ಕಡಲೆ ಹಿಟ್ಟಿನ ಆರೋಗ್ಯಕಾರಿ ಗುಣಗಳು

ಕಡಲೆ ಹಿಟ್ಟಿನ ಆರೋಗ್ಯಕಾರಿ ಗುಣಗಳು

ಕಡಲೆ ಹಿಟ್ಟನ್ನು ಬಹುತೇಕರು ಬೋಂಡಾ, ಬಜ್ಜಿ ಕರಿಯಲು ಮಾತ್ರ ಬಳಕೆ ಮಾಡುತ್ತಾರೆಂದು ತಿಳಿದುಕೊಂಡಿದ್ದಾರೆ. ಉತ್ತಮ ಗುಣಮಟ್ಟದ ಕಡಲೆ ಹಿಟ್ಟು ಆರೋಗ್ಯ ಮತ್ತು ಸೌಂದರ್ಯ ವರ್ಧಕವೂ ಹೌದು. ಗ್ರಾಮೀಣ ಭಾಗದಲ್ಲಿ ಬಹಳಷ್ಟು ಮಂದಿ ಈಗಲೂ ಸ್ನಾನ ಮಾಡುವಾಗ ಕಡಲೆ ಹಿಟ್ಟನ್ನು ಸಾಬೂನಿನಂತೆ ಬಳಸುತ್ತಾರೆ. ಇದರಿಂದ ಅವರ ತ್ವಚೆ ಕಾಂತಿಯುತವಾಗುತ್ತದೆ. ಅದೇ ರೀತಿ ಕಡಲೆ ಹಿಟ್ಟನ್ನು ಬಳಸಿಕೊಂಡು ತಲೆ ಸ್ನಾನ ಮಾಡಿದರೆ ಹೊಟ್ಟು (ಡ್ಯಾಂಡ್ರಫ್) ಸಮಸ್ಯೆ ದೂರವಾಗುತ್ತದೆ. ಇದೆಲ್ಲಾ ನಮ್ಮ ಹಿರಿಯರು ತಿಳಿದಿದ್ದ ಜ್ಞಾನ ಸಂಪತ್ತು. ಆದರೆ ನಾವಿಂದು ಬಣ್ಣ ಬಣ್ಣದ ಜಾಹೀರಾತುಗಳನ್ನು ನಂಬಿ ರಾಸಾಯನಿಕ ಮಿಶ್ರಿತ ಶ್ಯಾಂಪೂ, ಸಾಬೂನುಗಳನ್ನು ಬಳಸಿ ತಾತ್ಕಾಲಿಕವಾದ ಸೌಂದರ್ಯವನ್ನು ಪಡೆದುಕೊಂಡು ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. 

ಶುದ್ಧವಾದ ರಾಸಾಯನಿಕ ರಹಿತ ಕಡಲೆ ಬೇಳೆಯ ಹಿಟ್ಟಿನ ಪ್ರಯೋಜನಗಳು:

* ಕಡಲೆ ಬೇಳೆ ಹಿಟ್ಟನ್ನು ನೀರು ಅಥವಾ ಮೊಸರಿನೊಂದಿಗೆ ಬೆರೆಸಿ ಚರ್ಮಕ್ಕೆ ಹಚ್ಚಿಕೊಂಡರೆ, ನಿಮ್ಮ ಚರ್ಮದಲ್ಲಿರುವ ಕೊಳೆಯು ನಿವಾರಣೆಯಾಗುತ್ತದೆ. ಚರ್ಮದ ರಂಧ್ರಗಳು ತೆರೆದುಕೊಳ್ಳುತ್ತವೆ. ಚರ್ಮವು ನೈಸರ್ಗಿಕವಾದ ಹೊಳಪನ್ನು ಪಡೆದುಕೊಳ್ಳುತ್ತದೆ. 

* ಕಡಲೆ ಹಿಟ್ಟಿಗೆ ಸ್ವಲ್ಪ ಹಾಲು ಮತ್ತು ಅರಸಿನ ಸೇರಿಸಿ ಮುಖಕ್ಕೆ ಹಚ್ಚಿಕೊಂಡರೆ ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಬ್ಯಾಕ್ಟೀರಿಯಾ ವಿರೋಧಿ ಗುಣ ಲಕ್ಷಣಗಳಿಂದಾಗಿ ಮುಖದಲ್ಲಿ ಮೂಡುವ ಮೊಡವೆಗಳು ಮತ್ತು ಅವುಗಳ ಉರಿಯೂತವನ್ನು ನಿವಾರಣೆಯಾವುತ್ತದೆ. ೨೦೧೧ರಲ್ಲಿ ಪ್ರಕಟವಾದ ‘ಜರ್ನಲ್ ಆಫ್ ಫಾರ್ಮಸಿ ರಿಸರ್ಚ್’ ನಲ್ಲಿ “Antimicrobial activity of Gram Flour against human pathogens’ ಎಂಬ ಸಂಶೋಧನಾ ವರದಿ ಪ್ರಕಟವಾಗಿದೆ.

