ಕಡಿಮೆ ಅವಧಿಯಲ್ಲಿ ಕಲ್ಲಂಗಡಿ ಬೇಸಾಯ

ಕಡಿಮೆ ಅವಧಿಯಲ್ಲಿ ಕಲ್ಲಂಗಡಿ ಬೇಸಾಯ

ಕಲ್ಲಂಗಡಿ ಭಾರತದಲ್ಲಿ ಒಂದು ಪ್ರಮುಖ ಕುಕುರ್ಬಿಟೇಶಿಯಸ ತರಕಾರಿ/ಹಣ್ಣು. ಕರ್ನಾಟಕ ರಾಜ್ಯದ ಒಂದು ಪ್ರಮುಖ ಬೇಸಿಗೆ ಬೆಳೆಯಾಗಿರುವ ಕಲ್ಲಂಗಡಿಯನ್ನು ವೈಜ್ಞಾನಿಕವಾಗಿ ಸಿಟ್ರುಲಸ್ ಲನಾಟಸ್ ಎಂದು ಕರೆಯಲಾಗುತ್ತದೆ. ಇದು ಕುಕುರ್ಬಿಟೇಸಿ ಕುಟುಂಬಕ್ಕೆ ಸೇರಿದ ಸಸ್ಯವಾಗಿರುತ್ತದೆ. ಇದನ್ನು ಬಚ್ಚಂಗಾಯಿ, ವಾಟರ್‌ಮೆಲನ್ ಎಂಬ ಹೆಸರುಗಳಿಂದ ಕರೆಯುವುದುಂಟು. ಕಲ್ಲಂಗಡಿ ಬೇಸಿಗೆ ಕಾಲದ ಮುಖ್ಯವಾದ ಬೆಳೆ, ಕಾಯಿ ಹಣ್ಣಾಗುವಾಗ ಒಣ ಹವೆ ಇದ್ದರೆ ಸಕ್ಕರೆ ಅಂಶ ಹೆಚ್ಚಾಗುತ್ತದೆ. ಕರ್ನಾಟಕ ರಾಜ್ಯದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಈ ಬೆಳೆಯನ್ನು ಅಧಿಕ ಪ್ರಮಾಣದಲ್ಲಿ ಬೆಳೆಯುತ್ತಾರೆ. ಬಳ್ಳಿಯಲ್ಲಿ ಗಂಡು ಮತ್ತು ಹೆಣ್ಣು ಹೂಗಳು ಬೇರೆ ಬೇರೆಯಾಗಿ ಬಿಡುವುದರಿಂದ ಕಾಯಿ ಕಟ್ಟಲು ಜೇನು ನೋಣಗಳಿಂದ ಪರಕೀಯ ಪರಾಗಸ್ಪರ್ಶ ಅತೀ ಅವಶ್ಯಕವಾಗಿದೆ.

ಹಣ್ಣಿನಲ್ಲಿ ಪ್ರತಿಶತ ೭೮ ರಷ್ಟು ಭಾಗವು ಸೇವನೆಗೆ ಯೋಗ್ಯವಾಗಿದ್ದು ಪ್ರೋಟಿನ್ (೦.೨ಗ್ರಾಂ), ಕೊಬ್ಬು (೦.೨ಗ್ರಾಂ), ೧೬ ಕಿಲೋ ಕ್ಯಾಲರಿಯಿಂದ ಶಕ್ತಿಯನ್ನು ಹೊಂದಿರುತ್ತದೆ. ಇದಲ್ಲದೇ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣ, ಕರೋಟಿನ್, ಥಯಾಮಿನ್, ರೈಬೋಪ್ಲೇವಿನ್, ನಯಾಸಿನ್ ಹಾಗೂ ವಿಟಾಮಿನ್ ‘ಸಿ’ ಅಂಶವನ್ನು ಸಹ ಹೊಂದಿರುತ್ತದೆ.

