ಕಣಜದ ಗೂಬೆಯ ಕರಾಮತ್ತು !

ಕಣಜದ ಗೂಬೆಯ ಕರಾಮತ್ತು !

ನಾನು ಚಿಕ್ಕವನಿದ್ದಾಗ ರಜೆಯಲ್ಲಿ ಹಳ್ಳಿಯಲ್ಲಿದ್ದ ನಮ್ಮ ಅಜ್ಜಿಯ ಮನೆಗೆ ಹೋಗುತ್ತಿದ್ದೆ. ಅಲ್ಲಿ ನಮ್ಮ ಪೇಟೆಯ ಮನೆಯಂತೆ ಸದ್ದುಗದ್ದಲ ಇರುತ್ತಿರಲಿಲ್ಲ. ನಮ್ಮ ಅಜ್ಜಿಯ ಮನೆ ರಸ್ತೆಯಿಂದ ಒಂದೆರಡು ಕಿಲೋಮೀಟರ್‌ ದೂರ. ಕತ್ತಲಾದ ನಂತರ ಅಲ್ಲಿಗೆ ಹೋಗಬೇಕಾದರೆ ಕೈಯಲ್ಲೊಂದು ಟಾರ್ಚ್‌ ಇರಲೇಬೇಕಾಗುತ್ತಿತ್ತು. ಇಂದು ನಮ್ಮೆಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಆದರೆ ಲ್ಯಾಂಡ್‌ ಲೈನ್‌ ಫೋನ್‌ ಕೂಡ ಇಲ್ಲದ ಕಾಲ ಅದು. ಹಾಗಾಗಿ ಮನೆಯಿಂದ ಟಾರ್ಚ್‌ ತೆಗೆದುಕೊಂಡು ಬನ್ನಿ ಎಂದು ಹೇಳಲೂ ಸಾಧ್ಯ ಇರಲಿಲ್ಲ. ಆದ್ದರಿಂದ ಕತ್ತಲಾಗುವ ಮೊದಲೇ ಅಜ್ಜಿಮನೆ ಸೇರಿಬಿಡುವುದು ನಮ್ಮ ಅಭ್ಯಾಸವಾಗಿತ್ತು. 

ಅಜ್ಜಿಮನೆಯಲ್ಲಿ ಕರೆಂಟ್‌ ಇದ್ದುದರಿಂದ ಸ್ವಲ್ಪ ಧೈರ್ಯವಾಗಿ ಮನೆಯ ಒಳಗೆ ಹೊರಗೆ ಓಡಾಡುತ್ತಿದ್ದೆವು. ಕರೆಂಟ್‌ ಹೋದರೆ ಅಜ್ಜಿ ಹೊರಗಡೆ ಹೋಗಲು ಬಿಡುತ್ತಿರಲಿಲ್ಲ. ಊಟ ಮಾಡಲು ಹಠ ಮಾಡಿದರೆ ಈಗ ಗುಮ್ಮ ಬಂದು ನಿನ್ನನ್ನು ಕೊಂಡೋಗ್ತದೆ ನೋಡು ಎಂದು ಹೆದರಿಸಿ ತೆರೆದ ಬಾಯಿಯ ಒಳಗೆ ಊಟವನ್ನು ಹಾಕಿಬಿಡುತ್ತಿದ್ದರು. ಹೀಗೆ ಗುಮ್ಮ, ಗೊಂಗ ಎಂಬ ಬೇರೆ ಬೇರೆ ಹೆಸರುಗಳಿಂದ ನಮ್ಮನ್ನು ಅಜ್ಜಿ ಹೆದರಿಸುತ್ತಿದ್ದ ಜೀವಿ ಯಾವುದು ಎಂದು ನಮಗೆ ತಿಳಿದೇ ಇರಲಿಲ್ಲ. ಗುಮ್ಮ ಮನೆಯ ಮೇಲೆ ಕುಳಿತು ಕಾಯುತ್ತಿರುತ್ತದೆ, ಊಟ ಮಾಡದ ಮಕ್ಕಳನ್ನು ಸದ್ದಿಲ್ಲದೇ ಬಂದು ಎತ್ತಿಕೊಂಡು ಹೋಗುತ್ತದೆ ಮತ್ತು ಇಡಿಯಾಗಿ ನುಂಗಿ ಬಿಡುತ್ತದೆ ಎಂದೆಲ್ಲ ಅದರ ವರ್ಣನೆ ಕೇಳಿ ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದುದು ಮಾತ್ರ ಸತ್ಯ. ನಾನು ಬೆಳೆದು ದೊಡ್ಡವನಾಗಿ ಕಾಲೇಜಿಗೆ ಹೋಗಲಾರಂಭಿಸಿದಾಗಲೇ ನನಗೆ ತಿಳಿದದ್ದು ಈ ಗುಮ್ಮ ಅಲಿಯಾಸ್‌ ಗೊಂಗ ಎಂದರೆ ಯಾರೋ ಹಾರಾಡುವ ರಾಕ್ಷಸನಲ್ಲ, ಅದು ಗೂಬೆ ಅಥವಾ OWL ಎಂದು.

