ಕಟ್ಟೋಣ...............

ಕಟ್ಟೋಣ...............

ಕವನ

 ಕಟ್ಟೋಣ!

ಒಡೆದರೆ ಒಡೆದುಕೊಳ್ಳಲಿ ಬಿಡು

ಕಟ್ಟುವವರು ನಾವಿರುವಾಗ

ಚಿಂತೆ ಯಾತರದು?

ಅವರ ಪಾಡಿಗವರು ಒಡೆಯಲಿ

ಮಂದಿರ- ಮಸೀದಿಗಳ

ಮುಗ್ದ ಮನಸುಗಳ

ನೂರಾರು ಹೃದಯಗಳನವರು

ತಡೆಯಲು ನಾವು ಯಾರು?

ಒಡೆದವರನೇಕೆ ಟೀಕಿಸೋಣ?

ಅವರು ಒಡೆದಂತೆಲ್ಲ ನಾವು ಕಟ್ಟುತ್ತಾ ಹೋಗೋಣ

ಒಡೆದ ಹೃದಯಗಳ ಚೂರುಗಳ ಹೆಕ್ಕೋಣ

ಮುರಿದ ಮನಸುಗಳ ಜೋಡಿಸೋಣ:

ಇರುವೆಯ ಶಿಸ್ತಿನಲಿ

ಜೇಡದ ಏಕಾಗ್ರತೆಯಲಿ

ಮಗನ ಕುಸಿದು ಬಿದ್ದ ಮರಳ ಮನೆಯನ್ನು

ಮತ್ತೆ ಕಟ್ಟಿಕೊಡುವ ಅಪ್ಪನಂತೆ

ಬಾಯಿಗಿಟ್ಟ ತುತ್ತು ಕೈಚೆಲ್ಲಿದರೂ

ಬೇಸರಿಸದೆ ಮತ್ತೆಮತ್ತೆ ಮಗುವಿಗುಣಿಸುವ ತಾಯಂತೆ

ಕಟ್ಟೋಣ ನಾವು ಪ್ರೀತಿ ಮಹಲುಗಳ

ಹೃದಯ ಸಾಮ್ರಾಜ್ಯದಲಿ

ಯಾಕೆ ಬೇಕು ಗೆಳೆಯ? ಹೇಳು:

ಕಲ್ಲು ಮಣ್ಣಿನ ದೇವರಿರದ ಖಾಲಿ ಗುಡಿಗಳು!?

……………………………………………………………..

 

Comments