ಕಡಲ ಹನಿ ಒಡಲ ಧ್ವನಿ

ಮೂರು ಸಾಹಿತಿಗಳು ಸೇರಿ ಬರೆದ ಗಝಲ್ ಗಳ ಸಂಕಲನವೇ ‘ಕಡಲ ಹನಿ ಒಡಲ ಧ್ವನಿ. ಪುಸ್ತಕದ ಬೆನ್ನಿಗೆ ಹಿಮ್ಮಾತು ಹೀಗಿದೆ “ನಾವು ಮೂವರು ನೆರೆಕರೆಯವರು ರತ್ನಾ ಟಿ ಭಟ್ಟ, ಪುತ್ತೂರು, ಹಾ ಮ ಸತೀಶ ಬೆಂಗಳೂರು ಮತ್ತು ನಾನು ಡಾ ಸುರೇಶ ನೆಗಳಗುಳಿ ಒಟ್ಟು ಸೇರಿ ನಮ್ಮ ಹವ್ಯಾಸಗಳಲ್ಲಿ ಒಂದಾದ ಗಜಲ್ ರಚನೆಗಳನ್ನು ಪ್ರಕಾಶಿಸುವ ಇಚ್ಚೆ ಹೊಂದಿ ‘ಕಡಲ ದನಿ ಒಡಲ ಧ್ವನಿ’ ಎಂಬ ಶೀರ್ಷಿಕೆಯಡಿಯಲ್ಲಿ ತಲಾ ಮೂವತ್ತರಂತೆ ಒಟ್ಟು ತೊಂಬತ್ತು ವಿಭಿನ್ನ ರೀತಿಯ ಗಜಲ್ ಗಳನ್ನು ಲೋಕಾರ್ಪಣೆ ಮಾಡುತ್ತಿದ್ದೇವೆ.”
ಈ ಕೃತಿಗೆ ಕಲಬುರಗಿಯ ಪದವಿ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾದ ಡಾ. ಮಲ್ಲಿನಾಥ ಎಸ್ ತಳವಾರ ಇವರು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಅವರು ತಮ್ಮ ಮುನ್ನುಡಿಯಲ್ಲಿ ವ್ಯಕ್ತ ಪಡಿಸಿದ ಕೆಲವು ಭಾವನೆಗಳು ಹೀಗಿವೆ..
“ಸಾಹಿತ್ಯ ಎನ್ನುವುದು ಕಾಲ್ಪನಿಕ ಮತ್ತು ಸೃಜನಶೀಲ ಬರವಣಿಗೆಯಿಂದ ರೂಪಿಸಲ್ಪಟ್ಟ ಉನ್ನತ ಮತ್ತು ಶಾಶ್ವತವಾದ ಕಲಾತ್ಮಕತೆಯ ಭಂಡಾರ. ಇದು ಕಲಾತ್ಮಕ ಮೌಲ್ಯವನ್ನು ಬಿತ್ತರಿಸುತ್ತ, ಪೂರ್ವ- ಪೂರ್ವೋತ್ತರ ಕಿಟಕಿಯನ್ನು ಒದಗಿಸುತ್ತಾ ಬಂದಿದೆ. ಸಹೃದಯ ಓದುಗರು ತಮ್ಮ ಪೂರ್ವಜರು ಮತ್ತು ಇತರರು ದಿನನಿತ್ಯದ ಜೀವನವನ್ನು ಹೇಗೆ ಎದುರಿಸುತ್ತಿದ್ದರು, ಎಂಜಾಯ್ ಮಾಡುತ್ತಿದ್ದರು ಎಂಬುದನ್ನು ಬದುಕಿನ ವಿವಿಧ ಆಯಾಮಗಳ ಹಿನ್ನಲೆಯಲ್ಲಿ ಅರ್ಥೈಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ನೆಲೆಯಲ್ಲಿ ಸಾಹಿತ್ಯವು ಮಾನವನ ಮನೋಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಜೊತೆಗೆ ನಿರ್ಣಾಯಕ, ವಿಮರ್ಶಾತ್ಮಕ ಚಿಂತನೆಯ ಕೌಶಲ್ಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಇದೊಂದು ಸೂಕ್ಷ್ಮ, ಸಂವೇದನಾಶೀಲ ಜನರ ಹೃದಯದ ಬಡಿತವಾಗಿದೆ. ಇಂತಹ ಹೃದಯದ ಪಿಸುಮಾತೇ ಗಜಲ್. ಈ ಗಜಲ್ ನ ಭಾಷೆ ಕೇವಲ ಪ್ರೀತಿ ಪಾತ್ರರನ್ನು ಮಾತನಾಡಿಸುವ ಭಾಷೆಯಲ್ಲ. ಸಂಬಂಧಗಳ ಕಾಮನಬಿಲ್ಲನ್ನು ತಣಿಸುವ ಹೃದಯದ ಬಡಿತ. ಸಾಂಪ್ರದಾಯಿಕವಾಗಿ ಬಳಲಿಕೆಯ ನೋವು, ಪ್ರೀತಿ, ಹಂಬಲ ಮತ್ತು ಆಧ್ಯಾತ್ಮಿಕ ಪ್ರಶ್ನೆಗಳನ್ನು ಆಹ್ವಾನಿಸುವುದೆ ಗಜಲ್ ನ ಸ್ಥಾಯಿ ಭಾವ. ಗಜಲ್ ಗೆ ಯಾವಾಗಲೂ ಮನುಷ್ಯನ ಜನಜೀವನವೇ ಮೂಲವಸ್ತು. ಜನಮನವೇ ಓರೆಗಲ್ಲು. ಈ ನೆಲೆಯಲ್ಲಿ ಗಜಲ್ ನ ಪಥವು ತನ್ನ ಪ್ರಾದೇಶಿಕ ಮಿತಿಗಳನ್ನು ಮೀರಿದ ಇತಿಹಾಸವನ್ನು ಹೊಂದಿರುವ ಯಾವುದೇ ಸಾಹಿತ್ಯಕ ರೂಪಕ್ಕಿಂತ ಭಿನ್ನವಾಗಿದೆ. ಈ ಕಾವ್ಯಾತ್ಮಕ ರೂಪ ಮತ್ತು ಅದರ ವೈವಿಧ್ಯಮಯ ಮಾರ್ಗಗಳ ಮೂಲಕ ಗಜಲ್ ತನ್ನ ಸಾರ್ವತ್ರಿಕ ಆಕರ್ಷಣೆಯನ್ನು ಬಹಿರಂಗಪಡಿಸುತ್ತಿದೆ.
ಮನುಷ್ಯನಿಗೆ ಭೌತಿಕವಾಗಿ ಉಸಿರಾಟ ಮುಖ್ಯವಾದರೂ ಮಾನಸಿಕವಾಗಿ ಪ್ರೀತಿಯೇ ಸಂಜೀವಿನಿ. ಈ ಪ್ರೀತಿಯೇ ಅವನ/ಅವಳ ವ್ಯಕ್ತಿತ್ವ ನಿರ್ಮಿಸುವ ಸೃಷ್ಟಿ. ಆದಾಗ್ಯೂ ಇಂಥ ಪ್ರೀತಿಯ ತೂಕವನ್ನು ಹೆಚ್ಚು ಮಾಡುವಲ್ಲಿ ವಿರಹದ ಪಾತ್ರ ಅನನ್ಯ. ಸೂರ್ಯ ರಾತ್ರಿಯಲ್ಲಿ ಆಕಾಶವನ್ನು ಕಳೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ಪ್ರೇಮಿಗಳು ತಾವು ಪ್ರೀತಿಸುವವರನ್ನು ಕಳೆದುಕೊಳ್ಳುವ ಭಾವದಲ್ಲಿ ಮುಳುಗುತ್ತಾರೆ. ಇದುವೇ ನಿಜವಾದ ಪ್ರೀತಿ. ಇಲ್ಲಿ ಶಾಯರಾ ಶ್ರೀಮತಿ ರತ್ಮಾ ಭಟ್ ಅವರು ವಿರಹವನ್ನು ಶಪಿಸದೆ ಅದರ ತಂಬೆಲರನ್ನು ಇಲ್ಲಿ ದಾಖಲಿಸುವ ಪ್ರಯತ್ನ ಮಾಡಿದ್ದಾರೆ. ಇದು ಸಹೃದಯ ಓದುಗರಲ್ಲಿ ನವಿರಾದ ಭಾವವನ್ನು ಮೂಡಿಸಬಲ್ಲದು. ವಿರಹದ ದೂರವು ಪ್ರೀತಿಯಲ್ಲಿ ಎರಡು ಹೃದಯಗಳ ಕಾಣೆಯಾದ ಬಡಿತಗಳನ್ನು ಒಂದುಗೂಡಿಸುತ್ತದೆ. ಈ ನೆಲೆಯಲ್ಲಿ ವಿರಹದ ಭಾವ ತೀವ್ರತೆ ಈ ಶೇರ್ ನಿಂದ ಸಹೃದಯ ಓದುಗರಿಗೆ ಮನದಟ್ಟಾಗುತ್ತದೆ. ಇದರ ಮುಖಾಂತರ ‘ವಿರಹ’ದ ವಿವಿಧ ಆಯಾಮಗಳ ಪರಿಚಯ ನಮಗಾಗುತ್ತದೆ.
