ಕಡಲ ಸೆರಗಲಿ ಶತ್ರು ನಡುಗಿಸಿದ ಮೆಣಸಿನ ರಾಣಿಯ ಮಿರ್ಜಾನ್ ಕೋಟೆ
ಬಲಿಷ್ಠ ಸಾಮ್ರಾಜ್ಯ ನಿರ್ಮಿಸಿ ರಾಜವಂಶ, ಉತ್ತಮ ಆಡಳಿತ ಮತ್ತು ಜನರ ರಕ್ಷಣೆ ಮಾಡಲು ಕೋಟೆಗಳು ಪ್ರಭಲ ರಾಜಾಡಳಿತಕ್ಕೆ ಆತ್ಮಗಳಾಗಿದ್ದವು. ಅಂತಹ ಕೋಟೆಗಳಲ್ಲಿ ಉತ್ತರ ಕನ್ನಡ ( ಕಾರವಾರ) ಜಿಲ್ಲೆ ಕುಮಟಾ ತಾಲೂಕಿನ ಮಿರ್ಜಾನ್ ಕೋಟೆ ಒಂದಾಗಿದೆ. ಇದು ಐತಿಹಾಸಿಕತೆಯನ್ನು ಸಾರಿ ಸಾರಿ ಹೇಳುತ್ತಿದೆ. ಈ ಕೋಟೆಯನ್ನು ಸಾಳುವ ವಂಶದ ಗೇರುಸೊಪ್ಪದ ರಾಣಿ ಚನ್ನಬೈರಾದೇವಿಯು 16 ನೇ ಶತಮಾನದಲ್ಲಿ ಈ ಅಭೇದ್ಯ ಕೋಟೆಯನ್ನು ನಿರ್ಮಿಸಿದಳು. ನಂತರ 1608-1640 ರ ಅವಧಿಯಲ್ಲಿ ಕುಮಟಾ ಪಟ್ಟಣದ ರಕ್ಷಣೆಗೆ ಬಿಜಾಪುರ ಸುಲ್ತಾನ ಶರೀಫ ಉಲ್ ಮುಲ್ಕ ಇದನ್ನು ಮತ್ತೆ ನವೀಕರಿಸಿದ ಅಂತಾ ಹೇಳಲಾಗುತ್ತಿದೆ.ಈ ಕೋಟೆಯು ಹಲವು ಆವೃತ್ತಿಯ ಕೋಟೆಯಾಗಿದೆ. ವಿಜಯ ನಗರದ ಅರಸರ ಸಾಮಂತ ರಾಣಿಯಾಗಿ ಸಣ್ಣ ರಾಜ್ಯ ಆಳುತ್ತಿದ್ದ ಚನ್ನಬೈರಾದೇವಿಯು ಇಲ್ಲಿ ಮೆಣಸಿನ ವ್ಯಾಪಾರವನ್ನು ಮಿರ್ಜಾನ್ ಬಂದಿರಿನಿಂದ ಮಾಡುತ್ತಿರುವದರಿಂದ ಈ ರಾಣಿಗೆ ಪೊರ್ಚಗೀಸರು " ಮೆಣಸಿನ ರಾಣಿ" ಅಥವಾ ಪೆಪ್ಪರ್ ರಾಣಿ ಅಂತಾ ಕರೆಯುತ್ತಿದ್ದರು. ಸುಮಾರು 55 ವರ್ಷ ಪ್ರಭಲ ಆಡಳಿತ ಮಾಡಿದ ರಾಣಿ ಸುಭದ್ರ ರಾಜ್ಯ ನಿರ್ಮಿಸಿ ಕೋಟೆ ಕಟ್ಟಿ ಪ್ರಖ್ಯಾತಳಾಗಿದ್ದಳೆ. ಭಾರತದ ಐತಿಹಾಸಿಕ ಕುರುಹುಗಳಲ್ಲಿ ಮಿರ್ಜಾನ್ ಕೋಟೆಯು ಒಂದಾಗಿದೆ.ಇದು "ಕರಾವಳಿಯ ಕೋಟೆಗಳ ರಾಣಿ"ಯಾಗಿದೆ.
