ಕಡೂರಿನ‌ ದಿನಗಳು ‍: ಅಮ್ಮನ‌ ಸೀರೆ!

ಕಡೂರಿನ‌ ದಿನಗಳು ‍: ಅಮ್ಮನ‌ ಸೀರೆ!

ಕಡೂರಿನ ದಿನಗಳು - ಅಮ್ಮನ ಸೀರೆ!

ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

ಅಮ್ಮ ನಮ್ಮನ್ನಗಲಿ ೭ ವರುಷಗಳ ಮೇಲಾಯಿತು ಹೆಚ್ಚೂ ಕಡಿಮೆ ಈ ಸಮಯಕ್ಕೆ. ನೆನಪು ಮರುಕಳಿಸಿತು. ಅಮ್ಮ, ಅಮ್ಮನ ಸೀರೆಯೊಂದಿಗೆ ನೆನಪಾದಳು. ಸುಂದರ ನೆನಪುಗಳು ಸವಿದರೆ ಸವಿನೆನಪುಗಳು. ಅಮ್ಮನ ಹತ್ತಿರ ಒಂದು ರೇಶ್ಮೆ ಸೀರೆ ಇತ್ತು. ಇದ್ದ ಒಂದೆರಡು ರೇಶ್ಮೆ ಸೀರೆಗಳಲ್ಲಿ ಇದೂ ಒಂದು. ಇದು ಒಂದು ಅಪೂರ್ವವಾದ ಸೀರೆ. ತುಂಬಾ ಜರತಾರಿ ಇಲ್ಲದಿದ್ದರೂ ಎಲ್ಲರಿಗೂ ಮೆಚ್ಚುಗೆಯಾಗುವಂತ ಸೀರೆ. ಚಕ್ಸ್ ಮಡಿಲು ಅಂದರೆ ಎರಡುಬಣ್ಣಗಳ ಚೌಕಲಿಗಳಿಂದ ಕೂಡಿತ್ತು. ಒಂದು ಚಿನ್ನದ ಹಳದಿಬಣ್ಣ, ಇನ್ನೊಂದು ಸರಸ್ವತಿ ಬಣ್ಣ ಅಂದರೆ (ಮೆಜೆಂತಾ) ಬಣ್ಣ. ಅಂಚಿನಲ್ಲಿ ಸರಸ್ವತಿ ಬಣ್ಣವಿದ್ದು, ಜರತಾರಿಯಲ್ಲಿ ಹೂವುಗಳನ್ನು ಸಾಲಾಗಿ ನೈದಿದ್ದರು. ಸೆರಗಿನಲ್ಲೂ ಜರತಾರಿಯಲ್ಲಿ ಹೂವುಗಳು ಮತ್ತು ಸರಸ್ವತಿ ಬಣ್ಣದ ಅಂಚಿತ್ತು. ಮೊದಲೆಲ್ಲಾ ಬದುಕು ಸರಿಯಾಗಿದ್ದಾಗ ಅಮ್ಮ ಈ ಸೀರೆಯನ್ನು ಮದುವೆ, ಮುಂಜಿ ಮುಂತಾದ ದಿನಗಳಲ್ಲಿ ಎಲ್ಲರಂತೆ ರೇಶ್ಮೆ ಸೀರೆ ಉಡುವಾಗ ಉಟ್ಟುಕೊಳ್ಳುತ್ತಿದ್ದಳು. ಆಮೇಲಾಮೇಲೆ ಬಡತನ ಆವರಿಸಿದ್ದರಿಂದ, ಬೇರೆ ಸೀರೆಗಳಿಲ್ಲದೇ, ಎಲ್ಲಿಗೇ ಹೋಗಬೇಕಾದರೂ ಇದೇ ಗತಿಯಾಯಿತು. ನಾವೆಲ್ಲ ಈ ಸೀರೆ ಯಾಕಮ್ಮ ಉಡುತ್ತೀಯ ಅಂದಾಗ "ಇಟ್ಟೇನು ಮಾಡುವುದು, ಉಟ್ಟರೇ ಚೆಂದ" ಅಂದಳು ಸ್ವಲ್ಪ ದಿನ. ನಂತರ ನಮಗೇ ಅರ್ಥವಾಯಿತು ಬೇರೇ ಸೀರೆಗಳಿಲ್ಲದಿರುವುದು. ಅಮ್ಮ ಚೆನ್ನಾಗಿ ಕಾಣುತ್ತಿದ್ದಳು ಈ ಸೀರೆ ಉಟ್ಟಾಗ. ಹೀಗೆ ಅಂಗಡಿ, ಮುಂಗಟ್ಟು ಎಲ್ಲ ಕಡೆಗೂ ಇದೇ ಸೀರೆ ಉಟ್ಟು, ಅಂಚೆಲ್ಲಾ ಹರಿದು ಹೋಗುತ್ತಾ ಬಂತು. ಆದರೂ, ಜರತಾರಿ ಅಂಚು ಮೇಲಿದ್ದರಿಂದ ಅದು ಚೆನ್ನಾಗೇ ಇತ್ತು.

ರೇಶ್ಮೆ ಅಂಚು ಹರಿದರೇನು, ಜರತಾರಿ ಚೆನ್ನಾಗಿದೆಯಲ್ಲ ಅದೇ ಸಾಕು ಅನ್ನುತ್ತಿದ್ದಳು ಅಮ್ಮ. ಏಕೆಂದರೆ ಮೊದಲಿನ ರೇಶ್ಮೆ ಸೀರೆಗಳಲ್ಲಿ ಜರತಾರಿಯನ್ನು ಒಳ್ಳೇ ಬೆಳ್ಳಿ ಯಿಂದ ಮಾಡಿ ಅದರಮೇಲೆ ಚಿನ್ನದ ನೀರು ಹಾಕಿದಹಾಗೆ ಮಾಡಿರುತ್ತಿದ್ದರು. ಜರಿ ಕರಗಿಸಿದರೆ ಅಕ್ಕಸಾಲಿಗನ ಹತ್ತಿರ, ಅವನು ಅದನ್ನು ಖರೀದಿ ಮಾಡಿ ಅದಕ್ಕೆ ಸಮಾನವಾದ (ಅವನು ತೀರ್ಮಾನಿಸಿದಂತೆ) ಬೆಳ್ಳಿಯ ಬೆಲೆಯನ್ನು ರೂಪಾಯಿಯಲ್ಲಿ ಕೊಡುತ್ತಿದ್ದ. ಅದಕ್ಕೇ ಅಮ್ಮ ಹೇಳುತ್ತಿದ್ದಳು: ಎಲ್ಲ ಹರಿದು ಹೋದಮೇಲೆ ಬೆಳ್ಳಿಯನ್ನು ಕರಗಿಸಿ ದುಡ್ಡು ಪಡೆಯೋಣ ಅಂತ. ಆದರೆ ನನಗೆ ಆ ವಿಷಯ ಯೋಚಿಸಿದಾಗ ಅಷ್ಟು ಖುಷಿ ತಂದಿರಲಿಲ್ಲ. ಸ್ವಲ್ಪ ಹರಿಯುತ್ತಿರುವಾಗಲೇ ಆಗಾಗ ನಾನು ಸೂಜಿ ಮತ್ತು ಸರಸ್ವತಿ ಬಣ್ಣದ ದಾರ ತಗೊಂಡು ಚೆನ್ನಾಗಿ ಹೊಲಿದು ಒಪ್ಪವಾಗಿ ಇಡುತ್ತಿದ್ದೆ. ಆ ಸೀರೆ ನೋಡಿದಾಗಲೆಲ್ಲ ಎಷ್ಟೊಂದು ಆನಂದ ಕೊಡುತ್ತಿತ್ತು ನನಗೆ. ಹಾಗಾಗಿ ಸೀರೆ ಪೂರ್ತಿ ಹರಿಯಲು ಅವಕಾಶ ಕೊಡಲೇ ಇಲ್ಲ.

