ಕಣ್ಣಿದ್ದು ಕುರುಡರು ನಾವು...
ಅನುಕಂಪದ ಜೊತೆ ಅವಕಾಶವನ್ನೂ ನೀಡಿ, ಸಹಾನುಭೂತಿಯ ಜೊತೆ ಸದಾಶಯವೂ ಇರಲಿ, ಕರುಣೆಯ ಜೊತೆ ಸಹಕಾರವೂ ಇರಲಿ. ವಿಶ್ವ ಅಂಗವಿಕಲರ ದಿನ ಡಿಸೆಂಬರ್ 3 ( International Day of Disabled Persons )
2024 ರ ಘೋಷಣೆ...." ಸಮಗ್ರ ಮತ್ತು ಸುಸ್ತಿರ ಅಭಿವೃದ್ಧಿಗಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವಕ್ಕೆ ಉತ್ತೇಜನ" ( Amplifying the leadership of disabled people for an inclusive and sustainable future) ಅಂಗವಿಕಲರು, ಅಂಗ ವೈಕಲ್ಯರು, ಅಂಗ ಊನರು, ವಿಕಲ ಚೇತನರು, ವಿಕಲಾಂಗ ಚೇತನರು, ದಿವ್ಯಾಂಗಿಗಳು, ವಿಶಿಷ್ಟ ಚೇತನರು, ವಿಶೇಷ ಚೇತನರರು, ಕುರುಡರು, ಕುಂಟರು, ಕಿವುಡರು, ಮೂಗರು, ಎಳವರು. ಒಟ್ಟಿನಲ್ಲಿ ಮನುಷ್ಯ ದೇಹ ಸಹಜತೆಯಲ್ಲದ ಕೆಲವು ಕೊರತೆಗಳನ್ನು ಹೊಂದಿರುವವರನ್ನು ಹೀಗೆ ಕರೆಯಲಾಗುತ್ತದೆ. ಅಂಗವಿಕಲರನ್ನು ಈಗ ದಿವ್ಯಾಂಗ ಚೇತನರು ಎಂದು ಗೌರವಪೂರ್ವಕವಾಗಿ ಕರೆಯಲಾಗುತ್ತದೆ.
ನನ್ನ ಆತ್ಮೀಯ ಗೆಳೆಯರು ಕರೆ ಮಾಡಿ ನೆನಪಿಸಿದರು ಮತ್ತು ಈ ಬಗ್ಗೆ ಮಾತನಾಡಿದರು. ಅಂಗವಿಕಲತೆ ಮತ್ತು ಅದರ ನೋವಿನ ಅಸಹಾಯಕತೆಯ ಬಗೆಗೆ ಮಾತನಾಡಿದರು ಎಂದು ನೀವು ಭಾವಿಸಿರಬಹುದು. ಇಲ್ಲ. ಅವರು ಸಹಜ ಮನುಷ್ಯರಿಗಿಂತ ಹೆಚ್ಚು ಆತ್ಮವಿಶ್ವಾಸ ಮತ್ತು ಜೀವನೋತ್ಸಾಹದಿಂದ ಮಾತನಾಡಿದರು. ಅದಕ್ಕಿಂತ ಹೆಚ್ಚಾಗಿ ಈ ವ್ಯವಸ್ಥೆಯ ಭ್ರಷ್ಟತೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನನಗೆ ಕೆಲವರು ಕೇಳುತ್ತಾರೆ. ಕೆಟ್ಟದ್ದನ್ನು ಹೆಚ್ಚಾಗಿ ಬರೆಯುವಿರಿ ಒಳ್ಳೆಯದು ಇಲ್ಲವೇ, ಅದರ ಬಗ್ಗೆಯೂ ಬರೆಯಿರಿ.