ಮಿರ್ಜಾನ್ ಕೋಟೆ ಗ್ರಾಮದ ಇತಿಹಾಸ: ಮಿರ್ಜಾನ್ ಗ್ರಾಮವು ಒಂದು ಐತಿಹಾಸಿಕ ಗ್ರಾಮವಾಗಿದ್ದು ಗ್ರಾಮ ಪಂಚಾಯತ ಸ್ಥಳೀಯ ಆಡಳಿತ ಕೇಂದ್ರ ಗ್ರಾಮವಾಗಿದೆ. ಸುಮಾರು 9 ಹಳ್ಳಿಗಳು ಅದರ ವ್ಯಾಪ್ತಿಗೆ ಬರುತ್ತವೆ. ಉತ್ತರ ಕನ್ನಡ ಜಿಲ್ಲೆಯ ಪಶ್ಚಿಮ ಕರಾವಳಿಯ ಅಘನಾಶಿನಿ ನದಿಯ ತೀರದಿಂದ 12 ಕಿ.ಮಿ ದೂರದಲ್ಲಿದೆ. ರಾಷ್ಟ್ರೀಯ ಹೆದ್ದಾರಿ 66 ( ಕಾರವಾರ - ಕುಮಟಾ) ದಿಂದ 1 ಕಿ.ಮಿ, ಕುಮಟಾದಿಂದ 8 ಕಿ.ಮಿ, ಗೋಕರ್ಣದಿಂದ 21 ಕಿ.ಮಿ ಅಂತರದ ದೂರದಲ್ಲಿ ಗ್ರಾಮವಿದೆ. ಇದೇ ಗ್ರಾಮದಲ್ಲಿ ಮಿರ್ಜಾನ್ ಕೋಟೆ ಇದೆ. ಈ ಕೋಟೆಯು ಹಲವಾರು ಯುದ್ಧಗಳಿಗೆ ಸಾಕ್ಷಿಯಾಗಿದ್ದು ವಿಜಯ ನಗರದ ಅರಸರು, ಬಿಜಾಪುರದ ಸುಲ್ತಾನರು, ಪೊರ್ಚಗೀಸರು, ದೇಶಿಯ ಅರಸರು ನಂತರ ಬ್ರಿಟಿಷರು ಈ ಕೋಟೆಯನ್ನು ವಶಪಡಿಸಿಕೊಂಡರು. ಆದರು ಈ ಕೋಟೆಯ ಮೇಲೆ ಪ್ರಾಂತ್ಯೀಯ ಅರಸರು, ಮಾಂಡಲಿಕರು ಕೆಲವು ಬಾರಿ ದಾಳಿ ಮಾಡಿ ವಶಪಡಿಸಿಕೊಂಡು ಪ್ರಭುತ್ವ ಹೇರಿದ್ದರು. ಮಿರ್ಜಾನ್ ಕೋಟೆ ಈಗಲೂ ಸುವ್ಯವಸ್ಥಿತವಾಗಿ ಇರುವುದು ಒಂದು ಐತಿಹಾಸಿಕ ಇತಿಹಾಸ ಪ್ರೀಯರಿಗೆ ಮತ್ತು ಪ್ರವಾಸಿಗರಿಗೆ ಸಂತಸದ ವಿಷಯವಾಗಿದೆ.ಈ ಕೋಟೆ ಭಾರತೀಯ ಪುರಾತತ್ವ ಇಲಾಖೆಯ ಧಾರವಾಡ ವಲಯ ವಿಭಾಗಕ್ಕೆ ಒಳಪಡುತ್ತದೆ.
ಕೋಟೆಯ ವಿನ್ಯಾಸ: ಮಿರ್ಜಾನ್ ಕೋಟೆಯು ಸುಮಾರು 11 ಎಕರೆ ಪ್ರದೇಶದಲ್ಲಿ ನಿರ್ಮಾಣಮಾಡಲಾಗಿದೆ. ಈ ಕೋಟೆಯು ಕೆಂಪು ಮಿಶ್ರಿತ ಲ್ಯಾಟರೈಟ್ ಕಲ್ಲುಗಳಿಂದ ಸೃಷ್ಟಿಸಲಾಗಿದ್ದು. ಗೋಡೆಗಳು ಸುಮಾರು 20-50ಅಡಿ ಎತ್ತರದ ಬಹು ಸ್ತರದಲ್ಲಿ ನಿರ್ಮಿಸಲಾಗಿದೆ. ಈ ಕೋಟೆಯ ಗೋಡೆಗಳ ಮೇಲ್ಭಾಗದ ಹೊರ ಬಾಹು ಬುರುಜುಗಳಿಂದ ರಚಿಸಲ್ಪಟ್ಟಿವೆ. ಡೆಕ್ಕನ್ ಮತ್ತು ಮೊಘಲ್ ವಾಸ್ತು ಶಿಲ್ಪ ಕಲಾ ಶೈಲಿಯ ಸಮ್ಮಿಲನದ ವಿನ್ಯಾಸ ಹೊಂದಿದ್ದು ಅತ್ಯದ್ಭುತವಾಗಿ ಕಟ್ಟಲಾಗಿದೆ. ಕೋಟೆಯ ಮುಖ್ಯ ಮುಖ ಬಾಹುವಿನಲ್ಲಿ ಗಡಿಯಾರ ಗೋಪುರ ಹೊಂದಿದ್ದು ಭವ್ಯವಾಗಿ ಪ್ರವಾಸಿಗರನ್ನು ಸೆಳೆಯುತ್ತದೆ. ಈ ಕೋಟೆಯು ಒಂದು ಮುಖ್ಯ ಪ್ರವೇಶ ದ್ವಾರ ಹೊಂದಿದ್ದು ಕೋಟೆಯ ಹಿಂಭಾಗದಲ್ಲಿ ಎಡ ಬಲ ಮೂರು ಸಣ್ಣ ಸಣ್ಣ ಸಹಾಯಕ ದ್ವಾರಗಳನ್ನು ಹೊಂದಿದೆ. ಹಲವಾರು ಸುಂರಗ ರಹಸ್ಯ ದ್ವಾರಗಳನ್ನು ಕೋಟೆಯಲ್ಲಿ ನೋಡಬಹುದು. ಅನ್ಯ ರಾಜ್ಯಗಳಿಂದ ದಾಳಿ ನಡೆದಾಗ ರಾಜ ಪರಿವಾರ ತಪ್ಪಿಸಿಕೊಳ್ಳಲು, ಶತ್ರುಗಳನ್ನು ಕಟ್ಟಿ ಹಾಕಲು ಮತ್ತು ಕೋಟೆಯ ರಕ್ಷಣೆಗೆ ಈ ಮಾರ್ಗಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಈ ಕೋಟೆಯ ಸುತ್ತಲೂ ಆಳವಾದ ಕಂದಕವನ್ನು ನಿರ್ಮಿಸಲಾಗಿದ್ದು ಇದು ಶತ್ರು ದಾಳಿ ತಡೆಯುವ ತಂತ್ರವಾಗಿತ್ತು. ಮುಖ್ಯ ದ್ವಾರ ಪ್ರವೇಶ ಮಾಡಿ ಕೋಟೆಯ ಒಳಗಡೆ ಹೋಗಲು ವಿಶಾಲವಾದ ಮತ್ತು ಸದೃಢವಾದ ಮೆಟ್ಟಿಲುಗಳನ್ನು ಕಟ್ಟಲಾಗಿದ್ದು ಎರಡನೇಯ ಕೋಟೆಯ ಸ್ತರಕ್ಕೆ ಹೋಗಲು ಸುಮಾರು 30 ಕ್ಕಿಂತ ಹೆಚ್ಚು ಮೆಟ್ಟಿಲನ್ನು ನಿರ್ಮಿಸಲಾಗಿದೆ.
