ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)

ಕಡವ ಶಂಭು ಶರ್ಮ (೮-೮-೧೮೯೫ – ೩-೫-೧೯೬೪)

ಬರಹ

ಈ ತಿಂಗಳು ಪುತ್ತೂರಿನ ಕಾರ್ಯಕ್ರಮವೊಂದಕ್ಕೆ ಹೋದಾಗ ಈ ಹಿರಿಯರ ಬಗ್ಗೆ ತಿಳಿಯುವ, ಅವರ ಕೃತಿಯೊಂದನ್ನು ಪಡೆಯುವ ಅವಕಾಶ ಲಭಿಸಿತು.
ಪುತ್ತೂರಿನ ಸಾಮಾಜಿಕ, ಸಾಂಸ್ಕೃತಿಕ ಬದುಕನ್ನು ಶ್ರೀಮಂತಗೊಳಿಸಿದ ಹಿರಿಯರು. ಗಾಂಧೀ ಯುಗದ ಆದರ್ಶವಾದಿ. ಕಡವ ಕೃಷ್ಣಭಟ್ ಮತ್ತು ಸತ್ಯವತಿ ಅವರ ನಾಲ್ವರು ಮಕ್ಕಳಲ್ಲಿ ಎರಡನೆಯವರು. ಶಿಕ್ಷಕ, ಕವಿ, ವಿಮರ್ಶಕ, ಅನುವಾದಕ, ಆಯುರ್ವೇದ ವೈದ್ಯ, ಪ್ರಯೋಗಶೀಲ ಕೃಷಿಕ. ಸಂಸ್ಕೃತ ಮತ್ತು ಕನ್ನಡ ಭಾಷೆಗಳ ವಿದ್ವಾಂಸ. ಸುಗಂಧಾರ್ಕ ಮಧು ಎಂಬ ತಂಪು ಪಾನೀಯ, ಕೈಮಗ್ಗದ ಉದ್ಯಮ, ಕೃಷಿ ಪ್ರಯೋಗಗಳು, ಇಟ್ಟಿಗೆ ಕಾರ್ಖಾನೆ, ಕಟ್ಟಿಗೆ ವ್ಯಾಪಾರ ಮತ್ತು ಹೈನುಗಾರಿಕೆ ಅವರ ಬದುಕಿನ ಇನ್ನು ಕೆಲವು ಮುಖಗಳು. ಅವರು ತಮ್ಮ ಬದುಕಿನ ಕೊನೆಗಾಲದಲ್ಲಿ ಅನುವಾದಿಸಿದ “ನಾಥ ಪಂಥದ ಕೃತಿಗಳು” ನನಗೆ ದೊರೆತ
ಪುಸ್ತಕ.
ಇದರಲ್ಲಿ ನಾಥ ಪಂಥದ ಹದಿಮೂರು ಕೃತಿಗಳು ಸಂಸ್ಕೃತದಿಂದ ಅನುವಾದಗೊಂಡಿವೆ. ಅಮರೌಘ ಶಾಸನ, ಚರ್ಪಟನಾಥ ಶತಕ, ನವನಾಥ ಕಥಾ, ಸ್ವಯಂ ಬೋಧ-ಅಮನಸ್ಕ ಯೋಗ, ಆತ್ಮವಾದ, ಗೋರಕ್ಷ ಸಿದ್ಧಾಂತ ಸಂಗ್ರಹ, ಯೋಗಬೀಜಂ, ಶ್ರೀ ಗೋರಕ್ಷಸಹಸ್ರನಾಮಸ್ತೋತ್ರಂ, ಸಿದ್ಧ ಸಿದ್ಧಾಂತ ಪದ್ಧತಿ, ಅಮರ ಕಥಾ, ಅಮರಾಲೋಕ ಮಹಾಕಾವ್ಯಂ, ಮತ್ತು ಗೋರಕ್ಷ ಪದ್ಧತಿ ಇವು ಹದಿಮೂರು ಕೃತಿಗಳು ೭೭೧ ಪುಟಗಳ ಈ ಸಂಪುಟದಲ್ಲಿ ಸೇರಿವೆ.