* ಕಡಲೆ ಹಿಟ್ಟನ್ನು ಗುಲಾಬ್ ಪಾನಿ ಅಥವಾ ರೋಸ್ ವಾಟರ್ ಜೊತೆ ಬೆರೆಸಿ ಮುಖಕ್ಕೆ ಹಚ್ಚಿದರೆ, ಸತ್ತ ಜೀವಕೋಶಗಳು ನಿವಾರಣೆಯಾಗಿ ಚರ್ಮವು ನೈಸರ್ಗಿಕ ಹೊಳಪನ್ನು ಪಡೆದುಕೊಳ್ಳುತ್ತದೆ.

* ಕಡಲೆ ಹಿಟ್ಟಿನ ಜೊತೆ ಸೌತೆಕಾಯಿ ತಿರುಳನ್ನು ಮೊಸರಿನಲ್ಲಿ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಸೂರ್ಯನ ಬಿಸಿಲಿನಿಂದಾಗುವ ತ್ವಜೆಗೆ ಹಾನಿ ಕಡಿಮೆಯಾಗುತ್ತದೆ. ದದ್ದುಗಳು ಮತ್ತು ಕಲೆಗಳು ಕಡಿಮೆಯಾಗುತ್ತವೆ. ಚರ್ಮಕ್ಕೆ ಹೊಳಪು ಬಂದು ಮುಖದಲ್ಲಿ ಲವಲವಿಕೆ ಮೂಡುತ್ತದೆ.

* ಕಡಲೆ ಹಿಟ್ಟಿಗೆ ಸ್ವಲ್ಪ ನೀರು ಬೆರೆಸಿ ಪೇಸ್ಟ್ ತರಹ ಮಾಡಿಕೊಂಡು ಈ ಮಿಶ್ರಣವನ್ನು ತಲೆಕೂದಲಿಗೆ ಹಚ್ಚ ಬೇಕು. ಈ ರೀತಿ ಹಚ್ಚಿ ಸ್ವಲ್ಪ ಸಮಯದ ನಂತರ ಸ್ನಾನ ಮಾಡುವುದರಿಂದ ಕೂದಲಿನೆಡೆಗಳಲ್ಲಿರುವ ಕೊಳೆಗಳು ತೊಳೆದುಹೋಗುತ್ತವೆ. ಕೂದಲಿಗೆ ಹೊಳಪು ಬರುತ್ತದೆ. ಕಡಲೆ ಹಿಟ್ಟು ಉತ್ತಮ ಕಂಡೀಷನರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ.

* ಕಡಲೆ ಹಿಟ್ಟಿನಲ್ಲಿ ಶಿಲೀಂದ್ರ ನಾಶಕ ಗುಣಗಳು ಹೇರಳವಾಗಿವೆ. ಶುದ್ಧ ತೆಂಗಿನ ಎಣ್ಣೆ, ನಿಂಬೆರಸ ಮತ್ತು ಕಡಲೆ ಹಿಟ್ಟನ್ನು ಮಿಶ್ರ ಮಾಡಿ ತಲೆ ಕೂದಲಿಗೆ ಹಚ್ಚುವುದರಿಂದ ತಲೆ ಹೊಟ್ಟು ಸಮಸ್ಯೆ ಬಹು ಬೇಗನೇ ನಿವಾರಣೆಯಾಗುತ್ತದೆ. 

* ಕಡಲೆ ಹಿಟ್ಟಿನಲ್ಲಿರುವ ಪ್ರೋಟೀನ್ ಕೂದಲನ್ನು ಬಹು ವೇಗವಾಗಿ ಬೆಳೆಯುವಂತೆ ಮಾಡುತ್ತದೆ. ಕಡಲೆ ಹಿಟ್ಟನ್ನು ಆಲಿವ್ ಎಣ್ಣೆಯ ಜೊತೆ ಬೆರೆಸಿ ಹಚ್ಚಿಕೊಂಡರೆ ಕೂದಲುಗಳು ಬಲಶಾಲಿಯಾಗುತ್ತವೆ.

ನಿಮ್ಮ ತ್ವಚೆ ಅಥವಾ ಚರ್ಮಕ್ಕೆ ಕಡಲೆ ಹಿಟ್ಟು ಹೊಂದಿಕೆಯಾಗುತ್ತದೆಯೇ ಎಂಬುದನ್ನು ಮೊದಲು ಪರೀಕ್ಷಿಸಿ. ನಂತರ ಈ ಮೇಲೆನ ಪ್ರಯೋಗಗಳನ್ನು ಮಾಡಿ. ಏಕೆಂದರೆ ಕೆಲವರ ಚರ್ಮಕ್ಕೆ ಕಡಲೆ ಹಿಟ್ಟು ಅಲರ್ಜಿಯಾಗುವ ಸಾಧ್ಯತೆ ಇದೆ. ನೀವು ಬಳಸುವ ಕಡಲೆ ಹಿಟ್ಟು ಉತ್ತಮ ದರ್ಜೆಯದಾಗಿರಲಿ, ಕಲಬೆರಕೆ ರಹಿತವಾಗಿರಲಿ.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