ಮಣ್ಣು ಮತ್ತು ಹವಾಗುಣ : ಚೆನ್ನಾಗಿ ನೀರು ಬಸಿದು ಹೋಗುವ, ಮರಳು ಮಿಶ್ರಿತ ಜೇಡಿ ಮಣ್ಣು ತುಂಬಾ ಸೂಕ್ತವಾಗಿದೆ. ಮಣ್ಣಿನಲ್ಲಿ ಸಾವಯವ ಪದಾರ್ಥಗಳ ಅಂಶ ಹೆಚ್ಚಾಗಿದ್ದು ರಸಸಾರ ೬-೭ ಇರುವುದು ಸೂಕ್ತ. ಹೆಚ್ಚು ಹುಳಿ ಮತ್ತು ಕ್ಷಾರ ಹೊಂದಿದ ಮಣ್ಣಿನಲ್ಲಿ ಇದನ್ನು ಬೆಳೆಯುವುದು ಸೂಕ್ತವಲ್ಲ. ಇತ್ತೀಚಿನ ದಿನಗಳಲ್ಲಿ ರೈತರು ಸಣ್ಣ ಪ್ರಮಾಣದಲ್ಲಿ ಕರಾವಳಿ ತೀರ ಪ್ರದೇಶದ ಮರಳು ಮಣ್ಣಿನಲ್ಲಿ ಕೂಡ ಬೆಳೆಯಲು ತೊಡಗಿದ್ದಾರೆ. ಬೇಸಿಗೆ ಕಾಲದಲ್ಲಿ ಕೆಲವು ನದಿಗಳ ತೀರದ ಮಣ್ಣಿನಲ್ಲಿ ಕೂಡ ಕಲ್ಲಂಗಡಿ ಬೆಳೆಯುವ ಪದ್ಧತಿ ಇದೆ. ಉಷ್ಣ ಹವೆಯಿರುವ ವಾತಾವರಣ, ಪ್ರಖರವಾದ ಬಿಸಿಲು, ಹೆಚ್ಚಿನ ಹಗಲಿನ ಉಷ್ಣಾಂಶ ಮತ್ತು ರಾತ್ರಿಯ ಬೆಚ್ಚನೆಯ ಹವಾಮಾನ ಉತ್ತಮ ಗುಣಮಟ್ಟದ ಹಣ್ಣುಗಳನ್ನು ಪಡೆಯಲು ಸಹಾಯಕವಾಗುವವು. ಈ ಬೆಳೆಯನ್ನು ನವೆಂಬರ್ ನಿಂದ ಫೆಬ್ರುವರಿ ತಿಂಗಳಲ್ಲಿ ಬೆಳೆದರೆ ಹಣ್ಣುಗಳು ತುಂಬಾ ಚೆನ್ನಾಗಿ ಬರುತ್ತವೆ. ಅಕ್ಟೋಬರ್ ತಿಂಗಳು ಬೆಳೆ ಪ್ರಾರಂಭಿಸಲು ಉತ್ತಮ. ಲಘು ಹಿಮ ಮತ್ತು ಬಲವಾದ ಗಾಳಿಯನ್ನು ಸಹ ಇವು ತಡೆದುಕೊಳ್ಳುವುದಿಲ್ಲ. ಕಾಯಿ ಬಲಿಯುವಾಗ ಒಣ ಹವೆ ಇದ್ದಲ್ಲಿ ಸಕ್ಕರೆ ಅಂಶವು ಜಾಸ್ತಿಯಾಗಿ ಹಣ್ಣುಗಳು ತಿನ್ನಲು ರುಚಿಯಾಗಿರುತ್ತವೆ.