ಶಿವರಾಮ ಕಾಂತರ “ಆಳ ನಿರಾಳ” ಕಾದಂಬರಿಗೆ ಪ್ರೇರಣೆ ನೀಡಿದ ಘನ ವ್ಯಕ್ತಿತ್ವ ಇವರದ್ದು. ತಾವು ಕಟ್ಟಿಗೆ ಹೊರಿಸಿಕೊಂಡು ಬರುತ್ತಿದ್ದ ಲಾರಿಯ ಕೆಳಕ್ಕೆ ಉರುಳಿಬಿದ್ದು, ಅವರ ಕಾಲಿನ ಮೇಲೆ ಲಾರಿಯ ಚಕ್ರ ಹರಿದು ನಿಂತು, ನಿರುಪಾಯರಾಗಿ ನೋಡುತ್ತ ನಿಂತವರನ್ನು ಕುರಿತು “ನೋಡುತ್ತೀರಿ ಯಾಕೆ? ನನ್ನ ಕಾಲನ್ನು ತುಂಡು ಮಾಡಿ ದೇಹವನ್ನು ಹೊರತೆಗೆಯಿರಿ” ಅಂದ್ದನ್ನು ಕಾರಂತರು ದಾಖಲಿಸಿದ್ದಾರೆ. (ಹುಚ್ಚು ಮನಸಿನ ಹತ್ತು ಮುಖಗಳು, ಅಳಿದುಳಿದ ನೆನಪುಗಳೊಂದಿಗೆ, ಪುಟ ೨೦೦, ೨೦೦೪ರ ಮುದ್ರಣ). ಮುಂದೆ ಕಾರಂತರು ಅಸ್ಪತ್ರೆಗೆ ಅವರನ್ನು ನೋಡಲು ಹೋದಾಗ “ಅವಶ್ಯಮನುಭೋಕ್ತವ್ಯಂ ಎಂದು ಗಂಭೀರರಾಗಿ ನುಡಿದರು. ಅವರು ನಂಬಿ ಬಂದ ತತ್ತ್ವ ಅದು. ಅವರ ವ್ಯಕ್ತಿತ್ವ ನನ್ನ ಆಳ ನಿರಾಳ ಕಾದಂಬರಿಗೆ ಪ್ರೇರಣೆಯಾಯಿತು” ಎಂದಿದ್ದಾರೆ.
ನಾಥ ಪಂಥದ ಅನುವಾದಿತ ಕೃತಿಗಳಿಗೆ ಡಾ. ಎಚ್.ಜಿ. ಶ್ರೀಧರ ಅತ್ಯಂತ ಉಪಯುಕ್ತವಾದ ೫೨ ಪುಟ
ಗಳ ಮುನ್ನುಡಿ ಬರೆದಿದ್ದಾರೆ. ಶ್ರೀ ಮಸು ಕೃಷ್ಣಮೂರ್ತಿಯವರ “ಸಿದ್ಧ ಸಾಹಿತ್ಯ” ದಂತೆಯೇ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ತಿಳಿಯಬಯಸುವವರಿಗೆ ಇದು ಅತ್ಯುತ್ತಮ ಆಕರ ಗ್ರಂಥ. ಶ್ರೀ ಕಪಟರಾಳ ಕೃಷ್ಣರಾಯರು, ಶಂಬಾ ಜೋಷಿ ಇವರಂತೆಯೇ ಶಂಭುಶರ್ಮ ಕನ್ನಡ ಸಂಸ್ಕೃತಿಯ ನಿರ್ಮಾಪಕರಲ್ಲಿ ಒಬ್ಬರು ಅನಿಸುತ್ತಿದೆ.
ಆದರೆ ಕನ್ಸೂಮರಿಸಂ ಎಂಬುದೇ ದಿವ್ಯ ಮಂತ್ರವಾದ ಕಾಲದಲ್ಲಿ ಇಂಥ ಹಿರಿಯರ ನೆನಪು, ಯಾವುದನ್ನು ಕನ್ನಡದ ಸಾಂಸ್ಕೃತಿಕ ಚರಿತ್ರೆ ಎಂದುಕೊಂಡಿದ್ದೇವೊ ಅವು ಎಲ್ಲ ಮರೆಯಾಗುವುದು ಅನಿವಾರ್ಯವೋ ಏನೋ.