ಕಟ್ಟು
`ಕಟ್ಟು’ ಎಂಬ ಪುಸ್ತಕ ಡಾ. ಬಸಯ್ಯಸ್ವಾಮಿ ಅವರ ವಿಮರ್ಶಾ ಲೇಖನಗಳ ಸಂಕಲನವಾಗಿದೆ. ಸಾಹಿತ್ಯ, ಶಾಸನ, ಸಮಾಜ ಎಂಬ ಮೂರು ಭಾಗವನ್ನು ಒಳಗೊಂಡ ಒಟ್ಟು ೧೫ ಲೇಖನಗಳು ಇದರಲ್ಲಿವೆ.(ವಲಸೆ ಸಾಹಿತ್ಯ, ವಚನ ಸಾಹಿತ್ಯ, ಶಾಸನ, ಮತ್ತು ಭಾಷೆ) ಸಾಹಿತ್ಯವನ್ನು ವಿವಿದ ಆಯಾಮಗಳಲ್ಲಿ, ಹಲವು ಮಗ್ಗುಲುಗಳಲ್ಲಿ ನೋಡುವ ಕುತೂಹಲದ ಕಣ್ಣನ್ನೂ ಲೇಖಕ ಹೊಂದಿರುವುದನ್ನು ಇಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ನೆಲೆಗಳಲ್ಲಿ ಅವರ ಆಸಕ್ತಿಯು ಡಾಳಾಗಿ ಕಾಣಿಸುತ್ತದೆ. ಕನ್ನಡ ಸಾಹಿತ್ಯವನ್ನು, ಕರ್ನಾಟಕ ಸಮಾಜವನ್ನು ಈ ಎರಡು ಕನ್ನಡಕಗಳಲ್ಲಿನ ಓದುವ ಆಸಕ್ತಿ ಇರುವ ಬಸಯ್ಯಸ್ವಾಮಿ ಅವರ ಹೊಸತುಗಳನ್ನು ಕಾಣುವ ತವಕ ಈ ಪುಸ್ತಕದಲ್ಲಿಯೂ ಕಾಣಿಸುತ್ತದೆ. ಹಳಗನ್ನಡ ಮತ್ತು ಹೊಸಗನ್ನಡ ಸಾಹಿತ್ಯದ ಜೊತೆಗೆ ಶಾಸನ, ಭಾಷೆಗೆ ಸಂಬಂಧಿಸಿದ ಬರಹಗಳೂ ಈ ‘ಕಟ್ಟಿ’ನಲ್ಲಿ ಇವೆ.
ಈ ಕೃತಿಗೆ ಸೊಗಸಾದ ಮುನ್ನುಡಿ ಬರೆಯುವ ಮೂಲಕ ಲೇಖಕರನ್ನು ಹುರಿದುಂಬಿಸಿದ್ದಾರೆ ಲೇಖಕರಾದ ಕೇಶವ ಮಳಗಿ. ಇವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಅನಿಸಿಕೆಗಳ ಆಯ್ದ ಭಾಗ…
“ಯುವ ಬರಹಗಾರರಾದ ಬಸಯ್ಯ ಸ್ವಾಮಿಯವರು ಈಗಾಗಲೇ ʻಕನ್ನಡ ಕಾದಂಬರಿಗಳಲ್ಲಿ ವಲಸೆ ಪ್ರಜ್ಞೆʼ ಎಂಬ ಕೃತಿಯನ್ನು ಪ್ರಕಟಿಸಿ ಈಗಾಗಲೇ ಓದುಗ ವಲಯಕ್ಕೆ ಪರಿಚಿತರಾಗಿದ್ದರೆ. ವಲಸೆಯ ವಿವಿಧ ಸ್ತರಗಳನ್ನು ಹುಡುಕುವ ಕೃತಿಯು ಹೊಸ ವಿಚಾರವೊಂದನ್ನು ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿತ್ತು.