ಕೋಟೆಯಲ್ಲಿ ಬೃಹತ್ ಆಕಾರದಲ್ಲಿ ಸಭಾಂಗಣವಿದ್ದು ಅದರಲ್ಲಿ ದರ್ಬಾರ್ ಹಾಲ್ ಕೂಡಾ ಇದೆ. ಸಭಾಂಗಣ ಮುಂದೆ ಪ್ರಾರ್ಥನಾ ಮಂದಿರ ಹಾಗೂ ಕುಳಿತುಕೊಳ್ಳಲು ಪ್ರಾಂಗಣಗಳಿವೆ. ಅವುಗಳಿಗೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಲಾಗಿದೆ. ಕೋಟೆಯ ಎಲ್ಲಾ ಕಡೆ ವಿಶ್ರಾಂತಿ ಪಡೆಯಲು ಬೆಂಚ್ ನಿರ್ಮಾಣ ಮಾಡಲಾಗಿದೆ. ಈ ಕೋಟೆಯಲ್ಲಿ 9 ಬಾವಿಗಳು ಇದ್ದು ಒಂದು ಬಾವಿಗೆ ಸುರಂಗ ಮಾರ್ಗವಾಗಿ ಮೆಟ್ಟಿಲುಗಳು ಇವೆ. ಇವು ಬಾವಿಯ ಮಧ್ಯ ಭಾಗಕ್ಕೆ ಸಂಪರ್ಕ ಕಲ್ಪಿಸುತ್ತವೆ. ಇದು ಒಂದು ಅದ್ಭುತ ರಚನೆಯಾಗಿದೆ. ಕೋಟೆಯ ಮಧ್ಯ ಭಾಗದಲ್ಲಿ ವಿಶಾಲವಾದ ಮಾರುಕಟ್ಟೆ ಮಳಿಗೆ ಹೊಂದಿದ್ದು ಇಲ್ಲಿ ಮೆಣಸಿನ ವ್ಯಾಪಾರ ನಡಿಯುತ್ತಿತ್ತು. ಆ ಮಳಿಗೆಗಳು ನೆಲಸಮವಾಗಿ ದುಸ್ಥಿತಿಯಲ್ಲಿವೆ. ಕೋಟೆಯ ಒಳಗಡೆ ಒಂದು ದೊಡ್ಡ ಮರದ ಕೆಳಗೆ ಹಿಂದೂ ವಿಗ್ರಹ ಸ್ಥಾಪಿಸಲಾಗಿದೆ. ಕೋಟೆಯನ್ನು ಹಲವಾರು ವಿಭಾಗದಲ್ಲಿ ವಿಭಜಿಸಲಾಗಿದೆ.
ಪ್ರಾಂಗಣದ ಎದುರು ಗೋಪುರದಲ್ಲಿ 25 ಕ್ಕಿಂತ ಹೆಚ್ಚು ಮೆಟ್ಟಿಲುಗಳನ್ನು ನಿರ್ಮಾಣ ಮಾಡಿ ಧ್ವಜ ಗೋಪುರ ನಿರ್ಮಿಸಲಾಗಿದೆ. ಇದು ವೀಕ್ಷಣಾ ಗೋಪುರವು ಆಗಿದ್ದು ಇದರಲ್ಲಿ ಧ್ವಜ ಕಟ್ಟೆ ಕಟ್ಟಲಾಗಿದೆ. ಇಲ್ಲಿ ಪ್ರತಿ ವರ್ಷ ಎರಡು ಬಾರಿ ಧ್ವಜ ವಂದನೆ ನೆರವೇರುತ್ತದೆ. ಇಲ್ಲಿ ನಿಂತು ನೋಡಿದರೆ ಕೋಟೆಯ ಬಹು ಭಾಗ ವೀಕ್ಷಿಸಬಹುದು. ಸುತ್ತ ಮುತ್ತಲಿನ ಹಚ್ಚಹಸಿರ ಪರಿಸರ, ಬೆಟ್ಟ, ಸರಣಿ ಸಾಲು ನೋಡಬಹುದು. ಅಘನಾಶಿನಿ ನದಿ ತೀರ ಮತ್ತು ಕಡಲ ದ್ವೀಪಗಳನ್ನು ಕಾಣಬಹುದು. ಕೋಟೆಯ ಎರಡನೇ ಸ್ತರದಲ್ಲಿ ಹೆಚ್ಚು ಬುರುಜುಗಳನ್ನು ನಿರ್ಮಿಸಲಾಗಿದೆ. ಇಲ್ಲಿಂದ ಸೈನಿಕರು ಬರು ಹೋಗುವರನ್ನು ವೀಕ್ಷಿಸುತ್ತಿದ್ದರು. ಇಲ್ಲಿ ಫಿರಂಗಿಗಳಿಂದ ಮದ್ದು ಗುಂಡು ಹಾರಿಸಲು ವಿ ಆಕಾರದಲ್ಲಿ ಕೋಟೆಯ ಮೇಲಿನ ವೃತ್ತಾಕಾರದಲ್ಲಿ ಗೂಣುಗಳನ್ನು ನಿರ್ಮಿಸಲಾಗಿದೆ.ಇವು ಕೋಟೆಯ ರಕ್ಷಣಾ ಕವಾಟುಗಳಂತೆ ಕೆಲಸ ಮಾಡುತ್ತಿದ್ದವು.