ಜಪಾನ್ ಮುಂತಾದ ರಾಷ್ಟ್ರಗಳಲ್ಲಿ ಉತ್ತಮ ಬೆಲೆ ಪಡೆಯಲು ಮತ್ತು ರಫ್ತು ಮಾಡಲು ಹಣ್ಣುಗಳನ್ನು ಹಾಳಾಗದಂತೆ ಜೋಡಿಸಲು ಚಚ್ಚೌಕಾಕಾರದ ಹಣ್ಣುಗಳನ್ನು ಬೆಳೆಸುತ್ತಾರೆ. ಈ ರೀತಿಯ ಹಣ್ಣಿನ ಆಕಾರ ಬರಲು ಬಳ್ಳಿಯ ಚಿಕ್ಕ ಕಾಯಿಗಳನ್ನು ಚಚ್ಚೌಕಾಕಾರದ ರಟ್ಟಿನ ಡಬ್ಬಿಯಲ್ಲಿ ತೂರಿಸಿ ಕಾಯಿಗಳನ್ನು ಬಲಿಯಲು ಬಿಡುತ್ತಾರೆ.

ತಳಿಗಳು :

ಅರ್ಕಾಜ್ಯೋತಿ: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರಿನಿಂದ ಬಿಡುಗಡೆಗೊಂಡ ಈ ಸಂಕರಣ ತಳಿಯು ದುಂಡನೆಯ ಆಕಾರ ಹೊಂದಿದ್ದು, ಸುಮಾರು ೬-೮ ಕಿ.ಗ್ರಾಂ. ತೂಕ ನೀಡುತ್ತದೆ. ಹಣ್ಣಿನ ತೊಗಟೆ ಕಡು ಹಸಿರಾಗಿದ್ದು ಕಡು ನೀಲಿ ಬಣ್ಣದ ಪಟ್ಟೆಗಲನ್ನು ಹೊಂದಿದೆ. ತಿರುಳು ಕೇಸರಿ ಬಣ್ಣದಿಂದ ಕೂಡಿರುತ್ತದೆ. ಸಕ್ಕರೆ ಅಂಶವು ೧೧-೧೩ ಡಿಗ್ರಿ ಬ್ರಿಕ್ಸ್ ಹೊಂದಿದ್ದು ದೂರದ ಮಾರುಕಟ್ಟೆಗೆ ಸರಾಗವಾಗಿ ಕೆಡದಂತೆ ಸಾಗಿಸಬಹುದು. ಬೇಳೆಯು ೯೦ ರಿಂದ ೧೦೦ ದಿವಸಗಳಲ್ಲಿ ಕೊಯ್ಲಿಗೆ ಸಿದ್ದವಾಗುತ್ತವೆ. ಪ್ರತಿ ಹೆಕ್ಟೇರ್ ಪ್ರದೇಶದಿಂದ ೭೦ ಸಾವಿರ ಕಿ.ಗ್ರಾಂ. ಇಳುವರಿ ಪಡೆಯಬಹುದು.

ಅರ್ಕಾ ಮಾಣಿಕ್ : ಈ ತಳಿಯ ಹಣ್ಣುಗಳು ದುಂಡಾಗಿದ್ದು, ಹಸಿರು ತೊಗಟೆಯ ಮೇಲೆ ಕಡು ಹಸಿರು ಬಣ್ಣದ ಪಟ್ಟೆಗಳನ್ನು ಹೊಂದಿರುತ್ತವೆ. ತಿರುಳು ಕೇಸರಿ ಬಣ್ಣದ್ದಾಗಿದ್ದು ಸುಮಾರು ೪-೬ ಕಿ.ಗ್ರಾಂ. ತೂಗುತ್ತವೆ. ದೀರ್ಘಾವಧಿ ತಳಿಯಾಗಿದ್ದು ೧೦೦ ರಿಂದ ೧೨೦ ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಈ ತಳಿಯು ಎಲೆ ಚುಕ್ಕೆರೋಗ, ಬೂದು ರೋಗ ಹಾಗೂ ಬೂಜು ತುಪ್ಪಟ ರೋಗಗಳಿಗೆ ನಿರೋಧಕ ಶಕ್ತಿ ಹೊಂದಿರುತ್ತವೆ. ಸಕ್ಕರೆ ಅಂಶವು ೧೨-೧೩ ಡಿಗ್ರಿ ಬ್ರಿಕ್ಸ್ ಹೊಂದಿದ್ದು ದೂರದ ಮಾರುಕಟ್ಟೆಗೆ ಸರಾಗವಾಗಿ ಕೆಡದಂತೆ ಸಾಗಿಸಬಹುದು. ಪ್ರತಿ ಹೆಕ್ಟೇರ್ ಪ್ರದೇಶದಿಂದ ೪೦ ಸಾವಿರ ಕಿ.ಗ್ರಾಂ ಇಳುವರಿಯನ್ನು ಪಡೆಯಬಹುದು.

