ಕಣ್ಣಾ ಮುಚ್ಚೆ... ಕಾಡೇ ಗೂಡೇ...(ರಂಗಕಲಾವಿದೆ ಬಿ ಜಯಶ್ರೀ ಆತ್ಮಕತೆ)
ಸಾವಿರದ ಶರಣವ್ವ ತಾಯೇ.....
`ಕಣ್ಣಾ ಮುಚ್ಚೆ... ಕಾಡೇ ಗೂಡೇ...’ ಒಂದು ಯಶೋಗಾಥೆ. ಕಲಾವಿದೆಯೊಬ್ಬಳ ಯಶಸ್ಸಿನ ಹಿಂದಿನ ಅಗ್ನಿದಿವ್ಯಗಳ ಅನಾವರಣ. ಇಲ್ಲಿ ಬದುಕು ಒಂದು ಸಮುದ್ರದ ಘನತೆ ಪಡೆದುಕೊಂಡಿದೆ. ಅದನ್ನು ಮೊಗೆಯಲು ಬೊಗಸೆಯನ್ನು ನಂಬಿ ಹೊರಟ ಪ್ರೀತಿ ನಾಗರಾಜರು ತಮ್ಮ ಪುಟ್ಟ ಬೊಗಸೆಯಲ್ಲಿ ತುಂಬಿಕೊಳ್ಳಲು ಸಾಧ್ಯವಾದಷ್ಟನ್ನು ನಮಗೂ ಹಂಚಿದ್ದಾರೆ. ಪದ್ಮಶ್ರೀ ಡಾ. ಬಿ. ಜಯಶ್ರೀ ಈ ನಾಡು ಕಂಡ ಅಸಾಧಾರಣ ಕಲಾವಿದೆ.
ಬಾಲ್ಯವೆಲ್ಲ ರಂಗದ ಮೇಲೆಯೇ ಕಳೆದ ಬಾಲೆ ಆ ದಿನಗಳನ್ನು ನೆನಪಿಸಿಕೊಳ್ಳುವ ಪರಿಯಲ್ಲೇ ನಾಡಿನ ಶ್ರೀಮಂತ ಕಲಾಪರಂಪರೆಯೊಂದು ತನ್ನೊಂದಿಗೇ ನೂರಾರು ಕುಟುಂಬಗಳನ್ನು ಬದುಕಿಸುತ್ತ ಜಾತಿ, ಮತ, ಭೇದವಿಲ್ಲದ ಸಮಸಮಾಜದ ಪರಿಕಲ್ಪನೆಗೆ ಮಾದರಿಯೋ ಎಂಬಂತೆ ಬೆಳೆದುಬಂದ ಬಗೆಯೊಂದು ತೆರೆದುಕೊಳ್ಳುತ್ತದೆ.
ಕಲಾವಿದರ ಬದುಕಿನಲ್ಲಿ ವೈಯಕ್ತಿಕ ಬದುಕಿನ ನೋವು, ಸಂಕಟ, ಸಾವು, ಕಡೆಗೆ ವಿವಾಹ, ಸಂಸಾರ ಎಲ್ಲವೂ ಹೇಗೆ ವ್ಯಕ್ತಿಯ ಪರಿಧಿಯನ್ನು ಮೀರಿ ಕೇವಲ ಕಲೆಗಾಗಿ ಸಾರ್ವತ್ರಿಕವಾಗಿ ಬಿಡುತ್ತದೆಂಬುದನ್ನು ಜಯಶ್ರೀ ತಮ್ಮ ತಾಯಿಯ ವಿವಾಹ, ಮರುವಿವಾಹ, ವಿದ್ಯುತ್ ಶಾಕ್ ನಿಂದಾಗಿ ಸಂಭವಿಸಿದ ದುರಂತ ಆಕೆಯ ಕಲಾಜೀವನವನ್ನೇ ಕಸಿದುಕೊಂಡ ಬಗೆಯ ವಿವರಣೆಗಳಲ್ಲಿ ಕಟ್ಟಿಕೊಡುತ್ತಾರೆ. ಒಂದೊಂದು ಪ್ರಸಂಗವೂ ಬದುಕಿನ ಒಂದೊಂದು ದೊಡ್ಡ ಮೌಲ್ಯವನ್ನು ಯಾವ ಉಪದೇಶದ ಪೋಜೂ ಇಲ್ಲದೆ ಈ ೨೭೨ ಪುಟಗಳ ಪುಸ್ತಕ ಅರ್ಥಮಾಡಿಸುತ್ತದೆ.
-ಬಸವರಾಜ ಸೂಳಿಬಾವಿ, ಲಡಾಯಿ ಪ್ರಕಾಶನ, ಗದಗ (9480286844)