ಪುರಾತತ್ವ ಇಲಾಖೆಯ ಸಮೀಕ್ಷೆಯ ಉತ್ಖನನದಲ್ಲಿ ಅನೇಕ ಯುದ್ಧ ಸಾಮಾಗ್ರಿಗಳು, ಗುಂಡುಗಳು, ಚಿನ್ನದ ನಾಣ್ಯಗಳು, ಮಣಿ ಮಡಿಕೆ ಮುತ್ತುಗಳು, ವಿದೇಶಿ ವಸ್ತುಗಳು, ನಾಣ್ಯಗಳು ಇತ್ಯಾದಿ ಐತಿಹಾಸಿಕ ಅವಶೇಷಗಳು ದೊರೆತಿವೆ. ಒಟ್ಟಿನಲ್ಲಿ ಮಿರ್ಜಾನ್ ಕೋಟೆ ಒಂದು ಸುಭದ್ರ ಕೋಟೆಯಾಗಿರುವದರಲ್ಲಿ ಅನುಮಾನವಿಲ್ಲದಾಗಿದೆ.
ಕೋಟೆಯನ್ನು ನವೀಕರಿಸಬೇಕು: ಕೋಟೆಯಲ್ಲಿ ಬಹಳಷ್ಟು ಹುಲ್ಲು ಬೆಳೆದಿದೆ. ಹುಲ್ಲು ಕತ್ತರಿಸಲು ಮತ್ತು ಸೌಂದರ್ಯಕರಣಕ್ಕೆ ಒತ್ತು ಕೊಡಬೇಕು. ಬುರುಜುಗಳು, ಕೆಲವು ಗೋಡೆಗಳು ಬೀಳುವ ದುಸ್ಥಿತಿಯಲ್ಲಿವೆ. ಅವುಗಳನ್ನು ಎ.ಎಸ್.ಐ ಅನುದಾನದಡಿಯಲ್ಲಿ ಮತ್ತು ಲಭ್ಯ ನಿಧಿಗಳಲ್ಲಿ ನವೀಕರಿಸಬೇಕಿದೆ. ಕೋಟೆಯ ಒಳಗೆ ಸಿಮೇಂಟ್ ಕಾಂಕ್ರೀಟಿಕರಣ ಮಾಡಬೇಕು, ಗೋಡೆಗಳಿಗೆ ಬಣ್ಣ ಲೇಪಿಸಬೇಕು, ಗೈಡಗಳ ನೇಮಕ, ಸ್ವಚ್ಛತೆ, ಬಹಳಷ್ಟು ಶೌಚಾಲಯ, ವಸತಿ ಇತ್ಯಾದಿ ಸೌಕರ್ಯಕ್ಕೆ ಆದ್ಯತೆ ನೀಡಿ ಕೋಟೆಯಲ್ಲಿ ನವೀಕರಣ ತರಬೇಕು.
ಚಿತ್ರ - ಬರಹ : ಶರೀಫ ಗಂ ಚಿಗಳ್ಳಿ