ಶುಗರ್ ಬೇಬಿ : ಅಮೇರಿಕಾ ದೇಶದ ತಳಿಯಾಗಿರುವ ಇದನ್ನು ಭಾರತೀಯ ಕೃಷಿ ಸಂಶೋಧನಾ ಸಂಸ್ಥೆ, ನವದೆಹಲಿಯಿಂದ ಬಿಡುಗಡೆಗೊಳಿಸಲಾಗಿದೆ. ಅಲ್ಪಾವಧಿ ತಳಿಯಾಗಿರುವ (೮೦-೯೦ ದಿವಸಗಳು), ಸುಮಾರು ೪ ರಿಂದ ೬ ಕಿ.ಗ್ರಾಂ ತೂಗಬಲ್ಲದು. ಹಣ್ಣಿನ ತೊಗಟೆಯು ಹಸಿರಾಗಿದ್ದು, ತಿರುಳು ಗುಲಾಬಿ ಬಣ್ಣ ಹೊಂದಿರುತ್ತವೆ. ಸಕ್ಕರೆ ಅಂಶವು ೧೧-೧೩ ಡಿಗ್ರಿ ಬ್ರಿಕ್ಸ್ ಹೊಂದಿರುತ್ತವೆ.

ಅರ್ಕಾ ಐಶ್ವರ್ಯ : ಇದು ಒಂದು ಸಂಕರಣ ತಳಿ ಇದರ ಹಣ್ಣು ಉದ್ದವಾಗಿದ್ದು ಕೆಂಪು ಬಣ್ಣದ ತಿರುಳನ್ನು ಹೊಂದಿದೆ. ಇದರ ಸಿಹಿ ಅಂಶ ೧೩ ಬ್ರಿಕ್ಸ್ ಇದ್ದು ಹಣ್ಣಿನ ಸರಾಸರಿ ತೂಕ ೯ ಕಿ. ಗ್ರಾಂ ಇರುತ್ತದೆ. ಗಿಡಕ್ಕೆ ಒಂದು ಹಣ್ಣನ್ನು ಬಿಡುತ್ತದೆ. ಇದರ ಅವಧಿ ೯೦- ೯೫ ದಿನಗಳು ಮತ್ತು ಇಳುವರಿ ಹೆಕ್ಟೇರಿಗೆ ೮೫-೯೦ ಟನ್ ಹಣ್ಣುಗಳ ರಸಭರಿತ ಮತ್ತು ಗರಿಗರಿಯಾಗಿದ್ದು ತಿನ್ನಲು ತುಂಬಾ ರುಚಿ ಇರುತ್ತದೆ. ಹೆಚ್ಚಿನ ದಿನಗಳು ಕೆಡದಂತೆ ಇರುವುದರಿಂದ ಹಣ್ಣುಗಳು ದೂರದ ಊರಿಗೆ ಸಾಗಿಸಲು ಯೋಗ್ಯವಾಗಿದೆ.

