ಕಡೂರಿನ ದಿನಗಳು - ಕುಟ್ಟುಂಡೆ ಕಥೆ!
ಕುಟ್ಟುಂಡೆ ಅಂದ್ರೆ ಏನು ಅಂತ ಆಮೇಲೆ ಹೇಳ್ತೀನಿ. ಹೇಳದೇ ಹೋದರೂ ಕಥೆ ಪದರ ಬಿಡಿಸುತ್ತಿದ್ದಾಗ ನಿಮಗೇ ಅರಿವಾಗುತ್ತೆ. ನಾವು ಕಥೆಯಲ್ಲಿ ಕುಟ್ಟುಂಡೆ ಮಾಡುವಾಗ ನೀವೂ ಹಾಗೆ ಮಾಡಿ ತಿಂದುನೋಡಿ.
ಅಮ್ಮ, ಅಣ್ಣ ಹೇಳ್ತಾನೇ ಇದ್ದರು ಹಗಲೆಲ್ಲಾ ಕುಟ್ಟುಂಡೆ ಮಾಡ್ಕೊಂಡು ತಿನ್ನಬೇಡಿ, ಕೆಮ್ಮು ಬರತ್ತೆ ಅಂತ. ಆದ್ರೂ ಕುಟ್ಟುಂಡೆ ರುಚಿ ಅದನ್ನು ಕೇಳಬೇಕಲ್ಲ? ನಮ್ಮ ಅಕ್ಕಂದಿರು ಅವರ ಸ್ನೇಹಿತೆಯರೊಂದಿಗೆ ಅಟ್ಗುಬ್ಬಚ್ಚಿ ಆಟ( ಅಮ್ಮ ಆಟ) ಆಡೋವಾಗ, ಅನ್ನ, ಸಾರು ಮತ್ತು ಕುಟ್ಟುಂಡೆ ಎಲ್ಲ ಮಾಡಿ ತಿಂದು ನಮಗೂ ರುಚಿ ಹತ್ತಿಸಿದ್ರು. ಆದ್ದರಿಂದ ನಮಗೂ ಮಾಡುವ ಆಸೆ ಕಾಡಿತ್ತು. ನಾವೂ ಸ್ವಲ್ಪ ದೊಡ್ಡವರಾದ ಮೇಲೆ ಅದರ ಹುಚ್ಚು ಇನ್ನೂ ಜಾಸ್ತಿಯಾಯಿತು. ನಾನು, ನನ್ನ ಇಬ್ಬರು ತಂಗಿಯರು, ನನ್ನ ಸ್ನೆಹಿತೆ ಮತ್ತು ಅವಳ ತಂಗಿಯರು ಸೇರಿಕೊಂಡು ಯೋಜನೆ ಹಾಕಿದ್ದಾಯಿತು. ಯಾರ್ಯಾರು ಯಾವ ಯಾವ ಸಾಮಾನು ಕದ್ದು ತರುವುದು ಎಂದು. ನಾನು ಮತ್ತು ನನ್ನ ಸ್ನೇಹಿತೆ ಒಬ್ಬರು ಹುಣಸೇ ಹಣ್ಣು (ಮೂಸಂಬಿ ಗಾತ್ರ), ಮತ್ತು ಮೆಣಸಿನ ಪುಡಿ ತರುವುದು ಎಂದಾಯ್ತು. ನಮ್ಮ ತಂಗಿಯರು ಸಣ್ಣವರಾಗಿದ್ದರಿಂದ ಅವರು ಉಪ್ಪು, ಸಕ್ಕರೆ, ಜೀರಿಗೆ ಇವುಗಳನ್ನು ತರುವುದಕ್ಕೆ ಹೇಳಾಯಿತು. ಒಂದು ಸರಿಯಾದ ಹಾಸುಕಲ್ಲನ್ನು ನಮ್ಮ ಹಿತ್ತಲಿನಲ್ಲೇ ಹುಡುಕಿ, ಆ ಕುಟ್ಟುಂಡೆ ಕುಟ್ಟುವುದಕ್ಕೆ ಒಂಡು ಗುಂಡುಕಲ್ಲನ್ನು ಬೇರೆ ಎತ್ತಿಟ್ಟಾಯಿತು. ಇನ್ನು ಯಾವಾಗಂದರೆ ಆವಾಗ ಕುಟ್ಟುಂಡೆ ಕುಟ್ಟುವಹಾಗಿಲ್ಲ. ಅಮ್ಮ ಅಣ್ಣ ಅವರಿಗೆ ಗೊತ್ತಾಗುತ್ತೆ. ಸರಿಯಾದ ಸಮಯಕ್ಕೆ ಕಾದು ಕುಟ್ಟಬೇಕು. ರಜಾ ದಿನಗಳಲ್ಲಿ ಬೆಳಗ್ಗೆ ಇಂದ ಕೆಲಸಮಾಡಿ ಅಮ್ಮ, ಅಜ್ಜಿ, ಅಣ್ಣ, ಎಲ್ಲ ಮಧ್ಯಾನ್ನ ಊಟವಾದಮೇಲೆ ಸ್ವಲ್ಪ ಹೊತ್ತು ಮಲಗುತ್ತಿದ್ದರು. ಹಿತ್ತಲಿನ ಬಾಗಿಲು ಹಾಕಿ, ಮುಂದಿನ ಬಾಗಿಲು ತೆಗೆದು. ಆ ಸಮಯಕ್ಕೆ ಕಾದು ನಾವು ಹಿತ್ತಲಿನಲ್ಲಿ ಆಟ ಆಡುತ್ತೇವೆ ಎಂದು ಹೇಳಿ ಕುಟ್ಟುಂಡೆ ಕುಟ್ಟಲು ಹೋದೆವು. ನಮ್ಮ ನಮ್ಮ ತಂಗಿಯರಿಗೆ ಹೇಳಿದ್ದಾಯಿತು "ಮನೆಯ ಹಿತ್ತಲಿನ ಬಾಗಿಲ ಹತ್ತಿರನೇ ಕಾದು ಅಲ್ಲೇ ಆಟ ಆಡಿ. ದೊಡ್ದವರ್ಯಾರಾದ್ರೂ ಬಂದು ಕೇಳಿದರೆ, "ನಾವು ಆಟ ಆಡುತ್ತಿದ್ದೇವೆ, ಇನ್ನೇನು ಇಲ್ಲ, ಹಿತ್ತಲಿನ ಗೇಟು ಹಾಕಿದೆ, ಹಸು ಕಾರು ಯಾವುದೂ ಹೂವಿನ ಗಿಡ ತಿನ್ನುತ್ತಿಲ್ಲ, ಅಜ್ಜಿಯ ತರಕಾರಿಯ ಚೌವ್ಕ ದಲ್ಲಿ ಬರುವ ಹಕ್ಕಿಗಳನ್ನೂ ಓಡಿಸುತ್ತಿದ್ದೇವೆ, ಪರಂಗಿ ಕಾಯಿ ಬಿದ್ದರೆ ಒಳಗೆ ತಂದು ಇಡುತ್ತೇವೆ....ಹೀಗೆ ಸಾಲುಗಳನ್ನೇ ಗಟ್ಟಿ ಹೋಡಿಸಿದ್ವೀ" ಯಾರಿಗೂ ಕುಟ್ಟುಂಡೇ ವಿಷಯಾ ಮಾತ್ರ ಹೇಳಬೇಡಿ, ಇಲ್ದೆ ಇದ್ರೇ ಕುಟ್ಟುಂಡೆ ಕಥೆ ಅರ್ಧಕ್ಕೇ ಮುಗಿಯುತ್ತೇ" ಎಂದು ಎಚ್ಚರಿಕೆನೂ ಕೊಟ್ಟು ಅವರನ್ನೆಲ್ಲಾ ಬಾಗಿಲ ಬಳಿ ಕೂರಿಸಿ, ನಾನೂ ನನ್ನ ಸ್ನೇಹಿತೆ ಕುಟ್ಟುಂಡೆ ಕುಟ್ಟಲು ಬಂದ್ವಿ.