ವೃತ್ತಿಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಶ್ರೀ ಹಾ ಮ ಸತೀಶರವರು ಉತ್ತಮ ಸಂಘಟಕರಾಗಿದ್ದು, ಕವನ, ಹನಿಗವನ, ಚುಟುಕು, ರುಬಾಯಿ, ಗಜಲ್… ಮುಂತಾದ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃಷಿ ಮಾಡುತ್ತಾ ಬಂದಿದ್ದಾರೆ. ಶ್ರೀಯುತರ ಗಜಲ್ ದುನಿಯಾದಲ್ಲೊಮ್ಮೆ ಸುತ್ತಾಡಿದಾಗ ನಮಗೆ ಅಮ್ಮ, ಪ್ರೀತಿ, ಪ್ರೇಮ, ಪ್ರಣಯ, ವಿರಹ, ಸಾಮಾಜಿಕ ವ್ಯವಸ್ಥೆ, ಮನುಷ್ಯನ ಎಡಬಿಡಂಗಿತನ, ಬದುಕುವ ಕಲೆ, ಸಂಬಂಧಗಳ ಕನವರಿಕೆ, ಭಾವನಾಲೋಕ… ಮುಂತಾದ ಭಾವನಾಲೋಕದ ಕಾಮನಬಿಲ್ಲಿನ ಅನುಭವವಾಗುತ್ತದೆ. ಗಜಲ್ ನ ಮೂಲ ಸ್ಥಾಯಿ ಭಾವವೇ ಪ್ರೀತಿ, ಪ್ರೇಮ. ಬೌದ್ದಿಕತೆಯನ್ನು ಪಕ್ಕಕ್ಕಿಟ್ಟು ಹೃದಯವಂತಿಕೆಯ ಸಾಕಾರ ರೂಪವಿದು. ಮನುಷ್ಯ ಜೀವನದಲ್ಲಿ ಅನ್ನ ಇಲ್ಲದೆ ಬದುಕಬಹುದು, ಆದರೆ ಪ್ರೀತಿಯಿಲ್ಲದೆ ಬದುಕಲಾಗದು. ಇದು ಸಂಸ್ಕಾರ ಕಲಿಸುವ ಊರುಗೋಲು ! ಇಂಥ ಪವಿತ್ರ ಪ್ರೀತಿ ಕುರಿತು ಶಾಯರ್ ಹಾ ಮ ಸತೀಶರವರು ತಮ್ಮ ಷೇರ್ ನಲ್ಲಿ ನಿರೂಪಿಸಿದ್ದಾರೆ. ನಮ್ಮ ಬದುಕೇ ಪ್ರೇಮಗಂಗೆ, ಒಲವಿನ ಜಲಧಾರೆಯಲಿ ಬದುಕು ನೆಮ್ಮದಿಯ ತಾಣವಾಗಿದೆ ಎಂಬುದನ್ನು ಸಾರುತ್ತ ಗಜಲ್ ಲೋಕದಲ್ಲಿ ಮುಳುಗಿದ್ದಾರೆ, ನಮ್ಮನ್ನೂ ಮುಳುಗಿಸುವ ಪ್ರಯತ್ನ ಮಾಡಿದ್ದಾರೆ.
