ಕಡಲಾಳದ ಕೌತುಕ - ವಿದ್ಯುತ್ ಮೀನುಗಳು

ಕಡಲಾಳದ ಕೌತುಕ - ವಿದ್ಯುತ್ ಮೀನುಗಳು

ಸಮುದ್ರ ಒಂದು ಅದ್ಭುತ ಕೌತುಕಗಳ ಆಗರ. ನೀವು ಸಾಗರದೊಳಗೆ ಹೊಕ್ಕರೆ ನಿಮಗೆ ಸಿಗುವ ಜಲಚರಗಳು ಒಂದೋ ಎರಡೋ, ಅವು ಕೋಟ್ಯಾಂತರ. ನಾವು ಸಮುದ್ರದ ಜಲಚರಗಳ ಬಗ್ಗೆ ತಿಳಿದುಕೊಂಡಿರುವುದು ಸ್ವಲ್ಪವೇ ಸ್ವಲ್ಪ. ಏಕೆಂದರೆ ನಮಗೆ ಸಮುದ್ರದ ಆಳಕ್ಕೆ ಹೋಗಲು ಆಗುವುದಿಲ್ಲ. ಅದಕ್ಕೆ ಅನೇಕ ವ್ಯವಸ್ಥೆಗಳು ಬೇಕು. ಡಿಸ್ಕವರಿ, ನ್ಯಾಶನಲ್ ಜಿಯೋಗ್ರಾಫಿ, ಅನಿಮಲ್ ಪ್ಲಾನೆಟ್ ಮುಂತಾದ ಟಿವಿ ವಾಹಿನಿಗಳು ಸಮುದ್ರದಾಳದ ಹಲವಾರು ಅಪರೂಪದ ಸಂಗತಿಗಳನ್ನು ದಾಖಲಿಸಿ ನಮ್ಮ ಮುಂದೆ ತಂದಿಡುವ ಪ್ರಯತ್ನ ಮಾಡುತ್ತಿವೆ. ನಾವಾದರೂ ಇಂತಹ ಅಮೂಲ್ಯ ವಿಷಯಗಳನ್ನು ನಮ್ಮ ಮಕ್ಕಳಿಗೆ ತಿಳಿಸುವ ಪ್ರಯತ್ನ ಮಾಡದೇ, ಕೇವಲ ನಮ್ಮ ಮನೆ-ಮನಕೆಡಿಸುವ ಹಾಳು ಮೂಳು ಧಾರವಾಹಿಗಳು, ಕೆಲವು ಅನಗತ್ಯ ವಾರ್ತೆಗಳನ್ನು ನೋಡುತ್ತಲೇ ದಿನ ಹಾಳು ಮಾಡುತ್ತೇವೆ. ಕೆಲವು ಆಸಕ್ತಿದಾಯಕ ಮಾಹಿತಿ ಪೂರ್ಣ ಸರಣಿಗಳನ್ನು ಇನ್ನಾದರೂ ನೋಡೋಣ.