ಒಳ್ಳೆಯದು ಇತ್ತು, ಇದೆ, ಇರುತ್ತದೆ. ಅದಕ್ಕೆ ನನ್ನ ಅವಶ್ಯಕತೆ ಇಲ್ಲ. ಒಳ್ಳೆಯದು ಯಾರಿಗೂ ತೊಂದರೆ ಕೊಡುವುದಿಲ್ಲ. ಅದು ಹಾಗೆಯೇ ಇರಲಿ ಮತ್ತು ಮುಂದುವರಿಯಲಿ. ಸಮಸ್ಯೆ ಇರುವುದು ಕೆಟ್ಟದ್ದರಲ್ಲಿ. ಆದ್ದರಿಂದ ಅದನ್ನು ಹೋಗಲಾಡಿಸುವಿಕೆಯ ಮಾರ್ಗದ ಬಗ್ಗೆ ಹೆಚ್ಚಿನ ಚಿಂತನೆಯ ಅವಶ್ಯಕತೆ ಇದೆ. ಸಹಜತೆಯನ್ನು ಹೊರತುಪಡಿಸಿ ಅಂಗವಿಕಲತೆಯು ವಿವಿಧ ರೀತಿಯಲ್ಲಿ ಇರುತ್ತದೆ. ಹುಟ್ಟಿನಿಂದ ಬರುವ ಅಂಗವೈಕಲ್ಯ, ತದ ನಂತರ ಅನಾರೋಗ್ಯದಿಂದ ಬರುವ ಅಂಗವೈಕಲ್ಯ, ಅಪಘಾತ ಮತ್ತು ಅನಿರೀಕ್ಷಿತ ಘಟನೆಗಳಿಂದ ಆಗುವ ಅಂಗವೈಕಲ್ಯ. ಇದರಲ್ಲೂ ಹಲವಾರು ವಿಧಗಳಿವೆ. ಕಣ್ಣು ಕಿವಿ ಮೂಗು ಬಾಯಿ ಕಾಲು ಸೇರಿ ದೇಹದ ಯಾವುದೇ ಭಾಗದ ನ್ಯೂನ್ಯತೆಯೂ ಅಂಗವಿಕಲವೇ. ಇದರಲ್ಲಿ ಶೇಕಡಾ 1% ನಿಂದ 100% ವರೆಗೂ ಅಂಗವಿಕಲತೆಯ ಪ್ರಮಾಣ ಬೇರೆ ಬೇರೆಯಾಗಿರುತ್ತದೆ.
ಯಾವುದೇ ವ್ಯಕ್ತಿಗೆ ಅಂಗವೈಕಲ್ಯ ಜೀವನದ ಉಳಿದ ಅವಧಿಗೆ ಶಾಶ್ವತ ಎಂದಾದರೆ ಅದು ಮೊದಲಿಗೆ ಒಂದು ಯಾತನಾಮಯ ಸನ್ನಿವೇಶ. ಆದರೆ ಅದು ಅನಿವಾರ್ಯ ಎಂದು ಅರ್ಥಮಾಡಿಕೊಂಡು ಬದುಕು ಕಟ್ಟಿಕೊಳ್ಳುವುದು ನಮ್ಮ ಸಮಾಜದಲ್ಲಿ ಬಹುದೊಡ್ಡ ಸವಾಲು. ಪೋಷಕರು ಇದ್ದು, ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು, ಇಬ್ಬರೂ ಸ್ವಲ್ಪ ಮಟ್ಟಿಗೆ ತಿಳಿವಳಿಕೆಯುಳ್ಳವರಾಗಿದ್ದರೆ ಆಗ ಅಂಗವೈಕಲ್ಯವನ್ನು ಇರುವುದರಲ್ಲಿ ಒಂದಷ್ಟು ಆತ್ಮವಿಶ್ವಾಸದಿಂದ ಎದುರಿಸಬಹುದು...
ಒಂದು ವೇಳೆ ಪೋಷಕರು ಇಲ್ಲದಿದ್ದರೆ ಅಥವಾ ಇದ್ದೂ ಆರ್ಥಿಕವಾಗಿ ದುರ್ಬಲರಾಗಿದ್ದರೆ, ಅಂಗವೈಕಲ್ಯ ತೀವ್ರವಾಗಿದ್ದರೆ ಅವರ ಪರಿಸ್ಥಿತಿ ತುಂಬಾ ಶೋಚನೀಯ. ಅಂಗವಿಕಲತೆ ಎಂಬ ನ್ಯೂನತೆಯ ಜೊತೆ ಬಡತನ, ಅಸಹಾಯಕತೆ ಮತ್ತು ಕೌಟುಂಬಿಕ ನಿರ್ಲಕ್ಷ್ಯ ಸೇರಿಕೊಂಡರೆ ಅದರ ತೀವ್ರತೆ ಊಹಿಸುವುದು ಕಷ್ಟ.