ಡಾ. ಸುರೇಶ ನೆಗಳಗುಳಿಯವರು ಉತ್ತಮ ಜನಾನುರಾಗಿ ವೈದ್ಯರಾಗಿದ್ದು, ಪ್ರವೃತ್ತಿಯಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಸದಭಿರುಚಿಯ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಶ್ರೀಯುತರು ವಿವಿಧ ಮಾದರಿಯ ಹನ್ನೆರಡು ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿದ್ದಾರೆ. ಇಂದು ಆಡಂಬರದ, ತೋರಿಕೆಯ ಹಾಗೂ ಭೋಗ ಸಂಸ್ಕೃತಿಯ ಸುಳಿಯಲ್ಲಿ ಮನುಕುಲ ಸಿಲುಕಿಕೊಂಡು ಒದ್ದಾಡುತ್ತಿದೆ. ಕೆಲವೊಬ್ಬರು ಅದರಲ್ಲಿಯೇ ಖುಷಿ ಪಡುತ್ತಿದ್ದರೆ, ಮತ್ತೆ ಕೆಲವೊಬ್ಬರು ಮಾನಸಿಕ ತೊಳಲಾಟದಲ್ಲಿ ನರಳುತ್ತಿದ್ದಾರೆ. ನಮ್ಮ ಜಾನಪದ ಗಾದೆಮಾತುಗಳು ‘ಮುಖ ನೋಡಿ ಮೊಳ ಹಾಕಬೇಡ’ ಎಂದು ಹೇಳುತ್ತಲೇ ಬಂದಿದೆ. ಆದರೆ ಅನುಸರಿಸುವವರಾರೂ ಇಲ್ಲ. ಇಲ್ಲಿ ಹಿರಿಯರಾದ ಸುಖನವರ್ ಡಾ. ನೆಗಳಗುಳಿಯವರು ಮನುಷ್ಯ ದಿನನಿತ್ಯದ ಜೀವನದಲ್ಲಿ ಎಡವಿ ಬೀಳುವ ಪ್ರಸಂಗಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇಲ್ಲಿಯ ‘ಅಸಹಜವಲ್ಲ’ ಎಂಬ ರದೀಫ್ ಮನುಷ್ಯನ ಅಸ್ಮಿತೆಯನ್ನು ಕೆಣಕುತ್ತ ಕಳೆದು ಹೋದ ನಮ್ಮ ಜೀವನದ ಘಟನೆಗಳ ಬಗ್ಗೆ ಕನವರಿಸುವಂತೆ ಮಾಡುತ್ತದೆ. ವೃತ್ತಿಯಿಂದ ವೈದ್ಯರಾದ ನೆಗಳಗುಳಿಯವರು ಸಮಾಜ ನೋಡಿರುವ ಪರಿಯನ್ನು ನಾವು ಈ ಷೇರ್ ಮುಖಾಂತರ ಅರಿಯಬಹುದು
‘ಅತ್ತಿಹಣ್ಣಿನ ಹೊರರೂಪ ನೋಡಿ ಮರುಳಾದೆಯಾ
ಮುಖ ನೋಡಿ ಮಾಡುವ ಮುದ್ದು ಅಸಹಜವಲ್ಲ’
‘ಕಡಲ ಹನಿ ಒಡಲ ಧ್ವನಿ’ ಸಂಕಲನವು ಸಹೃದಯ ಓದುಗರ ಮನವನ್ನು ತಣಿಸುತ್ತ ಅವರ ಹೃದಯಗಳೊಂದಿಗೆ ಅನುಗಾಲವೂ ಸಂಚರಿಸಲಿ ಎಂದು ತುಂಬು ಹೃದಯದಿಂದ ಶುಭ ಹಾರೈಸುತ್ತೇನೆ”
ಗಜಲ್ ಎಂದರೆ ಏನು? ಎಂದು ತಿಳಿಯದ ಅನೇಕರಿಗಾಗಿ ‘ಗಜಲ್ ಒಂದು ಅವಲೋಕನ’ ಎಂಬ ಬರಹವನ್ನು ಡಾ ಸುರೇಶ ನೆಗಳಗುಳಿ ಬರೆದಿದ್ದಾರೆ. ಇದರಿಂದ ಗಜಲ್ ಎಂಬ ಸಾಹಿತ್ಯದ ಪ್ರಕಾರವನ್ನು ಇನ್ನಷ್ಟು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ಸುಮಾರು ೧೩೬ ಪುಟಗಳ ಈ ಗಜಲ್ ಸಂಕಲನವನ್ನು ಬರಹಗಾರರು “ನೊಂದವರ ನೋವು ನುಂಗಿ ಭಾವದಿಂದ ಜೀವ ತುಂಬುವ ಎಲ್ಲಾ ಗಜಲ್ ಕಾರರಿಗೆ ಮತ್ತು ಗಜಲ್ ಪ್ರೇಮಿಗಳಿಗೆ” ಅರ್ಪಣೆ ಮಾಡಿದ್ದಾರೆ.