ಬೇಸಾಯ ಸಾಮಗ್ರಿಗಳು (ಪ್ರತಿ ಹೇಕ್ಟೇರಿಗೆ) ಬೀಜ : ೭೫೦-೧೧೨೫ ಗ್ರಾಂ, ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೊಸ್ಟ್ : ೨೫ ಟನ್, ರಾಸಾಯನಿಕ ಗೊಬ್ಬರ: ೧೦೦ : ೮೭ : ೧೦೦ ಕಿ.ಗ್ರಾಂ ಸಾರಜನಕ, ರಂಜಕ ಮತ್ತು ಪೋಟ್ಯಾಷ್. ಹನಿ ನೀರಾವರಿ ಅಳವಡಿಸಿದ್ದಲ್ಲಿ ಪ್ಲಾಸ್ಟಿಕ್ ಸಸಿ ಹಿಡಿಕೆಗಳನ್ನು ಬಳಸಿ ಉತ್ಪಾದನೆ ಮಾಡಿದ ಸಸಿಗಳನ್ನು ನೇರವಾಗಿ ಜಮೀನಿಗೆ ನೆಡಬಹುದು. ಇದರಿಂದ ಬೆಳೆಯು ೩ ರಿಂದ ೪ ವಾರ ಮುಂಚಿತವಾಗಿಯೇ ಕಟಾವಿಗೆ ಬರುತ್ತದೆ.

ಬೇಸಾಯ ಕ್ರಮಗಳು : ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಶಿಫಾರಸ್ಸು ಮಾಡಿದ ಕೊಟ್ಟಿಗೆ ಗೊಬ್ಬರವನ್ನು ಚೆನ್ನಾಗಿ ಮಣ್ಣಿನಲ್ಲಿ ಬೆರಸಬೇಕು. ೨.೫ ರಿಂದ ೩.೦ ಮೀ ಅಂತರದಲ್ಲಿ ಸಾಲುಗಳನ್ನು ತೆಗೆದು ಅದರಲ್ಲಿ ೫೦ ಕಿ.ಗ್ರಾಂ ಸಾರಜನಕ, ೮೭.೫ ಕಿ.ಗ್ರಾಂ ರಂಜಕ ಮತ್ತು ೧೦೦ ಕಿ.ಗ್ರಾಂ ಪೋಟ್ಯಾಷ ಗೊಬ್ಬರಗಳನ್ನು ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ರೀತಿ ತಯಾರು ಮಾಡಿದ ಸಾಳುಗಳಲ್ಲಿ ಒಂದು ಮೀಟರ್ ಅಂತರದಲ್ಲಿ ೨ ರಿಂದ ೩ ಬೀಜಗಳನ್ನು ಬಿತ್ತಬೇಕು. ಬಿತ್ತಿದ ೧೦-೧೨ ದಿನಗಳ ನಂತರ ಪ್ರತಿ ಗುಣಿಯಲ್ಲಿ ೨ ದೃಡವಾದ ಸಸಿಗಳನ್ನು ಮಾತ್ರ ಉಳಿಸಿ ಉಳಿದವುಗಳನ್ನು ಕಿತ್ತು ತೆಗೆಯಬೇಕು. ಬಿತ್ತಿದ ೪ ವಾರಗಳ ನಂತರ ಉಳಿದ ೫೦ ಕಿ.ಗ್ರಾಂ ಸಾರಜನಕವನ್ನು ಮೇಲು ಗೊಬ್ಬರವಾಗಿ ಬೆಳೆಯಿಂದ ಸುಮಾರು ಒಂದು ಅಡಿ ದೂರದಲ್ಲಿ ಒಂದು ಇಂಚು ಆಳದಲ್ಲಿ ಮಣ್ಣಿಗೆ ಸೇರಿಸಿ ಮುಚ್ಚಬೇಕು. ಬೀಜ ಹಾಕಿದ ಒಂದು ತಿಂಗಳ ನಂತರ ಮುಖ್ಯ ಕುಡಿಯನ್ನು (೫ ಅಥವಾ ೬ ಗೆಣ್ಣಿಗೆ) ಚಿವುಟಿ ಹಾಕುವುದರಿಂದ ಬಳ್ಳಿಯು ಹೆಚ್ಚು ಮಗ್ಗಲು ಕವಲುಗಳನ್ನು ಬಿಡುವುದು.