ನಮ್ಮ ಕಾಲೇಜಿನ ಮಹಡಿಯ ಮೇಲೆ ಹಂಚು ಹೊದೆಸಲಾಗಿತ್ತು. ಅಲ್ಲೊಂದಿಷ್ಟು ಕತ್ತಲಿನ ಜಾಗ ಇತ್ತು. ಕಟ್ಟಡದ ಒಂದು ಮೂಲೆಯಲ್ಲಿದ್ದ ಆ ಮೆಟ್ಟಿಲುಗಳನ್ನು ಪ್ರಾಣಿಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಮಾತ್ರ ಬಳಸುತ್ತಿದ್ದರು. ಬೇರೆ ಯಾರೂ ಅಲ್ಲಿ ಓಡಾಡುತ್ತಿದ್ದುದು ಕಡಿಮೆ. ಒಂದು ದಿನ ಮೆಟ್ಟಿಲು ಹತ್ತುತ್ತಿದ್ದಾಗ ಅಲ್ಲೊಂದು ಬಿಳೀ ಬಣ್ಣದ ಗೂಬೆ ಕಾಣಿಸಿತು. ರೆಕ್ಕೆಗಳು ಕಂದು ಬಣ್ಣದಲ್ಲಿದ್ದವು. ಅಗಲವಾದ ದುಂಡಗಿನ ಮುಖ, ದೊಡ್ಡ ಕಣ್ಣುಗಳು, ಮಧ್ಯದಲ್ಲೊಂದು ಮೊಂಡಾದ ಕೊಕ್ಕು. ತಕ್ಷಣ ನೋಡಿದರೆ ಡಿಷ್‌ ಆಂಟೀನಾದಂತೆ ಕಾಣುವ ಮುಖ. ಹಲವಾರು ದಿನಗಳ ಕಾಲ ಈ ಗೂಬೆ ನಮಗೆ ಆ ಜಾಗದಲ್ಲಿ ಕಾಣಲು ಸಿಗುತ್ತಿತ್ತು. ನಮ್ಮ ಲ್ಯಾಬ್‌ ಅಟೆಂಡರ್‌ ದಿನೇಶಣ್ಣನನ್ನು ಕೇಳಿದಾಗ “ಹೋ ಅದಾ ಅದು ಸುಮಾರು ವರ್ಷಗಳಿಂದ ಅಲ್ಲಿ ಇದೆ. ಹಗಲಿನಲ್ಲಿ ಸುಮ್ಮನೇ ಕಣ್ಣು ಮುಚ್ಚಿ ಕುಳಿತಿರುತ್ತದೆ. ಅದರ ಹೆಸರು ಬಾರ್ನ್‌ ಔಲ್‌ (Barn Owl). ಅದನ್ನೇ ಪುರಾಣಗಳಲ್ಲಿ ಲಕ್ಷ್ಮಿಯ ವಾಹನ ಎಂದು ಕರೀತಾರೆ” ಎಂಬ ಮಾಹಿತಿ ಹೇಳಿದ್ರು. 