ಅಷ್ಟರಲ್ಲೇ ಮನೆಯ ಅರ್ಥಿಕ ಪರಿಸ್ಥಿತಿ ಸ್ವಲ್ಪ ಸುಧಾರಿಸಿದ್ದರಿಂದ ನಮ್ಮ ಅಕ್ಕ ಅಮ್ಮನಿಗೆ ಕೆಲವು ಕಾಟನ್ ಸೀರೆಗಳು ಜರಿ ಅಂಚಿರುವುದನ್ನು ತಂದಳು. ಆಗ ಅವುಗಳನ್ನು ಅಮ್ಮ ದಿನಬಳಕೆಗೆ ಉಡುತ್ತಿದ್ದರು. ಈ ಸೀರೆಯನ್ನು ಹರಿದಿದ್ದ ದಡಗಳನ್ನು ನಮ್ಮ ಮನೆಯಲ್ಲೇ ಹೊಲೆಯುವ ಮಿಶನ್ ಇದ್ದಿದ್ದರಿಂದ ಅದರಲ್ಲಿ ಸಿಗ್ಸ್ಯಾಗ್ ಮಾಡಿ ಜೋಪಾನವಾಗಿ ಇಟ್ಟೆವು. ಈಗ ಅಪರೂಪಕ್ಕೆ ಅಮ್ಮ ಈ ಸೀರೆ ಉಡುತ್ತಿದ್ದಳು. ನಮ್ಮ ದೊಡ್ದ ಅಕ್ಕನೂ ಅಪರೂಪಕ್ಕೊಮ್ಮೆ ಈ ಸೀರೆ ಉಡುತ್ತಿದ್ದಳು. ನಾನಿನ್ನೂ ಸೀರೆ ಉಡುತ್ತಿರಲಿಲ್ಲವಾದ್ದರಿಂದ ಇದನ್ನು ಉಡುವ ಅವಕಾಶ ಸಿಕ್ಕಿರಲಿಲ್ಲ. ನಾವೆಲ್ಲ ಇನ್ನೂ ಲಂಗ ಹಾಕುತ್ತಿದ್ದರಿಂದ, ಆ ಸೀರೆಯಲ್ಲಿ ನಮ್ಮ ಜರಿ ಲಂಗ ಹೇಗೆ ಕಾಣಬಹುದೆಂದು ಊಹಿಸಿ ಸಂತೋಷ ಪಟ್ಟುಕೊಳ್ಳುತ್ತಿದ್ದೆವು. ಅದು ಮನಸ್ಸಿಗೆ ಉಟ್ಟಷ್ಟೇ ಆನಂದವನ್ನು ಕೊಡುತ್ತಿತ್ತು. ಈಗಲೂ ಮನಸ್ಸಿನಲ್ಲಿ ತುಂಬಿಕೊಂಡರೆ ಅದೊಂದು ಅಪೂರ್ವವಾದ ಸವಿನೆನಪು.

