂದು ರಸ್ತೆ ಕೆಲಸಗಾರರ ಮಗು ರಸ್ತೆ ಈ ಕಡೆಯಿಂದ ಆಕಡೆಗೆ ಓಡಿತು. ಸುಂದರಮೂರ್ತಿ ಕಾರು ನಿಧಾನವಾಗಿ ಚಲಿಸುತ್ತಾ ಮಗು ದಾಟಿ ಹೋದ ಮೇಲೂ ಕಾರಿನ ವೇಗ ಹೆಚ್ಚಿಸದೆ ರಸ್ತೆ ಅಕ್ಕಾ ಪಕ್ಕಾ ಕಣ್ಣು ಹಾಯಿಸುತ್ತಿದ್ದುದನ್ನು ನೋಡಿದ ಶಂಕರನಾರಾಯಣರಿಗೆ ಅಚ್ಚರಿ ಕಾದಿತ್ತು. 

ಆ ಮಗುವನ್ನು ಹಿಂಬಾಲಿಸಿಕೊಂಡು ಇನ್ನೊಂದು ಮಗು ಓಡೋಡಿ ಬಂತು. ಆಗ ಅವರು ಕೇಳಿದರು ಅದು ನಿಮಗೆ ಹೇಗೆ ಗೊತ್ತಾಯಿತು ಇನ್ನೊಂದು ಮಗು ಬರುತ್ತಿದೆ ಎಂದು ಪ್ರಶ್ನಿಸಿದರು.

ಆಗ ಸುಂದರ ಮೂರ್ತಿ ಹೇಳಿದರು ‘ಆ ಮಗು ವಿಜಯದ ನಗೆ ಬೀರುತ್ತಾ ಓಡಿಬರುವಾಗಲೇ ಗೊತ್ತಾಯಿತು ಅದು ತನ್ನ ಗೆಳೆಯನ್ನು ಸೋಲಿಸಿ, ಹಿಂದಿಕ್ಕಿ ಬರುತ್ತಿದೆ ಎಂದು ಆಗಲೇ ಊಹಿಸಿದೆ ಅದರ ಹಿಂದೆ ಇನ್ನೊಂದು ಮಗು ಇದೆ ಎಂದು’.

ಶಂಕರ ನಾರಾಯಣ ಕೈಮುಷ್ಟಿಯಲ್ಲಿ ವಿಜಯ ಚಿಹ್ನೆ ತೋರುತ್ತಾ ನಿಮ್ಮ ಸಮಯ ಪ್ರಜ್ಞೆ ಗ್ರೇಟ್ ಎಂದು ಅಭಿನಂದಿಸಿದರು. ಈಗ ಅವರ ಕಾರು ಜಮೀನಿನ ಗೇಟ್ ಬಳಿ ಬಂದು ನಿಂತಿತು. ಅವರು ಕಾರಿನಿಂದ ಇಳಿದರು. ಆಗ ಏಳೆಂಟು ಪಕ್ಷಿಗಳು ಆಗಸಕ್ಕೆ ಹಾರಿದವು. ಆಗ ಸುಂದರ ಮೂರ್ತಿ ‘ಪಂಡಿತರೆ, ನಿಮಗೆ  ಬೇಸರವಿಲ್ಲದಿದ್ದರೆ ನಾವು ಒಂದು ಸ್ವಲ್ಪ ಹೊತ್ತು ಇಲ್ಲೇ ಇರೋಣ ನಂತರ ಹೋಗೋಣ. ಶಂಕರನಾರಾಯಣ ಕೇಳಿದರು ಏನು ಸಮಾಚಾರ..?

‘ಏನಿಲ್ಲಾ ನಮ್ಮ ಮಾವಿನ ಮರಕ್ಕೆ ಹಣ್ಣು ಕೀಳಲು ಸುತ್ತಾ ಮುತ್ತಲಿನ ಹುಡುಗರು ಮರ ಹತ್ತಿರುತ್ತಾರೆ ನಾವು ದಿಢೀರನೆ ಹೋದರೆ ಅವು ಮರದಿಂದ ಅನಾಮತ್ತು ಹಾರಿ ಪೆಟ್ಟುಮಾಡುಕೊಳ್ಳುತ್ತವೆ ಎಂದು ನಿಧಾನವಾಗಿ ನುಡಿದರು.