ಒಳ್ಳೆಯ ಗುಣಮಟ್ಟ ಮತ್ತು ಗಾತ್ರದ ಹಣ್ಣುಗಳನ್ನು ಪಡೆಯಲು ಪ್ರತಿ ಬಳ್ಳಿಯಲ್ಲಿ ೩ ರಿಂದ ೪ ಕಾಯಿಗಳನ್ನು ಮಾತ್ರ ಬೆಳೆಯಲು ಬಿಟ್ಟು ಉಳಿದವುಗಳನ್ನು ಕಿತ್ತು ಹಾಕಬೇಕು. ಒಳ್ಳೆಯ ಗುಣಮಟ್ಟದ ಹಣ್ಣು ಪಡೆಯಲು ಶೇ. ೧ ಬೋರಾಕ್ಸ್ ಸಿಂಪರಣೆಯನ್ನು ಮಾಡುವುದು ಒಳ್ಳೆಯದು. ಕಲ್ಲಂಗಡಿ ಮಿಡಿಯು ನಿಂಬೆ ಹಣ್ಣಿನ ಗಾತ್ರ ದಷ್ಟಿರುವಾಗ ೨೦ ಪಿಪಿಎಮ್ ಜಿಬ್ಬರ್ಲಿಕ್ ಆಮ್ಲದ ದ್ರಾವಣದಲ್ಲಿ (೨೦ ಮಿಲಿ ಗ್ರಾಂ ಜಿಬ್ಬರ್ಲಿಕ್ ಆಮ್ಲ ಪ್ರತಿ ಲೀಟರ್ ನೀರಿನಲ್ಲಿ) ಅದ್ದುವುದರಿಂದ ಹಣ್ಣಿನ ಗಾತ್ರ ಮತ್ತು ಗುಣಮಟ್ಟ ಹೆಚ್ಚುವುದು.

ಸಸ್ಯ ಸಂರಕ್ಷಣೆಗಳು/ ರೋಗಗಳು : ಮಣ್ಣಿನಿಂದ ಹರಡುವ ರೋಗಗಳಿಗೆ ಜೈವಿಕ ನಿಯಂತ್ರಕಗಳಾದ

ಟ್ರೈಕೋಡರ್ಮಾ ಹಾರ್ಜಿಯಾನಮ್ ಅಥವಾ ಟ್ರೈಕೋಡರ್ಮಾ ವಿರಿಡೇ, ಗ್ಲೈಯೋಕ್ಲೇಡಿಯಮ್ ವೈರೆನ್ಸ್ ಅಥವಾ ಬ್ಯಾಸಿಲಸ್ ಸಬ್‌ಟಿಲಸ್ ಪ್ರತಿ ೧ ಕೆ.ಜಿ ಯಂತೆ ೧೦೦ ಕೆ.ಜಿ ಕೊಟ್ಟಿಗೆ ಗೊಬ್ಬರಕ್ಕೆ ಬೆರೆಸಿ ಹಾಕುವುದರಿಂದ ಮಣ್ಣಿನ ಆರೋಗ್ಯ ಕಾಪಾಡಬಹುದು. ಥ್ರೀಪ್ಸ್ ನುಸಿಯನ್ನು ನಿಯಂತ್ರಿಸಲು ಸಸಿಗಳನ್ನು ನೆಡುವ ಮುನ್ನ ಹಾಗೂ ಸಸಿಗಳು ನೆಟ್ಟ ನಂತರ ೬೦ ದಿನಗಳವಗೆ ೧೦ ರಿಂದ ೧೫ ದಿನಗಳ ಅಂತರದಲ್ಲಿ ಅಸಿಫೇಟ್(೦.೧೫%) ಅಥವಾ ಫಿಪ್ರೋನಿಲ್ (೦.೧%) ಅಥವಾ ಇಮಿಡಾಕ್ಲೋಪ್ರಿಡ್(೦.೦೩%) ಎಲೆಗಳ ಮೇಲೆ ಸಿಂಪಡಿಸಬೇಕು. ಥ್ರೀಪ್ಸ್ ನುಸಿಯ ಭಾದೆಯನ್ನು ನಿಯಂತ್ರಿಸಲು ಮೆಕ್ಕ ಜೋಳವನ್ನು ಮುಖ್ಯ ಬೆಳೆಯ ಸುತ್ತಲೂ ಬೆಳೆಯಬೇಕು. ಥಿಯೋಫನೇಟ್ ಮೀಥೈಲ್ (೦.೧%), ಕಾರ್ಬನ್ ಢ್ರೆಜಿಮ್ (೦.೧%) ಅನ್ನು ಎಲೆಗಳ ಮೇಲೆ ಸಿಂಪರಣೆ ಮಾಡಬೇಕು.