ಇಲ್ಲಿ ಸಮಾಜ ಮತ್ತು ಸರ್ಕಾರದ ಸ್ಪಂದನೆ ಬಹಳ ಮುಖ್ಯ. ಸಮಾಜದ ಸಹಕಾರ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಇರುತ್ತದೆ. ಯಾರೋ ಕೆಲವರು ಒಂದಷ್ಟು ಸಹಾಯ ಮಾಡಬಹುದು. ವೈಯಕ್ತಿಕ ನೆಲೆಯಲ್ಲಿ ಇದು ಇರುತ್ತದೆ. ಅದನ್ನು ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿ ಇಲ್ಲಿ ಮಹತ್ವದ್ದು. ಸರ್ಕಾರಗಳು ವಿಕಲಚೇತನರಿಗಾಗಿ ಅನೇಕ ಉಪಯುಕ್ತ ಯೋಜನೆಗಳನ್ನು ಘೋಷಿಸಿವೆ. ಎಂದಿನಂತೆ ಸಮಸ್ಯೆ ಇರುವುದು ಅನುಷ್ಠಾನದಲ್ಲಿ. ಈ ಭ್ರಷ್ಟ ವ್ಯವಸ್ಥೆ ವಿಕಲಚೇತನರನ್ನೂ ಬಿಟ್ಟಿಲ್ಲ. ಸಾಮಾನ್ಯ ಆರೋಗ್ಯವಂತ ಜನರೇ ಸರ್ಕಾರದ ಕೆಲಸ ಕಾರ್ಯಗಳಿಗೆ ಕಚೇರಿ ಅಲೆದು ಅಲೆದು ಹೈರಾಣಾಗುವಾಗ ಇನ್ನು ವಿಕಲಚೇತನರ ಪಾಡೇನು?
ಕಣ್ಣು ಕಾಣದವರು, ಎರಡೂ ಕಾಲಿನ ಸ್ವಾಧೀನ ಕಳೆದುಕೊಂಡವರು, ಮಾತು ಬಾರದವರು ಸರ್ಕಾರದ ಯೋಜನೆಯ ಅನುಕೂಲ ಪಡೆಯಲು ದೂರದ ಸ್ಥಳಗಳಿಂದ ಒಂಟಿಯಾಗಿ ಬಸ್ಸು ರೈಲುಗಳಲ್ಲಿ, ಈ ಗಿಜಿಗಿಜಿಯ ವಾಹನದ ಒತ್ತಡದ ನಡುವೆ ಎಷ್ಟು ಬಾರಿ ಕಚೇರಿ ಅಲೆಯಬೇಕು. ಎಷ್ಟು ಮೆಟ್ಟಿಲುಗಳನ್ನು ಏರಬೇಕು. ಈ ಮನುಷ್ಯ ಪ್ರಾಣಿ ಎಷ್ಟೊಂದು ಅಮಾನವೀಯ ತಿಳಿದಿದೆಯಲ್ಲವೇ. ಆ ನತದೃಷ್ಟರ ಬಳಿಯೂ ಲಂಚಕ್ಕಾಗಿ ಪೀಡಿಸುತ್ತಾರೆ. ಅನೇಕ ಕಾರಣ - ನೆಪಗಳನ್ನು ಮುಂದೆ ಮಾಡಿ ಅಲೆದಾಡಿಸುತ್ತಾರೆ - ನಿರ್ಲಕ್ಷಿಸುತ್ತಾರೆ. ಸ್ವಲ್ಪ ಜೋರಾಗಿ ನ್ಯಾಯ ಕೇಳಿದರೆ ಅಂಗವಿಕಲರಿಗೆ ದುರಹಂಕಾರ ಜಾಸ್ತಿ ಎಂದು ಹಿಯಾಳಿಸುತ್ತಾರೆ, ಕುಟುಕುತ್ತಾರೆ, ವ್ಯಂಗ್ಯವಾಡುತ್ತಾರೆ.
ಸರ್ಕಾರದ ಸಂಬಳ ಪಡೆಯುವ ಗೆಳೆಯ/ಗೆಳತಿಯರೇ, ಅವರ ಬಂಧುಗಳೇ, ಅವರ ಪರಿಚಯದವರೇ, ಇನ್ನು ಮುಂದಾದರೂ ಕನಿಷ್ಠ ವಿಕಲಚೇತನರ ವಿಷಯದಲ್ಲಿ ಲಂಚಕ್ಕಾಗಿ ಯಾವುದೇ ಪೀಡನೆ ಬೇಡ ಎಂಬ ಸಂಕಲ್ಪ ಮಾಡಿ. ಅವರನ್ನು ಅಲೆದಾಡಿಸಬೇಡಿ, ನಿಯಮದ ಹೆಸರಲ್ಲಿ ನಿರ್ಲಕ್ಷಿಸಬೇಡಿ. ನಿಮ್ಮ ಸುತ್ತಮುತ್ತಲಿನ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಿ.