ಈಗ ಪಂಡಿತರು ಆಶ್ಚರ್ಯ ಚಕಿತರಾಗಿ ನಿಂತರು. ಕೆಲವು ಕ್ಷಣಗಳ ಅನಂತರ ಹೇಳಿದರು ‘ಈ ಜಾಗಕ್ಕೆ ಯಾವುದೇ ವಾಸ್ತು ಪರಿಹಾರ ಬೇಕಿಲ್ಲ.’ ಈಗ ಅಚ್ಚರಿ ಪಡುವ ಸರದಿ ಸುಂದರಮೂರ್ತಿಯದಾಯಿತು.

‘ಏಕೆ ಸ್ವಾಮಿ ಏನಾಯಿತು?’ ಎಂದು ವಿನಯದಿಂದ ಪ್ರಶ್ನಿಸಿದರು. ಆಗ ಪಂಡಿತರು ಹೇಳಿದರು. ‘ನೀವು ಎಲ್ಲಿರುತ್ತೀರೋ ಆ ಜಾಗವೆಲ್ಲಾ ಅತ್ಯಂತ ಪ್ರಶಸ್ತವಾದ ಪ್ರದೇಶವಾಗಿರುತ್ತದೆ. ಯಾವಾಗ ಯಾರ ಮನಸ್ಸು ಇನ್ನೊಬ್ಬರ ಶಾಂತಿ, ಸಂತೋಷಕ್ಕೆ ಮಿಡಿಯುತ್ತದೆಯೋ, ಯಾವಾಗ ತನ್ನ ಸೌಲಭ್ಯಕ್ಕೆ ಅಷ್ಟೇ ಅಲ್ಲದೆ, ಇತರರ ಅನುಕೂಲವನ್ನೂ ಪರಿಗಣಿಸುತ್ತದೆಯೋ, ಸದಾಕಾಲ ಯಾರು ಇತರರ ಒಳಿತಿಗಾಗಿ ತುಡಿಯುತ್ತಾರೆಯೋ ಅವರಲ್ಲಿ ಅವರಿಗರಿವಿಲ್ಲದೇ "ಸಂತತ್ವ" ಮನೆಮಾಡಿರುತ್ತದೆ. ಸಂತ ಇತರರ ಔನ್ನತ್ಯದಲ್ಲಿ ತನ್ನ ಬೆಳಕು ಕಂಡುಕೊಳ್ಳುತ್ತಾನೆ. ಈ ಮನೆಗೆ ಯಾವ ವಾಸ್ತು ಸಲಹೆಯೂ ಬೇಕಾಗಿಲ್ಲ’ ಎಂದು ನೇರವಾಗಿ ಕಾರಿಗೆ ಹಿಂದಿರುಗಿ ಕುಳಿತರು.

‘ವಾಸ್ತು ಇರುವುದು, ಕಬ್ಬಿಣ, ಇಟ್ಟಿಗೆ, ಸಿಮೆಂಟ್, ಟೈಲ್ಸ್ ಗಳಲ್ಲಲ್ಲ, ವಾಸ್ತು ಇರುವುದು ವಾಸ್ತವತೆಯ, ಸಂತೃಪ್ತ, ತ್ಯಾಗ ಸ್ವಭಾವದ ಮನಸ್ಸಿನಲ್ಲಿ!’ ನಾನು ಓದಿ ತಿಳಿದ ವಿಷಯ. ನನಗೆ ಬಹಳ ಹಿಡಿಸಿತು. ಅದಕ್ಕೆ ಶೇರ್ ಮಾಡಿದ್ದೇನೆ. ನಿಮಗೆ ಇಷ್ಟವಾದರೆ ಸಾಕು.

(ಸಂಗ್ರಹ) -ಬಸಯ್ಯ ಮಳಿಮಠ