ನಾನಿಲ್ಲಿ ಹೇಳ ಹೊರಟಿರುವುದು ವಿದ್ಯುತ್ ಮೀನು( Electric fish)ಗಳ ಬಗ್ಗೆ. ಏನಿದು ವಿದ್ಯುತ್ ಮೀನು? ಹಿಂದೂ ಮಹಾಸಾಗರದಲ್ಲಿ ವಾಸಿಸುವ ಒಂದು ಜಾತಿಯ ಮೀನುಗಳ ದೇಹದ ಸ್ನಾಯುಗಳಲ್ಲಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಕೆಲವು ಮೀನುಗಳಲ್ಲಿ ೨೨೦ ವೋಲ್ಟ್ ಗಳ ವರೆಗೂ ವಿದ್ಯುತ್ ಉತ್ಪಾದನೆಯಾಗುತ್ತದೆ. ಧನ ಹಾಗೂ ಋಣ ವಿದ್ಯುತ್ ಸಂಚಾರವಾಗುವುದರಿಂದ ಈ ಮೀನುಗಳ ದೇಹದಿಂದ ವಿದ್ಯುತ್ ಪ್ರಸಾರವಾಗುತ್ತದೆ. ಸುಮಾರು ಹತ್ತು ವಿದ್ಯುತ್ ಬಲ್ಬ್ ಗಳನ್ನು ಉರಿಸುವಷ್ಟು ವಿದ್ಯುತ್ ಕೆಲವು ಮೀನುಗಳ ದೇಹದಲ್ಲಿ ಉತ್ಪಾದನೆಯಾಗುತ್ತದೆ. ವಿದ್ಯುತ್ ಮೀನುಗಳ ಕೆಲವು ಪ್ರಭೇಧಗಳು ದಕ್ಷಿಣ ಆಫ್ರಿಕಾದ ಸಿಹಿನೀರಿನಲ್ಲೂ ಕಂಡು ಬರುತ್ತವೆ.

ವಿದ್ಯುತ್ ಮೀನುಗಳು ಮನುಷ್ಯನನ್ನು ಕೊಲ್ಲುವಷ್ಟು ವಿದ್ಯುತ್ ಹೊಂದಿರುತ್ತವೆಯೇ? ಎಂಬ ಪ್ರಶ್ನೆಗೆ ವಿಜ್ಞಾನಿಗಳು ಹೇಳುವುದು ಹೀಗೆ- ಸಾಮಾನ್ಯವಾಗಿ ವಿದ್ಯುತ್ ಮೀನುಗಳಲ್ಲಿ ೪೦-೯೦ ವೋಲ್ಟ್ ಗಳಷ್ಟು ವಿದ್ಯುತ್ ಇರುತ್ತದೆ. ಇದು ಸಾಮಾನ್ಯ ಮನುಷ್ಯನನ್ನು ಸಾಯಿಸಲಾರದು. ಸಣ್ಣಗೆ ಶಾಕ್ ಹೊಡೆದ ಅನುಭವವಾದೀತು ಅಷ್ಟೇ. ಆದರೆ ಕೆಲವು ವಿದ್ಯುತ್ ಮೀನುಗಳಲ್ಲಿ ೨೨೦ ವೋಲ್ಟ್ ವಿದ್ಯುತ್ ಇರುವುದರಿಂದ ಸಾವು ಸಂಭವಿಸದೇ ಇದ್ದರೂ ಮನುಷ್ಯನನ್ನು ಅರೆ ಪ್ರಜ್ಞಾವಸ್ಥೆಗೆ ತಳ್ಳ ಬಹುದು. ಆದರೆ ವಿದ್ಯುತ್ ಶಾಕ್ ಗೆ ಒಳಗಾದ ಮನುಷ್ಯನಿಗೆ ಮೊದಲೇ ಹೃದಯ ಸಂಬಂಧೀ ಕಾಯಿಲೆಗಳಿದ್ದರೆ ಅಥವಾ ಒಮ್ಮೆಲೇ ಹಲವಾರು ವಿದ್ಯುತ್ ಮೀನುಗಳ ದಾಳಿಗೆ ಒಳಗಾದರೆ ಅವನ ಹೃದಯ ಸ್ಥಂಭನಗೊಂಡು ಸಾಯುವ ಸಂಭವವಿದೆ. ಈ ಜಾತಿಯ ಮೀನುಗಳು ತಮ್ಮಲ್ಲಿರುವ ವಿದ್ಯುತ್ ಬಳಸಿಕೊಂಡು ತಮ್ಮ ಆಹಾರವನ್ನು ಬೇಟೆಯಾಡುತ್ತವೆ. ಇದರ ಶಾಕ್ ನಿಂದಾಗಿ ಸಣ್ಣ ಸಣ್ಣ ಜೀವಿಗಳು ಸಾವಿಗೆ ಈಡಾದರೆ, ಕೆಲವು ಪ್ರಜ್ಞೆ ಕಳೆದುಕೊಳ್ಳುತ್ತವೆ, ಇದರಿಂದ ವಿದ್ಯುತ್ ಮೀನುಗಳಿಗೆ ತಮ್ಮ ಆಹಾರವನ್ನು ಸೇವಿಸಲು ಅನುಕೂಲವಾಗುತ್ತದೆ. ಕೆಲವು ಸಲ ತಮ್ಮ ಶತ್ರುಗಳನ್ನು ಹಿಮ್ಮೆಟ್ಟಿಸಲೂ ಸಹಕಾರಿಯಾಗುತ್ತದೆ.