ಮೊದಲು ಹುಣಸೇ ಹಣ್ಣಿನಲ್ಲಿ ನಾರು, ಬೀಜ ಎಲ್ಲ ತೆಗೆದು ಕ್ಲೀನ್ ಮಾಡಿ ಎರಡು ಸಮಾನಾದ ಉಂಡೆ ಮಾಡಿದೆವು. ಆ ಒಂದೊಂದು ಉಂಡೆನೂ ಜೀರಿಗೆ ಮತ್ತು ಮೆಣಸಿನಪುಡಿಯ (ಸಾರಿನ ಪುಡಿಯ) ಜೊತೆಯಲಿ ಚೆನ್ನಾಗಿ ಕುಟ್ಟಿದೆವು. ನನ್ನ ಪಾರ್ಟ್ನರ್ ಸ್ವಲ್ಪ ರುಚಿ ನೋಡುತೀನಿ ಅಂತ ಸ್ವಲ್ಪ ತಿಂದು ಖಾರ ಮತ್ತು ಜೀರಿಗೆ ರುಚಿ ಚೆನ್ನಾಗಿ ಹತ್ತಿದೆ. ಸ್ವಲ್ಪ ಬೆಲ್ಲ ಹಾಕಿದ್ರೇ ಚೆನ್ನಾಗಿರುತ್ತೆ. ಈ ಮುಂಡೆವು ಸಕ್ಕರೆ ತಂದಿವ್ಯಲ್ಲಾ, ನಾನೇ ಹೋಗಿ ಸ್ವಲ್ಪ ಬೆಲ್ಲ ತರುತ್ತೀನಿ, ನೀನು ಉಪ್ಪು, ಸಕ್ಕರೆ ಹಾಕಿ ಚೆನ್ನಾಗಿ ಕುಟ್ಟುತ್ತಿರು. ಮುಗಿದಮೇಲೆ ಎರಡು ಉಂಡೆಯನ್ನು ಬೆರೆಸಿ ಒಟ್ಟಿಗೇ ಕುಟ್ಟೋಣ. ಆಗ ಸ್ವಲ್ಪ ಬೆಲ್ಲನೂ ಹಾಕಿ ಒಟ್ಟಿಗೇ ಕುಟ್ಟೋಣ ಅಂತ ಯೋಜನೆ ಹಾಕಿದೆವು. ಅವಳು ಒಳಗೆ ಹೋಗಿ ಅಡಿಗೆಮನೆಗೆ ಹೋದಾಗ ಅವರ ಅಮ್ಮ ನಮ್ಮ ಅಮ್ಮನ ಹತ್ತಿರ ಮಾತಾಡುವುದು ಕೇಳಿಸಿತು ಅವಳಿಗೆ. ಅವಳ ಅಮ್ಮ ಹೇಳುತ್ತಿದ್ದರಂತೆ: "ಲಲಿತ ಆಟ ಆಡಕ್ಕೆ ಅಂತ ಬಂದು ತುಂಬಾ ಹೊತ್ತಾಯಿತು, ಮಕ್ಕಳನ್ನು ಕರೆದುಕೊಂಡು ಹೋಗಕ್ಕೆ ಅಂತ ಬಂದೆ". ನಮ್ಮ ಅಮ್ಮ ಹೇಳ್ತಾ ಇದ್ದರಂತೆ: "ಅವೆಲ್ಲ ಹಿತ್ತಲಲ್ಲಿ ಆಟ ಆಡ್ತಿದಾರೆ. ಇನ್ನೇನ್ ಕಾಫಿ ಹೊತಾಯಿತು, ಕಾಫಿ ಕುಡಿದು ಹೋಗುವಿರಂತೆ ಕೂತ್ಕೊಳ್ಳಿ" ಅಂತ. ಲಲಿತಂಗೆ ನಮ್ಮ ಮನೆ ಅಡಿಗೆ ಮನೇಲಿ ಬೆಲ್ಲ ಎಲ್ಲಿದೆ ಅಂತ ಗೊತ್ತಿಲ್ಲದೇ, ಅವರ ಅಮ್ಮ ಬಂದಿರೋ ವಿಷಯ ಗೊತ್ತಾಗಿ, ಬೆಲ್ಲನೂ ತರದೇ ಬೇಗ ನನ್ನಲ್ಲಿಗೆ ಓಡಿ ಬಂದಳು. ಬೆಲ್ಲ ನಿಮ್ಮನೇಲಿ ಎಲ್ಲಿದೇ ಅಂತ ಗೊತ್ತಿಲ್ಲ, ನೀನೇ ಬೆಲ್ಲ ತಗೊಂಡು ಬಾ. ಇಲ್ಲದೇ ಇದ್ರೆ ಸಕ್ಕರೇನೇ ಸಾಕು ಕುಟ್ಟುಂಡೆ ಕುಟ್ಟಿ ಮುಗಿಸೋಣ. ಹೆಚ್ಚೂ ಕಡಿಮೆ ತಡವಾದರೆ ನಾನು ಮನೆಗೆ ಹೋಗ್ಬೇಕಾಗತ್ತೆ ಕುಟ್ಟೂಂಡೇ ತಿನ್ನದೆ ಅಂದಳು.
ನನಗೂ ಅದೇ ಸರಿಯೆನಿಸಿ, ಎರಡು ಉಂಡೆಯನ್ನು ಒಟ್ಟಿಗೇ ಸೇರಿಸಿ ಎಲ್ಲವುದರ ಜೊತೆ (ಸಕ್ಕರೆ, ಉಪ್ಪು, ಜೀರಿಗೆ, ಸಾರಿನ ಪುಡಿ)ಚೆನ್ನಾಗಿ ಕುಟ್ಟಿದೆವು ಇಬ್ಬರೂ ಸ್ವಲ್ಪ ಸ್ವಲ್ಪ ಹೊತ್ತು. ಈಗ "ಕುಟ್ಟುಂಡೆ" ರೆಡಿಯಾಯಿತು. ಕರ್ತೃಗಳಿಬ್ಬರೂ ಸಣ್ಣ ಗುಳಿಗೆಯಷ್ಟು ರುಚಿನೋಡಲು ತಿನ್ನುತ್ತಿರುವಾಗ ನಮ್ಮ ತಂಗಿಯರು ಬಾಯಲ್ಲಿ ನೀರೂರಿಸಿಕೊಂಡು, ಬಾಗಿಲು ಕಾಯುವುದನ್ನೂ ಬಿಟ್ಟೂ, ಬಾಗಿಲು ಮುಚ್ಚದೇ ಓಡಿ ಬಂದರು "ನಮಗೆ ಕುಟ್ಟುಂಡೇ".... ಅಂತ..
ಮುಂದುವರೆಯುವುದು.......
Comments
ಕುಟ್ಟುಮ್ಡೆ ತುಮ್ಬಾ ರುಚಿಕರ,
ಶಾಲೆಯಲ್ಲಿದ್ದಾಗ ಬೇಸಿಗೆ
In reply to ಶಾಲೆಯಲ್ಲಿದ್ದಾಗ ಬೇಸಿಗೆ by hpn
ಧನ್ಯವಾದಗಳು ಹಚ್.ಪಿ.ಎನ್. ಅವರೆ.
ಕುಟ್ಟುಂಡೆ ಚೆನ್ನಾಗಿರುತ್ತದೆ.
ಧನ್ಯವಾದಗಳು ನಾಗರಾಜ್ ಅವರೆ,
ಡಾ! ಮೀನಾ ಅವರೆ,
ಧನ್ಯವಾದಗಳು ಮಕರ ಅವರೆ, ಇವತ್ತು