ಹೀಗೇ ದಿನಕಳೆಯಲು, ನಮ್ಮ ಅಕ್ಕ ಸೀರೆ ಉಡುವಹಾಗಾದಾಗ ಅವಳಿಗೆ ಹೊಸ ರೇಶ್ಮೆ ಸೀರೆಗಳು ಬಂದವು. ಅಮ್ಮನಿಗೂ ಹೊಸ ತರಹದ ರೇಶ್ಮೆ ಸೀರೆಗಳು ದಕ್ಕಿದವು. ಆಗ ಅವರಿಬ್ಬರ ಕಣ್ಣು ಈ ಸೀರೆಯಿಂದ ದೂರ ಸರಿಯಿತು. ಆಗ ಅದೃಷ್ಟ ನಮ್ಮ ಪಾಲಿಗೆ ಬಂತು, ಲಂಗ ಧರಿಸುವ ಅಕ್ಕ ತಂಗಿಯರಿಗೆ. ಆಗ ಸೀರೆಯಲ್ಲಿ ಲಂಗ ಮತ್ತು ಕುಪ್ಪಸವನ್ನು ಮನೆಯಲ್ಲೇ ಹೊಲೆದೆವು. ಈ ಲಂಗವನ್ನು ನಾವು ೩-೪ ಜನ ಅಕ್ಕ ತಂಗಿಯರು ಹಂಚಿಕೊಂಡು ಧರಿಸುತ್ತಿದ್ದೆವು. ಒಬ್ಬೊಬ್ಬರು ಒಂದೊಂದು ಹಬ್ಬಕ್ಕೆ ಅಂತ ನಿಗಧಿಮಾಡಿ. ಹಾಗಾದರೂ ತೃಪ್ತಿ ಅನ್ನುವುದು ಎಳ್ಳಷ್ಟೂ ಕಡಿಮೆಯಾಗಿರಲಿಲ್ಲ. ಈ ಸೀರೆ ಮತ್ತು ಅದರ ಲಂಗ ನೆನಪಾದಾಗ ಹಬ್ಬ ಹುಣ್ಣಿಮೆಗಳು ನೆನಪಿಗೆ ಬರುತ್ತದೆ. ಝರತಾರಿ - ರೇಶ್ಮೆ ಲಂಗ ಧರಿಸಿ, ಕುಚ್ಚಿನ ಜಡೆ ಹಾಕಿ, ಸರ - ಜುಮುಕಿ ಹಾಕಿಕೊಂಡರೆ ಏನೋ ಸಂತೋಷ, ಸಂಭ್ರಮ, ಉತ್ಸಾಹ ಹೇಳತೀರದು. ಆ ಉತ್ಸಾಹ ಈಗ ಎಷ್ಟೇ ದುಬಾರಿ ರೇಶ್ಮೆ ಸೀರೆ ಉಟ್ಟು, ವಜ್ರದ ಓಲೆ ಹಾಕಿಕೊಂಡರೂ ಬಾರದು. ಕ್ರಮೇಣ, ತುಂಬಾ ಹಳೆಯ ಸೀರೆಯಾದ್ದರಿಂದ ಲಂಗವಾಗಿ ಬಹಳ ದಿನ ಉಪಯೋಗಿಸಿದ ನಂತರ ಜರತಾರಿ ಇನ್ನೂ ಚೆನ್ನಾಗಿದ್ದರಿಂದ ಹಳೇ ಬಟ್ಟೇ ತಗೊಂಡು ಪಾತ್ರೆ ಕೊಡುವವನಿಗೆ ಕೊಟ್ಟು ಪಾತ್ರೆ ತಗೊಂಡ ಮೇಲೆ ಅದರ ಕಾಲ ಮುಗಿದಿತ್ತು.

ಸಿಹಿನೆನಪೊಂದೇ ಸಾಕು ನಮ್ಮನ್ನು ಭಾವುಕತೆಯಲ್ಲಿ ಬಂಧಿಸಲು...! ಹೀಗೆ ಅಮ್ಮ, ಅಮ್ಮನ ಸೀರೆಯೊಂದಿಗೆ ನೆನಪಾದಳು...!! ಅಮ್ಮನ ನೆನಪು ನಿತ್ಯ ನೂತನವಾಯಿತು...!!!

Comments

Submitted by rasikathe Tue, 11/26/2013 - 05:22

In reply to by kavinagaraj

ಧನ್ಯವಾದಗಳು ನಾಗರಾಜ್ ಅವರೆ! ನೀವು ಹೇಳಿದ್ದು ಸರಿಯಾಗಿದೆ!. ಸವಿನೆನಪನ್ನು ಹಂಛಿಕೊಂಡಾಗ‌ ಸಂತಸ‌ ಇಮ್ಮಡಿಯಾಗುತ್ತದೆ!
ನಿಮ್ಮ‌ ಪ್ರತಿಕ್ರಿಯೆಗೆ ನನ್ನೀ
ಮೀನಾ