ವಿದ್ಯುತ್ ಮೀನುಗಳಲ್ಲಿ ಪ್ರಮುಖವಾಗಿ ಮೂರು ವಿಧಗಳಿವೆ. ಇಲೆಕ್ಟ್ರಿಕ್ ಈಲ್, ಇಲೆಕ್ಟ್ರಿಕ್ ಕ್ಯಾಟಲ್ ಫಿಶ್, ಇಲೆಕ್ಟ್ರಿಕ್ ರೇ ಇವು ಮೂರು ಜಾತಿಯ ಮೀನುಗಳು ಅಧಿಕವಾಗಿ ವಿದ್ಯುತ್ ಉತ್ಪಾದಿಸುತ್ತವೆ. ಇಲೆಕ್ಟ್ರೋಸೈಟ್ ಎಂಬ ಜೀವ ಕೋಶಗಳ ಸಹಾಯದಿಂದ ಈ ಮೀನುಗಳು ತಮ್ಮ ದೇಹದಲ್ಲಿ ವಿದ್ಯುತ್ ಅನ್ನು ಉತ್ಪಾದಿಸುತ್ತವೆ. ಕೆಲವು ಮೀನುಗಳ ಬಾಲದಿಂದ ವಿದ್ಯುತ್ ಪ್ರಸಾರವಾಗುತ್ತದೆ. 

ಪೂರಕ ಮಾಹಿತಿ: ಇದೇ ಪ್ರಭೇದಕ್ಕೆ ಸೇರುವ ಸ್ಟ್ರಿಂಗ್ ರೇ ಎನ್ನುವ ಮೀನಿನ ದಾಳಿಯಿಂದ ‘ಕ್ರೋಕೋಡೈಲ್ ಹಂಟರ್’ ಖ್ಯಾತಿಯ ಸ್ಟೀವ್ ಇರ್ವಿನ್ ಮರಣ ಹೊಂದಿದ ವಿಷಯ ನಿಮಗೆ ತಿಳಿದಿರಬಹುದು. ಮೊಸಳೆಗಳ ಬಗ್ಗೆ ಸಾಕ್ಷ್ಯ ಚಿತ್ರಗಳನ್ನು ತಯಾರಿಸುತ್ತಿದ್ದ ಸ್ಟೀವ್ ಇರ್ವಿನ್ 2006ರ ಸೆಪ್ಟೆಂಬರ್ ೪ರಂದು ಸ್ಟ್ರಿಂಗ್ ರೇ ಎಂಬ ಮೀನಿನ ದಾಳಿಯಿಂದ ನಿಧನ ಹೊಂದಿದ್ದರು.  

ಚಿತ್ರ ವಿವರ : ೧. ಇಲೆಕ್ಟ್ರಿಕ್ ಈಲ್ ೨. ಇಲೆಕ್ಟ್ರಿಕ್ ರೇ  ೩. ಇಲೆಕ್ಟ್ರಿಕ್ ಕ್ಯಾಟಲ್ ಫಿಶ್

ಚಿತ್ರ ಕೃಪೆ: ವಿವಿಧ ಅಂತರ್ಜಾಲ ತಾಣಗಳಿಂದ