ಇದೀಗ ತಮ್ಮ ವಿಮರ್ಶೆ ಮತ್ತು ಸಂಶೋಧನಾ ಲೇಖನಗಳನ್ನು ಒಳಗೊಂಡ ʻಕಟ್ಟುʼ ಎನ್ನುವ ಕೃತಿಯನ್ನು ಪ್ರಕಟಿಸುವ ಸಿದ್ಧತೆಯಲ್ಲಿದ್ದಾರೆ. ʻಕಟ್ಟು’ ಎಂಬ ಶಬ್ದ ಬಹುನೆಲೆಯ ಅರ್ಥವನ್ನು ಹೊಂದಿದ್ದು ಕ್ರಿಯೆಯನ್ನು ಸೂಚಿಸುತ್ತ ರಚನೆ ಮತ್ತು ನಿರಚನೆ ಎರಡರ ವ್ಯಾಖ್ಯಾನಕ್ಕೆ ಒಳಗಾಗಬಲ್ಲುದು. ಕಟ್ಟು ರಚನೆಯ ಪ್ರಕ್ರಿಯೆಯನ್ನು ಹೇಳುತ್ತಿರುವಂತೆಯೇ ʻಬಿಚ್ಚುವʼ ಅಂದರೆ ಬಿಗಿತದಲ್ಲೇನಿದೆ ಎಂದು ತರೆದು ನೋಡುತ್ತ ಪಡಿಪದಾರ್ಥಗಳನ್ನು ವಿಮರ್ಶೆಗೊಳಪಡಿಸುವ ಅರ್ಥ ವಿಸ್ತಾರವನ್ನೂ ಪಡೆದಿದೆ.
ಸರಳವಾಗಿ ಹೇಳುವುದಾದರೆ, ಯುವ ಸಂಶೋಧಕರಾದ ಬಸಯ್ಯನವರು ಸಾಹಿತ್ಯದ ವಿವಿಧ ಪ್ರಕಾರಗಳ ಉದ್ದೇಶ, ಅರ್ಥ, ಪ್ರಸ್ತುತತೆ ಮತ್ತು ಅವುಗಳ ಹಿಂದಿನ ಗಹನತೆಯನ್ನು ಅರ್ಥೈಸಿಕೊಳ್ಳಲು ಕಟ್ಟುತ್ತಲೂ, ಬಿಚ್ಚತ್ತಲೂ ಇದ್ದು ಅದಕ್ಕಾಗಿ ತಮ್ಮದೇ ಪರಿಣತ ವಿಧಾನವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿದ್ದಾರೆ.
ಮೊದಲ ಕೃತಿಯಲ್ಲಿನ ವಲಸೆಪ್ರಜ್ಞೆಯ ಕಾಳಜಿ, ಕುತೂಹಲಗಳು ಪ್ರಸ್ತುತ ಹೊತ್ತಿಗೆಯಲ್ಲೂ ಮುಂದುವರೆದಿದ್ದು ಅವರ ಬೌದ್ಧಿಕ ನೆಲೆಯನ್ನು ಸ್ಪರ್ಶಿಸಿ ವಿಸ್ತರಿಸುತ್ತಿವೆ. ಜತೆಗೆ, ಉಳಿದ ಸಾಹಿತ್ಯ ಪ್ರಕಾರಗಳ ಕುರಿತು ಅವರಿಗಿರುವ ಆಸಕ್ತಿಯನ್ನು ಈ ಪುಸ್ತಕ ತೆರೆದಿಡುತ್ತದೆ. ಕಾಲ ಯಾವುದೇ ಆದರೂ ಮನುಷ್ಯನ ಮೂಲಭೂತ ಅಸ್ತಿತ್ವ ಅಥವ ಅಸ್ಮಿತೆಯ ಬಗೆ ಯಾವುದು, ಆತನಾಕೆಯನ್ನು ಕಾಡುವ ಜೀವನ್ಮರಣದ ತಾತ್ವಿಕ ಪ್ರಶ್ನೆಗಳಾವುದು, ಆತನ ನಿಜವಾದ ಹುಡುಕಾಟದ ಸ್ವರೂಪವೇನಾಗಿರುತ್ತದೆ ಎಂದು ಇಲ್ಲಿನ ಎಲ್ಲ ಪ್ರಬಂಧಗಳೂ ಶೋಧಿಸುತ್ತವೆ.