ಬೂಜು ತುಪ್ಪಟ ರೋಗ ಬಂದ ನಂತರ ಪ್ರತಿ ೧೦ ದಿನಗಳ ಅಂತರದಲ್ಲಿ ಮ್ಯಾಂಕೋಜಿಬ್(೦.೨%) ಅಥವಾ ಮೆಟಲಾಕ್ಸಿಲ್ ಮ್ಯಾಂಕೋಜೆಬ್(೦.೨%) ಅಥವಾ ಸೈಮೋಕ್ಸಾನಿಲ್ ಮ್ಯಾಂಕೊಜೆಬ್(೦.೨%) ಅಥವಾ ಫಾಸಟೆಲ್ ಎಐ(೦.೨%) ಅನ್ನು ಎಲೆಗಳ ಮೇಲೆ ಸಿಂಪಡಿಸಬೇಕು. ಬೂದಿರೋಗ ಕಂಡುಬAದಲ್ಲಿ ಡೈನೋಕ್ಯಾಪ್ (೦.೧%) ಅಥವಾ ಹೆಕ್ಸಾಕೋನಾಜಾಲ್(೦.೦೭೫%) ಅನ್ನು ೧೫ ದಿನಗಳ ಅಂತರದಲ್ಲಿ ಎಲೆಗಳ ಮೇಲೆ ಸಿಂಪರಣೆ ಮಾಡಬೇಕು. ಕಾಂಡದ ಅಂಗಮಾರಿ ರೋಗ ಕಂಡುಬಂದಲ್ಲಿ ಅಥವಾ ಕಾಪರ್ ಆಕ್ಸಿ ಕ್ಲೋರೈಡ್ ಪೇಸ್ಟ್ ಅಥವಾ ಇಪ್ರಿಡಿಯೋನ್ + ಮ್ಯಾಂಕೋಜೆಬ್ (೦.೨%) ಅನ್ನು ಸೋಂಕಿತ ಭಾಗಗಳಿಗೆ ಹಚ್ಚಬೇಕು.

ಕೀಟಗಳು : ಸಸ್ಯ ಹೇನು, ಕುಂಬಳದ ದುಂಬಿ, ಎಲೆ ಸುರಂಗ ಕೀಟ; ಹಣ್ಣು ನೋಣ.

ಹತೋಟಿ ಕ್ರಮಗಳು :

೧) ಬಿತ್ತನೆಯಾದ ಎರಡು ವಾರಗಳ ನಂತರ ಬೆಳೆಗ್ಗೆ ೧ ಮಿ.ಲೀ. ಮೆಲಾಥಿಯಾನ್ ೫೦ಇಸಿ ಅಥವಾ ೪ ಗ್ರಾಂ. ಕಾರ್ಬಾರಿಲ್ ಶೇ. ೫೦ ಡಬ್ಲೂಪಿ ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಪ್ರತಿ ಹೆಕ್ಟೇರ್‌ಗೆ ೩೬೦ ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.

