ಕಣ್ಣಿಲ್ಲದಿದ್ದವರ ಬಗ್ಗೆ ಕಣ್ಣಾರೆ-ಕಂಡ ಕೆಲ ಸಂಗತಿಗಳು !

ಕಣ್ಣಿಲ್ಲದಿದ್ದವರ ಬಗ್ಗೆ ಕಣ್ಣಾರೆ-ಕಂಡ ಕೆಲ ಸಂಗತಿಗಳು !

ಬರಹ

ನಾನು ಅಮೆರಿಕಕ್ಕೆ ಪಾದಾರ್ಪಣೆ ಮಾಡಿದಂದಿನಿಂದ ಆದೇಶದ ಅಂಗವಿಕಲರ ಬಗ್ಗೆ , ಆದೇಶದ ಜನ ತೋರಿಸುತ್ತಿದ್ದ ನೈಜ-ಕಳಕಳಿ, ಹಾಗೂಸಹಾಯ ಹಸ್ತವನ್ನು ಗಮನಿಸುತ್ತಾ ಬಂದಿದ್ದೇನೆ. ಅವೆಲ್ಲಾ ಕೇವಲ ತೋರಿಕೆಗಂತೂ ಇರಲಿಲ್ಲವೆಂಬ ನನ್ನ ಅಭಿಮತವನ್ನು ನನ್ನ ಗೆಳೆಯರೆಲ್ಲಾ ಮುಕ್ತವಾಗಿ ಅನುಮೋದಿಸಿದರು. ವಿಮಾನ ನಿಲ್ದಾಣಗಳಲ್ಲಿ, ರಸ್ತೆಗಳನ್ನು ದಾಟುವ ಸಮಯದಲ್ಲಿ, ರೈಲ್ವೆ ನಿಲ್ದಾಣದಲ್ಲಿ, ಬಸ್ ಹತ್ತುವ ವೇಳೆಯಲ್ಲಿ ಕೆಲವು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ, ಕೊನೆಯಲ್ಲಿ ಒಂದು ಸಾರ್ವಜನಿಕ ಉದ್ಯಾನಕ್ಕೆ ಹೋದಾಗಕೂಡ ಅವೆಲ್ಲಾ ಫಕ್ಕನೆ ನಮ್ಮೆದುರಿಗೆ ನಡೆಯಿತು.

ಒಮ್ಮೆ, ನಾವೆಲ್ಲಾ ಪರಿವಾರ ಸಮೇತ ಹತ್ತಿರದ (ಶೆಲ್ಟರ್ ಇನ್ಷೂರೆನ್ಸ್ ಪಾರ್ಕ್), ಉದ್ಯಾನಕ್ಕೆ ಹೋದೆವು. ಅಲ್ಲಿ ಕೆಲವು ಅಂಧವ್ಯಕ್ತಿಗಳು ನೋಡಲುಬಂದಿದ್ದರು. "ಇವರೆಲ್ಲಾ ಹೇಗೆ ಈ ಸಸ್ಯರಾಶಿಗಳ ಸೌಂದರ್ಯವನ್ನು ಅನುಭವಿಸಬಲ್ಲರು" ? ಎಂದು ನಮಗೆ ಮೊದಲು ಅನ್ನಿಸಿತು. ಆಮೇಲೆ ಅವರೆಲ್ಲರಜೊತೆ ನಾವೂ ವಿಶೇಷ ಅನುಭವಗಳನ್ನು ಮೈಗೂಡಿಸಿಕೊಂಡು ಆನಂದಿಸಿದೆವು. "ಅಯ್ಯೋ ಅವರಿಗೆ ಕಣ್ಣೇಕಾಣಿಸಲ್ಲ ; ನಾವೇನು ಮಾಡಕ್ಕಾಗುತ್ತೆ " ಅಂತ, ಒಮ್ಮೆಲೇ ಮಾತನ್ನು ತಳ್ಳಿಹಾಕುವ ಸ್ವಭಾವ ನಮ್ಮದು. ಒಂದುವೇಳೆ ನಮ್ಮ ಮನೆಯಲ್ಲೇ ನಮ್ಮ ಅಣ್ಣ-ತಮ್ಮ, ಮಕ್ಕಳಿಗೇ ಈ ಅಂಧತ್ವ ಸೇರ್ಪಡೆಯಾಗಿದ್ದಾಗ ನಮಗೆ ಅದರ ಅನುಭವವಾಗುತ್ತಿತ್ತೇನೋ!

