ಕಟ್ಟುನಿಟ್ಟಿನ ಕ್ರಮ ಅಗತ್ಯ

ಮನರಂಜನೆ ಹೆಸರಿನಲ್ಲಿ ಡಿಜಿಟಲ್ ಮಾಧ್ಯಮಗಳು, ಒಟಿಟಿ ವೇದಿಕೆಗಳು ಅಶ್ಲೀಲ ಹಾಗೂ ಕೆಟ್ಟ ಅಭಿರುಚಿಯ ಕಂಟೆಂಟ್ ಪ್ರಸಾರ ಮಾಡುತ್ತಿರುವುದು ಅಕ್ಷಮ್ಯ. ಇದು ಸಮಾಜದ ಸ್ವಾಸ್ಥ್ಯದ ಮೇಲೆ ಮಾರಕ ಪರಿಣಾಮ ಬೀರುತ್ತಿದೆ. ಹದಿಹರೆಯದ ವಯಸ್ಸಿನವರು ಮತ್ತು ಯುವಕ-ಯುವತಿಯರು ಇಂಥ ಕಂಟೆಂಟ್ ವೀಕ್ಷಿಸಿ ಭ್ರಮಾಲೋಕದಲ್ಲಿ ತೇಲುತ್ತಿದ್ದಾರೆ. ಕೆಲವರು ದಾರಿ ತಪ್ಪಿರುವ ನಿದರ್ಶನಗಳೂ ಇವೆ. ಯಾವುದೇ ಬಗೆಯ ಮಾಧ್ಯಮವಾಗಲಿ ತನ್ನ ಹೊಣೆಗಾರಿಕೆ, ಬದ್ಧತೆ, ಪ್ರಾಮಾಣಿಕತೆಯನ್ನು ಬಲಿಗೊಡುವಂತಿಲ್ಲ. ಈ ಮೌಲ್ಯಗಳಿಗೆ ವಿಮುಖವಾಗಿ ನಡೆದಾಗಲೇ ಅಪಸವ್ಯಗಳು ಘಟಿಸುವುದು. ಇಂಥ ಕಾರ್ಯಕ್ರಮಗಳಿಗೆ ನಿರ್ಬಂಧ ಹೇರಬೇಕು, ನಿಯಮ ಉಲ್ಲಂಘಿಸಿ ಮತ್ತೆ ಇದೇ ಬಗೆಯ ಕಂಟೆಂಟ್ ಪ್ರಸಾರ ಮಾಡಿದರೆ ಅಂಥ ವೇದಿಕೆಯ ಪರವಾನಗಿಯನ್ನು ರದ್ದುಗೊಳಿಸಬೇಕು ಎಂಬ ಅಗ್ರಹ ಬಹುಸಮಯದಿಂದ ಕೇಳಿಬರುತ್ತಲೇ ಇದೆ. ಅಲ್ಲದೆ, ಮನೋವಿಜ್ಞಾನಿಗಳು ಮತ್ತು ಅಪ್ತಸಮಾಲೋಚಕರು ಕಾಲಕಾಲಕ್ಕೆ ಈ ನಿಟ್ಟಿನಲ್ಲಿ ಎಚ್ಚರಿಕೆ ನೀಡುತ್ತಲೇ ಬಂದಿದ್ದು, ಅಶ್ಲೀಲ ಮತ್ತು ಹಾಸ್ಯದ ಹೆಸರಿನಲ್ಲಿ ಬಿತ್ತರಿಸುವ ಕೆಟ್ಟ ಅಭಿರುಚಿಯ ಕಾರ್ಯಕ್ರಮಗಳು ಯುವ ಮನಸ್ಸುಗಳನ್ನು ಹಾಳುಮಾಡುತ್ತಿವೆ. ಈ ಬಗ್ಗೆ ಪಾಲಕರು ಎಚ್ಚರ ವಹಿಸಬೇಕು ಎಂಬ ಸಲಹೆಗೆ ಮನ್ನಣೆ ಸಿಕ್ಕಿದ್ದು ಅಷ್ಟಕಷ್ಟೆ.
