ಕಡಿಮೆ ಖರ್ಚು ಮಾಡಿ ಅಧಿಕ ಲಾಭಗಳಿಸಿದ ‘ರಾಜಾ ವಿಕ್ರಮ'

ಕಡಿಮೆ ಖರ್ಚು ಮಾಡಿ ಅಧಿಕ ಲಾಭಗಳಿಸಿದ ‘ರಾಜಾ ವಿಕ್ರಮ'

೫೦ರ ದಶಕದಲ್ಲಿ ಕನ್ನಡ ಚಲನ ಚಿತ್ರರಂಗದಲ್ಲಿ ಬಿಡುಗಡೆಯಾಗುತ್ತಿದ್ದ ಚಿತ್ರಗಳು ಬೆರಳೆಣಿಕೆಯಷ್ಟು. ೧೯೫೧ರಲ್ಲಿ ಬಿಡುಗಡೆಯಾದ ಚಿತ್ರಗಳು ಮೂರು. ಅದರಲ್ಲಿ ಜಗನ್ಮೋಹಿನಿ, ತಿಲೋತ್ತಮೆ ಮತ್ತು ರಾಜಾ ವಿಕ್ರಮ. ಆ ಕಾಲದಲ್ಲಿ ಲಭ್ಯ ಇದ್ದ ಸಂಪನ್ಮೂಲಗಳನ್ನು ಬಳಸಿ ಅದ್ದೂರಿಯಾಗಿ ಚಿತ್ರೀಕರಣಗೊಂಡ ಚಿತ್ರ ಜಗನ್ಮೋಹಿನಿ. ಆದರೆ ಕಡಿಮೆ ವೆಚ್ಚದಲ್ಲಿ ಚಿತ್ರಿಕರಣ ಮಾಡಿ ಅಧಿಕ ಲಾಭ ಪಡೆದ ಚಿತ್ರ ರಾಜಾ ವಿಕ್ರಮ. ಒಂದು ರೀತಿಯಲ್ಲಿ ೯೦ ರ ದಶಕದಲ್ಲಿ ರವಿಚಂದ್ರನ್ ನಿರ್ಮಿಸಿದ ಶಾಂತಿ ಕ್ರಾಂತಿ ಮತ್ತು ರಾಮಾಚಾರಿ ಚಿತ್ರದಂತೆ. ಕೋಟಿಗಟ್ಟಲೆ ವೆಚ್ಚ ಮಾಡಿ ತಯಾರಿಸಿದ ‘ಶಾಂತಿ ಕ್ರಾಂತಿ' ಚಿತ್ರ ಹೇಳ ಹೆಸರಿಲ್ಲದಂತೆ ನೆಲಕಚ್ಚಿತ್ತು. ಆದರೆ ಅತ್ಯಂತ ಕಡಿಮೆ ಬಜೆಟ್ ನಲ್ಲಿ ಚಿತ್ರೀಕರಿಸಿದ ‘ರಾಮಾಚಾರಿ’ ಚಿತ್ರ ಸೂಪರ್ ಹಿಟ್ ಆಗಿ ರವಿಚಂದ್ರನ್ ಕೈ ಹಿಡಿದಿತ್ತು. ಇದೇ ಕಥೆ ಐವತ್ತರ ದಶಕದಲ್ಲಿ ‘ರಾಜಾ ವಿಕ್ರಮ’ ಚಿತ್ರದ್ದೂ ಆಗಿತ್ತು. ಇದರ ಗಳಿಕೆಯಿಂದಲೇ ಈ ಚಿತ್ರ ದಾಖಲೆಯಲ್ಲಿ ಇನ್ನೂ ಉಳಿದುಕೊಂಡಿದೆ.