ಮೇಲಿನ ಎಲ್ಲ ಮಾತುಗಳನ್ನು ಗಮನದಲ್ಲಿರಿಸಿಕೊಂಡರೆ ಈ ಪುಸ್ತಕದ ಬರಹಗಳನ್ನು ವಿಶಾಲವಾಗಿ ಮೂರು ಭಾಗಗಳಾಗಿ ಓದಲು ಅವಕಾಶವಿದೆ. ವಚನಗಳ ಸುತ್ತಮುತ್ತ ಕಟ್ಟಲಾದ ಮೊದಲ ನಾಲ್ಕು ಲೇಖನಗಳಲ್ಲಿಯೂ ಇವೇ ಪ್ರಶ್ನೆಗಳು ಬೇರೆ ಬಗೆಯಲ್ಲಿ ಎದುರಾಗುತ್ತಿವೆ. ಅಕ್ಕ ಮಹಾದೇವಿಯ ಕೆಲವು ವಚನಗಳನ್ನು ವಿಶ್ಲೇಷಣೆಗೆ ಒಳಪಡಿಸಿರುವ ಲೇಖನದಲ್ಲಿ ಚೆನ್ನಮಲ್ಲಿಕಾರ್ಜುನನಲ್ಲಿ ಆಕೆ ಹುಡುಕುತ್ತಿರುವ ʻಅಂಶʼ, ʻಅಸ್ಮಿತೆʼಯು ತಥಾಕಥಿತ ʻಪುರುಷʼನದ್ದಲ್ಲ. ಆತ ಹೊರಗಿನ ಲೋಕಕ್ಕೆ ಕಣ್ಮರೆಯಾಗಿರುವ, ಉತ್ಕಟೆಗೆ ಮಾತ್ರ ಕಾಣಿಸಬಲ್ಲ, ದೇಹ ಮತ್ತು ಲೌಕಿಕತೆಯನ್ನು ಮೀರಿದ ಅಗೋಚರ ʻಜೀವಿʼಯಾಗಿದ್ದಾನೆ.
ಎರಡನೆಯ ಭಾಗದಲ್ಲಿ ವಲಸೆ ಸೃಷ್ಟಿಸುವ ಅನಾಥಪ್ರಜ್ಞೆ, ಹಳಹಳಿಕೆ, ಹೊಸ ಅಸ್ತಿತ್ವವನ್ನು ಕಂಡುಕೊಳ್ಳುವಾಗ ಉಂಟಾಗುವ ಆಘಾತ, ಘಾಸಿ, ಹಳಹಳಿಕೆ, ಉತ್ಕಂಠತೆ, ಬಿಟ್ಟು ಬಂದುದರ ಕುರಿತು ಹಂಬಲ ಇತ್ಯಾದಿ ಸಂಕೀರ್ಣ ಭಾವಗಳನ್ನು ಶೋಧಿಸುವ ಲೇಖನಗಳಾಗಿವೆ.
ಪಂಪನ ಬನವಾಸಿಯೇ ಇರಬಹುದು, ʻಹವನʼ ಕಾದಂಬರಿಯಲ್ಲಿ ಬರುವ ವಿವಿಧ ಲಂಬಾಣಿ ಪಾತ್ರಗಳೇ ಆಗಬಹುದು, ʻಸುಬ್ಬಣ್ಣʼ ಕಾದಂಬರಿಯ ಕಥಾನಾಯಕನ ಅಲೆದಾಟವೇ ಇರಬಹುದು, ʻಮರಳಿ ಮಣ್ಣಿಗೆʼ ಕಾದಂಬರಿಯ ರಾಮನೇ ʻಬೀಜʼ ಕಾದಂಬರಿಯ ಶ್ರೇಯಾಂಸನೇ ಇರಬಹುದು, ಎಲ್ಲರ ತಾಕಲಾಟ, ತಲ್ಲಣಗಳು ಒಂದೇ ಆಗಿವೆ. ಅಸ್ತಿತ್ವದ ಹುಡುಕಾಟ ಹಾಗೂ ಆ ಮೂಲಕ ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳುವ ವಿಧಾನ ಯಾವುದಿರಬಹುದು? ಎನ್ನುವ ತಾತ್ವಿಕ ಪ್ರಶ್ನೆಗೆ ತಾವು ಕೈಗೆತ್ತಿಕೊಳ್ಳುವ ಕ್ರಿಯೆಯ ಮೂಲಕ ಉತ್ತರ ಕಂಡುಕೊಳ್ಳುವುದು. ಪ್ರತ್ಯೇಕ ಲೇಖನಗಳಲ್ಲಿ ಕೃತಿಗಳನ್ನು ವಿವರಣಾತ್ಮಕವಾಗಿ ಗಮನಿಸುವ ವಿಧಾನವನ್ನು ಬಸಯ್ಯ ಅವರು ಅನುಸರಿಸಿದ್ದಾರೆ. ʻಸ್ವಪ್ನ ಸಾರಸ್ವತʼ ಕಾದಂಬರಿ, ರೇಣುಕಾ ಕೋಡಗುಂಟಿಯವರ ಕಥೆಗಳು ಮತ್ತು ಡಯಸ್ಪೋರ ಕೃತಿಯ ವಿಶ್ಲೇಷಣೆ ಈ ಮಾದರಿಯವು.
ಪುಸ್ತಕದಲ್ಲಿ ಅಧಿಕೃತವಾಗಿ ಎರಡನೆಯ ಭಾಗವಾದ, ಆದರೆ ಓದಿನ ಅನುಕೂಲತೆಗೆ ನಾನು ಮಾಡಿಕೊಂಡ ಮೂರನೆಯ ಭಾಗದಲ್ಲಿ ಶಾಸನ, ಭಾಷೆ, ಸಮಾಜಗಳ ಕುರಿತು ಬರಹಗಳಿವೆ. ಒಟ್ಟಾರೆ ಪ್ರಬಂಧಗಳಲ್ಲಿ ನಾನು ಗಮನಿಸಿರುವುದು ಬಸಯ್ಯನವರ ಸಾಹಿತ್ಯದ ಕುರಿತಿರುವ ಅಪಾರವಾದ ಉತ್ಸಾಹ ಮತ್ತು ಪ್ರೀತಿ, ಪ್ರಾಮಾಣಿಕ ಕಳಕಳಿ. ಅವರಿನ್ನೂ ತಮ್ಮದೇ ದೃಷ್ಟಿಕೋನವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಲೇಖಕರೆಂದು ಮೊದಲೊಮ್ಮೆ ಹೇಳಿದೆ. ಅನ್ಯರನು ತೊರೆದು ತಮ್ಮ ದಾರಿಯನ್ನು ಕಂಡುಕೊಳ್ಳುವ ಸಾಮರ್ಥ್ಯ ಬಸಯ್ಯ ಅವರಿಗಿದೆ ಎಂಬುದಕ್ಕೆ ಈ ಕೃತಿಯಲ್ಲಿಯೇ ಪುರಾವೆಗಳು ದೊರಕುತ್ತವೆ. ಬಲುಬೇಗ ಅತ್ತ ಅವರು ದಾಪುಹೆಜ್ಜೆಗಳನ್ನಿಡಲಿ. ಹೊಸ ಹೆಜ್ಜೆಗಳನ್ನಿಡಲು ಕೆಲವೊಮ್ಮೆ ನಡೆದ ದಾರಿಯ ಧೂಳನ್ನು ಸಂಪೂರ್ಣ ತೊಳೆದುಕೊಳ್ಳಬೇಕಾಗುತ್ತದೆ. ಸಿದ್ಧಮಾದರಿಯನ್ನು, ಸುಖದ ಹಾದಿಗಳನ್ನು ತೊರೆದು ಬರಿಗಾಲಲ್ಲಿ ಕಲ್ಲುಮುಳ್ಳುಗಳ ದಾರಿಯಲ್ಲಿ ನುಗ್ಗಬೇಕಾಗುತ್ತದೆ. ಬಸಯ್ಯ, ಬಿಸಿ ನೆತ್ತರಿನ ಯುವಕರು, ಅಂಥ ಪಯಣ ಕೈಗೊಳ್ಳಬಲ್ಲ ಕಸುವು ಇರುವವರು. ಈಗಿನ ಪ್ರಯತ್ನಗಳು ಗಮನಾರ್ಹವಾಗಿವೆ, ಮೆಚ್ಚುಗೆಯೂ ದೊರಕಬಹುದು. ಆದರಿಷ್ಟೇ ಸಾಲದು, ಅವರು ʻಎನಿತು ದೂರವೋ ನಡೆದರಿನ್ನಷ್ಟು ದೂರವಿದೆ, ಆದರದು ಹತ್ತಿರಕೂ ಹತ್ತಿರದೊಳಿಹುದುʼ ಎನ್ನುವ ಪಯಣ ಕೈಗೊಳ್ಳಲಿ.”