೨) ಹಾವಿನಾಕಾರದ ಎಲೆ ಸುರಂಗ ಹುಳದ ಹತೊಟಿಗಾಗಿ ೧ ಗ್ರಾಂ. ಅಸಿಫೆಟ್ ೭೫ ಎಸ್‌ಪಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಬಿತ್ತಿದ ೨೫ ದಿವಸಗಳ ನಂತರ ಹಾಗೂ ೨ನೇ ಸಿಂಪರಣೆಯನ್ನು ಮೊದಲನೇ ಸಿಂಪರಣೆಯಾದ ೨೫ ದಿನಗಳ ನಂತರ ಕೈಗೊಳ್ಳಬೇಕು.

೩) ಹಣ್ಣು ನೋಣದ ಹತೋಟಿಗಾಗಿ ಬೆಳೆಗೆ ೧ ಮಿ.ಲೀ. ಮೆಲಾಥಿಯಾನ್ ೫೦ ಇಸಿ ಮತ್ತು ೧೦ ಗ್ರಾಂ. ಸಕ್ಕರೆ ಅಥವಾ ಬೆಲ್ಲವನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಕೀಟದ ಬಾಧೆ ಮುಂದುವರೆದರೆ ಇದೆ ಸಿಂಪರಣೆಯನ್ನು ಒಂದು ವಾರದ ನಂತರ ಪುನಾವರ್ತಿಸಬೇಕು.

ಕೊಯ್ಲು ಮತ್ತು ಇಳುವರಿ :

ಕಲ್ಲಂಗಡಿ ತಳಮೈ (ಭೂಮಿಗೆ ಸ್ಪರ್ಶವಾದ ಜಾಗ) ಬಿಳಿ ಬಣ್ಣದಿಂದ ಹಳದಿ ಬಣ್ಣಕ್ಕೆ ತಿರುಗಿದಾಗ ಕೊಯ್ಲು ಮಾಡಬಹುದು. ಈ ಸಮಯದಲ್ಲಿ ಹಣ್ಣುಗಳನ್ನು ಬೆರಳಿನಿಂದ ಬಾರಿಸಿದರೆ ಮೆದು(ಡಬ್ ಡಬ್) ಸಪ್ಪಳ ಹೊರಡುತ್ತದೆ ಮತ್ತು ಹಣ್ಣಿನ ತುಂಬುಗಳು ಒಣಗಿರುತ್ತವೆ. ಸಾಮಾನ್ಯವಾಗಿ ಹಣ್ಣು ಕೊಯ್ಲಿಗೆ ಸಿದ್ಧವಾಗಲೂ ಕಾಯಿ ಕಟ್ಟಿದ ದಿನದಿಂದ ಸುಮಾರು ೪೫ ರಿಂದ ೫೫ ದಿನಗಳು ತಗಲುತ್ತವೆ. ಪ್ರತಿ ಹೆಕ್ಟೇರಿಗೆ ಪ್ರದೇಶದಿಂದ ಸಾಮಾನ್ಯ ತಳಿಗಳಿಂದ ೩೫ ರಿಂದ ೪೦ ಟನ್ ಹಾಗೂ ಹೈಬ್ರೀಡ್ ತಳಿಗಳಿಂದ ೭೦ ರಿಂದ ೭೫ ಟನ್ ಇಳುವರಿ ಪಡೆಯಬಹುದು.

ಮಾಹಿತಿ ಸಹಕಾರ: ಸತೀಶಕುಮಾರ ಕಾಳೆ, ಯಾದಗಿರಿ

ಚಿತ್ರ ಕೃಪೆ: ಅಂತರ್ಜಾಲ ತಾಣ