೧೯೩೪ರಿಂದ ೧೯೫೧ರ ತನಕ ಹದಿನೇಳು ವರ್ಷಗಳಲ್ಲಿ ತೆರೆಕಂಡ ಕನ್ನಡ ಚಿತ್ರಗಳ ಸಂಖ್ಯೆ ಬರೀ ೩೨ ಮಾತ್ರ. ‘ರಾಜಾ ವಿಕ್ರಮ' ಚಿತ್ರವು ಡಿ. ಕೆಂಪರಾಜ್ ಅರಸ್ ಎಂಬ ಸಾಹಸಿಯ ಕನಸಿನ ಚಿತ್ರ. ಅರಸು ಮನೆತನದ ಚಿಗುರು ಮೀಸೆಯ ಹುಡುಗ ಕೆಂಪರಾಜ್ ಅರಸ್ ಅವರು ನೇರವಾಗಿಯೇ ನಾಯಕ ನಟನಾಗಿ ಸಿನೆಮಾ ರಂಗಕ್ಕೆ ಪ್ರವೇಶಿಸಿದರು. ಇವರು ನಟಿಸಿದ ಮೊದಲ ಚಿತ್ರ ೧೯೪೨ರಲ್ಲಿ ತೆರೆಕಂಡ ‘ಜೀವನ ನಾಟಕ'. ನಂತರ ಇವರು ೧೯೫೧ರಲ್ಲಿ ತಾವೇ ನಿರ್ದೇಶಿಸಿ, ನಿರ್ಮಿಸಿ, ನಟಿಸಿ ರಾಜಾ ವಿಕ್ರಮ ಚಿತ್ರವನ್ನು ತೆರೆಗೆ ತಂದರು. ಅಲ್ಲಿಯವರೆಗೆ ಯಾವ ಕನ್ನಡ ಚಿತ್ರವೂ ಗಳಿಸದಷ್ಟು ಹಣವನ್ನು ಈ ಚಿತ್ರವು ಬಾಚಿಕೊಂಡಿತು. ಶನಿ ಮಹಾರಾಜನ ವಕ್ರದೃಷ್ಟಿಗೆ ಬೀಳುವ ರಾಜಾ ವಿಕ್ರಮನು ಅನುಭವಿಸುವ ಪಾಡನ್ನು ಈ ಚಿತ್ರದಲ್ಲಿ ತೋರಿಸಲಾಗಿತ್ತು. ರಾಜಾ ವಿಕ್ರಮನ ಪಾತ್ರದಲ್ಲಿ ಕೆಂಪರಾಜ್ ಅರಸ್ ಇವರು ಬಹಳ ಮನೋಜ್ಞವಾಗಿ ಅಭಿನಯಿಸಿದ್ದರು. ಜಾನಪದ ಶೈಲಿಯಲ್ಲಿ ತಯಾರಿಸಲಾಗಿದ್ದ ಈ ಚಿತ್ರಕ್ಕೆ ಹಾಡುಗಳನ್ನು ಮತ್ತು ಸಂಭಾಷಣೆಯನ್ನು ಬರೆದವರು ಅಂದಿನ ಖ್ಯಾತ ಚಿತ್ರ ಸಾಹಿತಿ ಹುಣಸೂರು ಕೃಷ್ಣಮೂರ್ತಿ. 

ಶಾಸ್ತ್ರೀಯ ಸಂಗೀತದ ಧಾಟಿಯ ಹದಿನೈದು ಹಾಡುಗಳು ಈ ಚಿತ್ರದಲ್ಲಿದ್ದವು. ಅವುಗಳಿಗೆ ಸಂಗೀತ ನೀಡಿದವರು ಖ್ಯಾತ ಸಂಗೀತ ವಿಧ್ವಾಂಸರಾದ ಮದರಾಸಿನ (ಇಂದಿನ ಚೆನ್ನೈ) ಎಸ್. ರಾಜಂ. ಚಿತ್ರದ ತಾರಾಗಣದಲ್ಲಿ ಕೆಂಪರಾಜ್ ಅರಸ್, ಎಂ ವಿ ರಾಜಮ್ಮ, ಬಿ ಜಯಮ್ಮ, ಎಂ ಎಸ್ ಸುಬ್ಬಣ್ಣ, ಗಣಪತಿ ಭಟ್ಟ, ಪಂಡರಿಬಾಯಿ ಮೊದಲಾದವರಿದ್ದರು. ಚಿತ್ರ ತಯಾರಾಗಿ ಬಿಡುಗಡೆಯಾದರೂ ಅದನ್ನು ಪ್ರದರ್ಶಿಸಲು ಸಿನೆಮಾ ಮಂದಿರಗಳೇ ದೊರೆತಿರಲಿಲ್ಲ. ಇದು ಒಂದು ವಿಪರ್ಯಾಸದ ಸಂಗತಿ. ಅಂದೂ ಇಂದಿನಂತೆ ಪರಭಾಷಾ ಚಿತ್ರಗಳದ್ದೇ ಕಾರುಬಾರು ಜೋರಿತ್ತು. ಹಿಂದಿ, ತೆಲುಗು, ತಮಿಳು ಚಿತ್ರಗಳ ಆರ್ಭಟ ಜೋರಾಗಿದ್ದ ಸಮಯ. ಅಂದಿನ ಖ್ಯಾತ ಚಿತ್ರಮಂದಿರಗಳಾದ ಸ್ಟೇಟ್ಸ್, ಸಾಗರ್, ಗೀತಾ, ಪ್ರಭಾತ್, ಮೂವಿಲ್ಯಾಂಡ್ ಇವೆಲ್ಲವೂ ಬುಕ್ ಆಗಿದ್ದವು. ಕಡೆಗೆ ಬೇರೆ ದಾರಿಯಿಲ್ಲದೇ ಅನಿವಾರ್ಯವಾಗಿ ಚಿಕ್ಕಪೇಟೆಯ ಮಿನರ್ವಾ ಮತ್ತು ವಿಜಯಲಕ್ಷ್ಮಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು. 

