ಕಡೂರಿನ ದಿನಗಳು - ಕುಟ್ಟುಂಡೆ ಕಥೆ! (ಭಾಗ ೨)
ಮುಂದುವರಿದ ಭಾಗ...
ನನಗೂ ಅದೇ ಸರಿಯೆನಿಸಿ, ಎರಡು ಉಂಡೆಯನ್ನು ಒಟ್ತಿಗೇ ಸೇರಿಸಿ ಎಲ್ಲವುದರ ಜೊತೆ (ಸಕ್ಕರೆ, ಉಪ್ಪು, ಜೀರಿಗೆ, ಸಾರಿನ ಪುಡಿ)ಚೆನ್ನಾಗಿ ಕುಟ್ಟಿದೆವು ಇಬ್ಬರೂ ಸ್ವಲ್ಪ ಸ್ವಲ್ಪ ಹೊತ್ತು. ಈಗ "ಕುಟ್ಟುಂಡೆ" ರೆಡಿಯಾಯಿತು. ಕರ್ತೃಗಳಿಬ್ಬರೂ ಸಣ್ಣ ಗುಳಿಗೆಯಷ್ಟು ರುಚಿನೋಡಲು ತಿನ್ನುತ್ತಿರುವಾಗ ನಮ್ಮ ತಂಗಿಯರು ಬಾಯಲ್ಲಿ ನೀರೂರಿಸಿಕೊಂಡು, ಬಾಗಿಲು ಕಾಯುವುದನ್ನೂ ಬಿಟ್ಟೂ, ಬಾಗಿಲು ಮುಚ್ಚದೇ ಓಡಿ ಬಂದರು "ನಮಗೆ ಕುಟ್ಟುಂಡೇ".... ಅಂತ.....
ನಾನು, ಅವರು ಬಾಗಿಲನ್ನೂ ತೆರೆದು ಬರುತ್ತಿರುವುದನ್ನು ನೋಡಿ ನನ್ನ ಗೆಳತಿಗೆ ಹೇಳಿದೆ " ನೀನು ಅವರಿಗೆಲ್ಲಾ ಸ್ವಲ್ಪ ಗೋಲಿಗಾತ್ರದ ಉಂಡೆ ಮಾಡಿ ಕೊಡು, ನಾನು ಬಾಗಿಲು ಕಾಯುತ್ತೀನಿ. ಆಮೆಲೆ ನಾವಿಬ್ಬರೂ ತಿನ್ನೋಣ" ಅಂತ ಓಡಿದೆ. ನಾನು ಬಾಗಿಲ ಬಳಿ ಹತ್ತಿರ ಬಂದಾಗ ನಮ್ಮ ಅಮ್ಮ ನಡುಮನೆಯಿಂದ ಅಡಿಗೆ ಮನೆಗೆ ಕಾಫಿ ಮಾಡಲು ಬಂದರು. ಏನ್ರೇ ಅದು? ಒಂದ್ ಸ್ವಲ್ಪ ಮಲಗಣ ಅಂದ್ರೇ ಅದೇನ್ ಗಲಾಟೆ ಮಾಡ್ತೀರ? ಬಾಗಿಲು ಹಾಕಿ - ತೆಗೆದು, ಕುಯ್ಯೊ ಮರ್ರೋ ಅನ್ನಿಸುತ್ತಿದ್ದೀರ? ಅಂದರು. ನಾನು "ಅಮ್ಮ, ಲಲಿತ ಅವರ ಅಮ್ಮ ಇನ್ನೂ ಇದಾರಾ ? ಅಂದೆ". ಕಾಫಿ ಕುಡಿದು ಹೋಗಿ ಅಂದೆ, ಅವರ ಯಜಮಾನ್ರುನೂ ಕಾಫಿಗೆ ಮನೆಗೆ ಬರೋ ಹೊತ್ತಾಯ್ತು ಅಂತ ಹೋದ್ರು. ಲಲಿತಂಗೆ ಹೇಳು ಆಟ ಆಡಿದ್ ಮುಗಿದಿದ್ರೇ ತಂಗೀರನ್ನ ಕರ್ಕೊಂಡು ಮನೆಗ್ ಹೋಗ್ಬೇಕಂತೆ ಅಂತ" ಅಂದ್ರು. ನಾನು ಮನಸಲ್ಲೇ ಅಂದ್ಕೊಂಡೆ " ಅವೆಲ್ಲಿ ಈಗ್ಲೇ ಮನೆಗ್ ಹೋಗತ್ವೆ? ಇನ್ನೂ ಕುಟ್ಟುಂಡೇನೇ ತಿಂದಿಲ್ಲಾ?" ಅಷ್ಟೊತ್ತಿಗೇ ನಮ್ಮ ಅಜ್ಜಿ ಕಾಫಿ ಕುಡಿಯಕ್ಕೆ (ಮಾಡಕ್ಕಲ್ಲ) ಎದ್ದು ಬಂದರು. "ಕತ್ತಲೆ ಕಾಣೋಲ್ಲ, ಬಾಗಿಲು ತೆಗೆಯೇ" ಅಂದರು. ಹಳೇ ಹಂಚಿನ ಮನೆಯಲ್ಲಿ, ಅದರಲ್ಲೂ ಅಡಿಗೆ ಮನೆಗಳಲ್ಲಿ ಕಿಟಕಿಯೇ ಇರುವುದಿಲ್ಲ. ಹಿತ್ತಿಲ ಬಾಗಿಲು ತೆಗೆಯದೇ ಹೋದರೆ ಕತ್ತಲೇನೇ. ಅಜ್ಜಿಗೆ ಹೇಗೇಗೋ ಸಮಾಧಾನ ಮಾಡಿ" ತೆಗೀತೀನಿ, ತಾಳಜ್ಜಿ, ಇನ್ನೂ ಕಾಫಿ ರೆಡಿ ಇಲ್ಲ, ಇನ್ನೊಂದು ಸ್ವಲ್ಪ ಮಲಕ್ಕೋ " ಅಂದೆ. ಅಜ್ಜಿ ಬಿಡುತ್ತಾ (ನಮ್ಮಜ್ಜಿ , ಹೇಳಿ -ಕೇಳಿ) "ನಿದ್ದೇನ್ ಬರೋಲ್ಲ, ಸುಮ್ಮನೇ ಮಲಗ್ಬೇಕು " ಅಂತು. ಇನ್ನೇನಪ್ಪ ಮಾಡೋದು ಅಂತ ಯೋಚಿಸಿ, "ಅಜ್ಜಿ ಇವತ್ತು ನಾನ್ ವಾಕಿಂಗ್ ಕರಕೊಂಡು ಹೋಗ್ತೀನಿ" ಅಂದೆ. ಖುಷಿಯಾಗಿಬಿಡ್ತು. ಯಾಕೆಂದರೆ, ಅಜ್ಜಿನ ವಾಕಿಂಗ್ ಕರೆದುಕೊಂಡು ಹೋಗಕ್ಕೆ ಯಾರೂ ಒಪ್ಪುತ್ತಿರಲಿಲ್ಲ. ಕಾರಣ ಏನು ಅಂದ್ರೇ, ವಾಕಿಂಗ್ ಇಂದ ಮೀಟಿಂಗ್(ವಿವಿಧ ಜನರ) ಆಗಿ, ಟಾಕಿಂಗ್ ಗೆ ಹೋಗಿ, ನೈಲಿಂಗ್ ಉಂಟಾಗಿ, ಕಡೆಗೆ ಪಾತ್ರೆ ಅಂಗಡಿ, ಅಲ್ಲಿಂದ ವೈದ್ಯರ ಅಂಗಡಿ, ಅಲ್ಲಿಂದ ಬಾಯ್ ಫ್ರೆಂಡ್ಸು, ಹೀಗೆ ಹತ್ತು ಹಲವಾರು ಹವ್ಯಾಸಗಳು, ಯಾಕ್ ಹೇಳ್ತೀರ? ಅಂತೂ ಕಡೆಗೆ ನಮ್ಮ ಪುಟಾಣಿ ಏಜೆಂಟ್ಗಳೆಲ್ಲ ಕುಟ್ಟುಂಡೆ ತಿಂತಾ ಬಂದ್ವು ಚಪ ಚಪ ಅಂದ್ಕೊಂಡು. ಸಾರಿ ಸಾರಿ ಹೇಳಿದ್ವಿ " ಮುಚ್ಕೊಂಡು ತಿನ್ನಿ, ಚಪ ಚಪ ಅಂತ ಶಬ್ಧ ಮಾಡ್ ಕೊಂಡು ಚೀಪ್ ಬೇಡಿ" ಅಂತ. ಅದ್ರೇನು, ಎಲ್ಲ ತಲೆಗೆ ಹೋಗಿ ಕೆಳಕ್ ಬಿದ್ದಿತ್ತು. ನಾನು ಬಾಗಿಲು ತೆಗೆದು ಅಜ್ಜಿಗೆ, "ಗಾಳಿ ಅಜ್ಜಿ, ದೂಳ್ ಬರ್ತಾ ಇದೆ, ನೀ ಒಳಗೇ ಇರು ಅಂತ ಹೇಳಿ ಲಲಿತನ ಹತ್ತಿರ ಬಂದೆ. "ಸಾಕಮ್ಮ, ಈ ಕುಟ್ಟುಂಡೆ ಕಥೆ, ಆಯ್ತಲ್ಲಾ, ನಿನ್ ಮಕ್ಕಳನ್ನ ಕರೆದ್ಕೊಂಡು ಮನೆಗೆ ಹೋಗು " ಅಂದೆ. "ನನ್ನ ಮಕ್ಕಳು?, ನಿನ್ನ ಮಕ್ಕಳು ವಿಷಯ ಹೇಳ್ತಾ ಇದೀಯಾ?" ಅಂದಳು. ಅವರನ್ನ ನಾನ್ ನೋಡ್ಕೋತೀನಿ, ನಿನ್ ತಂಗಿಯರನ್ನ ಕರ್ಕೊಂಡು ಹೋಗು ಅಂತ ಕಳಿಸ್ದೆ. ಲಲಿತ, ;"ಏ ಕಾಫಿ ವಾಸನೆ ಬರ್ತಾ ಇದೆ, ಕುಟ್ಟುಂಡೆ ತಿಂದು ಕಾಫಿ ಕುಡುದ್ರೇ ಚೆನ್ನಾಗಿರುತ್ತೆ" ಅಂದಳು. "ನಿಮ್ಮ ಅಮ್ಮನೂ ಕಾಫಿ ಮಾಡಕ್ಕೆ ಮನೆಗೆ ಹೋದ್ರಂತೆ, ನೀ ಮನೆಗೇ ಹೋಗಿ ಕುಡಿ" ಅಂದೆ. ಫೈನಲೀ ಅವರೆಲ್ಲ ಜಾಗ ಖಾಲಿ ಮಾಡಿದ್ರು.
ನನ್ನ ತಂಗಿಯರನ್ನ ಹಿತ್ತಲಿಗೆ ಕರೆದುಕೊಂಡು ಹೋಗಿ " ಇಲ್ಲೇ ಪೂರ್ತಿ ತಿಂದು ಮನೆ ಒಳಗೆ ಹೋಗಿ, ಆಮೇಲ್ ಗೊತ್ತಲ್ಲಾ, ರಾತ್ರಿ "ಟೊಯೋ, ಟೊಯೋ ಅಂತ ಕೆಮ್ಮೋ ಹಾಗಿಲ್ಲ, ಕೆಮ್ಮು ಬಂದರೂ ತಡಕೋ ಬೇಕು. ತಡೆಯಕ್ಕಾಗದಿದ್ದರೆ, ಬಚ್ಚಲು ಮನೆಗೆ ಹೋಗಿ ಬಾಯಿ ತೊಳೆದು ನೀರು ಕುಡೀರಿ. ಅಣ್ಣ ಕೆಮ್ಮು ಯಾಕೆ ಅಂದ್ರೇ? "ಮೀನ ಕುಟ್ಟುಂಡೆ ಮಾಡಿದ್ಲು" ಅಂತ ಮಾತ್ರ ಹೇಳಲೇ ಕೂಡದು" ಅಂತ ಮನೆದಟ್ಟು ಮಾಡಿಸಿದೆ. ಈಬ್ಬರೂ ಕುಟ್ಟುಂಡೆ ತಿಂತಾ ಅದೇನ್ ಕೇಳಿಸಿಕೊಂಡ್ರೋ ಏನೋ, ಕೋಲೇಬಸವನ ತರ ಮೇಲಿಂದ ಕೆಳಗಿನವರೆಗೂ ತಲೆ (ಆ ಕ್ಷಣದಲ್ಲಿ ಇತ್ತೋ ಇಲ್ವೋ ಗೊತ್ತಿಲ್ಲ) ಒಗೆದರು. ಆಮೇಲೆ, ರಾತ್ರಿಯ ನಾಟಕವನ್ನು ತೆರೆಯಮೇಲೆ ನೋಡಿ ಆನಂದಿಸಿರಿ.....ಮರೆಯಬೇಡಿ, ಮರೆತು ನಿರಾಶರಾಗದಿರಿ..."ಕುಟ್ಟುಂಡೆ"...!
Comments
ಮಕರ ಅವರೆ, ಭಾಗ 2 ಅನ್ನು
In reply to ಮಕರ ಅವರೆ, ಭಾಗ 2 ಅನ್ನು by rasikathe
ಬಾಲ್ಯದಲ್ಲಿ ನಮಗೂ ಕುಟ್ಟುಂಡೆ ಬಹಳ
In reply to ಬಾಲ್ಯದಲ್ಲಿ ನಮಗೂ ಕುಟ್ಟುಂಡೆ ಬಹಳ by venkatesh
ನಿಮ್ಮ ಸ್ಪಮ್ದನ್ಕ್ಕೆ ನನ್ನೀ
ಕುಟ್ಟುಂಡೆ ತುಂಬಾ