ಕಠಿಣ ಸಂದೇಶ ಅನಿವಾರ್ಯ
ಸರ್ಕಾರಿ ಹುದ್ದೆಗಳಿಗಾಗಿ ನಡೆಯುವ ನೇಮಕಾತಿಯಲ್ಲಿ ಬಹುತೇಕ ಸಲ ಏನಾದರೊಂದು ರಗಳೆ ಇದ್ದೇ ಇರುತ್ತದೆ ಎಂಬಂತಾಗಿರುವುದು ವಿಪರ್ಯಾಸ. ಪ್ರಶ್ನೆಪತ್ರಿಕೆ ಸೋರಿಕೆ ಅಥವಾ ಕಾಪಿ ಹೊಡೆಯಲು ಅವಕಾಶ ಅಥವಾ ನೇಮಕ ಮಾಡಿಸುವುದಾಗಿ ಹೇಳಿ ಆಕಾಂಕ್ಷಿಗಳಿಂದ ಹಣ ತೆಗೆದುಕೊಳ್ಳುವುದು… ಹೀಗೆ ಇಂಥ ವಾಮಹೆಜ್ಜೆಗಳ ಯಾದಿ ಬಹಳ ಉದ್ದವಿದೆ. ಸರ್ಕಾರಿ ಹುದ್ದೆಗಳ ನೇಮಕಾತಿಗಾಗಿ ಕೆಪಿಎಸ್ ಸಿಯಂಥ ಸ್ವತಂತ್ರ ಸಂಸ್ಥೆಯೇ ಪ್ರಕ್ರಿಯೆ ನಡೆಸಿದರು ಸಹ ಅದು ವಿವಾದ ಮುಕ್ತವಾಗಿರುವುದಿಲ್ಲ ಎಂಬುದು ನಮ್ಮ ವ್ಯವಸ್ಥೆಯಲ್ಲಿನ ಹುಳುಕಿಗೆ ಸಾಕ್ಷಿ. ರಾಜ್ಯದಲ್ಲಿ ಈಗ ಕೆಲ ದಿನಗಳಿಂದ ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮಗಳು ಭಾರಿ ಸದ್ದು ಮಾಡುತ್ತಿವೆ. ಈ ಹಗರಣಕ್ಕೆ ಸಂಬಂಧಿಸಿ ಈಗಾಗಲೇ ಅನೇಕರ ಬಂಧನವಾಗಿದ್ದು ಇನ್ನೂ ಅನೇಕರ ಸೆರೆ ಸಾಧ್ಯತೆ ಇದೆ. ಈ ಹಿಂದೆ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ, ಈಗ ಅಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿರುವ ಅಮೃತ್ ಪೌಲ್ ರನ್ನು ಸಿಐಡಿ ಎರಡು ಬಾರಿ ವಿಚಾರಣೆ ನಡೆಸಿದೆ. ಮುಂದಿನ ತನಿಖೆಯ ಜಾಡು ಕುತೂಹಲಕರ. ಈ ಪ್ರಕರಣದಲ್ಲಿ ಪೋಲೀಸ್ ಇಲಾಖೆಯಲ್ಲಿನ ಅನೇಕರೇ ಆರೋಪಿ ಸ್ಥಾನದಲ್ಲಿ ನಿಂತಿರುವುದು ಹಾಗೂ ಬಂಧನಕ್ಕೀಡಾಗಿರುವುದು ಇನ್ನಷ್ಟು ಗಂಭೀರ ಸಂಗತಿ ಮಾತ್ರವಲ್ಲ ಸಮಾಜಕ್ಕೆ ಬೇರೆಯದೇ ಸಂದೇಶ ನೀಡುವಂತಿದೆ. ನೇಮಕದಲ್ಲೇ ಅಕ್ರಮ ಮಾಡಿದರೆ ಅಂಥವರು ಮುಂದೆ ಸೇವೆಗೆ ಸೇರಿದ ಮೇಲೆ ಪ್ರಾಮಾಣಿಕವಾಗಿ ಮತ್ತು ನ್ಯಾಯಬದ್ಧವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವೇ ಎಂಬ ಪ್ರಶ್ನೆ ಜನರಲ್ಲಿ ಮೂಡಿದರೆ ಅದು ಸಹಜವೇ. ಅದರಲ್ಲೂ ಸಮಾಜದಲ್ಲಿ ಸುವ್ಯವಸ್ಥೆ ಕಾಪಾಡುವಲ್ಲಿ ಪೋಲೀಸ್ ಇಲಾಖೆಯ ಪಾತ್ರ ಒಂದು ತೂಕ ಹೆಚ್ಚೇ ಇರುತ್ತದೆ. ಪಿಎಸ್ಐ ನೇಮಕ ಹಗರಣದಲ್ಲಿ ಇನ್ನೂ ಕೆಲವು ರಾಜಕಾರಣಿಗಳು ಹಾಗೂ ಉನ್ನತ ಪೋಲೀಸ್ ಅಧಿಕಾರಿಗಳು ಭಾಗಿಯಾಗಿರುವ ಗುಮಾನಿಯಿದ್ದು, ಅವರನ್ನೂ ವಿಚಾರಣೆಗೆ ಒಳಪಡಿಸಿ ಸತ್ಯಾಂಶ ಹೊರಹಾಕುವ ಕೆಲಸವನ್ನು ಸಿಐಡಿ ಮಾಡಬೇಕಾಗುತ್ತದೆ. ಇಲ್ಲಿ ತನಿಖಾ ಸಂಸ್ಥೆ ಪ್ರಭಾವ ಅಥವಾ ವಶೀಲಿಗೆ ಒಳಗಾಗಬಾರದು. ಅದೇ ಸಂದರ್ಭದಲ್ಲಿ, ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದವರ ವಿಷಯದಲ್ಲಿ ಸರ್ಕಾರವು ಬಿಗಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಮುಂದೆ ಇಂಥ ಕೃತ್ಯಕ್ಕೆ ಕೈಹಾಕುವವರಿಗೆ ಎಚ್ಚರಿಕೆಯ ಪಾಠವನ್ನು ರವಾನಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಿದೆಯೆಂಬ ಮಾಹಿತಿ ಇದೆ. ಬಂಧಿತ ೧೬ ಪೋಲೀಸರು ಹಾಗೂ ನಾಲ್ವರು ಸರ್ಕಾರಿ ಅಧಿಕಾರಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದ್ದು, ಶಾಶ್ವತವಾಗಿ ವಜಾ ಮಾಡುವ ಪ್ರಕ್ರಿಯೆ ಸರ್ಕಾರದ ಮಟ್ಟದಲ್ಲಿ ಆರಂಭವಾಗಿದೆ. ಅಲ್ಲದೆ, ವಾಮಮಾರ್ಗದಲ್ಲಿ ಕೆಲಸ ಗಿಟ್ಟಿಸಲು ಹೋಗಿ ಸಿಕ್ಕಿಬಿದ್ದಿರುವ ಅಭ್ಯರ್ಥಿಗಳು ಇನ್ನುಮುಂದೆ ಯಾವುದೇ ಸರ್ಕಾರಿ ಉದ್ಯೋಗದ ಪರೀಕ್ಷೆ ಬರೆಯದಂತೆ ಕಪ್ಪುಪಟ್ಟಿಗೆ ಸೇರಿಸಲೂ ನಿರ್ಧರಿಸಲಾಗಿದೆಯೆಂಬ ಮಾಹಿತಿ ಇದ್ದು, ಇಂಥ ಕ್ರಮ ಅನಿವಾರ್ಯ. ಒಟ್ಟಾರೆ ಸರ್ಕಾರಿ ವ್ಯವಸ್ಥೆಯ ಬಗೆಗೇ ಜನರಲ್ಲಿ ಒಂದು ಬಗೆಯ ತಿರಸ್ಕಾರದ ಭಾವನೆ ಇದೆ. ಅಂಥದರಲ್ಲಿ ಹೀಗೆ ನೇಮಕಾತಿ ಅವ್ಯವಹಾರಗಳೂ ನಡೆಯುತ್ತಿದ್ದರೆ ಸಾರ್ವಜನಿಕ ವಿಶ್ವಾಸಾರ್ಹತೆ ಮಾಯವಾಗುವ ಅಪಾಯ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ನಂಬಿಕೆಯೆನ್ನುವುದು ಬಹಳ ಮುಖ್ಯವಾದದ್ದು.
ಕೃಪೆ: ವಿಜಯವಾಣಿ, ಸಂಪಾದಕೀಯ, ದಿ: ೨೦-೦೬-೨೦೨೨
ಚಿತ್ರ ಕೃಪೆ: ಅಂತರ್ಜಾಲ ತಾಣ