ಪಾರ್ಕ್ ನಲ್ಲಿ ಬೆಳೆಸಿದ್ದ ಹಲವಾರು ಗಿಡಗಳಿಗೆ ಅವುಗಳ ಹೆಸರಿನ ಪಟ್ಟಿಗಳನ್ನು ಜೋಡಿಸಿದ್ದರು. ಅವುಗಳ ಬದಿಯಲ್ಲೇ ’ಬ್ರಿಲ್ ಭಾಷೆಯಲ್ಲೂ ಅವುಗಳ ವಿವರಗಳು ಬರೆಯಲ್ಪಟ್ಟಿದ್ದವು. ನಮ್ಮ ದೃಷ್ಟಿಹೀನ ಮಿತ್ರರು, ಅವುಗಳನ್ನು ತಟ್ಟಿನೋಡಿ, ಮುಟ್ಟಿನೋಡಿ, ವಾಸನೆಯ ಸಹಾಯದಿಂದ ಅವುಗಳ ಜಾತಿಯನ್ನು ಪತ್ತೆಹಚ್ಚುತ್ತಿದ್ದರು. ಆ ವಿವರಗಳು ಸರಿಯೆಂದು ತಿಳಿದಾಗ ಅವರು ಪಡುತ್ತಿದ್ದ, ಆನಂದ ಸಂಭ್ರಮ ಅಪಾರ ! ಇವನ್ನು ಕಂಡ ನಮ್ಮಲ್ಲೂ ಅದೇನೋ, ಅನುಕಂಪ, ಸಹಾಯಮಾಡುವ ಸದ್ಬುದ್ಧಿ ಉದ್ಭವಿಸುತ್ತಿತ್ತು. ಬಣ್ಣಗಳನ್ನೂ ಜೋರಾಗಿ ಹೇಳುತ್ತಿದ್ದ ಆ ಅದೃಷ್ಟಹೀನರನ್ನು ಕಂಡು ನಮಗೆ ಕಳವಳ, ಅತಿ-ಆನಂದ, ಕೊನೆಗೆ, ಅವರ ಅಸಹಾಯಕತೆಗೆ ದುಖಃವಾಗುತ್ತಿತ್ತು.

ಡಿಸ್ನಿಲ್ಯಾಂಡ್ ನಲ್ಲಿಯೂ, ಇಂತಹ ಅಂಗವಿಕಲರಿಗೆ, ವಿಶೇಷ ವ್ಯವಸ್ಥೆಮಾಡಿದ್ದರು. ಕಾರ್ ಪಾರ್ಕಿಂಗ್ ನಿಂದ ಹಿಡಿದು, ಎಲ್ಲೆಡೆಯಲ್ಲೂ ಅವರಿಗೆ ವಿಶೇಷ ’ಕ್ಯೂ’ ವ್ಯವಸ್ಥೆ. ಅವರಿಗಾಗಿಯೇ ತಳ್ಳುವ, ಅಥವಾ ಮೋಟಾರ್ ನಿರ್ಮಿತ ಗಾಡಿಗಳು ಅವರಿಗೆ, ಜೀವನದ ಖುಷಿಗಳಿಂದ ವಂಚಿತರಾದರೆಂಬ ಭಾವನೆಯನ್ನು ಎಳ್ಳಷ್ಟೂ ಆಗಗೊಡಲಿಲ್ಲ. ಅದರಲ್ಲಿ ಅಮೆರಿಕನ್ ಜನರ ಮುಕ್ತ ಸಹಕಾರ ಅನುಕರಣೀಯವಾಗಿತ್ತು. ವಲಸಿಗರಾಗಿ ಹೋದ ನಾವು, ಅಲ್ಲಿನ ಒಳ್ಳೆಯದನ್ನು ಗಮನಿಸಿ ನಂತರ ಕೆಲವಾರು ಹತ್ತಾರು ಅಷ್ಟು ನಮಗೆ ಸರಿಯೆನಿಸದ ವಿಶಯಗಳನ್ನು ಪಟ್ಟಿಮಾಡಬಹುದಲ್ಲಾ ? ಅಂಗವಿಕಲರ, ಹಾಗೂ ವಯಸ್ಸಾದವರ ಜೀವನದಲ್ಲಿ ಮೂಡಿಸುವ ಕೆಲವು ಆಶಾಕಿರಣಗಳನ್ನು ಅಲ್ಲಿ ಕಂಡನಮಗೆ ಅಮೆರಿಕನ್ನರ ಬಗ್ಗೆ ಹೆಮ್ಮೆಯೆನಿಸಿತು.

ಆದರೆ, ಅತಿ ಹೆಚ್ಚುಕಾಲ ಬದುಕುವ ಯೋಗವನ್ನು ಗಳಿಸಿರುವ ಈ ವೃದ್ಧರು ಅನೇಕ ಸಮಸ್ಯೆಗಳನ್ನು ಅವರ ಮನೆಗಳಲ್ಲೇ ಎದುರಿಸುತ್ತಿದ್ದಾರೆ. ನಮ್ಮ ದೇಶದ ವೃದ್ಧರ ಸಮಸ್ತ್ಯೆಗಳೇನು ಕಡಿಮೆಯೇ ! ಈ ವಯೋಧರ್ಮದ ವಿಪರೀತಗಳು, ಎಲ್ಲದೇಶಕ್ಕೂ ಸಾಮಾನ್ಯ. ಅವನ್ನು ಸಮಯಕ್ಕೆ ಸರಿಯಾಗಿ ಎದುರಿಸುವ ಮನೋಧಾರಡ್ಯವನ್ನು ನಾವೆಲ್ಲಾ ಮೈಗೂಡಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕಾಗಿದೆ.

-ಚಿತ್ರ-ವೆಂ.