ಈ ಗೂಬೆಗೂ ಲಕ್ಷ್ಮಿಗೂ ಹೇಗೆ ಸಂಬಂಧ ಎಂದು ನಾನು ಹುಡುಕುತ್ತಿದ್ದೆ. ಒಬ್ಬರು ಹಿರಿಯರು ಹೇಳಿದ್ರು ಸಾವಿರಾರು ವರ್ಷಗಳ ಹಿಂದೆ ಕೃಷಿಯೇ ಪ್ರಧಾನ ಉದ್ಯೋಗವಾಗಿದ್ದ ಕಾಲದಲ್ಲಿ ಆಹಾರ ಧಾನ್ಯಗಳನ್ನು ಸಂಪತ್ತು ಎಂದು ಪರಿಗಣಿಸಲಾಗುತ್ತಿತ್ತು. ಸಂಗ್ರಹಿಸಿ ಇಟ್ಟ ಧಾನ್ಯಗಳನ್ನು ಇಲಿ ಹೆಗ್ಗಣಗಳು ತಿಂದು ಖಾಲಿ ಮಾಡುತ್ತಿದ್ದವು. ಈ ನಮ್ಮ ಗೂಬೆಯ ಮುಖ್ಯ ಆಹಾರವೇ ಇಲಿಗಳು. ಹಾಗಾಗಿಯೇ ಗೂಬೆಗಳನ್ನು ಧಾನ್ಯಲಕ್ಷ್ಮಿಯ ವಾಹನ ಎಂದು ಪುರಾಣಗಳಲ್ಲಿ ಹೇಳುತ್ತಾರೆ. ಕಟ್ಟಡಗಳ ಸಂದುಗಳಲ್ಲಿ, ಯಾರೂ ವಾಸಿಸದ ಪಾಳು ಬಂಗಲೆಗಳಲ್ಲಿ ಗೂಬೆಗಳು ವಾಸಮಾಡುತ್ತವೆ.

ಗೂಬೆಗಳು ಹಾರಾಡುವಾಗ ಸ್ವಲ್ಪವೂ ಶಬ್ದವಾಗುವುದಿಲ್ಲ. ಅವುಗಳ ಅಗಲವಾದ ಡಿಶ್‌ ಆಕಾರದ ಮುಖ ಸಣ್ಣ ಶಬ್ದವನ್ನೂ ಗ್ರಹಿಸಲು ಸಹಾಯ ಮಾಡುತ್ತದೆ. ಅವುಗಳ ಕಣ್ಣುಗಳಿಗೆ ಕತ್ತಲಿನಲ್ಲೂ ತನ್ನ ಬೇಟೆಯನ್ನು ನೋಡುವ ಸಾಮರ್ಥ್ಯ ಇದೆ. ಹಾಗಾಗಿ ಆಹಾರಕ್ಕಾಗಿ ಹಗಲಿನಲ್ಲಿ ಓಡಾಡಿ ಸುಸ್ತು ಮಾಡಿಕೊಳ್ಳುವ ಬದಲು ರಾತ್ರಿಯ ಹೊತ್ತು ತನ್ನ ದೃಷ್ಟಿ ಮತ್ತು ಸೂಕ್ಷ್ಮವಾದ ಶಬ್ದಗಳನ್ನು ಕಳುವ ಸಾಮರ್ಥ್ಯ ಬಳಸಿಕೊಂಡು ತನ್ನ ಆಹಾರವಾದ ಇಲಿಗಳನ್ನು ಹಿಡಿದು ತಿನ್ನುತ್ತವೆ. ಇಲಿಗಳು ಹೆಚ್ಚಾಗಿ ರಾತ್ರಿಯ ಹೊತ್ತು ಓಡಾಡುವುದರಿಂದ ಇವುಗಳು ರಾತ್ರಿ ಬೇಟೆಯಾಡಲು ಬೇಕಾದ ಸಾಮರ್ಥ್ಯವನ್ನು ಬೆಳೆಸಿಕೊಂಡಿರಲೂ ಸಾಧ್ಯವಿದೆ. ನಾವೆಲ್ಲ ಮಲಗಿ ನಿದ್ರಿಸುವ ರಾತ್ರಿಯ ಹೊತ್ತಿನಲ್ಲಿ ಹಗಲಿಗಿಂತಲೂ ಹೆಚ್ಚು ಜೀವಿಗಳು ಎಚ್ಚರವಾಗಿರುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. 

ನಿಮ್ಮ ಆಸುಪಾಸಿನಲ್ಲಿ ನಿಮಗೇ ತಿಳಿಯದಂತೆ ಗೂಬೆಗಳು ವಾಸವಾಗಿರಬಹುದು. ಸೂಕ್ಷ್ಮವಾಗಿ ನೋಡಿದರೆ ಕಾಣಸಿಗಬಹುದು. ಮುಂದಿನವಾರ ಹೊಸ ಪಕ್ಷಿಯೊಂದಿಗೆ ಮತ್ತೆ ಸಿಗುತ್ತೇನೆ

ಕನ್ನಡ ಹೆಸರು: ಕಣಜದ ಗೂಬೆ

ಇಂಗ್ಲೀಷ್‌ ಹೆಸರು: Barn Owl

ವೈಜ್ಞಾನಿಕ ಹೆಸರು: Tyto alba

-ಅರವಿಂದ ಕುಡ್ಲ, ಬಂಟ್ವಾಳ