ಡಿಜಿಟಲ್ ಮಾಧ್ಯಮಗಳಲ್ಲಿ ಅಶ್ಲೀಲ ಕಾರ್ಯಕ್ರಮಗಳ ಪ್ರಸಾರದ ಮೇಲೆ ನಿರ್ಬಂಧ ಹೇರಲು ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಸೋಮವಾರ ಈ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ ಮತ್ತು ಕೇಂದ್ರ ಸರ್ಕಾರ ಹಾಗೂ ೯ ಒಟಿಟಿ-ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿ, ಉತ್ತರಿಸುವಂತೆ ಸೂಚಿಸಿದೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ ಅವರ ಪೀಠ, 'ಒಟಿಟಿ/ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಸಭ್ಯ ದೃಶ್ಯಗಳ ಪ್ರಸಾರ ನಿಗ್ರಹಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು ಕಾರ್ಯಾಂಗ ಮತ್ತು ಶಾಸಕಾಂಗದ ಕರ್ತವ್ಯ. ನಾವು ಪ್ರತಿವಾದಿಗಳಿಗೆ ನೋಟಿಸ್ ನೀಡುತ್ತೇವೆ. ನೆಟ್ಪ್ಲಿಕ್ಸ್ ಇತ್ಯಾದಿಗಳಿಗೂ ನೋಟಿಸ್ ನೀಡುತ್ತೇವೆ. ಅವರಿಗೂ ಸಾಮಾಜಿಕ ಜವಾಬ್ದಾರಿ ಇದೆ' ಎಂದು ಹೇಳಿರುವುದು ಗಮನಾರ್ಹ.
“ಕೆಲವು ನಿಯಮಗಳು ಈಗಾಗಲೇ ಇವೆ. ಇನ್ನೂ ಹೆಚ್ಚಿನ ನಿಯಮಗಳನ್ನು ರೂಪಿಸಲು ಪರಿಗಣಿಸಲಾಗುತ್ತದೆ' ಎಂದು ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಅಶ್ಲೀಲ ದೃಶ್ಯಗಳು, ಕಾರ್ಯಕ್ರಮಗಳು ಯಾವುದೇ ನಿರ್ಬಂಧವಿಲ್ಲದೆ ಪ್ರಸಾರವಾಗುತ್ತಿವೆ. ಮತ್ತು ಇವುಗಳಿಂದ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ವೆಬ್ ಸರಣಿಗಳನ್ನು ನೋಡಿ ಕಳ್ಳತನ, ದರೋಡೆ, ಹಲ್ಲೆ, ಕೊಲೆ ಮಾಡಿದಂಥ ನಿದರ್ಶನಗಳು ಆಯಾ ಪ್ರಕರಣಗಳ ತನಿಖೆಯ ವೇಳೆ ಬಯಲಾಗಿವೆ. ಇಂಥ ಕಂಟೆಂಟ್ ಪ್ರಸಾರ ತಡೆಯಲು ಬಿಗಿ ಕ್ರಮ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಈ ಹಿಂದೆಯೂ ಸೂಚಿಸಿತ್ತು. ಆದ್ದರಿಂದ ಕೇಂದ್ರ ಸರ್ಕಾರ ನ್ಯಾಯಾಲಯದ ಕಳವಳವನ್ನು ಅರ್ಥಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ನಿರ್ಬಂಧ ಇಲ್ಲದೆ ಅಶ್ಲೀಲ ದೃಶ್ಯ.ಕಾರ್ಯಕ್ರಮಗಳ ಪ್ರಸಾರ ಮುಂದುವರಿದರೆ ಸಮಾಜಕ್ಕೆ ಮತ್ತಷ್ಟು ಹಾನಿ ಹಾಗೂ ಯುವಕರನ್ನು ತಪ್ಪುದಾರಿಗೆ ಎಳೆದಂತಾಗುತ್ತದೆ ಎಂಬುದನ್ನು ಮರೆಯಬಾರದು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೯-೦೪-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