ಆಡಳಿತಗಾರರೇ, ವಿಕಲಚೇತನರಿಗೆ ಅನುಕೂಲ ಕಲ್ಪಿಸುವ ವಿಷಯದಲ್ಲಿ ಹತ್ತು ಹೆಜ್ಜೆ ಮುಂದೆ ಇಡಿ. ಕಾನೂನಿನ ವ್ಯಾಪ್ತಿಯನ್ನು ವಿಸ್ತರಿಸಿ. ನಿಯಮಗಳನ್ನು ಮೀರಿ ವಿವೇಚನೆ ಬಳಸಿ ಮಾನವೀಯ ದೃಷ್ಟಿಯಿಂದ ಅವರಿಗೆ ಸೌಕರ್ಯಗಳನ್ನು ಒದಗಿಸಿ. ಕಡಿಮೆ ಸಂಖ್ಯೆಯಲ್ಲಿ ಇರುವ ಅವರಿಗೆ ಆರ್ಥಿಕ ಭದ್ರತೆ ಒದಗಿಸಿ ಅವರ ಕೌಟುಂಬಿಕ ಬದುಕನ್ನು ಸಹನೀಯಗೊಳಿಸಿ. ಈಗಲೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ತಮ್ಮ ಕೆಲವು ಬೇಡಿಕೆಗಳ ಈಡೇರಿಕೆಗಾಗಿ ಮತ್ತು ವಿಶಿಷ್ಟ ಚೇತನರಿಗಾಗಿ ಮೀಸಲಿಟ್ಟಿದ್ದ ಹಣವನ್ನು ಇತರ ಖರ್ಚುಗಳಿಗೆ ಸರ್ಕಾರ ಉಪಯೋಗಿಸಿಕೊಂಡ ಕಾರಣದಿಂದ ಪ್ರತಿಭಟನೆ ನಡೆಯುತ್ತಲೇ ಇದೆ. ಮಾನ್ಯ ಮುಖ್ಯಮಂತ್ರಿಗಳೇ ಮತ್ತು ಸಮಾಜ ಕಲ್ಯಾಣ ಇಲಾಖೆ ಮಂತ್ರಿಗಳೇ, ಅಧಿಕಾರಿಗಳೇ ಇದನ್ನು ಗಮನಿಸಿ ಮತ್ತು ಅವರ ಬೇಡಿಕೆಗಳಿಗೆ ಸ್ಪಂದಿಸಿ.
ನಾವುಗಳು ವೈಯಕ್ತಿಕ ನೆಲೆಯಲ್ಲಿ ಎಷ್ಟು ಸಾಧ್ಯವೋ ಅಷ್ಟು ವಿಕಲಚೇತನರಲ್ಲಿ ಜೀವನೋತ್ಸಾಹ ತುಂಬಲು, ಅವರಿಗೆ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯನಿರ್ವಹಿಸಲು ಪ್ರತಿಫಲಾಪೇಕ್ಷೆ ಇಲ್ಲದೆ ಸಹಕಾರ ನೀಡೋಣ.
ಹೆಲೆನ್ ಕೆಲ್ಲರ್ ಎಂಬ ಅಂಗವಿಕಲ ಹೆಣ್ಣು ಮಗಳ ಜೀವನ ಚರಿತ್ರೆ ಓದಿದರೆ (ಅದು ಕನ್ನಡದಲ್ಲಿ ಸಹ ಪ್ರಕಟವಾಗಿದೆ ) ಅಂಗವಿಕಲತೆ ಎಂಬುದು ಒಂದು ದಿವ್ಯಾಂಗ ಚೇತನ ಎಂದು ತುಂಬಾ ಸ್ಪಷ್ಟವಾಗಿ ಅರ್ಥವಾಗುತ್ತದೆ. ಸಾಮಾನ್ಯ ಜನರು ಸಹ ಸಾಧಿಸಲಾಗದ ಸಾಧನೆ ಅವರದು. ಅನೇಕ ಕಷ್ಟ ನಷ್ಟಗಳಿಗೆ ಒಳಗಾಗಿ ಭವಿಷ್ಯದ ಭರವಸೆ ಕಳೆದುಕೊಳ್ಳುವ ಜನರಿಗೆ ಈ ಪುಸ್ತಕ ಬಹುಶಃ ಜೀವನೋತ್ಸಾವ ಉಕ್ಕಿಸುವ, ಬದುಕಿನಲ್ಲಿ ಮತ್ತೆ ಆಸೆಯ ಅಲೆ ಎಬ್ಬಿಸುವ ಶಕ್ತಿ ಹೊಂದಿದೆ. ಒಳ್ಳೆಯತನ ಒಂದು ಭಾವನೆಯಲ್ಲ, ಒಳ್ಳೆಯತನ ಪ್ರದರ್ಶನದ ವಸ್ತುವಲ್ಲ, ಒಳ್ಳೆಯತನ ನಮ್ಮ ನಡವಳಿಕೆ. ದಿವ್ಯಾಂಗ ಚೇತನರೊಂದಿಗೆ ನಾವು - ನೀವು - ಎಲ್ಲರೂ...
-ವಿವೇಕಾನಂದ. ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