ಸಿನೆಮಾದ ಬಗ್ಗೆ ಉತ್ತಮ ಅಭಿಪ್ರಾಯಗಳು ಹೊರಬಂದು ಒಂದೇ ವಾರದಲ್ಲಿ ಎಲ್ಲಾ ಚಿತ್ರಮಂದಿರಗಳು ತುಂಬಿ ತುಳುಕಲಾರಂಬಿಸಿದವು. ಹೊರ ಊರುಗಳಿಂದಲೂ ಜನರು ಜಾತ್ರೆಗೆ ಬರುವಂತೆ ಗಾಡಿ ಕಟ್ಟಿಕೊಂಡು ಚಿತ್ರ ಮಂದಿರಕ್ಕೆ ಬಂದು ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತ ಪಡಿಸಲಾರಂಭಿಸಿದರು. ಕೆಂಪರಾಜ ಅರಸ್ ಅವರ ರಾಜಗಾಂಭೀರ್ಯದ ನಟನೆ, ಹಾಗೂ ಚಿತ್ರದ ಅದ್ಬುತ ಕಥಾವಸ್ತು ಈ ಚಿತ್ರದ ಮೆರುಗನ್ನು ಹೆಚ್ಚಿಸಿತ್ತು. ಪತ್ರಿಕೆಗಳೂ ಉತ್ತಮ ವಿಮರ್ಶೆಯನ್ನು ಬರೆದರು. 

ಆದರೆ ಚಿತ್ರದ ವಿತರಣೆಯನ್ನು ಪಡೆದುಕೊಂಡಿದ್ದವರು ಮಾತ್ರ ನಿರ್ಮಾಪಕರಾದ ಕೆಂಪರಾಜ್ ಅರಸರಿಗೆ ಮೋಸ ಮಾಡಿದರು. ಆದರೆ ಅರಸರು ಈ ವಿಷಯವನ್ನು ನ್ಯಾಯಾಲಯದ ಮಡಿಲಿಗೆ ತೆಗೆದುಕೊಂಡು ಹೋದರು. ಬಹುಕಾಲ ನಡೆದ ಈ ಕೇಸು ಕೊನೆಗೆ ಅರಸರ ಪರವೇ ತೀರ್ಪು ಬಂತು. ವಿತರಕರು ಅರಸರಿಗೆ ಆದ ನಷ್ಟವನ್ನು ಕಟ್ಟಿಕೊಡಬೇಕಾಗಿ ಬಂತು. ಅಂದಿನ ಸಮಯದಲ್ಲಿ ಇದೊಂದು ಐತಿಹಾಸಿಕ ಜಯ ಎಂದು ಮಾಧ್ಯಮಗಳು ಬಣ್ಣಿಸಿದವು. 

ಕೆಂಪರಾಜ್ ಅರಸ್ ಅವರು ತಮ್ಮ ಮೊದಲನೇ ನಿರ್ಮಾಣದ ಚಿತ್ರವೆಂಬ ಅಕ್ಕರೆಯಿಂದ 'ರಾಜಾ ವಿಕ್ರಮ’ ಚಿತ್ರದ ನೈಟ್ರೇಟ್ ಫಿಲಂ ಗಳನ್ನು ಹಾಳಾಗದಂತೆ ರಾಸಾಯನಿಕ ವಸ್ತುಗಳನ್ನು ಬಳಸಿ ಸುರಕ್ಷಿತವಾಗಿರಿಸಿದ್ದರು. ಈ ಕಾರಣದಿಂದಾಗಿ ಇಂದೂ ಸುಮಾರು ೭೦ ವರ್ಷಗಳ ನಂತರವೂ ಅಂದಿನ ಫಿಲಂಗಳು ನಮಗೆ ನೋಡಲು ಲಭ್ಯ ಇವೆ. ಅಂದಿನ ಕೆಂಪರಾಜ್ ಅರಸರ ಸಾಹಸವು ನಿಜಕ್ಕೂ ಶ್ಲಾಘನೀಯ ಮತ್ತು ಅಭಿನಂದನೀಯ.

(ಆಧಾರ ಮಾಹಿತಿ) ಚಿತ್ರದಲ್ಲಿ : ಕೆಂಪರಾಜ್ ಅರಸ್ ಜೊತೆ ಅಂದಿನ ಖ್ಯಾತ ನಟಿ ಎಂ ವಿ ರಾಜಮ್ಮ

ಚಿತ್ರ ಕೃಪೆ: ಅಂತರ್ಜಾಲ ತಾಣ